Bengaluru CityKarnatakaLatestMain Post

4 ವರ್ಷ ಪೂರೈಸಿದ ಸಚಿವರು ಸೇಫ್: ಕಾಂಗ್ರೆಸ್ ಸಭೆಯ ಇನ್‍ಸೈಡ್ ಸ್ಟೋರಿ

ಬೆಂಗಳೂರು: ಎಂಎಲ್‍ಸಿ ಗೋವಿಂದರಾಜು ಅವರ ಮನೆಯಲ್ಲಿ ನಡೆದ ಐಟಿ ದಾಳಿ ವೇಳೆ ಸಿಕ್ಕಿದೆ ಎನ್ನಲಾದ ಡೈರಿ ಒಳಗಡೆಯ ಮಾಹಿತಿ ಬಹಿರಂಗವಾದ ಬೆನ್ನಲ್ಲೇ ಇಂದು ನಡೆದ ಕಾಂಗ್ರೆಸ್ ಸಮನ್ವಯ ಸಮಿತಿ ಸಭೆಯಲ್ಲಿ ಬಹಳ ದಿನಗಳ ಬಳಿಕ ಒಗ್ಗಟ್ಟಿನ ಮಂತ್ರ ಪಠಣವಾಗಿದೆ. ಸಚಿವ ಸಂಪುಟದ ಹಿರಿಯ ಸಚಿವರನ್ನು ಕೈಬಿಟ್ಟು ಪಕ್ಷದ ಜವಾಬ್ದಾರಿ ವಹಿಸುವ ಕುರಿತ ಪ್ರಸ್ತಾವನೆಯನ್ನು ಸಭೆಯಲ್ಲಿ ತಿರಸ್ಕರಿಸಲಾಗಿದೆ.

ಅತಿರಥ ನಾಯಕನ್ನೊಳಗೊಂಡ ಸಭೆ ಇಂದು ಭಾರೀ ಕುತೂಹಲ ಮೂಡಿಸಿತ್ತು. ನಾಲ್ಕು ವರ್ಷ ಪೂರೈಸಿದ ಸಚಿವರನ್ನು ಕೈಬಿಡಬೇಕು ಎಂಬ ಅಜೆಂಡಾ ಸಂಚಲನ ಮೂಡಿಸಿತ್ತು. ಆದರೆ ರಾಜ್ಯ ಉಸ್ತುವಾರಿ ದಿಗ್ವಿಜಯ್ ಸಿಂಗ್ ಅವರು ಈ ಪ್ರಸ್ತಾಪವನ್ನು ತಳ್ಳಿ ಹಾಕಿದ್ದು, ಇಲ್ಲಿ ಈ ಬಗ್ಗೆ ಚರ್ಚೆ ಮಾಡೋದು ಬೇಡ ಅಂತ ಸ್ಪಷ್ಟಪಡಿಸಿದರು ಎಂದು ಮೂಲಗಳು ತಿಳಿಸಿವೆ.

ಸಚಿವರನ್ನು ಕೈಬಿಡಬೇಕು ಎನ್ನುವ ವಿಷಯವನ್ನ ಗೃಹ ಸಚಿವ ಜಿ ಪರಮೇಶ್ವರ್ ಪ್ರಸ್ತಾಪಿಸಿದರೂ, ದಿಗ್ವಿಜಯ್ ಸಿಂಗ್ ಸಂಪುಟ ಸರ್ಜರಿಗೆ ಇದು ಸಮಯೋಚಿತವಲ್ಲ ಎನ್ನುವ ನಿರ್ಧಾರ ಪ್ರಕಟಿಸಿದರು. ಇದರ ಜೊತೆಯಲ್ಲಿ ಕಾಂಗ್ರೆಸ್ ನಲ್ಲಿ ಕೋಲಾಹಲ ಉಂಟುಮಾಡಿರುವ ಗೋವಿಂದರಾಜ್ ಡೈರಿಯ ವಿಚಾರಕ್ಕೆ ಕೌಂಟರ್ ಕೊಡಲು ನಿರ್ಧರಿಸಲಾಯಿತು ಎಂದು ಮೂಲಗಳು ಮಾಹಿತಿ ನೀಡಿವೆ.

ಸಭೆಯಲ್ಲಿ ಏನೇನು ಚರ್ಚೆ ಆಯ್ತು?
ನಾಲ್ಕು ವರ್ಷ ಪೂರೈಸಿದ ಹಿರಿಯ ಸಚಿವರನ್ನ ಕೈ ಬಿಟ್ಟು ಪಕ್ಷಕ್ಕೆ ಬಳಸಿಕೊಳ್ಳಬೇಕು ಎಂದು ಪರಮೇಶ್ವರ್ ಅಂದಾಗ ಡೈರಿ ಪ್ರಕರಣ ಇರುವಾಗ ಇದು ಸಮಯೋಚಿತವಲ್ಲ ಎಂದು ದಿಗ್ವಿಜಯ್ ಸಿಂಗ್ ತಿಳಿಸಿದ್ರು. ಸಿಎಂ ಮಾತನಾಡಿ, ಸದ್ಯದಲ್ಲೇ ಬಜೆಟ್ ಇದ್ದು ಸಂಪುಟಕ್ಕೆ ಮೇಜರ್ ಸರ್ಜರಿ ಮಾಡಿದರೆ ಆಡಳಿತ ಯಂತ್ರಕ್ಕೆ ತೊಂದರೆಯಾಗುತ್ತದೆ ಎಂದಾಗ ಪರಮೇಶ್ವರ್ ಯುಪಿಎ ಸರ್ಕಾರದಲ್ಲಿ ಸಚಿವರನ್ನ ಕೈಬಿಟ್ಟು ಪಕ್ಷಕ್ಕೆ ಬಳಸುವ ನೀತಿ ಅನುಸರಿಸಲಾಗಿತ್ತು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರಂತೆ. ಈ ಸಂದರ್ಭದಲ್ಲಿ ದಿಗ್ವಿಜಯ್ ಸಿಂಗ್, ಈಗ ಇಲ್ಲಿ ಚರ್ಚೆ ಬೇಡ. ವರ್ಕಿಂಗ್ ಕಮಿಟಿ ಸಭೆಯಲ್ಲಿ ಚರ್ಚಿಸಿ ಹೈಕಮಾಂಡ್ ಗೆ ತಿಳಿಸಿ ಎಂದು ಹೇಳಿದರು. ಬಜೆಟ್ ಅಧಿವೇಶನ ಆದಮೇಲೆ ಉತ್ತರ ಕರ್ನಾಟಕ ಭಾಗದಲ್ಲಿ ಎರಡು ದಿನ ಕಾರ್ಯಕಾರಿಣಿ ಸಭೆ ನಡೆಸಿ. ಚುನಾವಣೆ ಪಕ್ಷ ಬಲ ಪಡಿಸುವ ಬಗ್ಗೆ ಚರ್ಚಿಸಿ ಎಂದು ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಸಲಹೆ ನೀಡಿದರು. ಈ ಸಲಹೆಗೆ ವೀರಪ್ಪ ಮೊಯ್ಲಿ, ಆಳ್ವಾ ಸೇರಿದಂತೆ ಬಹುತೇಕ ನಾಯಕರಿಂದ ಒಮ್ಮತ ಸಿಕ್ಕಿತು.

ಮುಖ್ಯವಾಗಿ ಸಭೆಯಲ್ಲಿ ಡೈರಿ ವಿಚಾರದ ಬಗ್ಗೆ ಸುಧೀರ್ಘ ಚರ್ಚೆ ನಡೆಸಲಾಯ್ತು. ಕೇಂದ್ರ ಸರ್ಕಾರ ಮತ್ತು ರಾಜ್ಯ ಬಿಜೆಪಿ ಜಂಟಿಯಾಗಿ ರಾಜ್ಯ ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ತರುವ ಕೆಲಸ ಮಾಡಲಾಗುತ್ತಿದೆ. ಇದರ ವಿರುದ್ಧ ಸಂಘಟಿತರಾಗಿ ಕೌಂಟರ್ ಮಾಡುವ ಕೆಲಸ ಮಾಡುವಂತೆ ಹಿರಿಯ ನಾಯಕರಿಗೆ ಸಭೆಯಲ್ಲಿ ನಿರ್ದೇಶನ ನೀಡಲಾಯ್ತು.

ಇಂದಿನ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳ ಬದಲಾವಣೆಯ ಸುಳಿವು ನೀಡಿರುವ ರಾಜ್ಯ ಉಸ್ತುವಾರಿ ದಿಗ್ವಿಜಯ್‍ಸಿಂಗ್, ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯ ಬಗ್ಗೆಯೂ ಪರೋಕ್ಷವಾಗಿ ಪ್ರಸ್ತಾಪಿಸಿದ್ರು. ಮಾರ್ಚ್ 11ರ ಪಂಚರಾಜ್ಯಗಳ ಚುನಾವಣೆಯ ಫಲಿತಾಂಶದ ಬಳಿಕ ಪಕ್ಷಕ್ಕೆ ಹೊಸ ಸ್ವರೂಪ ನೀಡುವ ಅಗತ್ಯವಿದೆ ಅಂತ ಹೇಳಿದ್ರು.

ರಾಜ್ಯದಲ್ಲಿರುವ ಬರದ ಗಂಭೀರತೆಯ ಬಗ್ಗೆ ಸಭೆಯಲ್ಲಿ ಪ್ರಮುಖವಾಗಿ ಚರ್ಚೆ ನಡೆಯಿತು. ಬರ ನಿರ್ವಹಣೆಗೆ ಕೇಂದ್ರದಿಂದ ಹೆಚ್ಚಿನ ನೆರವು ಸಿಗದ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಯಿತು. ಸರ್ಕಾರ ಮತ್ತು ಪಕ್ಷದ ನಡುವೆ ಅಂತರ ಉಂಟಾಗದಂತೆ ಎಲ್ಲಾ ನಾಯಕರು ಸಂಘಟಿತವಾಗಿ ಮುನ್ನೆಡೆಯುವ ಅಭಿಪ್ರಾಯಗಳನ್ನು ಸಭೆಯಲ್ಲಿ ವ್ಯಕ್ತಪಡಿಸಿದ್ರು.

ಚರ್ಚೆಯಾದ ಪ್ರಮುಖ ವಿಚಾರಗಳು
– ಜನಪ್ರಿಯ ಬಜೆಟ್ ಮಂಡಿಸುವಂತೆ ನಾಯಕರು ಮನವಿ ಮಾಡಿದ್ದು, ಈ ಮನವಿಗೆ ಸಿಎಂ ಸ್ಪಂದನೆ
– ಪಕ್ಷಾಂತರ ಮಾಡುವ ಶಾಸಕರ ಬಗ್ಗೆ ಮುನ್ನೆಚ್ಚರಿಕೆ ಅಗತ್ಯ
– ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿ ಹೆಚ್ಚು ಸಮಯ ಕಳೆಯಬೇಕು
– ಗೊಂದಲವಿರುವ ಜಿಲ್ಲೆಯಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆ ಮಾಡಲು ಒಪ್ಪಿಗೆ
– ಉತ್ತರಕರ್ನಾಟಕದಲ್ಲಿ ಪಕ್ಷದ ಕಾರ್ಯಕಾರಿಣಿ ಸಭೆ
– ಬ್ಲಾಕ್ ಅಧ್ಯಕ್ಷರ ನೇಮಕಾತಿ ಬಗ್ಗೆ ಸಭೆಯಲ್ಲಿ ತಿರ್ಮಾನ
– ಪಕ್ಷದ ಹಿತಾಸಕ್ತಿಗೆ ವಿರುದ್ಧವಾಗಿ ಮಾತನಾಡುವವರಿಗೆ ಬ್ರೇಕ್
– ಗೋವಿಂದರಾಜು ಅವರ ಡೈರಿ ಬಗ್ಗೆ ಸರಿಯಾದ ಕೌಂಟರ್

ಸಭೆ ಬಳಿಕ ಸಚಿವರನ್ನ ಕೈ ಬಿಡುವ ಬಗ್ಗೆ ಪ್ರಸ್ತಾವನೆಯೇ ಇರಲಿಲ್ಲ ಅಂತಾ ಸಿಎಂ ಪ್ರತಿಕ್ರಿಯಿಸಿದ್ರು. ಪರಮೇಶ್ವರ್ ಹೇಳಿಕೆಯನ್ನ ಮಾಧ್ಯಮದವರು ಉಲ್ಲೇಖಿಸಿದಾಗ ನಾನು ಹಾಗೇ ಹೇಳಿಯೇ ಇಲ್ಲ ಅಂತಾ ಗೃಹ ಸಚಿವರು ಉಲ್ಟಾ ಹೊಡೆದರು. ತಕ್ಷಣ ಪರಮೇಶ್ವರ್ ಬೆಂಬಲಕ್ಕೆ ಬಂದ ಸಿಎಂ ಸಚಿವರನ್ನ ಪಕ್ಷಕ್ಕೆ ಬಳಸುವ ಚಿಂತನೆ ತಪ್ಪಲ್ಲ ಅಂತಾ ಪರಮೇಶ್ವರ್ ಹೇಳಿದ್ದಾರೆ. ಕೈ ಬಿಡುವ ಚಿಂತನೆಯಿದೆ ಅಂದಿಲ್ಲ ಅಂತಾ ಜಾಣತನದ ಉತ್ತರ ನೀಡಿದರು.

ಪರಂಗೆ ಹಿರಿಯ ನಾಯಕರ ಮೇಲೆ ಮುನಿಸು ಯಾಕೆ?
ಪಕ್ಷ ಸಂಘಟನೆಗೆ ಹಿರಿಯ ನಾಯಕರು ಈಗ ಶ್ರಮಿಸುತ್ತಿಲ್ಲ ಅನ್ನೋದು ಪರಮೇಶ್ವರ್ ಆರೋಪ. ಈ ಕಾರಣಕ್ಕಾಗಿ ಅವರು ಬೆಂಗಳೂರಿನಲ್ಲಿ ನಡೆದ ಸತ್ಯಮೇವ ಜಯತೆ ಕಾರ್ಯಕ್ರಮದಲ್ಲಿ ಬಹಿರಂಗವಾಗಿಯೇ ಕಾಂಗ್ರೆಸ್ ಕಟ್ಟಲು ಆಗದ ಮುಖಂಡರು, ದಯಮಾಡಿ ಪಕ್ಷವನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದರು. ಮಂತ್ರಿಗಳು, ಶಾಸಕರು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕ್ರಮಗಳಿಗೆ ಬರಬೇಕು. ಬರಲಿಕ್ಕೆ ಯಾರಿಗೆ ಇಷ್ಟ ಇಲ್ಲ, ಕಾಂಗ್ರೆಸನ್ನು ನಿಮಗೆ ಕಟ್ಟಲಿಕ್ಕೆ ಆಗದಿದ್ದರೆ ದಯಮಾಡಿ ಬಿಟ್ಟು ಬಿಡಿ. ಪಕ್ಷದಲ್ಲಿ ಇರಿ ಎಂದು ನಾವು ಒತ್ತಾಯ ಮಾಡುವುದಿಲ್ಲ. ಕಾಂಗ್ರೆಸ್ ಕಟ್ಟಲು ಸಾಕಷ್ಟು ಮುಖಂಡರು, ಕಾರ್ಯಕರ್ತರು ತಯಾರಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಅದು ಫೇಕ್ ಡೈರಿ: ಕೈ ನಾಯಕರು ಹೇಗೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು?

4 ವರ್ಷ ಪೂರೈಸಿದ ಸಚಿವರು ಸೇಫ್: ಕಾಂಗ್ರೆಸ್ ಸಭೆಯ ಇನ್‍ಸೈಡ್ ಸ್ಟೋರಿ

4 ವರ್ಷ ಪೂರೈಸಿದ ಸಚಿವರು ಸೇಫ್: ಕಾಂಗ್ರೆಸ್ ಸಭೆಯ ಇನ್‍ಸೈಡ್ ಸ್ಟೋರಿ

4 ವರ್ಷ ಪೂರೈಸಿದ ಸಚಿವರು ಸೇಫ್: ಕಾಂಗ್ರೆಸ್ ಸಭೆಯ ಇನ್‍ಸೈಡ್ ಸ್ಟೋರಿ

4 ವರ್ಷ ಪೂರೈಸಿದ ಸಚಿವರು ಸೇಫ್: ಕಾಂಗ್ರೆಸ್ ಸಭೆಯ ಇನ್‍ಸೈಡ್ ಸ್ಟೋರಿ

Related Articles

Leave a Reply

Your email address will not be published. Required fields are marked *