ಬೆಂಗಳೂರು: ಸಮ್ಮಿಶ್ರ ಸರ್ಕಾರ ವಿರುದ್ಧ ಬಹಿರಂಗವಾಗಿ ಅಸಮಾಧಾನ ಹೊರಹಾಕಿ ಸಚಿವ ಸ್ಥಾನಕ್ಕಾಗಿ ಬಂಡಾಯ ನಿರ್ಮಾಣ ಮಾಡಿದ್ದ ಕಾಂಗ್ರೆಸ್ ಪಕ್ಷದ ಕೆಲ ಶಾಸಕರು ಹೈಕಮಾಂಡ್ ಎಚ್ಚರಿಕೆ ನೀಡುತ್ತಿದಂತೆ ತಣ್ಣಗಾಗಿದ್ದಾರೆ. ಕಳೆದ ಎರಡು ಮೂರು ವಾರಗಳಿಂದ ನಮ್ಮೊಂದಿಗೆ ಸಾಕಷ್ಟು ಜನ ಶಾಸಕರಿದ್ದಾರೆ ಎಂದು ಹೇಳಿದ್ದ ನಾಯಕರು ಸದ್ಯ ಪಕ್ಷದಲ್ಲಿ ಯಾವುದೇ ಭಿನ್ನಮತ ಇಲ್ಲ ಎಂಧು ಹೇಳಿ ವಿವಾದವನ್ನು ತಣ್ಣಗೆ ಮಾಡುತ್ತಿದ್ದಾರೆ.
ಸರ್ಕಾರದ ವಿರುದ್ಧ ಬಂಡಾಯ ಸೃಷ್ಟಿಸಿದ್ದ ಶಾಸಕರಲ್ಲಿ ಪ್ರಮುಖವಾಗಿ ಸಚಿವ ರಮೇಶ್ ಜಾರಕಿಹೊಳಿ ಅವರು ಒಬ್ಬರು. ಸಮ್ಮಿಶ್ರ ಸರ್ಕಾರದ ಸಚಿವರಾಗಿದ್ದರೂ ಕೂಡ ಬಹಿರಂಗ ಅಸಮಾಧಾನದ ಹೇಳಿಕೆ ನೀಡುವ ಮೂಲಕ ದೋಸ್ತಿ ಸರ್ಕಾರದಲ್ಲಿ ಅತಂತ್ರ ವಾತಾವರಣ ಸೃಷ್ಟಿಸಿದ್ದರು. ಜಿಲ್ಲಾ ಪಿಎಲ್‍ಡಿ ಬ್ಯಾಂಕ್ ವಿಚಾರವನ್ನು ರಾಜ್ಯದ ಸುದ್ದಿಯಾಗುವಂತೆ ಮಾಡಿದ್ದರು. ಪಕ್ಷದ ವೇದಿಕೆಯನ್ನೇ ಬಳಕೆ ಮಾಡಿಕೊಂಡು ಸರ್ಕಾರವೇ ಬಿದ್ದು ಹೋಗುತ್ತೆ ಎಂಬ ಹಂತಕ್ಕೆ ಕರೆ ತಂದಿದ್ದರು. ಅಲ್ಲದೇ ವೈದ್ಯಕೀಯ ಶಿಕ್ಷಣ ಸಚಿವ ಡಿಕೆ ಶಿವಕುಮಾರ್ ವಿರುದ್ಧ ಜಿಲ್ಲಾ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಿ ಬಹಿರಂಗವಾಗಿಯೇ ಕಿಡಿ ಕಾರಿದ್ದರು. ಈ ಮೂಲಕ ತಮ್ಮ ಬೆಂಬಲಿಗರಿಗೂ ಸಚಿವ ಸ್ಥಾನಕ್ಕೆ ಒತ್ತಡ ಹೇರಿದ್ದರು. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಕುಮಾರಸ್ವಾಮಿ ಅವರೊಂದಿಗೆ ಮಾತುಕತೆ ನಡೆಸುತ್ತಿದ್ದಂತೆ ಸುಮ್ಮನಾದರು. ಈ ಮಧ್ಯೆ ಬಳ್ಳಾರಿ ಜಿಲ್ಲೆಯ ಶಾಸಕ ನಾಗೇಂದ್ರ ಅವರಿಗೆ ಸಚಿವ ನೀಡುವಂತೆ ಜಾರಕಿಹೊಳಿ ಬ್ರದರ್ಸ್ ಬಿಗಿಪಟ್ಟು ಹಿಡಿದಿದ್ದು, ಸಂಪುಟ ವಿಸ್ತರಣೆ ಸಮಯದಲ್ಲಿ ಮಂತ್ರಿ ಸ್ಥಾನ ಸಿಗದೇ ಇದ್ದರೆ ಮತ್ತೆ ಅಸಮಾಧಾನ ಸ್ಫೋಟಗೊಳ್ಳುವ ಸಾಧ್ಯತೆಯಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಸರ್ಕಾರದ ವೇಳೆ ಜಲಸಂಪನ್ಮೂಲ ಸಚಿವರಾಗಿದ್ದ ಎಂಬಿ ಪಾಟೀಲ್ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ನೇತೃತ್ವ ವಹಿಸಿದ್ದರು. ಆದರೆ ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಅಸಮಾಧಾನ ಹೊರ ಹಾಕಿ ಬಂಡಾಯದ ಹೇಳಿಕೆ ನೀಡಿದ್ದರು. ಈ ವೇಳೆ ಹೈಕಮಾಂಡ್ ದೆಹಲಿಗೆ ಕರೆಸಿ ಮನವೊಲಿಸುವ ಪರಿಸ್ಥಿತಿ ಸೃಷ್ಟಿ ಮಾಡಿದ್ದರು. ಈ ವೇಳೆಯೂ 2ನೇ ಹಂತದ ಸಂಪುಟ ವಿಸ್ತರಣೆಯಲ್ಲಿ ನಾನು ಸಚಿವನಾಗಲ್ಲ ಎಂದು ಅಸಮಾಧಾನ ಹೊರಹಾಕಿದ್ದರು. ಬಳಿಕ ನಡೆದ ಬೆಳವಣಿಗೆಗಳಲ್ಲಿ ಅಸಮಾಧಾನ ಹೊಂದಿದ್ದ ಶಾಸಕರೊಂದಿಗೆ ಅಂತರ ಕಾಯ್ದುಕೊಂಡಿದ್ದರು.
ಬಳ್ಳಾರಿ ರಾಜಕಾರಣ ಮೂಲಕ ಸರ್ಕಾರ ರಚನೆ ವೇಳೆ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಹೊಸಪೇಟೆ ಶಾಸಕ ಆನಂದ್ ಸಿಂಗ್ ಅವರು ಬಳ್ಳಾರಿ ಜಿಲ್ಲೆಗೆ ಒಂದು ಸ್ಥಾನಕ್ಕಾಗಿ ಬಿಗಿಪಟ್ಟು ಹಿಡಿದ್ದರು. ಅಲ್ಲದೇ ಈಗಲೂ ಬಂಡಾಯದ ವಿಚಾರ ಬಂದಾಗ ಮುಂಚೂಣಿ ನಾಯಕರಾಗಿದ್ದಾರೆ. ಆದರೆ ಇದಕ್ಕಿದ್ದಂತೆ ನಿಗೂಢವಾಗುವ ಆನಂದ್ ಸಿಂಗ್ ಮುಂದಿನ ಚುನಾವಣೆಗಳಲ್ಲಿ ಸ್ಪರ್ಧೆ ಮಾಡದೇ ಸಕ್ರೀಯ ರಾಜಕಾರಣದಲ್ಲಿ ಮಾತ್ರ ಇರುವುದಾಗಿ ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಸರ್ಕಾರ ಮಟ್ಟದಲ್ಲಿ ಕೆಲಸ ಆಗುತ್ತಿಲ್ಲ ಎಂದು ಸಮ್ಮಿಶ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದ ಚಿಕ್ಕಬಳ್ಳಾಪುರ ಶಾಸಕ ಡಾ. ಸುಧಾಕರ್ ಕಾಂಗ್ರೆಸ್ ಪಕ್ಷದಲ್ಲಿ ಗೊಂದಲ ಉಂಟಾಗಲು ಪ್ರಮುಖ ಕಾರಣಕರ್ತರಾಗಿದ್ದರು. ಒಕ್ಕಲಿಗರ ಕೋಟಾದಡಿ ಸಚಿವ ಸ್ಥಾನಕ್ಕಾಗಿ ಸುಧಾಕರ್ ಒತ್ತಡ ಹಾಕಿದ್ದರು. ಅಲ್ಲದೇ ಕಾಂಗ್ರೆಸ್ ಶಾಸಕರಿಗೆ ಅನುದಾನ ಕಡಿತ ಮಾಡಲಾಗಿದೆ ಅಂತ ಹೇಳಿಕೆ ನೀಡಿ ವಿವಾದ ಸೃಷ್ಟಿದ್ದರು. ಅಸಮಾಧಾನಿತ ಶಾಸಕರಲ್ಲಿ ಮುಂಚೂಣಿಯಾಗಿದ್ದ ಅವರು ಎಂಟಿಬಿ ನಾಗರಾಜ್ ಜೊತೆಗೆ ಚೆನ್ನೈ ಕಡೆಗೆ ಪ್ರಯಾಣ ಬೆಳೆಸಿ ಸುದ್ದಿಯಾಗಿದ್ದರು. ಬಳಿಕ ತಾವು ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ಸಿದ್ಧಾತಗಳಿಗೆ ಬದ್ಧರಾಗಿದ್ದು, ಆಪರೇಷನ್‍ಗಳಿಗೆ ಒಳಗಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಸಮ್ಮಿಶ್ರ ಸರ್ಕಾರದ ರಚನೆ ವೇಳೆ ಸಚಿವ ಸ್ಥಾನ ಆಕಾಂಕ್ಷಿಯಾಗಿದ್ದ ಹೊಸಕೋಟೆ ಶಾಸಕ ಎಂ.ಟಿ.ಬಿ. ನಾಗರಾಜ್ ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಒತ್ತಡ ಹಾಕಿದ್ದರು. ನಾನು 3 ಬಾರಿ ಶಾಸಕರಾಗಿ ಆಯ್ಕೆ ಆಗಿರುವುದರಿಂದ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದ್ದರು. ಈಗಲು ಸಚಿವ ಸ್ಥಾನ ನೀಡಬೇಕು ಎಂದು ಒತ್ತಡ ಹಾಕುತ್ತಲೇ ಇರುವ ನಾಗರಾಜ್ ಅವರು ಕೆಲ ಸಮಯ ಸಿದ್ದರಾಮಯ್ಯರಿಂದಲೂ ಅಂತರ ಕಾಯ್ದುಕೊಂಡಿದ್ದರು. ಮಂಗಳವಾರ ಕೂಡ ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಬಳಿಕ ಇನ್ನು ಮುಂದೇ ಏನಾಗುತ್ತೆ ಕಾದು ನೋಡಿ ಎಂದು ಹೇಳಿದ್ದರು.
ಸಮ್ಮಿಶ್ರ ಸರ್ಕಾರದಲ್ಲಿ ತಮ್ಮದೇ ಒತ್ತಡ ತಂತ್ರದಿಂದ ನಿರಂತರವಾಗಿ ಒತ್ತಡ ಹಾಕಿದ್ದ ಈ ಕೈಶಾಸಕರು ಸದ್ಯ ಹೈಕಮಾಂಡ್ ಸೂಚನೆಯಂತೆ ಸೈಲೆಂಟ್ ಆಗಿದ್ದು, ಸರ್ಕಾರ 5 ವರ್ಷ ಆಡಳಿತ ಪೂರ್ಣಗೊಳಿಸುತ್ತದೆ. ಅಲ್ಲದೇ ನಮ್ಮಿಂದ ಸರ್ಕಾರಕ್ಕೆ ಯಾವುದೇ ತೊಂದರೆ ಆಗಲ್ಲ. ನಾವು ಪಕ್ಷದ ನಿಷ್ಠವಂತ ಕಾರ್ಯಕರ್ತರು. ಜನರಿಗೆ ಉತ್ತಮ ಆಡಳಿತ ನೀಡುವ ಸರ್ಕಾರ ರಚಿಸಿದ್ದೇವೆ ಎಂದು ಹೇಳುತ್ತಿದ್ದಾರೆ.