ನವದೆಹಲಿ: ರಾಹುಲ್ ಗಾಂಧಿ (Rahul Gandhi) ಸಂಧಾನ ವಿಫಲವಾಗಿದ್ದು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರ ಹೆಸರನ್ನು ಮುಂದಿಟ್ಟು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಚೆಕ್‌ಮೆಟ್ ಕೊಟ್ಟ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಇಂದು ಆರಂಭದಲ್ಲಿ ರಾಹುಲ್ ನಿವಾಸಕ್ಕೆ ಸಿದ್ದರಾಮಯ್ಯ (Siddaramaiah) ಆಗಮಿಸಿದ್ದರು. ಮಾತುಕತೆ ಯಶಸ್ವಿಯಾದ ಬೆನ್ನಲ್ಲೇ ಬೆಂಬಲಿಗರ ಜೊತೆ ಸಿದ್ದರಾಮಯ್ಯ ಕಾರಿನಲ್ಲಿ ರಾಹುಲ್ ನಿವಾಸದಿಂದ ತೆರಳಿದರು. ತೆರಳುವ ಸಂದರ್ಭದಲ್ಲಿ ಸಿದ್ದು ಬೆಂಬಲಿಗರು ವಿಕ್ಟರಿ ಚಿಹ್ನೆ ಪ್ರದರ್ಶಿಸಿ ಸಂತಸ ವ್ಯಕ್ತಪಡಿಸಿದರು.
Advertisement
Advertisement
ಸಿದ್ದರಾಮಯ್ಯ ಭೇಟಿಯ ಬಳಿಕ ರಾಹುಲ್ ನಿವಾಸಕ್ಕೆ ಡಿಕೆಶಿ ಆಗಮಿಸಿದರು. ಮಾತುಕತೆಯ ವೇಳೆ ಎಐಸಿಸಿಯ (AICC) ಸಂಧಾನಕ್ಕೆ ಸೂತ್ರಕ್ಕೆ ಒಪ್ಪದ ಡಿಕೆ ನನಗೆ ಸಿಎಂ ಪಟ್ಟ ಕೊಡಲೇಬೇಕೆಂದು ಪಟ್ಟು ಹಿಡಿದರು.
Advertisement
ಚುನಾವಣೆಗೂ ಮೊದಲು ಸಿಎಂ ಅಭ್ಯರ್ಥಿ ಯಾರು ಎಂಬುದನ್ನು ಘೋಷಣೆ ಮಾಡಿಲ್ಲ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ನಡೆದ ಕಾರಣ ಅಧಿಕಾರಕ್ಕೆ ಏರಲು ಎಲ್ಲರ ಶ್ರಮವಿದೆ. ಕೊನೆಯ ಮೂರು ವರ್ಷ ನಾನು ಸಿಎಂ ಆಗಲು ಸಾಧ್ಯವಿಲ್ಲ. ಈಗಾಗಲೇ ಸಿದ್ದರಾಮಯ್ಯ ಒಂದು ಬಾರಿ ಮುಖ್ಯಮಂತ್ರಿ ಪಟ್ಟ ಏರಿದ್ದಾರೆ. ಈ ಬಾರಿ ನನಗೆ ಒಂದು ಅವಕಾಶ ನೀಡಿ. ಒಂದು ವೇಳೆ ನನಗೆ ಸಿಗದೇ ಇದ್ದರೆ ಪಕ್ಷದ ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಪಟ್ಟ ನೀಡಿ. ಖರ್ಗೆ ಅವರಿಗೆ ಸಿಎಂ ಪಟ್ಟ ನೀಡಿದರೆ ನಾನು ಸಂಪೂರ್ಣ ಸಹಕಾರ ನೀಡುತ್ತೇನೆ ಎಂದು ಡಿಕೆಶಿ ರಾಹುಲ್‌ಗೆ ಮುಂದೆ ಹೊಸ ಸೂತ್ರವನ್ನು ಮುಂದಿಟ್ಟಿದ್ದಾರೆ.
Advertisement
ಡಿಕೆಶಿ ಹಟಕ್ಕೆ ಬಿದ್ದು ಪಟ್ಟು ಹಿಡಿಯುವುದನ್ನು ನೋಡಿ ಡಿಕೆ ಸುರೇಶ್ ಅವರನ್ನು ತನ್ನ ನಿವಾಸಕ್ಕೆ ರಾಹುಲ್ ಕರೆಸಿದ್ದಾರೆ. ಸಿದ್ದರಾಮಯ್ಯನವರಿಗೆ ಸಿಎಂ ಪಟ್ಟ ನೀಡಿದರೆ ನನಗೆ ಡಿಸಿಎಂ ಪಟ್ಟ ಬೇಡ. ಕೆಪಿಸಿಸಿ ಅಧ್ಯಕ್ಷ ಸ್ಥಾನವೂ ಬೇಡ. ನಾನು ಸರ್ಕಾರದ ಭಾಗವಾಗಿ ಇರಲ್ಲ. ಕೇವಲ ಶಾಸಕನಾಗಿಯೇ ಮುಂದುವರೆಯುತ್ತೇನೆ ಎಂದು ಡಿಕೆಶಿ ಹೇಳಿದ್ದಾರೆ.
ಸುಮಾರು ಒಂದೂವರೆ ಗಂಟೆಗಳ ರಾಹುಲ್ ಸಂಧಾನ ಮಾಡಿದರೂ ಡಿಕೆ ಒಪ್ಪಲೇ ಇಲ್ಲ. ಒಂದು ವೇಳೆ ಮಾಡಿದರೆ ನನ್ನನ್ನು ಸಿಎಂ ಮಾಡಿ ಇಲ್ಲದೇ ಇದ್ದರೇ ಖರ್ಗೆ ಅವರನ್ನು ಮಾಡಿ ಎಂದು ನೇರವಾಗಿ ಖಂಡಾತುಂಡವಾಗಿ ಹೇಳಿದ್ದಾರೆ. ಆದರೆ ಈ ಸೂತ್ರಕ್ಕೆ ಸರಿಯಾದ ಸ್ಪಂದನೆ ಸಿಗದ ಕಾರಣ ರಾಹುಲ್ ಗಾಂಧಿ ಸಂಧಾನ ವಿಫಲವಾಗಿದೆ. ಸಂಧಾನ ವಿಫಲವಾದ ಬೆನ್ನಲ್ಲೇ ಡಿಕೆ ಶಿವಕುಮಾರ್ ನೇರವಾಗಿ ಖರ್ಗೆ ನಿವಾಸಕ್ಕೆ ಆಗಮಿಸಿ ಮಾತುಕತೆ ನಡೆಸುತ್ತಿದ್ದಾರೆ.