– ಸುಕೇಶ್ ಡಿಎಚ್
ರಾಜ್ಯ ರಾಜಕಾರಣದಲ್ಲಿ ನುಡಿದಂತೆ ನಡೆಯುವ ನಾಯಕ ಅನ್ನೋ ಇಮೇಜ್ ಉಳಿಸಿಕೊಂಡ ಏಕೈಕ ನಾಯಕ ಅಂದರೆ ನೋ ಡೌಟ್ ಅದು ಒನ್ ಅಂಡ್ ಓನ್ಲಿ ಯಡಿಯೂರಪ್ಪ. ಆಡಳಿತದ ವಿಷಯದಲ್ಲಿ ಯಡಿಯೂರಪ್ಪ ನೂರಕ್ಕೆ ನೂರು ನುಡಿದಂತೆ ನಡೆದಿದ್ದಾರೆ ಎಂದರೆ ಅದು ಖಂಡಿತ ಸುಳ್ಳು. 2008ರಲ್ಲೇ ಇರಬಹುದು, ಈಗಲೇ ಇರಬಹುದು ಹೇಳಿದ್ದನ್ನೆಲ್ಲ ಮಾಡಿಲ್ಲ, ಮಾಡ್ತೀನಿ ಅಂದ ಎಲ್ಲ ಕೆಲಸವೂ ಮಾಡಿ ಮುಗಿಸಿಲ್ಲ. ಆದರೆ ತಮ್ಮನ್ನು ನಂಬಿ ಬಂದವರನ್ನ ಎಂದಿಗೂ ಕೈ ಬಿಡಲ್ಲ ಅನ್ನೋದರಲ್ಲಿ ಕೊನೆ ಪಕ್ಷ ನಂಬಿದವರನ್ನ ಕೈ ಹಿಡಿಯುವ ಪ್ರಯತ್ನವನ್ನಾದರೂ ಪ್ರಾಮಾಣಿಕವಾಗಿ ಮಾಡುವುದರಲ್ಲಿ ಯಡಿಯೂರಪ್ಪಗೆ ಯಡಿಯೂರಪ್ಪನವರೇ ಸಾಟಿ.
Advertisement
ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುವುದು ಅನ್ನೋ ಕಾಲದಿಂದ ಈಗಿನವರೆಗೂ ಹಿಡಿದ ಹಟ ಸಾಧಿಸುವುದರಲ್ಲಿ ಯಡಿಯೂರಪ್ಪ ಛಲದಂಕ ಮಲ್ಲ ಅನ್ನೋದರಲ್ಲಿ ನೋ ಡೌಟ್. ತಮ್ಮ ರಾಜಕೀಯ ಜೀವನದ ಉದ್ದಕ್ಕೂ `ಕೊಟ್ಟ ಮಾತಿಗೆ ತಪ್ಪದ ಯಡಿಯೂರಪ್ಪ’ ಎಂದೇ ಹೆಸರು ಗಳಿಸಿದವರು. ಕೆಲವೊಮ್ಮೆ ಎಡವಿದರೂ ಅದನ್ನು ಇನ್ನೊಂದು ರೀತಿಯಲ್ಲಿ ಸರಿಪಡಿಸಿಕೊಂಡು ಮಾತು ಕೊಟ್ಟವರನ್ನು ಸಮಾಧಾನ ಪಡಿಸುವ ಛಾತಿಯೂ ಯಡಿಯೂರಪ್ಪನವರಿಗೆ ಹೊಸತಲ್ಲ. ಆದರೆ ಇತರೇ ನಾಯಕರ ಮಾತಿಗೂ ಕೃತಿಗೂ ಸಂಬಂಧವೇ ಇಲ್ಲ ಎಂಬಂತ ವರ್ತನೆಗಿಂತ ಯಡಿಯೂರಪ್ಪ ನೂರು ಪಾಲು ಮೇಲು. ಅವರ ಆ ಗುಣ ಅವರಿಗೆ ಪಕ್ಷವನ್ನು ಮೀರಿದ ಇಮೇಜನ್ನ ತಂದುಕೊಟ್ಟಿದ್ದು ಸುಳ್ಳಲ್ಲ. ಆದರೆ ಈ ಬಾರಿ ಕೊಟ್ಟ ಮಾತು ಉಳಿಸಿಕೊಳ್ಳುವಲ್ಲಿ ಬಿಎಸ್ ವೈ ಎಡವಿದ್ರು ಅನ್ನೋದು ಸುಳ್ಳಲ್ಲ.
Advertisement
Advertisement
ರಾಜೀನಾಮೆ ಕೊಟ್ಟು ಸಮ್ಮಿಶ್ರ ಸರಕಾರವನ್ನ ಕೆಡವಿದ 17 ಜನರಿಗೂ ಮಂತ್ರಿ ಭಾಗ್ಯ ಗ್ಯಾರಂಟಿ ಅನ್ನೋ ಭರವಸೆ ನೀಡಲಾಗಿತ್ತು. ಪ್ರತಾಪ ಗೌಡ ಪಾಟೀಲ್ ಹಾಗೂ ಮುನಿರತ್ನರನ್ನು ಹೊರತು ಪಡಿಸಿ ಉಳಿದ 15 ಜನ ಮಂತ್ರಿ ಸ್ಥಾನದ ಕನಸನ್ನ ಕಣ್ಣು ತುಂಬಿ ತುಂಬಿಕೊಂಡವರೆ. ಆದರೆ ಸೋಲು ವಿಶ್ವನಾಥ್ ಹಾಗೂ ಎಂಟಿಬಿ ನಾಗರಾಜ್ ಕನಸಿಗೆ ತಣ್ಣೀರು ಎರಚಿದ್ರೆ ಚುನಾವಣೆಯಲ್ಲಿ ಸ್ಪರ್ಧೆಯೇ ಮಾಡದ ರೋಶನ್ ಬೇಗ್ ಹಾಗೂ ಆರ್.ಶಂಕರ್ ಮಂತ್ರಿಗಿರಿಯ ಕನವರಿಕೆಯಲ್ಲೇ ದಿನ ಕಳೆಯುವಂತಾಗಿದೆ. ಹಾಗೆ ನೋಡೋದಾದರೆ ಗೆದ್ದವರ ಪೈಕಿ 11 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಬೇಕಿತ್ತು. ಆದರೆ ಸಾಹುಕಾರನ ನೆರಳಿನಂತೆ ಕಾಣುವ ಮಹೇಶ್ ಕುಮಟಳ್ಳಿ ಸಚಿವ ಸ್ಥಾನದಿಂದ ವಂಚಿತರಾದರು. ಸಿಎಂ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಿ ಕುಮಟಳ್ಳಿಯನ್ನ ಸೈಡಿಗೆ ತಳ್ಳಿದರು. ಪ್ರತಿಭಟನೆಯ ಧ್ವನಿ ಇಲ್ಲದೆ ಮಹೇಶ್ ಕುಮಟಳ್ಳಿ ಕಣ್ಣಂಚಿನಲ್ಲಿ ನೀರು ತಂದುಕೊಂಡು ಮೌನಕ್ಕೆ ಜಾರಿದ್ದಾರೆ.
Advertisement
ಇನ್ನೊಂದೆಡೆ ಸೋಲಾಗಲಿ, ಗೆಲುವಾಗಲಿ ನಮ್ಮ ತ್ಯಾಗಕ್ಕೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಅನ್ನೋ ನಂಬಿಕೆಯಲ್ಲೇ ವಿಶ್ವನಾಥ್, ಎಂಟಿಬಿ, ರೋಶನ್ ಬೇಗ್ ಹಾಗೂ ಆರ್.ಶಂಕರ್ ಆಶಾವಾದಿಗಳಾಗಿದ್ದರು. ಅವರಿಗಿದ್ದ ಧೈರ್ಯ ಯಡಿಯೂರಪ್ಪ ಕೊಟ್ಟ ಮಾತಿಗೆ ತಪ್ಪಲ್ಲ ಅನ್ನೋದು. ಆದರೆ ಕೊಟ್ಟ ಮಾತಿಗೆ ತಪ್ಪಲೇಬೇಕಾದ ಅನಿವಾರ್ಯತೆ ಯಡಿಯೂರಪ್ಪಗೆ ಎದುರಾಗಿದೆ. ವೈಯಕ್ತಿಕ ನೆಲೆಗಟ್ಟಲ್ಲಿ ಯಡಿಯೂರಪ್ಪ ಎಷ್ಟೇ ಪ್ರಬಲರಿರಬಹುದು ಆದರೆ ಹೈಕಮಾಂಡ್ ನಿರ್ದೆಶನ ಹಾಗೂ ಪ್ರಸ್ತುತ ರಾಜಕೀಯ ಸನ್ನಿವೇಶ ಎರಡೂ ಯಡಿಯೂರಪ್ಪನವರ ಕೈ ಕಟ್ಟಿ ಹಾಕಿರುವುದಂತು ಸತ್ಯ.
ಎಲ್ಲಕ್ಕಿಂತ ಮುಖ್ಯವಾಗಿ ಸ್ವತಃ ಯಡಿಯೂರಪ್ಪನವರೇ ಕೈ ಕೈ ಹಿಸುಕಿಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದ್ದು ಮೂಲ ಬಿಜೆಪಿಗರ ವಿಷಯದಲ್ಲೇ. ಉಮೇಶ್ ಕತ್ತಿಯಂತ ಅಸಮಾಧಾನಿತರನ್ನ ಸಮಾಧಾನ ಪಡಿಸುವ ಭರದಲ್ಲಿ ಸಚಿವ ಸ್ಥಾನದ ಭರವಸೆ ನೀಡಿ ಕೊನೆ ಗಳಿಗೆಯಲ್ಲಿ ಮಾತು ಉಳಿಸಿಕೊಳ್ಳಲಾರದೆ ಕೈ ಚೆಲ್ಲಿದ್ದಾರೆ. ಇನ್ನು ನೂತನ ಸಚಿವರಲ್ಲಿ ಯಾರ್ಯಾರಿಗೆ ಯಾವ್ಯಾವ ಖಾತೆಯ ಭರವಸೆ ನೀಡಿದ್ದಾರೋ ಗೊತ್ತಿಲ್ಲ. ಕೊಟ್ಟ ಮಾತಿನಂತೆ ಖಾತೆ ಹಂಚಲಾಗದಿದ್ದರೆ ಸಿಎಂ ಮತ್ತಷ್ಟು ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.
ಹಾಗೇ ನೋಡಿದರೆ ಇಂತಹುದೆ ಸಂದಿಗ್ಧ ಪರಿಸ್ಥಿತಿಯನ್ನ 2013 ರಲ್ಲೂ ಯಡಿಯೂರಪ್ಪ ಎದುರಿಸಿದ್ದರು. ಬಿಜೆಪಿಯಿಂದ ಹೊರ ಹೋಗಿ ಕೆಜೆಪಿ ಕಟ್ಟಿದಾಗಲೂ ಇಂತಹುದೇ ಸ್ಥಿತಿ ನಿರ್ಮಾಣವಾಗಿತ್ತು. ಭರವಸೆ ನೀಡಿ ತಮ್ಮೊಂದಿಗೆ ಕರೆದೊಯ್ದ ನಾಯಕರಿಗೆ ಸೂಕ್ತ ಸ್ಥಾನಮಾನ ಕೊಡಿಸುವಲ್ಲಿಯೂ ವಿಫಲರಾಗಿದ್ದರು. ಯಡಿಯೂರಪ್ಪರನ್ನು ನಂಬಿಕೊಂಡು ದಿನ ಬೆಳಗಾದರೆ ಬಿಜೆಪಿ ನಾಯಕರಿಗೆ ಬೈಯ್ಯುತ್ತಿದ್ದ ಲಕ್ಷ್ಮಿನಾರಾಯಣ ಹಾಗೂ ಧನಂಜಯ ಕುಮಾರ್ ಆನಂತರ ಎಷ್ಟೇ ಬಾಗಿಲು ಬಡಿದರೂ ಬಿಜೆಪಿ ಬಾಗಿಲು ಅವರ ಪಾಲಿಗೆ ತೆರೆಯಲೇ ಇಲ್ಲ.
ಬಿಜೆಪಿ ಭೀಷ್ಮ ಅಡ್ವಾಣಿಯವರಿಗೆ ಬೈದ ಧನಂಜಯ್ ಕುಮಾರ್ ಅವರ ರಾಜಕೀಯ ಭವಿಷ್ಯವೇ ಮುಗಿದು ಹೋಯ್ತು. ಯಡಿಯೂರಪ್ಪರನ್ನ ನಂಬಿದರೆ ಅತಂತ್ರವೇ ಖಾಯಂ ಅಂದುಕೊಂಡ ಲಕ್ಷ್ಮಿನಾರಾಯಣ್ ಕಾಂಗ್ರೆಸ್ ಸೇರಿಕೊಂಡರು. ವಾಪಸ್ ಬಿಜೆಪಿಗೆ ಬಂದು ಮತ್ತೆ ಹಳೆಯ ಹಿಡಿತವನ್ನೇ ಸಾಧಿಸಿದರು. ತಮ್ಮ ಬೆಂಬಲಿಗರ ಹಿತ ಕಾಯುವಲ್ಲಿ ಯಡಿಯೂರಪ್ಪ ಯಶಸ್ವಿಯಾಗಲಿಲ್ಲ. ಈಗ ಅಂತಹುದೆ ಸಂಕಷ್ಟಕ್ಕೆ ಯಡಿಯೂರಪ್ಪ ಸಿಲುಕಿದ್ದಾರೆ. ಸ್ವತಃ ಅವರೇ ಅಧಿಕಾರ ನಡೆಸುತ್ತಿದ್ದಾರೆ, ಆದರೆ ಭರವಸೆ ನೀಡಿದವರಿಗೆಲ್ಲಾ ಅಧಿಕಾರ ಕೊಡಿಸಲು ಸಾಧ್ಯವಾಗದೇ ಒದ್ದಾಡುತ್ತಿದ್ದಾರೆ.
ಯಡಿಯೂರಪ್ಪ ಮಾತು ಕೊಟ್ಟರೆ ಮುಗಿಯಿತು ಅನ್ನೋ ಮಾತು ನಿಧಾನಕ್ಕೆ ಸುಳ್ಳಾಗುತ್ತಿದೆಯೇ ಗೊತ್ತಿಲ್ಲ ಆದರೆ ಹೊಸದಾಗಿ ಯಾರಿಗೂ ಮಾತು ಕೊಡದಂತಹ ಸ್ಥಿತಿಯಲ್ಲಿ ಯಡಿಯೂರಪ್ಪ ಇದ್ದಾರೆ ಅನ್ನುವುದಂತೂ ನಿಜ.