ನವದೆಹಲಿ: ಲೋಕಸಭೆಯಲ್ಲಿ ಭರ್ಜರಿ ಬಹುಮತ ಹೊಂದಿದ್ದರೂ ರಾಜ್ಯಸಭೆಯಲ್ಲಿ ಕಡಿಮೆ ಸಂಖ್ಯಾಬಲ ಹೊಂದಿದ್ದ ಎನ್‍ಡಿಎ ಈಗ ಮೇಲ್ಮನೆಯಲ್ಲೂ ಬಹುಮತದ ಹತ್ತಿರ ಬಂದಿದೆ.
ಕರ್ನಾಟಕದ ಸಂಸದ ಕೆ.ಸಿ. ರಾಮಮೂರ್ತಿ ಅವರು ಕಾಂಗ್ರೆಸ್‍ಗೆ ರಾಜೀನಾಮೆ ಘೋಷಿಸಿದ್ದರಿಂದ ರಾಜ್ಯಸಭೆಯಲ್ಲಿ ಕೈ ಪಾಳಯದ ಬಲಾಬಲ 45ಕ್ಕೆ ಕುಸಿದಿದೆ. ಈ ಸ್ಥಾನಕ್ಕಾಗಿ ನಡೆಯುವ ಉಪಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯೇ ಅತಿ ದೊಡ್ಡ ಪಕ್ಷವಾಗಿರುವ ಕಾರಣ ಈ ಸ್ಥಾನವನ್ನು ಗೆಲ್ಲುವ ಮೂಲಕ ಬಿಜೆಪಿ ತನ್ನ ರಾಜ್ಯಸಭಾ ಸಂಖ್ಯಾಬಲ 84ಕ್ಕೆ ಹೆಚ್ಚಿಸಿಕೊಳ್ಳಲು ಸಿದ್ಧತೆ ನಡೆಸಿದೆ.
Advertisement
Advertisement
ಒಟ್ಟು 245 ಸ್ಥಾನಗಳಿರುವ ರಾಜ್ಯಸಭೆಯಲ್ಲಿ ಬಹುಮತಕ್ಕೆ 123 ಸದಸ್ಯರ ಬೆಂಬಲ ಬೇಕು. ಸದ್ಯ ಈಗ ಒಟ್ಟು ಐದು ಸ್ಥಾನಗಳು ಖಾಲಿಯಿದ್ದು, ಎನ್‍ಡಿಎ ಮೈತ್ರಿಕೂಟದ ಒಟ್ಟು ಬಲಾಬಲ 106 ಇದೆ. ಮಹತ್ವದ ಮಸೂದೆ ಚರ್ಚೆಯ ವೇಳೆ ಎಐಎಡಿಎಂಕೆ 11, ಬಿಜೆಡಿ 7, ಟಿಆರ್‍ಎಸ್ 6, ವೈಎಸ್‍ಆರ್ ಕಾಂಗ್ರೆಸ್ 2 ಸೇರಿದಂತೆ ಇನ್ನೂ ಮೂರು ಪ್ರಾದೇಶಿಕ ಪಕ್ಷಗಳ ಸದಸ್ಯರು ಮೋದಿ ಸರ್ಕಾರವನ್ನು ಬೆಂಬಲಿಸಿದ್ದಾರೆ.
Advertisement
Advertisement
ಬಿಜೆಪಿಯ ಮುಖಂಡರು ಈಗಾಗಲೇ ಪ್ರತಿಪಕ್ಷಗಳಿಂದ ಇನ್ನೂ ಹೆಚ್ಚು ಸಂಸದರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಭವಿಷ್ಯ ನುಡಿದಿರುವ ಹಿನ್ನೆಲೆಯಲ್ಲಿ ಮತ್ತೆ ಯಾವ ಪಕ್ಷದಿಂದ ಯಾರು ರಾಜೀನಾಮೆ ನೀಡಲಿದ್ದಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.
ರಾಜೀನಾಮೆ ನೀಡಿದ ಬಳಿಕ ಪಬ್ಲಿಕ್ ಟಿವಿಗೆ ರಾಮಮೂರ್ತಿ ಪ್ರತಿಕ್ರಿಯಿಸಿ, ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಕಾಂಗ್ರೆಸ್ ಪ್ರಾಥಮಿಕ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದೇನೆ. ರಾಜೀನಾಮೆ ಬಗ್ಗೆ ಸೋನಿಯಗಾಂಧಿ ಅವರ ಗಮನಕ್ಕೆ ತಂದಿದ್ದೇನೆ ಎಂದು ತಿಳಿಸಿದರು.
ತಕ್ಷಣಕ್ಕೆ ತೆಗೆದುಕೊಂಡಿರುವ ನಿರ್ಧಾರ ಅಲ್ಲ. ಒಂದು ವರ್ಷಕ್ಕೂ ಹೆಚ್ಚು ಸಮಯ ಯೋಚನೆ ಮಾಡಿ ನಿರ್ಧಾರ ತೆಗೆದುಕೊಂಡಿದ್ದೇನೆ. ಈ ಬಗ್ಗೆ ಹಿಂದೆ ಕಾಂಗ್ರೆಸ್ ನಾಯಕರಿಗೆ ತಿಳಿಸಿದ್ದರೂ ಯಾರೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ದೇಶದ ಅಭಿವೃದ್ಧಿಯಲ್ಲಿ ಭಾಗಿಯಾಗುವ ದೃಷ್ಟಿಯಿಂದ ರಾಜೀನಾಮೆ ನೀಡಿದ್ದೇನೆ. ನನ್ನ ಅನುಭವವನ್ನು ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಆರೋಪಿಸಿದರು.
ಬಿಜೆಪಿ ಸೇರುವ ಬಗ್ಗೆ ಒಲವು ಇದೆ. ನನ್ನನ್ನು ಅವರು ಸಮರ್ಪಕವಾಗಿ ಬಳಸಿಕೊಳ್ಳುವುದಾದರೆ ನಾನು ಬಿಜೆಪಿ ಸೇರಲು ಸಿದ್ಧವಾಗಿದ್ದೇನೆ. ಅಮಿತ್ ಶಾ ಅವರನ್ನು ಬೇರೆ ಬೇರೆ ಕಾರಣಗಳಿಗೆ ಭೇಟಿ ಮಾಡಿದ್ದೇನೆ. ಬಿಜೆಪಿ ಕೆಲ ನಾಯಕರನ್ನು ಭೇಟಿ ಮಾಡಿದ್ದೆ. ಬಿಜೆಪಿ ಸೇರುವ ಬಗ್ಗೆ ಇನ್ನು ಮಾತುಕತೆ ಮಾಡಿಲ್ಲ ಮತ್ತು ಈಗಲೇ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಯಾವುದೇ ಆಮಿಷಗಳಿಗೆ ನಾನು ಬಲಿಯಾಗಿಲ್ಲ ಮತ್ತು ರಾಜೀನಾಮೆ ನೀಡಲು ಯಾವುದೇ ಬೆದರಿಕೆಗಳು ಇಲ್ಲ. ಒಂದೆರಡು ದಿನದಲ್ಲಿ ನನ್ನ ಮುಂದಿನ ನಿರ್ಧಾರ ತಿಳಿಸುತ್ತೇನೆ ಎಂದರು.