ಬೆಂಗಳೂರು: ನಮ್ಮ ರಾಜ್ಯ ಹಾಗೂ ಬೆಂಗಳೂರು(Bengaluru) ನಗರ ಐಟಿ ಕ್ಯಾಪಿಟಲ್, ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ, ಎಜುಕೇಶನ್ ಹಬ್ ಎಂದು ಖ್ಯಾತಿ ಪಡೆದಿದೆ. ಇದಕ್ಕೆ ಹಲವರ ಕೊಡುಗೆ ಇದೆ. ಆದರೆ ಈಗ ಬಿಜೆಪಿ(BJP)ಸರ್ಕಾರದಿಂದ ರಾಜ್ಯಕ್ಕೆ ‘ದೇಶದ ಭ್ರಷ್ಟಾಚಾರದ ರಾಜಧಾನಿ’ ಎಂದು ಕುಖ್ಯಾತಿ ಬಂದಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
ರಾಜ್ಯ ವಿಧಾನಮಂಡಲ ಅಧಿವೇಶನ ನಡೆಯುತ್ತಿದ್ದರೂ ನಾವು ಭ್ರಷ್ಟಾಚಾರದ(Corrruption) ವಿಚಾರವನ್ನು ಪಕ್ಷದ ಕಚೇರಿಯಲ್ಲಿ ಮಾತನಾಡುತ್ತಿರುದೇಕೆ ಎಂಬ ಪ್ರಶ್ನೆ ನಿಮ್ಮನ್ನು ಕಾಡುತ್ತಿರಬಹುದು. ಅಧಿವೇಶನ 10 ದಿನಗಳ ಕಾಲ ನಡೆಯಲಿದ್ದು, ಇಂದು ಪ್ರಕೃತಿ ವಿಕೋಪದ ಚರ್ಚೆ ಆಗುತ್ತಿದೆ. ಅಧಿವೇಶನದಲ್ಲಿ ಭ್ರಷ್ಟಾಚಾರದ ವಿಚಾರವನ್ನು ವ್ಯಾಪಕವಾಗಿ ಚರ್ಚೆ ಮಾಡಬೇಕಿದ್ದು, ಕಾಂಗ್ರೆಸ್ ಈ ಜವಾಬ್ದಾರಿ ವಹಿಸಿಕೊಂಡಿದೆ. ನಮ್ಮ ಶಾಸಕರುಗಳಿಗೆ ಜವಾಬ್ದಾರಿ ನೀಡಿದ್ದು, ಬಿಜೆಪಿ ಸರ್ಕಾರದ ಬ್ರಹ್ಮಾಂಡ ಭ್ರಷ್ಟಾಚಾರದ ಬಗ್ಗೆ ಚರ್ಚೆ ಮಾಡಲು ತಿಳಿಸಿದ್ದೇವೆ. ಅಧಿವೇಶನದಲ್ಲಿ ಹಾಗೂ ಹೊರಗೆ ರಾಜ್ಯದ ಇತರೆ ಭಾಗಗಳಲ್ಲಿ ಸಾರ್ವಜನಿಕವಾಗಿ ಈ ಬಗ್ಗೆ ಚರ್ಚೆ ಆಗಬೇಕಿದೆ ಎಂದರು.
Advertisement
Advertisement
www.40percentsarkara.com ನಲ್ಲಿ ಜನ ದೂರು ನೀಡಿದ ನಂತರ ಮುಂದಿನ ನಡೆ ಏನು ಎಂದು ಕೇಳಿದಾಗ, ‘ಸರ್ಕಾರದ ಭ್ರಷ್ಟಾಚಾರ ವಿಚಾರವನ್ನು ನಾವು ಜನರ ಮಧ್ಯ ತೆಗೆದುಕೊಂಡು ಹೋಗಬೇಕು. ನಮ್ಮ ಎಲ್ಲ ನಾಯಕರು ಜಿಲ್ಲಾ ಮಟ್ಟಕ್ಕೆ ಹೋಗಿ, ಜನರಲ್ಲಿ ಜಾಗೃತಿ ಮೂಡಿಸಬೇಕು. ಲಂಚ ಪಡೆಯುವುದರ ಜತೆ ಲಂಚ ನೀಡುವುದು ತಪ್ಪು ಎಂದು ಜಾಗೃತಿ ಮೂಡಿಸಬೇಕು. ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತೇವೆ. ನಮ್ಮ ಕಾಲದಲ್ಲಿ ತಪ್ಪು ಮಾಡಿದ್ದರೆ, ನಾನು ಇಂಧನ ಸಚಿವನಾಗಿದ್ದಾಗ ದುಬಾರಿ ಬೆಲೆಗೆ ವಿದ್ಯುತ್ ಖರೀದಿ ಮಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ಮೊದಲು ನನ್ನ ವಿರುದ್ಧ ಪ್ರಕರಣ ದಾಖಲಿಸಲಿ. ಈ ವಿಚಾರದಲ್ಲಿ ತಡ ಬೇಡ. ನಾವೆಲ್ಲರೂ ರಾಜ್ಯದ ಜನರಿಗೆ ಉತ್ತರದಾಯಿಯಾಗಿರಬೇಕು. ಸಾರ್ವಜನಿಕರು ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಹಿಂಜರಿಯುತ್ತಾರೆ ಎಂಬ ಕಾರಣಕ್ಕೆ ಅವರಿಗೆ ಸಹಾಯವಾಣಿ ನೀಡಿದ್ದು, ಅವರು ನೀಡುವ ದೂರಿನ ಪ್ರಕಾರ ನಾವು ಅವರ ಪರವಾಗಿ ಸಂಬಂಧ ಪಟ್ಟ ಇಲಾಖೆಗೆ ದೂರು ನೀಡುತ್ತೇವೆ ಎಂದರು.
Advertisement
ವಿದ್ಯುತ್ ಖರೀದಿ ವಿಚಾರವಾಗಿ ಕೇಳಿದ ಪ್ರಶ್ನೆಗೆ, ನಾನು ಈ ವಿಚಾರದಲ್ಲಿ ಮೋಲ್ನೋಟಕ್ಕೆ ತಪ್ಪು ಮಾಡಿದ್ದೇನೆ ಎಂದು ಅನಿಸಿದರೆ ನನ್ನ ವಿರುದ್ಧ ಪ್ರಕರಣ ದಾಖಲಿಸಲಿ. ಆ ನಂತರ ಕಾನೂನು ಅವಕಾಶಗಳ ಬಗ್ಗೆ ಆಲೋಚಿಸಲಿ. ನಾನು ತಪ್ಪು ಮಾಡಿದ್ದೇನೆ, ಲಂಚ ಪಡೆದಿದ್ದೇನೆ, ರಾಜ್ಯದ ಜನತೆಗೆ ನಾನು ದ್ರೋಹ ಮಾಡಿದ್ದರೆ ತಕ್ಷಣವೇ ಪ್ರಕರಣ ದಾಖಲಿಸಲಿ. ನಾನು ನನ್ನ ಜವಾಬ್ದಾರಿ ವಿಚಾರವಾಗಿ ಆತ್ಮವಿಶ್ವಾಸದಲ್ಲಿದ್ದೇನೆ. ನಾವು ರಾಜ್ಯದ ಜನರಿಗೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೇವೆ ಎಂಬ ವಿಶ್ವಾಸದಲ್ಲಿ ಈ ವಿಚಾರ ಹೇಳುತ್ತಿದ್ದೇನೆ ಎಂದರು. ಇದನ್ನೂ ಓದಿ: ಪಬ್ಲಿಕ್ ಟಿವಿ ಇಂಪ್ಯಾಕ್ಟ್ – ನಲಪಾಡ್ ಅಕಾಡೆಮಿಗೆ ಜೆಸಿಬಿ ಗುನ್ನಾ!
Advertisement
40% ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಲು ನಮ್ಮೊಂದಿಗೆ ಕೈಜೋಡಿಸಿ.
844-770-40-40 ಗೆ ಕರೆ ಮಾಡಿ ಭ್ರಷ್ಟಾಚಾರದ ಬಗ್ಗೆ ದೂರು ನೀಡಿ https://t.co/n5QTYaDmz7 ಗೆ ಭೇಟಿ ನೀಡಿ ನಿಮ್ಮ ದೂರನ್ನು ದಾಖಲು ಮಾಡಿ.
2023ರಲ್ಲಿ ಕಾಂಗ್ರೆಸ್ ಸರ್ಕಾರ ಈ ದೂರಿನ ಕುರಿತು ಕ್ರಮ ಕೈಗೊಳ್ಳಲಿದೆ.#40percentsarkara pic.twitter.com/FlPei8dnZT
— Karnataka Congress (@INCKarnataka) September 13, 2022
ಡಿಕೆಶಿ ಹೇಳಿದ್ದೇನು?
ಭ್ರಷ್ಟಾಚಾರದ ವಿಚಾರದಲ್ಲಿ ಮಾಧ್ಯಮಗಳು ನಮಗಿಂತ ಹೆಚ್ಚಿನ ತನಿಖೆ ಮಾಡಿದ್ದು, ನಿಮಗೆ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ. ಡಬಲ್ ಇಂಜಿನ್ ಸರ್ಕಾರ ಬಂದರೆ ರಾಜ್ಯಕ್ಕೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರು. ಆದರೆ ಈ ಡಬಲ್ ಇಂಜಿನ್ ಸರ್ಕಾರ ಬಂದ ನಂತರ ದೆಹಲಿಯಿಂದ ರಾಜ್ಯಕ್ಕೆ ಎಷ್ಟು ಅನುದಾನ ಬಂದಿದೆ ಎಂಬ ಪಟ್ಟಿಯನ್ನು ಸರ್ಕಾರ ನೀಡಲಿ.
ಬೇರೆ ರಾಜ್ಯಗಳಲ್ಲಿ ಪ್ರವಾಹ ಬಂದಾಗ ಖುದ್ದು ವೀಕ್ಷಣೆ ಮಾಡುವ ಪ್ರಧಾನಿಗಳು ನಮ್ಮ ರಾಜ್ಯ ಸತತವಾಗಿ ಪ್ರವಾಹದಿಂದ ತತ್ತರಿಸುತ್ತಿದ್ದರೂ ಈ ಕಡೆ ತಿರುಗಿ ನೋಡಿಲ್ಲ. ನಮ್ಮ ರಾಜ್ಯಕ್ಕೆ ನೀಡಬೇಕಾಗಿದ್ದ ನ್ಯಾಯ ನೀಡಲಿಲ್ಲ. ಪ್ರಧಾನಮಂತ್ರಿಗಳು ಬೆಂಗಳೂರಿಗೆ ಬಂದು ಸಬ್ ಅರ್ಬನ್ ರೈಲು ಯೋಜನೆ ಉದ್ಘಾಟಿಸಿ ಹೋದರು. ಈ ಯೋಜನೆ ಉದ್ಘಾಟನಾ ಕಾರ್ಯಕ್ರಮದ ಜಾಹೀರಾತಿನಲ್ಲೇ ಉಳಿದಿದೆಯೇ ಹೊರತು ಚಾಲ್ತಿ ಆಗಲಿಲ್ಲ.
ಈ ಸರ್ಕಾರ ಬಂದ ನಂತರ ರಾಜ್ಯಕ್ಕೆ ಯಾವುದಾದರೂ ರಾಷ್ಟ್ರೀಯ ಯೋಜನೆ ನೀಡಿದ್ದೀರಾ? ಇಲ್ಲ. ಆದರೆ ಈ ಸರ್ಕಾರಕ್ಕೆ ಭ್ರಷ್ಟಾಚಾರದ ಹೆಸರು ಬಂದಿದೆ. ಪೊಲೀಸ್ ಇಲಾಖೆಯಲ್ಲಿ ಎಲ್ಲ ಹುದ್ದೆಗಳಿಗೂ ಒಂದೊಂದು ದರ ನಿಗದಿ ಮಾಡಿದ್ದೀರಿ. ಸರ್ಕಾರಿ ಇಲಾಖೆಗಳಲ್ಲಿನ ಹುದ್ದೆಗಳ ನೇಮಕಾತಿಯಲ್ಲಂತೂ ಭ್ರಷ್ಟಾಚಾರ ತಾಂಡವವಾಡುತ್ತಿದೆ.
ಬಿಜೆಪಿ ಚುನಾವಣೆ ಪೂರ್ವದಲ್ಲಿ 600 ಭರವಸೆ ನೀಡಿತ್ತು. ಅದರಲ್ಲಿ ಶೇ.90ರಷ್ಟು ಮಾತನ್ನು ಉಳಿಸಿಕೊಂಡಿಲ್ಲ. ಬಸವಣ್ಣನ ನಾಡಿನಲ್ಲಿ ನುಡಿದಂತೆ ನಡೆಯಬೇಕು. ಆದರೆ ನಿಮ್ಮಿಂದ ಅದು ಸಾಧ್ಯವಾಗಿಲ್ಲ. ನಾವು ದಿನನಿತ್ಯ ಪ್ರಶ್ನೆ ಕೇಳುತ್ತಿದ್ದು ಒಂದು ಪ್ರಶ್ನೆಗೂ ಉತ್ತರ ನೀಡಲು ನಿಮ್ಮಿಂದ ಸಾಧ್ಯವಾಗಿಲ್ಲ.
ಕೆಪಿಸಿಸಿ ಅಧ್ಯಕ್ಷರಾದ @DKShivakumar, ವಿಧಾನಸಭೆ ವಿಪಕ್ಷ ನಾಯಕರಾದ @siddaramaiah, ವಿಧಾನ ಪರಿಷತ್ ವಿಪಕ್ಷ ನಾಯಕರಾದ @HariprasadBK2 ಅವರು, 40% ಕಮಿಷನ್ ಸೇರಿದಂತೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರದ ನಾನಾ ಸ್ವರೂಪಗಳ ವಿಡಿಯೋ ಮತ್ತು ಲಂಚದ ರೇಟ್ ಕಾರ್ಡ್‌ಅನ್ನು ಜಂಟಿ ಮಾಧ್ಯಮಗೋಷ್ಠಿಯಲ್ಲಿ ಬಿಡುಗಡೆಗೊಳಿಸಿದರು. pic.twitter.com/fMWgbD4fVE
— Karnataka Congress (@INCKarnataka) September 13, 2022
ಬೆಂಗಳೂರು ವಿವಿಯ ರಿಜಿಸ್ಟಾರ್ ಪ್ರೊ. ಅಶೋಕ್ ಉಪಕುಲಪತಿ ಆಗಲು ಹೋಗಿ ಆತ್ಮಹತ್ಯೆ ಮಾಡಿಕೊಂಡರು. ಈ ಬಗ್ಗೆ ಸರ್ಕಾರ ತನಿಖೆ ಮಾಡಲಿಲ್ಲ ಯಾಕೆ? ಯಾವ ಕಾಲದಲ್ಲೂ ಈ ಮಟ್ಟದ ಭ್ರಷ್ಟಾಚಾರ ಇರಲಿಲ್ಲ.
ಪಿಎಸ್ಐ ಹಗರಣದಲ್ಲಿ ಸಣ್ಣ ಪುಟ್ಟ ಅಪರಾಧಿಗಳನ್ನು ಬಂಧಿಸಿದ್ದಾರೆ. ಈ ಅಕ್ರಮದಲ್ಲಿ ಸಚಿವರು ಭಾಗಿಯಾಗದಿದ್ದರೆ ಅಧಿಕಾರಿಗಳಿಗೆ ಇಷ್ಟು ದೊಡ್ಡ ಹಗರಣ ಮಾಡಲು ಹೇಗೆ ಸಾಧ್ಯ? ಪರೀಕ್ಷೆಯಲ್ಲಿ ಮೊದಲ ಸ್ಥಾನ ಪಡೆದ ಅಭ್ಯರ್ಥಿಯನ್ನು ವಿಚಾರಣೆಗೆ ಕರೆದುಕೊಂಡು ಹೋದರೆ ಸಚಿವರು ಕರೆ ಮಾಡಿ ಆತನನ್ನು ಬಿಡುಗಡೆ ಮಾಡಿಸುತ್ತಾರೆ.
ಇತ್ತೀಚೆಗೆ ಕನಕಗಿರಿ ಶಾಸಕರು ನಾನು 15 ಲಕ್ಷ ಪಡೆದು ಸರ್ಕಾರಕ್ಕೆ ನೀಡಿರುವುದಾಗಿ ಹೇಳಿದ್ದು, ಈ ಧ್ವನಿ ನನ್ನದೇ ಎಂದು ಒಪ್ಪಿಕೊಂಡಿದ್ದಾರೆ. ಈ ಹಗರಣದ ಬಗ್ಗೆ ನಮ್ಮ ಪಕ್ಷದ ಶಾಸಕರು ಪ್ರಶ್ನೆ ಮಾಡಿದಾಗ ಅವರಿಗೆ ನೋಟಿಸ್ ಕೊಟ್ಟ ನೀವು, ನಿಮ್ಮ ಶಾಸಕರಿಗೆ ಯಾಕೆ ನೊಟೀಸ್ ನೀಡಿಲ್ಲ? ನಿಮ್ಮದೇ ಶಾಸಕರಾದ ವಿಶ್ವನಾಥ್, ಯತ್ನಾಳ್ ಅವರು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡುತ್ತಲೇ ಇದ್ದಾರೆ ಆದರೂ ಅವರ ವಿಚಾರಣೆ ನಡೆದಿಲ್ಲ ಯಾಕೆ? ಇದನ್ನೂ ಓದಿ: ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸ್ಪಷ್ಟನೆ ನೀಡಿದ ಮೋಹನ್ ಲಾಲ್
ಮಾಜಿ ಸಚಿವರ ಮಂಚದ ಪ್ರಕರಣದಲ್ಲಿ 15 ಲಕ್ಷ ನೀಡಿರುವುದಾಗಿ ಹೇಳಿದ್ದರೂ ಯಾಕೆ ಪ್ರಕರಣ ದಾಖಲಾಗಿಲ್ಲ? ಲಂಚ ಪಡೆಯುವುದು ಎಷ್ಟು ಅಪರಾಧವೋ ಲಂಚ ನೀಡುವುದು ಅಪರಾಧ. ನಿಮ್ಮ ಸರ್ಕಾರ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ?
ಈ ಭ್ರಷ್ಟಾಚಾರದಿಂದ ರಾಜ್ಯದ ಮಾನ ಹರಾಜಾಗುತ್ತಿದೆ. ಪಿಡಬ್ಲ್ಯೂಡಿ ಗುತ್ತಿಗೆದಾರರಿಗೆ 40%, ಮಠಗಳಿಗೆ ನೀಡುವ ಅನುದಾನದಲ್ಲಿ 30%, ಸಲಕರಣೆ ಖರೀದಿಯಲ್ಲಿ 40% ಹೀಗೆ ಪ್ರತಿ ವಿಚಾರದಲ್ಲಿ ಕಮಿಷನ್ ಹೆಸರಲ್ಲಿ ಲೂಟಿ ಮಾಡಿದ್ದಾರೆ.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗದ ತಪ್ಪುಗಳನ್ನು ತಿದ್ದುವ ಶಕ್ತಿ ಪತ್ರಿಕಾರಂಗಕ್ಕೆ ಇದೆ. ನೀವು ಆ ಕೆಲಸ ಮಾಡಿದ್ದೀರಿ. ನಿಮ್ಮ ಕೆಲಸಕ್ಕೆ ನಮ್ಮ ಪಕ್ಷ ಅಭಿನಂದನೆ ಸಲ್ಲಿಸುತ್ತದೆ.
ರಾಜ್ಯ ಆಳ್ತಿರೋದು – 40% ಸರ್ಕಾರ
ರಾಜ್ಯದ ಜನರ ಕಷ್ಟಕ್ಕೆ ಕಾರಣ- ಭ್ರಷ್ಟಾಚಾರ.
ಭ್ರಷ್ಟ ಬಿಜೆಪಿ ಸರ್ಕಾರದ ಅಕ್ರಮಗಳು, ಹಗರಣಗಳು ಎಳೆದಷ್ಟೂ ಹೊರಬರುತ್ತವೆ.
ಬಿಜೆಪಿ ಅಂದ್ರೆ ಭ್ರಷ್ಟಾಚಾರದ ಅಕ್ಷಯಪಾತ್ರೆ!#40percentsarkara pic.twitter.com/4pcguDwuCY
— Karnataka Congress (@INCKarnataka) September 13, 2022
ಈಶ್ವರಪ್ಪ ಹಾಗೂ ರಮೇಶ್ ಜಾರಕಿಹೋಳಿ ಅವರ ಪ್ರಕರಣದಲ್ಲಿ ಇವರ ವಿರುದ್ಧ ತನಿಖೆ ಆರಂಭವಾಗುವ ಮುನ್ನವೇ ಸರ್ಕಾರ ಅವರು ಬಹಳ ಪುಣ್ಯವಂತರು, ಯೋಗ್ಯವಂತರು. ಅವರು ಯಾವುದೇ ತಪ್ಪು ಮಾಡಿಲ್ಲ, ಅವರು ನಿರ್ದೋಷಿಯಾಗಿ ಬರುತ್ತಾರೆ ಎಂದು ಯಡಿಯೂರಪ್ಪನವರು ಹೇಳುತ್ತಾರೆ. ಈ ರೀತಿ ನೀವು ಸರ್ಟಿಫಿಕೇಟ್ ನೀಡಿದ ನಂತರ ಯಾವ ಪೊಲೀಸ್ ಸರಿಯಾಗಿ ತನಿಖೆ ಮಾಡುತ್ತಾರೆ? ಆಪರೇಷನ್ ಕಮಲದಿಂದ ಅಧಿಕಾರಕ್ಕೆ ಬಂದಿರುವ ಸರ್ಕಾರ ಉಳಿಸಲು ಇಂತಹ ಕಳಂಕರನ್ನು ಸಮರ್ಥಿಸಿಕೊಳ್ಳುತ್ತಿದ್ದೀರಾ?
ರಮೇಶ್ ಜಾರಕಿಹೋಳಿ ಅವರು 680 ಕೋಟಿಯಷ್ಟು ಹಣವನ್ನು ಸಹಕಾರಿ ಬ್ಯಾಂಕುಗಳ ಸಾಲ ಹಾಗೂ ರೈತರಿಗೆ ನೀಡಬೇಕಾದ ಹಣ ಬಾಕಿ ಉಳಿಸಿಕೊಂಡಿದ್ದು, ಅವರನ್ನು ರಕ್ಷಣೆ ಮಾಡುತ್ತಿರುವುದೇಕೆ? ಸಹಕಾರ ಸಚಿವ ಸೋಮಶೇಖರ್ ಅವರು ಇವರನ್ನು ರಕ್ಷಣೆ ಮಾಡುತ್ತಿರುವುದೇಕೆ? ಈ 680 ಕೋಟಿ ಹಣ ಈ ರಾಜ್ಯದ ರೈತರ, ಸರಹಾಕಿ ಬ್ಯಾಂಕಿನ ಹಣ. ನಿಮ್ಮ ಭ್ರಷ್ಟ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವ ಬದಲು ರಕ್ಷಣೆ ಮಾಡುತ್ತೀರಾ?
ನಮ್ಮ ಸರ್ಕಾರದ ಅವಧಿಯ ಅಕ್ರಮದ ತನಿಖೆ ಮಾಡಿಸುತ್ತಾರಂತೆ. ಧಮ್ಮಿನ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳೇ, ಈ ತನಿಖೆಯನ್ನು 3 ವರ್ಷಗಳಿಂದ ಮಾಡಲು ನಿಮಗೆ ಧಮ್ಮು ಇರಲಿಲ್ಲವೇ? ತನಿಖೆ ಮಾಡಿ ಯಾರು ಬೇಡ ಎಂದರು. ನಿಮಗೆ ಭ್ರಷ್ಟ ಹಣೆಪಟ್ಟಿ ಬಂದ ನಂತರ ಈ ರೀತಿ ಮಾಡುತ್ತಿದ್ದೀರಾ?
ಶಿಕ್ಷಣ ಸಂಸ್ಥೆಗಳ ಸಂಘವೂ ಸರ್ಕಾರದ ವಿರುದ್ಧ ಪತ್ರ ಬರೆದಿದೆ. ಇನ್ನು ರೈತರಿಗೆ ನೀಡುವ ಪರಿಹಾರದಲ್ಲಿ ತೋಟಗಾರಿಕಾ ಸಚಿವರಿಗೆ ಶೇ.11ರಷ್ಟು ಕಮಿಷನ್ ಎಂದು ರಶೀದಿಯಲ್ಲಿ ನಮೂದಿಸಲಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳು ಯಾಕೆ ಮಾತನಾಡುತ್ತಿಲ್ಲ. ಇವರಿಂದ ನಿಮ್ಮ ಸರ್ಕಾರ ಬಂದಿದೆ ಎಂದು ಸುಮ್ಮನಿದ್ದೀರಾ?
ಈ ಭ್ರಷ್ಟ ಸರ್ಕಾರವನ್ನು ಕಿತ್ತು ಹಾಕಬೇಕಿದೆ. ಹೀಗಾಗಿ ನಾವು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ನೀವು ಕೂಡ ಈ ಸರ್ಕಾರದ ಭ್ರಷ್ಟಾಚಾರಕ್ಕೆ ಬಲಿಯಾಗಿದ್ದರೆ, ನೀವು ಸಹಾಯವಾಣಿ 8447704040 ಗೆ ಕರೆ, ವಾಟ್ಸಪ್ ಮೂಲಕ ತಿಳಿಸಿ. ಅಥವಾ
www.40percentsarkara.com ವೆಬ್ ಸೈಟ್ ನಲ್ಲಿ ತಿಳಿಸಬಹುದು. ನಿಮ್ಮ ಮಾಹಿತಿಯನ್ನು ಗೌಪ್ಯವಾಗಿ ಇಡುತ್ತೇವೆ.