ಬೆಂಗಳೂರು: ಹಾನಗಲ್ ಮತ್ತು ಸಿಂಧಗಿ ಉಪ ಚುನಾವಣೆ ದಿನಾಂಕ ಪ್ರಕಟವಾಗುತ್ತಿದ್ದಂತೆ ಅಖಾಡಕ್ಕೆ ಈಗ ಹಿರಿಯ ಕಾಂಗ್ರೆಸ್ ನಾಯಕರು ಎಂಟ್ರಿಕೊಟ್ಟಿದ್ದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೆ ಪ್ರತ್ಯೇಕ ಟಾಸ್ಕ್ ನೀಡುವಂತೆ ಹೈಕಮಾಂಡ್‍ಗೆ ಸಲಹೆ ನೀಡಿದ್ದಾರೆ.
ಸದ್ಯ ರಾಜ್ಯ ಕಾಂಗ್ರೆಸ್ಸಿನಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರೇ ನಾಯಕರಾಗಿ ಕಾಣುತ್ತಿದ್ದಾರೆ. ಇದು ರಾಜ್ಯದ ಹಿರಿಯ ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.
ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಾವೇ ನಾಯಕರಂತೆ ವರ್ತಿಸುತ್ತಿದ್ದಾರೆ. ಹೀಗಾಗಿ ಇಬ್ಬರಿಗೂ ಒಂದೊಂದು ಕ್ಷೇತ್ರದ ಟಾಸ್ಕ್ ನೀಡಬೇಕು. ಆಗ ಇಬ್ಬರ ಸಾಮರ್ಥ್ಯ ಏನು ಎನ್ನುವುದು ತಿಳಿಯುತ್ತದೆ. ಎಲ್ಲಾ ಕಡೆ ಜೊತೆಗೆ ಓಡಾಡಬೇಕೇ? ಅಥವಾ ಪ್ರತ್ಯೇಕವಾಗಿ ಜವಾಬ್ದಾರಿ ವಹಿಸಿಕೊಳ್ಳಬೇಕೇ? ತಳಮಟ್ಟದ ರಿಯಾಲಿಟಿಗೆ ಇದೇ ಸರಿಯಾದ ಸಮಯ. ಹೀಗಾಗಿ ಟಾಸ್ಕ್ ನೀಡಿ ಪರೀಕ್ಷೆ ಮಾಡುವುದು ಉತ್ತಮ ಎನ್ನುವುದು ಹಿರಿಯರ ಅಭಿಪ್ರಾಯ.
ಹಿರಿಯರ ಸಲಹೆ ಏನು?
1:1 ಅನುಪಾತದಲ್ಲಿ ಉಪಚುನಾವಣಾ ಸಮರ ನಡೆಸಬೇಕು. ಆಗ ಯಾರ ಸಾಮರ್ಥ್ಯ ಏನು ಎನ್ನುವುದು ಗೊತ್ತಾಗುತ್ತದೆ. ಮುಂದೆ ಪ್ರಚಾರಕ್ಕೆ ಜೊತೆಗೆ ಎಲ್ಲಾ ಕ್ಷೇತ್ರಕ್ಕೆ ಹೋಗಬೇಕೇ? ಅಥವಾ ಪ್ರತ್ಯೇಕವಾಗಿ ಹೋದರೂ ಸರಿಯೇ ಎನ್ನುವುದು ತಿಳಿಯುತ್ತದೆ.
ಈ ಉಪಚುನಾವಣೆ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಸೂಚಿಯಾಗುವ ಸಾಧ್ಯತೆಯಿದೆ. ಈಗಾಗಲೇ ಯಡಿಯೂರಪ್ಪನವರನ್ನು ಪಟ್ಟದಿಂದ ಇಳಿಸಲಾಗಿದೆ. ಹೀಗಾಗಿ ಒಂದೊಂದು ಕ್ಷೇತ್ರದ ಚುನಾವಣೆಯನ್ನು ಒಬ್ಬರ ಹೆಗಲಿಗೆ ಹಾಕಿದರೆ ಯಾರ ಸಾಮರ್ಥ್ಯ ಎನು ಎನ್ನುವುದು ತಿಳಿಯುತ್ತದೆ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಬಿಸಿಯೂಟ ಯೋಜನೆಗೆ ‘ಪಿಎಂ ಪೋಷಣ್’ ಮರುನಾಮಕರಣ ಮಾಡಿದ ಕೇಂದ್ರ
ಕಳೆದ ಶಿರಾ ಮತ್ತು ರಾಜರಾಜೇಶ್ವರಿ ನಗರ ಉಪಚುನಾವಣೆಯಲ್ಲಿ ಪಕ್ಷದ ನಾಯಕರ ಆಂತರಿಕ ಕಿತ್ತಾಟದಿಂದ ಕಾಂಗ್ರೆಸ್ಸಿಗೆ ಸೋಲಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಹೀಗಾಗಿ ಈ ಬಾರಿಯ ಚುನಾವಣೆಯನ್ನು ಕಾಂಗ್ರೆಸ್ ಹಿರಿಯ ನಾಯಕರು ಗಂಭೀರವಾಗಿ ಪರಿಗಣಿಸಿದ್ದು ಇಬ್ಬರು ನಾಯಕರಿಗೆ ಟಾಸ್ಕ್ ನೀಡುವಂತೆ ಸಲಹೆ ನೀಡಿದ್ದಾರೆ.