– ನ್ಯಾಷನಲ್ ಹೆರಾಲ್ಡ್ ಮಾದರಿಯಲ್ಲಿ ‘ನಮ್ಮ ಕಾಂಗ್ರೆಸ್’ ಪಾಕ್ಷಿಕ ಪತ್ರಿಕೆ
ಬೆಂಗಳೂರು: ಲೋಕಸಭಾ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಕಾಂಗ್ರೆಸ್ ನ್ಯಾಷನಲ್ ಹೆರಾಲ್ಡ್ ಮಾದರಿಯಲ್ಲಿ ‘ನಮ್ಮ ಕಾಂಗ್ರೆಸ್’ ಎಂಬ ಪತ್ರಿಕೆ ಹೊರತರಲು ಸಿದ್ಧತೆ ನಡೆಸಿದೆ. ಕೆಲ ಮಾಧ್ಯಮಗಳು ಬಿಜೆಪಿ ಪರ ಒಲವು ತೋರುವುದರಿಂದ, ಕಾಂಗ್ರೆಸ್‍ಗೆ ಹಿನ್ನಡೆಯಾಗಿದೆ ಎನ್ನುವ ಮಾತು ಪಕ್ಷದ ಒಳಗಡೆ ಕೇಳಿಬಂದಿದೆ. ಹಾಗಾಗಿ, ಫೆ.6ರಂದು ಪತ್ರಿಕೆಯ ಮೊದಲ ಸಂಚಿಕೆ ಬಿಡುಗಡೆಯಾಗಲಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಮುಂದಿನ ಮೂರು ತಿಂಗಳಲ್ಲಿ ಪ್ರಮುಖವಾಗಿ ಕಳೆದ ಐದು ವರ್ಷಗಳಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿಯ ವೈಫಲ್ಯತೆಗಳನ್ನು ಭಿತ್ತರಿಸುವ ಅಸ್ತ್ರವನ್ನಾಗಿಸಿಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ. ಇದರೊಂದಿಗೆ ಬಿಜೆಪಿ ನಾಯಕರು ಪ್ರತಿಬಾರಿ ‘ಕಾಂಗ್ರೆಸ್ ದೇಶಕ್ಕೆ ಏನು ಕೊಡುಗೆ ನೀಡಿಲ್ಲ’ ಎನ್ನುತ್ತಿರುವುದರಿಂದ, ಇದಕ್ಕೆ ಪ್ರತ್ಯುತ್ತರವಾಗಿ ಕಳೆದ ಏಳು ದಶಕದಲ್ಲಿ ಕಾಂಗ್ರೆಸ್ ಮಾಡಿರುವ ಸಾಧನೆಗಳನ್ನು ಪ್ರತಿ ಸಂಚಿಕೆಯಲ್ಲಿ ಒದಗಿಸಲು ಸಿದ್ಧತೆ ನಡೆಸಿಕೊಂಡಿದೆ.
Advertisement
Advertisement
ಮುಂದಿನ ದಿನದಲ್ಲಿ ನ್ಯಾಷನಲ್ ಹೆರಾಲ್ಡ್ ಮಾದರಿಯಲ್ಲಿಯೇ, ‘ನಮ್ಮ ಕಾಂಗ್ರೆಸ್’ನ್ನು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಯಕರು ಕಡ್ಡಾಯವಾಗಿ ಹಾಕಿಸಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿದು ಬಂದಿದೆ. ಮುಂದಿನ ದಿನದಲ್ಲಿ ಪ್ರತಿ 15 ದಿನಕ್ಕೊಮ್ಮೆ ಬರುವ ಈ ಪತ್ರಿಕೆಯಲ್ಲಿ ಕಾಂಗ್ರೆಸ್ ನಾಯಕರ ಮಾತು, ರಾಜಕೀಯ ವಿಶ್ಲೇಷಣೆ, ವಿರೋಧ ಪಕ್ಷಗಳ ವೈಫಲ್ಯತೆ ಬಗ್ಗೆ ‘ನಮ್ಮ ಕಾಂಗ್ರೆಸ್’ನಲ್ಲಿ ಬರಲಿದೆ ಎನ್ನಲಾಗಿದೆ.
Advertisement
ಚುನಾವಣೆ ಹಿನ್ನೆಲೆಯಲ್ಲಿ ಆರಂಭಗೊಂಡಿರುವ ‘ನಮ್ಮ ಕಾಂಗ್ರೆಸ್’ ಪಾಕ್ಷಿಕ ಪತ್ರಿಕೆ, ಜ.26ರಂದೇ ಬಿಡುಗಡೆಯಾಗಬೇಕಿತ್ತು. ಆದರೆ 21ರಂದು ತುಮಕೂರಿನ ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯ, ಆಪರೇಷನ್ ಕಮಲದ ಭೀತಿ ಹಾಗೂ ದೋಸ್ತಿ ಸರ್ಕಾರದಲ್ಲಿ ಮೂಡಿದ ಭಿನ್ನಾಭಿಪ್ರಾಯವನ್ನು ಸರಿಪಡಿಸುವಲ್ಲಿಯೇ ರಾಜ್ಯ ಹಾಗೂ ರಾಷ್ಟ್ರ ನಾಯಕರು ಸಂಪೂರ್ಣ ತೊಡಗಿಸಿಕೊಂಡಿದ್ದರಿಂದ ದಿನಾಂಕ ಮುಂದೂಡಲಾಗಿತ್ತು.
Advertisement
ಈಗಾಗಲೇ ಮೊದಲ ಸಂಚಿಕೆಯ ಪ್ರಿಂಟ್ ಸಹ ಮುಕ್ತಾಯವಾಗಿದ್ದು, ಫೆ.6ರಂದು ಬಿಡುಗಡೆಯಾಗುವುದು ಮಾತ್ರ ಬಾಕಿ ಉಳಿದಿದೆ ಎಂದು ಸಂಪಾದಕೀಯ ಮಂಡಳಿಯಲ್ಲಿರುವ ಸದಸ್ಯರೊಬ್ಬರು ಹೇಳಿದ್ದಾರೆ. ಅರಮನೆ ಮೈದಾನದಲ್ಲಿ ‘ನಮ್ಮ ಕಾಂಗ್ರೆಸ್’ ಮೊದಲ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ ವೇಣುಗೋಪಾಲ್ ಬಿಡುಗಡೆಗೊಳಿಸಲಿದ್ದಾರೆ. ಇವರೊಂದಿಗೆ ಕೆಲ ರಾಷ್ಟ್ರೀಯ ನಾಯಕರು ಸೇರಿದಂತೆ ಡಿಸಿಎಂ ಡಾ.ಜಿ ಪರಮೇಶ್ವರ್, ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv