ತುಘಲಕ್ ಮೋದಿಯವರೇ ನಿಮ್ಮ ಆಪರೇಷನ್ ಕಮಲದಿಂದ ಪ್ರಜಾಪ್ರಭುತ್ವದ ಕೊಲೆ: ಕಾಂಗ್ರೆಸ್ ಕಿಡಿ

Public TV
2 Min Read
Modi Congress

ಬೆಂಗಳೂರು: ತುಘಲಕ್ ಮೋದಿಯವರೇ, ಈ ದೇಶದ ಆತ್ಮವಾದ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ನಿಮ್ಮ ಆಪರೇಷನ್ ಕಮಲ ಕೊಲೆ ಮಾಡಿದೆ ಎಂದು ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದೆ.

ಸಚಿವ ಎಂಟಿಬಿ ನಾಗರಾಜ್ ಅವರು ವಿಶೇಷ ವಿಮಾನದಲ್ಲಿ ಮುಂಬೈಗೆ ಹೊರಟ ಫೋಟೋವನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಬಿಜೆಪಿ ಮುಖಂಡ ಆರ್.ಅಶೋಕ್ ಅವರು ಎಂಟಿಬಿ ನಾಗರಾಜ್ ಅವರನ್ನು ಅಪಹರಿಸಿದ್ದಾರೆ. ಹಣ ಮತ್ತು ಮಂತ್ರಿಗಿರಿಯ ಆಮಿಷ, ಒತ್ತಡ, ಬೆದರಿಕೆ ಮೂಲಕ ನಿಮ್ಮ ಆಪರೇಷನ್ ಕಮಲದ ಸಂಚು ಬಯಲಾಗಿದೆ ಎಂದು ಅಸಮಾಧಾನ ಹೊರಹಾಕಿದೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಕಾಂಗ್ರೆಸ್ ತುಘಲಕ್ ಎಂದು ಕರೆದಿದ್ದು ಇದೇ ಮೊದಲೇನಲ್ಲ. ಜೂನ್ 7ರಂದು ಟ್ವೀಟ್ ಮಾಡಿದ್ದ ಕರ್ನಾಟಕ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು ಮಹಮ್ಮದ್ ಬಿನ್ ತುಘಲಕ್ ಗುಣಲಕ್ಷಣಗಳನ್ನು ಹೊಂದಿದ್ದಾರೆ. ಮಹಮ್ಮದ್ ಬಿನ್ ತುಘಲಕ್ ನಂತರ ಭಾರತವನ್ನ ಆಳುತ್ತಿರುವ ಅದೇ ಗುಣಗಳುಳ್ಳ ವ್ಯಕ್ತಿ ನರೇಂದ್ರ ಮೋದಿ. ನೈತಿಕತೆ ಮತ್ತು ಮೌಲ್ಯ ಹೀನ ರಾಜಕಾರಣಿ. ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ತಿಲಾಂಜಲಿ ಇಟ್ಟು 10 ರಾಜ್ಯಗಳಲ್ಲಿ ಆಪರೇಷನ್ ಕಮಲ ಮಾಡಿದ್ದಾರೆ. ಕರ್ನಾಟಕವು ಮೋದಿ ಸಂಚಿಗೆ ಬಲಿಯಾಗಬಾರದು ಎಂದು ಗುಡುಗಿತ್ತು.

MTB 2

ಕಾಂಗ್ರೆಸ್ ನಾಯಕರು 15 ಗಂಟೆ ಮನವೊಲಿಸಿದರೂ ಅತೃಪ್ತ ಶಾಸಕ ಎಂಟಿಬಿ ನಾಗರಾಜ್ ಮುಂಬೈ ವಿಮಾನ ಹತ್ತಿ ಅತೃಪ್ತರ ತಂಡವನ್ನು ಸೇರಿಕೊಂಡಿದ್ದಾರೆ. ಹೊಸಕೋಟೆಯಲ್ಲಿ ಹಳೇ ಹುಲಿಗಳ ನಡುವೆ ಬಿಜೆಪಿ ಸಂಧಾನ ಮಾಡಿಸಿದ್ದೆ ಎಂಟಿಬಿ ಬಿಜೆಪಿಗೆ ಜಂಪ್ ಆಗಲು ಮೊದಲನೇ ಕಾರಣ ಎಂದು ಹೇಳಲಾಗುತ್ತಿದೆ. ಎಂಟಿಬಿ ನಾಗರಾಜ್ ಮತ್ತು ಸಂಸದ ಬಿ.ಎನ್ ಬಚ್ಚೇಗೌಡರ ನಡುವೆ ಸುಮಾರು 30 ವರ್ಷಗಳಿಂದ ವೈಮನಸ್ಸಿತ್ತು. ಇದನ್ನು ಅರಿತ ಬಿಜೆಪಿ ಎಂಟಿಬಿ ನಾಗರಾಜ್ ಅವರನ್ನು ಸಂಸದ ಬಿ.ಎನ್ ಬಚ್ಚೇಗೌಡರ ಜೊತೆ ಕೂರಿಸಿ ಮಾತನಾಡಿಸಿತ್ತು. ಇಬ್ಬರಿಗೂ ತಮ್ಮ ತಮ್ಮ ಕಾರ್ಯವ್ಯಾಪ್ತಿ ಬಗ್ಗೆ ಬಿಡಿಸಿ ಬಿಜೆಪಿ ಪಡೆ ಹೇಳಿತ್ತು. ಆಗ ಭವಿಷ್ಯದ ದೃಷ್ಟಿಯಿಂದ ಬಿಜೆಪಿಗೆ ಜಂಪ್ ಆಗಲು ಎಂಟಿಬಿ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.

MTB copy 1

ಇತ್ತ ಎಂಟಿಬಿ ನಾಗರಾಜ್ ಪುತ್ರ ನಿತಿನ್‍ಗೆ ಹೊಸಕೋಟೆ ವಿಧಾನಸಭೆ ಬಿಜೆಪಿ ಟಿಕೆಟ್ ಕೊಡುವುದು. ಸಂಸದ ಬಚ್ಚೇಗೌಡರ ಪುತ್ರ ಶರತ್‍ಗೆ ಮುಂದಿನ ಲೋಕಸಭೆ ಟಿಕೆಟ್ ಕೊಡುವುದು ಬಿಜೆಪಿಯ ಲೆಕ್ಕಾಚಾರವಾಗಿದೆ. ಹೀಗಾಗಿ ಎಂಟಿಬಿ ನಾಗರಾಜ್ ಅವರು ರಾಜಕೀಯವಾಗಿ ಸನ್ಯಾಸ ತೆಗೆದುಕೊಳ್ಳಲು ನಿರ್ಧರಿಸಿದ್ದು, ಮುಂದೆ ಚುನಾವಣೆಯಲ್ಲೂ ಸ್ಪರ್ಧೆ ಮಾಡದಿರಲು ತೀರ್ಮಾಸಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *