ನವದೆಹಲಿ: ಪ್ರಕೃತಿ ವಿಕೋಪ ಕುರಿತಂತೆ ಉನ್ನತ ಮಟ್ಟದ ಸಮಿತಿ ಸಭೆಯನ್ನು ಕೂಡಲೇ ಕರೆದು ರಾಜ್ಯಕ್ಕೆ ಬರ ಪರಿಹಾರ (Drought Relief Fund) ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಆಗ್ರಹಿಸಿದ್ದಾರೆ.
ಸಂಸತ್‍ನಲ್ಲಿ ಅಮಿತ್ ಶಾ ಅವರನ್ನು ಭೇಟಿಯಾದ ಅವರು ರಾಜ್ಯದ ಬರ ಪರಿಸ್ಥಿತಿಯನ್ನು ವಿವರಿಸಿದರು. ರಾಜ್ಯದಲ್ಲಿ ತೀವ್ರ ಬರ ಪರಿಸ್ಥಿತಿ ತಲೆದೋರಿದ್ದು, 236 ತಾಲೂಕುಗಳ ಪೈಕಿ 223 ತಾಲೂಕುಗಳು ಬರ ಪೀಡಿತವಾಗಿವೆ. ಸುಮಾರು 48.19 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿ ಸಂಭವಿಸಿದೆ. ಇದರಿಂದಾಗಿ ರೈತರು, ಅದರಲ್ಲೂ ಹೆಚ್ಚಿನ ಸಂಖ್ಯೆಯ ಸಣ್ಣ ಮತ್ತು ಅತಿ ಸಣ್ಣ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರವು ಎನ್.ಡಿ.ಆರ್.ಎಫ್. ಮಾರ್ಗಸೂಚಿಯ ಅನ್ವಯ ಬರ ಪರಿಹಾರ ಬಿಡುಗಡೆಗಾಗಿ ಮೊದಲ ಪ್ರಸ್ತಾವನೆ ಸಲ್ಲಿಸಿ ಮೂರು ತಿಂಗಳು ಕಳೆದಿದೆ. ಆದ್ದರಿಂದ ಕೂಡಲೇ ಉನ್ನತಮಟ್ಟದ ಸಮಿತಿ ಸಭೆ ನಡೆಸಿ, 18,177.44 ಕೋಟಿ ರೂ. ಹಣವನ್ನು ಬರ ಪರಿಹಾರಕ್ಕೆ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಯಾವ ಸೀಟು ಹಂಚಿಕೆಯೂ ಇಲ್ಲ; ದೆಹಲಿಗೆ ವೈಯಕ್ತಿಕ ಕೆಲಸಕ್ಕೆ ಹೋಗುತ್ತಿದ್ದೇನೆ: ಹೆಚ್‌ಡಿಕೆ
Advertisement
Advertisement
4663.12 ಕೋಟಿ ರೂ. ಇನ್‍ಪುಟ್ ಸಬ್ಸಿಡಿ, 12,577.86 ಕೋಟಿ ರೂ. ತುರ್ತು ಪರಿಹಾರ, 566.78 ಕೋಟಿ ರೂ. ಕುಡಿಯುವ ನೀರಿಗಾಗಿ ಹಾಗೂ 363.68 ಕೋಟಿ ರೂ. ಜಾನುವಾರುಗಳ ಸಂರಕ್ಷಣೆಗಾಗಿ ಒದಗಿಸುವಂತೆ ಕೋರಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರನ್ನು ಪರಿಗಣಿಸುವಾಗ ಕೇಂದ್ರ ಸರ್ಕಾರವು 2015-16ರ ಕೃಷಿ ಗಣತಿಯ ದತ್ತಾಂಶವನ್ನು ಪರಿಗಣಿಸುತ್ತಿದೆ. ಇದು 8 ವರ್ಷಗಳ ಹಳೆಯ ಮಾಹಿತಿಯಾಗಿದ್ದು, ಆಸ್ತಿ ವಿಭಜನೆ ಮತ್ತಿತರ ಕಾರಣಗಳಿಂದ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ ಹೆಚ್ಚಾಗಿದ್ದು, 83 ಲಕ್ಷಕ್ಕೂ ಹೆಚ್ಚಿದೆ.
Advertisement
ಪಿಎಂ-ಕಿಸಾನ್ ಯೋಜನೆಗೆ ರಾಜ್ಯದ ರೈತರ ದತ್ತಾಂಶ ಸಂಗ್ರಹಿಸುವ ತಂತ್ರಾಂಶ ಫ್ರೂಟ್ಸ್‌ನಲ್ಲಿ ದಾಖಲಿಸಿದ ಮಾಹಿತಿಯನ್ನು ಪರಿಗಣಿಸಲಾಗುತ್ತಿದೆ. ಅಂತೆಯೇ ಬೆಳೆ ಪರಿಹಾರ ವಿತರಣೆಗೂ ಈ ದತ್ತಾಂಶವನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳು ಮನವಿ ಮಾಡಿದರು. ಬರ ಪರಿಹಾರಕ್ಕಾಗಿ ರಾಜ್ಯದ ಮೊದಲ ಪ್ರಸ್ತಾವನೆಯನ್ನು ಕೇಂದ್ರ ಕೃಷಿ ಸಚಿವಾಲಯಕ್ಕೆ 2023ರ ಸೆ.22 ರಂದು ಸಲ್ಲಿಸಲಾಗಿತ್ತು. ಭಾರತ ಸರ್ಕಾರದ ಬರ ಅಧ್ಯಯನ ತಂಡವು ಅಕ್ಟೋಬರ್ ತಿಂಗಳ 4 ರಿಂದ 9ರ ನಡುವೆ ಭೇಟಿ ನೀಡಿ, ವರದಿಯನ್ನು ಸಲ್ಲಿಸಿದೆ. ಅದರ ನಂತರ ಇನ್ನೂ 21 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ.
Advertisement
ಅ.20 ರಂದು ಕೇಂದ್ರ ಕೃಷಿ ಸಚಿವಾಲಯಕ್ಕೆ ಎನ್.ಡಿ.ಆರ್.ಎಫ್. ಅಡಿ 17,901.73 ಕೋಟಿ ರೂ. ಪರಿಹಾರ ಒದಗಿಸುವಂತೆ ಪ್ರಸ್ತಾವನೆ ಸಲ್ಲಿಸಲಾಯಿತು. ಇದರಲ್ಲಿ ತುರ್ತು ಪರಿಹಾರದ 12,577.86 ಕೋಟಿ ರೂ. ಮೊತ್ತವೂ ಸೇರಿದೆ. ನ.4 ರಂದು ಹೆಚ್ಚುವರಿಯಾಗಿ 7 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಯಿತು. ಈ ಹಿನ್ನೆಲೆಯಲ್ಲಿ ಸಲ್ಲಿಸಿದ ಪೂರಕ ಮನವಿಯೊಂದಿಗೆ ಕೇಂದ್ರದಿಂದ 18,177.44 ಕೋಟಿ ರೂ. ಪರಿಹಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಮೊದಲ ಮನವಿ ಸಲ್ಲಿಸಿ ಈಗಾಗಲೇ ಮೂರು ತಿಂಗಳು ಕಳೆದಿದ್ದು, ರೈತರು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಬೆಳೆ ವಿಫಲವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ಇನ್‍ಪುಟ್ ಸಬ್ಸಿಡಿ ನೀಡುವುದು ಅತ್ಯಗತ್ಯವಾಗಿದೆ ಎಂದು ಮುಖ್ಯಮಂತ್ರಿಗಳು ಪ್ರತಿಪಾದಿಸಿದ್ದಾರೆ. ಈ ಸಂದರ್ಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಉಪಸ್ಥಿತರಿದ್ದರು. ಇದನ್ನೂ ಓದಿ: ಇಂದು ಮತ್ತಿಬ್ಬರು ಅಮಾನತು- ಸಂಸದರ ಸಸ್ಪೆಂಡ್ ಸಂಖ್ಯೆ 143ಕ್ಕೆ ಏರಿಕೆ