– ಮೇಕೇದಾಟು ಯೋಜನೆ ಬಗ್ಗೆಯೂ ಪ್ರಸ್ತಾಪ
ನವದೆಹಲಿ: ಕಬ್ಬು ಬೆಳೆಗಾರರ ಸಮಸ್ಯೆ ಬಗ್ಗೆ ಪ್ರದಾನಿ ನರೇಂದ್ರ ಮೋದಿ (PM Modi) ಜೊತೆ ಸಿಎಂ ಸಿದ್ದರಾಮಯ್ಯ (Siddaramaiah) ಮಾತನಾಡಿದ್ದಾರೆ. ಇಂದು ಸಂಜೆ ಪ್ರಧಾನಿ ಅವರನ್ನು ಭೇಟಿಯಾಗಿ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.
ಈ ಕುರಿತು ಮಾತನಾಡಿದ ಸಿಎಂ, ಬೆಳೆಹಾನಿ, ಮೇಕೆದಾಟು, ಮಹದಾಯಿ, ಕಬ್ಬು ಹಾಗೂ ಜಲಜೀವನ್ ಮಿಷನ್ ಬಗ್ಗೆ ಚರ್ಚೆ ನಡೆಸಿ ಮನವಿ ಪತ್ರ ಕೊಟ್ಟಿದ್ದೇನೆ. ಮುಂಗಾರು ಮಳೆ ಬೇಗ ಬಂದು ಹೆಚ್ಚು ಮಳೆಯಾಗಿದೆ. 14 ಲಕ್ಷದ 58 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ, 10,700 ಕೋಟಿ ರೂಪಾಯಿ ಮೌಲ್ಯದ ಬೆಳೆಹಾನಿಯಾಗಿದೆ. ಎಸ್‌ಡಿಆರ್‌ಎಫ್‌ನಲ್ಲಿ 984 ಕೋಟಿ ಇದೆ. 614 ಕೋಟಿ ಹಣದ ಅಗತ್ಯ ಇದೆ. ಇದಲ್ಲದೇ ರಾಜ್ಯವೂ 1090 ಕೋಟಿ ನೀಡಿದೆ ಎಂದರು.
ಕಬ್ಬಿಗೆ ಎಫ್‌ಆರ್‌ಪಿ ಕೇಂದ್ರ ನಿಗದಿ ಮಾಡುತ್ತೆ. ಈ ವರ್ಷ ಕೇಂದ್ರ ಸರ್ಕಾರ ನಿಗದಿ ಮಾಡಿರುವುದು 10.25 ರಿಕವರಿ ಇರುವ ಕಬ್ಬಿಗೆ ಪ್ರತಿ ಟನ್‌ಗೆ 3550 ರೂಪಾಯಿ. ಇದರಲ್ಲಿ ಎಲ್ಲಾ ವೆಚ್ಚಗಳು ಸೇರಿವೆ. ಆದರೆ, ರೈತರು 3500 ರೂ. ಕೇಳ್ತಿದ್ದಾರೆ ಅಂತ ಸಿಎಂ ಹೇಳಿದರು.
ಇತ್ತ, ಪ್ರತಿ ಟನ್ ಕಬ್ಬಿಗೆ 3160 ರೂಪಾಯಿ ಕೊಡಬೇಕು ಅಂತ ಕಲಬುರಗಿಯಲ್ಲಿ ಡಿಸಿ ಕಚೇರಿ ಸೇರಿ ಹಲವೆಡೆ ರೈತರು ಪ್ರತಿಭಟನೆ ನಡೆಸಿದರು. ನವೆಂಬರ್ 10ರಂದು ಅಫಜಲಪುರ್ ಬಂದ್ ವೇಳೆ ಪ್ರತಿ ಟನ್ ಕಬ್ಬಿಗೆ 3160 ರೂಪಾಯಿ ಕೊಡುವುದಾಗಿ ಹೇಳಿ ಇದೀಗ 3100 ರೂಪಾಯಿ ಕೊಡಲಾಗುತ್ತಿದೆ ಅಂತ ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


