ಬೆಂಗಳೂರು: ಕಾಂಗ್ರೆಸ್ ಹೈಕಮಾಂಡ್ (Congress High Command) ಹಿರಿತನ ನೋಡಿ ಮಂತ್ರಿ ಸ್ಥಾನಗಳನ್ನು ಹಂಚಿಕೆ ಮಾಡಲಿದ್ದು ನಮ್ಮಲ್ಲಿ ಯಾವುದೇ ಬಣ ಇಲ್ಲ ಎಂದು ಕಾಂಗ್ರೆಸ್ ನಾಯಕ ಎಂಬಿ ಪಾಟೀಲ್ (MB Patil) ಹೇಳಿದ್ದಾರೆ.
ಇಂದು ಪ್ರಮಾಣವಚನ (Swearing-In Ceremony) ಸ್ವೀಕರಿಸಲಿರುವ ಹಿನ್ನೆಲೆಯಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಇದೇ ಖಾತೆ ಬೇಕು ಎಂದು ನಾನು ಬೇಡಿಕೆ ಇಡುವುದಿಲ್ಲ. ಹೈಕಮಾಂಡ್ ಅಳೆದು ತೂಗಿ ಸ್ಥಾನವನ್ನು ಹಂಚಿಕೆ ಮಾಡಿದೆ. ಸಿಎಂ ಯಾವ ಖಾತೆ ಕೊಡುತ್ತಾರೋ ಅದನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಲಿಂಗಾಯತರಿಗೆ ಡಿಸಿಎಂ ಸ್ಥಾನ ನೀಡುವ ವಿಚಾರವಾಗಿ ಕೇಳಲಾದ ಪ್ರಶ್ನೆಗೆ, ಮುಸ್ಲಿಮರು, ಲಿಂಗಾಯತರು ಅತಿ ಹೆಚ್ಚು ಸಂಖ್ಯೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಟ್ಟಿದ್ದಾರೆ. ಸಮುದಾಯದ ಆಶಯ ಇರುವುದು ಸಹಜ. ಹೈಕಮಾಂಡ್ ಈ ಬಗ್ಗೆ ಯೋಚನೆ ಮಾಡಲಿದೆ. 4 ವರ್ಷದಲ್ಲಿ ಬಿಜೆಪಿ ಎಲ್ಲವನ್ನೂ ಹಾಳು ಮಾಡಿದ್ದು ಇದನ್ನ ಸರಿ ಮಾಡುವ ಕೆಲಸ ಮಾಡುತ್ತೇವೆ ಎಂದರು. ಇದನ್ನೂ ಓದಿ: ಪ್ರಮಾಣವಚನ ಕಾರ್ಯಕ್ರಮಕ್ಕೆ ಬರಲಿದ್ದಾರೆ ಬಿಜೆಪಿಯೇತರ ನಾಯಕರು
ಗ್ಯಾರಂಟಿ ಯೋಜನೆಗಳಿಗೆ ಷರತ್ತುಗಳು ಇದೆಯೇ ಎಂದು ಕೇಳಿದ್ದಕ್ಕೆ, ಗ್ಯಾರಂಟಿ ಯೋಜನೆಗಳ ಷರತ್ತುಗಳ ಬಗ್ಗೆ ನಾನು ಈಗ ಹೇಳುವುದಿಲ್ಲ. ಕ್ಯಾಬಿನೆಟ್‌ನಲ್ಲಿ ಚರ್ಚೆ ಮಾಡಿ ಜನರಿಗೆ ಕೊಟ್ಟ ಮಾತು ಈಡೇರಿಸುತ್ತೇವೆ ಎಂದು ತಿಳಿಸಿದರು.