ಬೆಂಗಳೂರು: ಲೋಕಸಭಾ ಚುನಾವಣೆ (Lok Sabha Election) ಗೆಲ್ಲಲು ಕಾಂಗ್ರೆಸ್ (Congress) ಈಗಾಗಲೇ ತಯಾರಿ ನಡೆಸುತ್ತಿದೆ. ಈ ಮಧ್ಯೆ ಈ ಬಾರಿ ಸೆಲೆಬ್ರಿಟಿ ಅಭ್ಯರ್ಥಿಗಳಿಗೆ ಮಣೆ ಹಾಕಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.
ಅಂದು ನಂದನ್ ನೀಲೆಕಣಿ (Nandan nilekani), ಮೋಹಕ ತಾರೆ ರಮ್ಯಾ (Ramya) ಹೀಗೆ ಸಾಕಷ್ಟು ಸೆಲಬ್ರೆಟಿಗಳನ್ನು ಸ್ಪರ್ಧೆಗಿಳಿಸಲಾಗಿತ್ತು. ಈ ಬಾರಿ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ (Shivarajkumar) ಅವರಿಗೆ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ (Bengaluru) ಭಾನುವಾರ ನಡೆದ ಈಡಿಗ ಸಮುದಾಯದ ಸಮಾವೇಶದಲ್ಲೇ ಬಹಿರಂಗವಾಗಿ ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರು ಶಿವಣ್ಣಗೆ ಲೋಕಸಭಾ ಚುನಾವಣೆಯ ಆಫರ್ ನೀಡಿದ್ದಾರೆ.
ಶತಾಯಗತಾಯ ರಾಜ್ಯದಿಂದ 20 ಸ್ಥಾನ ಗೆಲ್ಲಲು ಕಾಂಗ್ರೆಸ್ (Congress) ಟಾರ್ಗೆಟ್ ಇಟ್ಟುಕೊಂಡಿದೆ. ಈ ಪೈಕಿ ಕನಿಷ್ಠ 4 ಕ್ಷೇತ್ರದಲ್ಲಿ ಸೆಲೆಬ್ರೆಟಿ ಅಭ್ಯರ್ಥಿ ಅಖಾಡಕ್ಕೆ ಇಳಿಸುವ ಲೆಕ್ಕಾಚಾರದಲ್ಲಿ ಕೈ ಪಾಳಯ ಇದೆ. ಇದನ್ನೂ ಓದಿ: ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು – ಇಂದು ಸುಪ್ರೀಂನಿಂದ ತೀರ್ಪು
ಬೆಂಗಳೂರಿನಲ್ಲಿ 2 ಕ್ಷೇತ್ರ, ಮಂಡ್ಯ ಹಾಗೂ ಶಿವಮೊಗ್ಗದಲ್ಲಿ ಸೆಲೆಬ್ರೆಟಿಗಳನ್ನು ಅಖಾಡಕ್ಕೆ ಇಳಿಸುವ ಬಗ್ಗೆಯು ಚರ್ಚೆ ನಡೆದಿದೆ ಎನ್ನಲಾಗಿದೆ. ಅಧಿಕೃತವಾಗಿ ಯಾವುದೇ ಅಭ್ಯರ್ಥಿ ಘೋಷಣೆ ಆಗದೇ ಇದ್ದರೂ ಸೆಲೆಬ್ರೆಟಿ ಲೆಕ್ಕಾಚಾರ ಈ ಬಾರಿ ಕಾಂಗ್ರೆಸ್‌ನಲ್ಲಿ ಜೋರಾಗಿದೆ ಎನ್ನಲಾಗಿದೆ.
2013ರ ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ರಮ್ಯಾ ಗೆದ್ದು ಲೋಕಸಭಾ ಪ್ರವೇಶಿಸಿದ್ದರೂ 2014ರ ಚುನಾವಣೆಯಲ್ಲಿ ಸಿಎಸ್ ಪುಟ್ಟರಾಜು ವಿರುದ್ಧ ಸೋತಿದ್ದರು. ನಂತರ ರಮ್ಯಾ ಯಾವುದೇ ಚುನಾವಣೆಗೆ ಅಭ್ಯರ್ಥಿಯಾಗಿ ನಿಂತಿರಲಿಲ್ಲ.
2014ರ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಅನಂತ್ ಕುಮಾರ್ ವಿರುದ್ಧ ಇನ್ಫೋಸಿಸ್ ಸಹ ಸಂಸ್ಥಾಪಕ, ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಅಧ್ಯಕ್ಷರಾಗಿದ್ದ ನಂದನ್ ನಿಲೇಕಣಿ ಸ್ಪರ್ಧಿಸಿದ್ದರು. ಆದರೆ ಈ ಚುನಾವಣೆಯಲ್ಲಿ ನಿಲೇಕಣಿ ವಿರುದ್ಧ ಅನಂತ್ ಕುಮಾರ್ ಗೆದ್ದಿದ್ದರು.