– ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ
– ಆರೋಪಿಗಳ ಪತ್ತೆ 8 ತಂಡ ರಚನೆ
ಮಂಗಳೂರು: ಪೌರತ್ವ ಕಾಯಿದೆ ಮತ್ತು ಎನ್‍ಆರ್‍ಸಿ ವಿರೋಧಿಸಿ ಡಿಸೆಂಬರ್ 19ರಂದು ಮಂಗಳೂರಿನಲ್ಲಿ ಸಂಭವಿಸಿದ್ದ ಹಿಂಸಾಚಾರದಲ್ಲಿ ಪೊಲೀಸ್ ಗೋಲಿಬಾರ್‌ಗೆ ಬಲಿಯಾದ ಜಲೀಲ್, ನೌಶೀನ್‍ಗೆ ಘೋಷಿಸಿದ್ದ ಪರಿಹಾರವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಹಿಂಪಡೆದಿದ್ದಾರೆ.
ಮಂಗಳೂರಲ್ಲಿ ಮಾತನಾಡಿ, ಮೃತಪಟ್ಟವರು ಕೃತ್ಯದಲ್ಲಿ ಭಾಗಿಯಾದವರೆಂದು ಮೇಲ್ನೋಟಕ್ಕೆ ಕಂಡುಬಂದಿದೆ. ಅಪರಾಧಿಗಳಿಗೆ ಪರಿಹಾರ ಕೊಟ್ಟ ನಿದರ್ಶನ ದೇಶದಲ್ಲಿ ಇಲ್ಲ ಎಂದಿದ್ದಾರೆ. ಉಡುಪಿಯಲ್ಲಿ ಮಾತನಾಡಿ, ತನಿಖೆ ಮೊದಲು ಪರಿಹಾರ ಕೊಟ್ಟರೆ ಅಪರಾಧ ಆಗುತ್ತದೆ. ನಮಗೆ ಮನವರಿಕೆ ಆಗಿದೆ. ಬೇರೆಯವರೆಲ್ಲ ಕೊಟ್ಟಿದ್ದಾರೆ ನಮ್ಮ ಅಭ್ಯಂತರ ಇಲ್ಲ. ತನಿಖೆಯಾದ ಮೇಲೆ ಪರಿಹಾರದ ಬಗ್ಗೆ ಘೊಷಣೆ ಮಾಡುತ್ತೇವೆ ಎಂದು ಪುನಾರುಚ್ಚರಿಸಿದ್ದಾರೆ.
Advertisement
Advertisement
ಪರಿಹಾರ ವಾಪಸ್ ಪಡೆದ ಬಿಎಸ್‍ವೈ ನಡೆಗೆ ಬಿಜೆಪಿಯಲ್ಲೇ ಪರ ವಿರೋಧ ಎದ್ದಿದೆ. ಸಚಿವರಾದ ಈಶ್ವರಪ್ಪ, ಕೊಲೆಗಡುಕರಿಗೆ ಪರಿಹಾರ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದ್ದರೆ ಸಂಸದೆ ಶೋಭಾ ಕರಂದ್ಲಾಜೆ ಅವರು ಅಪರಾಧಿಗಳಿಗೆ ಪರಿಹಾರ ನೀಡಿದ ಉದಾಹರಣೆ ದೇಶದಲ್ಲಿ ಇಲ್ಲ ಅಂದಿದ್ದಾರೆ. ಆದರೆ ಆರೋಗ್ಯ ಸಚಿವ ಶ್ರೀರಾಮುಲು ಮಾತ್ರ ಗೋಲಿಬಾರ್‍ನಲ್ಲಿ ಸತ್ತವರಿಗೆ ಪರಿಹಾರ ಕೊಡ್ಬೇಕು. ಘಟನೆ ಬಗ್ಗೆ ನ್ಯಾಯಾಂಗ ತನಿಖೆಯಲ್ಲಿ ಎಲ್ಲವೂ ಗೊತ್ತಾಗುತ್ತದೆ ಎಂದಿದ್ದಾರೆ.
Advertisement
ಕಾಂಗ್ರೆಸ್ ವಿರೋಧ: ಪರಿಹಾರ ವಾಪಸ್ ಪಡೆಯುವ ಸರ್ಕಾರದ ನಿರ್ಧಾರವನ್ನು ಕಾಂಗ್ರೆಸಿಗರು ಖಂಡಾತುಂಡವಾಗಿ ಖಂಡಿಸಿದ್ದಾರೆ. ಯುಟಿ ಖಾದರ್ ಅವರಂತೂ, ಮುಖ್ಯಮಂತ್ರಿಯವರೇ ಮೃತರ ಕುಟುಂಬಸ್ಥರನ್ನು ಕರೆದು ಸಾಂತ್ವನ ಹೇಳಿದ್ದರು. 10 ಲಕ್ಷ ಪರಿಹಾರವನ್ನೂ ಘೋಷಿಸಿದ್ರು. ಆದ್ರೀಗ, ಕಾರ್ಯಕರ್ತರ ಮಾತು ಕೇಳಿ ಪರಿಹಾರ ಹಿಂಪಡೆಯುತ್ತಿದ್ದಾರೆ. ಇವರು ರಾಜ್ಯಕ್ಕೆ ಮುಖ್ಯಮಂತ್ರಿಯೋ, ಬಿಜೆಪಿ ಕಾರ್ಯಕರ್ತರಿಗೋ ಎಂದು ಪ್ರಶ್ನಿಸಿದ್ದಾರೆ.
Advertisement
ಮಾಜಿ ಸಂಸದ ವೀರಪ್ಪ ಮೊಯ್ಲಿ, ಸತ್ತ ಮೇಲೆ ಆಪಾದಿತನಾಗುವುದು ಹೇಗಾಗುತ್ತದೆ? ಒಮ್ಮೆ ಪರಿಹಾರ ಘೋಷಣೆ ಮಾಡಿ, ಹಿಂಪಡೀತಾರೆ ಅಂದ್ರೇನು ಅಂತ ಪ್ರಶ್ನಿಸಿದ್ದಾರೆ. ಮಾಜಿ ಗೃಹ ಸಚಿವ ಎಂ.ಬಿ. ಪಾಟೀಲರು, ಗೋಲಿಬಾರಿನಲ್ಲಿ ಸತ್ತವರ ಜೀವ ವಾಪಸ್ ಕೊಡಲಿ. ಸತ್ತವರಲ್ಲಿ ಒಬ್ಬ ಪಿಎಚ್‍ಡಿ ಪೇಪರ್ ತರಲು ಹೋಗಿದ್ದ ವಿದ್ಯಾರ್ಥಿ. ಒಬ್ಬರು ಪೊಲೀಸ್‍ಗಷ್ಟೇ ಗಾಯವಾಗಿದೆ. ಪೊಲೀಸರು ವೀಡಿಯೋ ರಿಲೀಸ್ ಮಾಡಿ ಸತ್ಯ ಮುಚ್ಚಿಹಾಕುವ ಯತ್ನ ಮಾಡ್ತಿದ್ದಾರೆ ಅಂತ ಆರೋಪಿಸಿದ್ದಾರೆ.
8 ತಂಡ ರಚನೆ: ಮಂಗಳೂರು ಹಿಂಸಾಚಾರದ ದುಷ್ಕರ್ಮಿಗಳ ಪತ್ತೆಗೆ 8 ತಂಡಗಳನ್ನು ಮಂಗಳೂರು ಕಮಿಷನರ್ ಪಿ.ಎಸ್ ಹರ್ಷ ರಚಿಸಿದ್ದಾರೆ. ಡಿಸಿಪಿ ಮತ್ತು ಇನ್ಸ್ ಪೆಕ್ಟರ್ ನೇತೃತ್ವದಲ್ಲಿ 150 ಪೊಲೀಸರು ಈ ತಂಡದಲ್ಲಿದ್ದಾರೆ. ಈಗಾಗಲೇ 10 ಮಂದಿಯನ್ನು ಅರೆಸ್ಟ್ ಮಾಡಲಾಗಿದ್ದು, 30ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ಪಡೆಯಲಾಗಿದೆ.
ಸಿಸಿಟಿವಿ ಫೂಟೇಜ್ ಆಧರಿಸಿ 100ಕ್ಕೂ ಹೆಚ್ಚು ಮಂದಿಯ ಚಹರೆ ಗುರುತು ಹಚ್ಚಲಾಗಿದೆ. ಸೈಬರ್ ಅಪರಾಧ ಪತ್ತೆಗೆ ಇಬ್ಬರು ಇನ್ಸ್ ಪೆಕ್ಟರ್ ನೇತೃತ್ವದ 2 ತಂಡವನ್ನೂ ರಚಿಸಲಾಗಿದೆ. ಪ್ರಚೋದನಕಾರಿ ಸಂದೇಶ, ಹಿಂಸೆಗೆ ಪ್ರೇರಣೆ ವಿಚಾರದಲ್ಲಿ 60 ಕೇಸು ದಾಖಲಾಗಿದ್ದು, ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ 24 ತಂಡಗಳು ಕಾರ್ಯಾಚರಣೆಗೆ ಇಳಿದಿವೆ.
ಈ ಮಧ್ಯೆ, ಸಚಿವ ಸಿಟಿ ರವಿ ಅವರು, ಗಲಭೆಯಲ್ಲಿ ಮೃತಪಟ್ಟವರು ಅಮಾಯಕರಲ್ಲ. ಪೊಲೀಸರು ನಿಯಂತ್ರಿಸದೇ ಇದ್ದಿದ್ರೆ ದೊಡ್ಡ ಅನಾಹುತ ನಡೆಯುತ್ತಿತ್ತು ಎಂದರೆ ಸಂಸದೆ ಶೋಭಾ ಕರಂದ್ಲಾಜೆ ಅವರು, ಹಿಂಸಾಚಾರದಲ್ಲಿ ನಾರ್ಮಲ್ ಮುಸಲ್ಮಾನರಿಲ್ಲ. ಕೇರಳದಿಂದ ಬಂದ ಜನ ಕೃತ್ಯ ಮಾಡಿದ್ದಾರೆ. ಕೆಎಫ್‍ಡಿ, ಪಿಎಫ್‍ಐ ಸಂಘಟನೆಗಳ ಬಗ್ಗೆ ಕೇಂದ್ರ ಗೃಹ ಇಲಾಖೆಗೆ ಮಾಹಿತಿ ನೀಡಿದ್ದೇವೆ ಎಂದು ಆರೋಪಿಸಿದ್ದಾರೆ.