ಸಚಿನ್‌ ಪೈಲೆಟ್‌ಗೆ ರಾಹುಲ್‌ ಆರಂಭದಲ್ಲಿ ಮಾತು ಕೊಟ್ಟಿದ್ದರು, ನಂತರ ಏನಾಯ್ತು? – ವೇಣುಗೋಪಾಲ್‌ಗೆ ಉಲ್ಟಾ ಹೊಡೆದ ಡಿಕೆಶಿ

Public TV
2 Min Read
DK Shivakumar K. C. Venugopal

ಬೆಂಗಳೂರು:”ರಾಜಸ್ಥಾನದಲ್ಲಿ ಸಚಿನ್ ಪೈಲೆಟ್‌ (Sachin Pilot) ಅವರಿಗೆ ರಾಹುಲ್‌ ಗಾಂಧಿಯೇ (Rahul Gandhi) ಮಾತು ಕೊಟ್ಟಿದ್ದರು. ಆ ನಂತರ ಏನಾಯಿತು” ಇದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್‌ (DK Shivakumar) ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್‌ಗೆ ಕೇಳಿದ ಖಡಕ್‌ ಪ್ರಶ್ನೆ.

ಬೆಂಗಳೂರಿನಿಂದ ದೆಹಲಿಗೆ ಹೊರಡುವ ಮುನ್ನ ಡಿಕೆ ಶಿವಕುಮಾರ್‌ ಮನವೊಲಿಕೆಗೆ ಮುಂದಾದ ವೇಣುಗೋಪಾಲ್‌ (K. C. Venugopal) 50:50 ಸೂತ್ರಕ್ಕೆ ಒಪ್ಪುವಂತೆ ಮನವಿ ಮಾಡಿದ್ದಾರೆ. ಈ ಸೂತ್ರಕ್ಕೆ ಒಪ್ಪಿಗೆ ನೀಡಿದರೆ ಇಬ್ಬರಿಗೂ ಅನುಕೂಲ, ಪಕ್ಷಕ್ಕೂ ಒಳ್ಳೆದಾಗುತ್ತದೆ. ಹೈಕಮಾಂಡ್‌ ನೀಡಿದ ಈ ಭರವಸೆಯನ್ನು ನೀವು ಒಪ್ಪಿಕೊಳ್ಳಬೇಕು ಎಂದು ಮನವೊಲಿಸುವ ಪ್ರಯತ್ನ ಮಾಡಿದ್ದರು ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ  ತಿಳಿದು ಬಂದಿದೆ.

ವೇಣುಗೋಪಾಲ್‌ ಮಾತಿಗೆ, ರಾಜಸ್ಥಾನದಲ್ಲಿ (Rajasthan) ಓಡಾಡಿ ಪಕ್ಷ ಸಂಘಟನೆ ಮಾಡಿ ಪಕ್ಷ ಅಧಿಕಾರಕ್ಕೆ ತರಲು ಸಚಿನ್ ಪೈಲೆಟ್ ಕಾರಣ. ಆದರೆ ಹಿರಿತನ ಬೇರೆ ಬೇರೆ ಕಾರಣ ನೀಡಿ ಅಶೋಕ್‌ ಗೆಹ್ಲೋಟ್ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ್ದೀರಿ. ಈಗ ನ್ಯಾಯ ಕೇಳುತ್ತಿರುವ ಸಚಿನ್ ಪೈಲೆಟ್ ಅವರನ್ನು ಪಕ್ಷದಿಂದಲೇ ಹೊರಹಾಕುವ ಸಿದ್ದತೆ ನಡೆದಿದೆ. ನನಗೂ ಆ ರೀತಿ ಆಗುವುದಿಲ್ಲ ಎಂದು ಏನು ಗ್ಯಾರಂಟಿ ಎಂದು ಡಿಕೆಶಿ ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯನೇ ಸಿಎಂ ಆಗ್ಬೇಕು: ಕೆಎನ್‌ ರಾಜಣ್ಣ ಆಗ್ರಹ

ರಾಹುಲ್ ಗಾಂಧಿಯವರೇ ಮಾತು ಕೊಟ್ಟು ಸಚಿನ್ ಪೈಲೆಟ್‌ ಅವರಿಗೆ ಈ ಸ್ಥಿತಿ ಬಂದಿದೆ. ಇನ್ನು ನನಗೆ ಎರಡೂವರೆ ವರ್ಷದ ನಂತರ ಏನಾಗುತ್ತದೆ ಎಂದು ಈಗಲೇ ಹೇಳಲು ಸಾಧ್ಯವಿಲ್ಲ. ಮೊದಲು ನನ್ನನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ಇದಾದ ಬಳಿಕ ಸಿದ್ದರಾಮಯ್ಯ ಅವರನ್ನು ಸಿಎಂ ಆಗಿ ನೇಮಿಸಲಿ ಎಂದು ವೇಣುಗೋಪಾಲ್‌ ಮಾತಿಗೆ ಡಿಕೆಶಿ ಉಲ್ಟಾ ಹೊಡೆದಿದ್ದಾರೆ. ಡಿಕೆಶಿ ವರಸೆಗೆ ಯಾವುದೇ ಪ್ರತಿಕ್ರಿಯೆ ನೀಡದೇ ಅಧ್ಯಕ್ಷರ ಗಮನಕ್ಕೆ ತರುತ್ತೇನೆ ಎಂದು ಹೇಳಿ ವೇಣುಗೋಪಾಲ್‌ ಸುಮ್ಮನಾಗಿದ್ದಾರೆ.

ರಾಜಸ್ಥಾನದಲ್ಲಿ ಆಗಿದ್ದು ಏನು?
2018ರ ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್‌ ಭರ್ಜರಿ ಜಯಗಳಿಸಿತ್ತು. ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಅಶೋಕ್‌ ಗೆಹ್ಲೋಟ್‌ ಮತ್ತು ಸಚಿನ್‌ ಪೈಲೆಟ್‌ ಇಬ್ಬರೂ ಸಿಎಂ ಪಟ್ಟಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಹೈಕಮಾಂಡ್‌ ಅಶೋಕ್‌ ಗೆಹ್ಲೋಟ್‌ ಅವರಿಗೆ ಸಿಎಂ ಸ್ಥಾನ ನೀಡಿತ್ತು. ಈ ವಿಚಾರಕ್ಕೆ ಆರಂಭದಲ್ಲೇ ಬಂಡಾಯ ಎದ್ದಿದ್ದ ಸಚಿನ್‌ ಪೈಲೆಟ್‌ ನಂತರ ಅವರ ಆಪ್ತರಿಗೆ ಮಂತ್ರಿ ಸ್ಥಾನ ನೀಡಿ ಸಮಾಧಾನ ಮಾಡಲಾಗಿತ್ತು. ಈಗ ಇಬ್ಬರ ನಡುವಿನ ತಿಕ್ಕಾಟ ಜೋರಾಗಿದ್ದು  ಬಿಜೆಪಿ ಸಿಎಂ ವಸುಂಧರ ರಾಜೇ ವಿರುದ್ಧ ಭ್ರಷ್ಟಾಚಾರ ಆರೋಪದ ತನಿಖೆ ನಡೆಸದ್ದಕ್ಕೆ ಸಿಟ್ಟಾಗಿ ಸಚಿನ್‌ ಪೈಲಟ್‌  5 ದಿನ ಯಾತ್ರೆ ನಡೆಸಿ ಗೆಹ್ಲೋಟ್‌ ಸರ್ಕಾರದ ವಿರುದ್ಧ  ಕಿಡಿ ಕಾರಿದ್ದರು. ಈಗ 5 ದಿನದ ಯಾತ್ರೆ ನಡೆಸಿದ್ದೇನೆ ತನಿಖೆ ನಡೆಸದೇ ಇದ್ದರೆ ಸರ್ಕಾರ ವಿರುದ್ಧ ರಾಜ್ಯಾಂದತ ಬೀದಿಗೆ ಇಳಿದು ಪ್ರತಿಭಟನೆ ನಡೆಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.

Share This Article