ಬಾಗಲಕೋಟೆ: ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆಗೆ ಅಧಿಕೃತ ಘೋಷಣೆ ಆಗುವ ಕುರಿತು ರಾಜಕೀಯ ಲೆಕ್ಕಾಚಾರಗಳು ಜೋರಾಗಿವೆ. ಈ ವೇಳೆಯೇ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಲ್ಲಿ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ಸಿಎಂ ಆಪ್ತ ವಲಯದಿಂದ ತಿಳಿದು ಬಂದಿದೆ.
ನಾಮಪತ್ರ ಸಲ್ಲಿಕೆಗೆ ಇನ್ನು ಮೂರೇ ದಿನ ಬಾಕಿ ಇದ್ದು, ಈಗಾಗಲೇ ಸಿಎಂ ಅವರ ಎರಡು ದಿನಗಳ ವೇಳಾ ಪಟ್ಟಿ ಸಿದ್ಧವಾಗಿದೆ. ಈ ಪಟ್ಟಿಯಲ್ಲಿ ಸೋಮವಾರ ಬಾದಾಮಿಯಿಂದ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ನಮೂದಿಸಲಾಗಿದೆ. ಸದ್ಯ ಸಿಎಂ ವೇಳಾ ಪಟ್ಟಿ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ವೇಳಾ ಪಟ್ಟಿ ಬದಲಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
Advertisement
ಈ ಕುರಿತು ಬೆಂಗಳೂರಿನಲ್ಲಿ ಮತ್ತೊಮ್ಮೆ ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ ಅವರು ನಾನು ಎಲ್ಲೂ ಎರಡು ಕಡೆ ಸ್ಪರ್ಧಿತ್ತೇನೆ ಎಂದು ಹೇಳಿಯೇ ಇಲ್ಲ. ಆದರೂ ಒತ್ತಡ ಇದೆ. ಹೈಕಮಾಂಡ್ ಹೇಳಿದಂತೆ ನಡೆದುಕೊಳುತ್ತೇನೆ. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಭಾರೀ ಪ್ರತಿಕ್ರಿಯೆ ಸಿಕ್ಕಿದೆ ಎಂದರು.
Advertisement
Advertisement
ಬಾದಾಮಿಯಲ್ಲಿ ಸಿಎಂ ಸ್ಪರ್ಧೆ ಮಾಡಿದರೆ ಕ್ಷೇತ್ರ ಬಿಟ್ಟು ಕೊಡುವುದಾಗಿ ತಿಳಿಸಿದ್ದ ಟಿಕೆಟ್ ಆಕಾಂಕ್ಷಿ ಬಿವಿ ಚಿಮ್ಮನಕಟ್ಟಿ ಅವರಿಗೆ ಟಿಕೆಟ್ ನಿರಾಕರಿಸಿ ಡಿ.ದೇವರಾಜು ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು. ಆದರೆ ಇದುವರೆಗೂ ದೇವರಾಜು ಅವರಿಗೂ ಪಕ್ಷದ ಬಿ ಫಾರಂ ನೀಡಿಲ್ಲ.
Advertisement
ಇನ್ನು ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡದೆ ಉಳಿದಿದ್ದ 6 ಕ್ಷೇತ್ರಗಳ ಟಿಕೆಟ್ ಗಳ ಪೈಕಿ ಮೇಲು ಕೋಟೆಯಲ್ಲಿ ಪುಟ್ಟಣ್ಣಯ್ಯರ ಪುತ್ರ ದರ್ಶನ್ ಪುಟ್ಟಣ್ಣಯ್ಯಗೆ ಬೆಂಬಲ ನೀಡಲಾಗಿದೆ. ಉಳಿದ 5 ಕ್ಷೇತ್ರಗಳಲ್ಲಿ ಶಾಂತಿನಗರದಿಂದ ಹ್ಯಾರಿಸ್, ಕಿತ್ತೂರಿನಿಂದ ಹಾಲಿ ಶಾಸಕ ಡಿ.ಬಿ.ಇನಾಂದಾರ್, ನಾಗಠಾಣಾದಿಂದ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವಿಠಲ್ ಕಟಕದೊಂಡ, ರಾಯಚೂರಿಂದ ಸಯ್ಯದ್ ಯಾಸಿನ್, ಸಿಂಧಗಿಯ ಕ್ಷೇತ್ರದಲ್ಲಿ ಕುರುಬ ಸಮುದಾಯದ ಮುಖಂಡರಿಗೆ ನೀಡಲು ತೀರ್ಮಾನ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿವೆ.
ಬಾದಾಮಿಯಲ್ಲಿ ಸಿಎಂ ಕಣಕ್ಕೆ ಇಳಿದಿದ್ದೇ ಆದರೆ ಎದುರಾಳಿಯಾಗಿ ಶ್ರೀರಾಮುಲು ರನ್ನು ಕಣಕ್ಕೆ ಇಳಿಸಲು ಬಿಜೆಪಿ ಸಿದ್ಧತೆ ನಡೆಸಿರುವುದು ತಿಳಿದ ಸಂಗತಿ. ಆದರೆ ಸದ್ಯ ಈ ತೀರ್ಮಾನಕ್ಕೆ ಹೈಕಮಾಂಡ್ ಹಾಗು ಶ್ರೀ ರಾಮುಲು ಇಬ್ಬರೂ ಸಮ್ಮತಿ ನೀಡಿದ್ದು, 23ಕ್ಕೆ ರಾಮುಲು ನಾಮಪತ್ರ ಸಲ್ಲಿಸೋಕೆ ಸಿದ್ಧತೆ ನಡೆಸಿದ್ದಾರೆ.
ಇದಕ್ಕೂ ಮುನ್ನವೇ ಜೆಡಿಎಸ್ ಪಕ್ಷದಿಂದ ಹನುಮಂತ ಮಾವಿನಮರದ ಅವರು ಕುಮಾರಸ್ವಾಮಿ ಸಮ್ಮುಖದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಮಾತನಾಡಿದ ಹೆಚ್‍ಡಿಕೆ ಅವರು ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಆಶೀರ್ವಾದ ಸಿಕ್ಕಿಲ್ಲ. ಹಾಗಾಗಿ ಬನಶಂಕರಿ ದೇವಿ ಆಶೀರ್ವಾದಕ್ಕೆ ಬರುತ್ತಿದ್ದಾರೆ. ಆದರೆ ಇದು ಸಾಧ್ಯವಿಲ್ಲ ಎಂದು ಹೇಳಿದರು.
ಸಿದ್ದರಾಮಯ್ಯ ಅವರ ಎರಡು ಕ್ಷೇತ್ರದ ಸ್ಪರ್ಧೆ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ವಕ್ತಾರ ಅಶ್ವತ್ ನಾರಾಯಣ್, ಸಿದ್ದರಾಮಯ್ಯ ಆರಂಭದಲ್ಲೇ ಸೋಲು ಒಪ್ಪಿಕೊಂಡಿದ್ದಾರೆ. ಚಾಮುಂಡೇಶ್ವರಿಯಲ್ಲಿ ಸೋಲು ಖಚಿತ ಎಂಬುದು ಅವರ ಅರಿವಿಗೆ ಬಂದಿದೆ. ಹೀಗಾಗಿ ಬಾದಾಮಿಯಿಂದ ಸ್ಪರ್ಧೆಗೆ ಮುಂದಾಗಿದ್ದಾರೆ. ಮಂಡ್ಯದಲ್ಲಿ ಅಂಬರೀಶ್ ಸಿದ್ದರಾಮಯ್ಯನವರ ಕೈಗೆ ಸಿಗುತ್ತಿಲ್ಲ, ಪದ್ಮನಾಭನಗರದಲ್ಲಿ ಈಗ ಅಭ್ಯರ್ಥಿ ಬದಲಾಯಿಸಿ ಶ್ರೀನಿವಾಸ್ ಅವರಿಗೆ ಟಿಕೆಟ್ ನೀಡಲು ಮುಂದಾಗಿದ್ದಾರೆ. ಇಷ್ಟೆಲ್ಲಾ ಗೊಂದಲಗಳನ್ನು ನೋಡಿದರೆ ಕಾಂಗ್ರೆಸ್ 50 ಸೀಟ್ ಗೆಲ್ಲುವುದಿಲ್ಲ ಎಂದರು.