ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ‘ಭಾರತ ರತ್ನ’ ನೀಡಿ – ಪ್ರಧಾನಿಗಳಿಗೆ ಸಿಎಂ ಎಚ್‍ಡಿಕೆ ಪತ್ರ

Public TV
2 Min Read
CM HDK SHIVAKUMARA SWAMIJI

ಬೆಂಗಳೂರು: ನಡೆದಾಡುವ ದೇವರು ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ‘ಭಾರತ ರತ್ನ’ ಪುರಸ್ಕಾರ ನೀಡಲು ಪ್ರಧಾನಿ ಮೋದಿ ಅವರಿಗೆ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಪತ್ರ ಬರೆದಿದ್ದಾರೆ.

ಪತ್ರದಲ್ಲಿ ಶಿವಕುಮಾರ ಸ್ವಾಮೀಜಿಗಳ ಕುರಿತು ಸವಿವರವಾಗಿ ತಿಳಿಸಿರುವ ಸಿಎಂ ಎಚ್‍ಡಿಕೆ, ಮರಣೋತ್ತರವಾಗಿ ಭಾರತರತ್ನ ನೀಡುವಂತೆ ಮನವಿ ಮಾಡಿದ್ದಾರೆ. ಶಿವಕುಮಾರ ಸ್ವಾಮೀಜಿಗಳಿಗೆ ಭಾರತ ರತ್ನ ನೀಡಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಿದ್ದು, ಸ್ವಾಮೀಜಿಗಳು ಲಿಂಗೈಕ್ಯರಾದ ವೇಳೆ ಸಿಎಂ ಸ್ವತಃ ಕೇಂದ್ರಕ್ಕೆ ಪತ್ರ ಬರೆದು ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದರು. ಅಲ್ಲದೇ ರಾಜ್ಯ ಬಿಜೆಪಿ ನಾಯಕರು ಕೂಡ ಈ ಪ್ರಯತ್ನದಲ್ಲಿ ಸದನದಲ್ಲಿ ಒತ್ತಾಯಿಸುವುದಾಗಿ ತಿಳಿಸಿದ್ದರು.

ಪತ್ರದಲ್ಲಿ ಏನಿದೆ?
ಐತಿಹಾಸಿಕ ಹಿನ್ನೆಲೆಯನ್ನ ಹೊಂದಿರುವ ತುಮಕೂರು ಸಿದ್ದಗಂಗಾ ಮಠ ಸುಮಾರು 600 ವರ್ಷಗಳ ಇತಿಹಾಸ ಹೊಂದಿದೆ. 1941ರಲ್ಲಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಠದ ಜವಾಬ್ದಾರಿಯನ್ನ ಸ್ವೀಕಾರ ಮಾಡಿದ್ದರು. 1908ರ ಏಪ್ರಿಲ್ 1 ರಂದು ಶಿವಕುಮಾರಸ್ವಾಮೀಜಿಗಳು ಜನಿಸಿದ್ದು, ಅವರು ಲಿಂಗೈಕ್ಯರಾಗುವವರೆಗೂ ಮಠವನ್ನ ಮುನ್ನಡೆಸಿ, ಸಾಮಾಜಿಕ ಸೇವೆಯಲ್ಲಿ ಮಾದರಿ ಎನಿಸುವ ಕಾರ್ಯ ಮಾಡಿದ್ದಾರೆ.

ಶ್ರೀ ಸಿದ್ದಗಂಗಾ ಎಜುಕೇಷನ್ ಸೊಸೈಟಿ ಸ್ಥಾಪಿಸಿ ದೇಶದ ಗ್ರಾಮೀಣ, ಪಟ್ಟಣ ಪ್ರದೇಶಗಳಲ್ಲಿ ಸುಮಾರು 130ಕ್ಕೂ ಹೆಚ್ಚು ಶಿಕ್ಷಣ ಕೇಂದ್ರಗಳನ್ನು ತೆರೆದು ಬಡ ಜನರಿಗೆ ಶಿಕ್ಷಣ ಸೇವೆಯನ್ನು ನೀಡಿದ್ದಾರೆ. ಈ ಸಂಸ್ಥೆಗಳು ಸಂಸ್ಕೃತ, ಇಂಜಿನಿಯರಿಂಗ್, ತಂತ್ರಜ್ಞಾನ ಸೇರಿದಂತೆ ಎಲ್ಲಾ ಶಿಕ್ಷಣ ನೀಡಿ ಬಹುದೊಡ್ಡ ಕೊಡುಗೆ ನೀಡಿವೆ. ಅಲ್ಲದೇ ಸಿದ್ದಗಂಗಾ ಮಠ ಕೂಡ ಸುಮಾರು 9 ಸಾವಿರ ಮಕ್ಕಳಿಗೆ ಶಿಕ್ಷಣ, ವಸತಿ, ಊಟ ಸೌಲಭ್ಯವನ್ನು ನೀಡಿದೆ.

Siddaganga Sri

ಏಳು ದಶಕಗಳ ಕಾಲ ಶಿವಕುಮಾರಸ್ವಾಮೀಜಿಗಳು ತ್ರಿವಿಧ ದಾಸೋಹಕ್ಕೆ ತಮ್ಮ ಜೀವನವನ್ನು ಮುಡಿಪಾಗಿಟ್ಟು, ಸಮಾಜಕ್ಕೆ ಲೋಕೋಪಕಾರ, ಶಿಕ್ಷಣ, ಆಧ್ಯಾತ್ಮಿಕ ಚಟುವಟಿಕೆಗಳ ಮೂಲಕ ಗಮನಾರ್ಹ ಸೇವೆ ಸಲ್ಲಿಸಿದ್ದಾರೆ. ಶಿಕ್ಷಣಕ್ಕೆ ಅವರು ನೀಡಿರುವ ಬೆಲೆ ಕಟ್ಟಲಾಗದ ಕೊಡುಗೆ ಜೀವನದ ವಿವಿಧ ಹಂತಗಳಲ್ಲಿ ಸಮಾಜಕ್ಕೆ ಅಗಾಧ ಕೊಡುಗೆ ನೀಡುವ ಬಹುದೊಡ್ಡ ವರ್ಗವನ್ನು ಸೃಷ್ಟಿಸಿದೆ.

ಜನರಿಗೆ ಸ್ವಾಮೀಜಿಗಳು ನೀಡಿರುವ ಸೇವೆಯಿಂದ ದೇಶದ ಅತ್ಯುನ್ನತ ‘ಭಾರತ ರತ್ನ’ ಪ್ರಶಸ್ತಿಗೆ ಅರ್ಹರಾಗಿದ್ದಾರೆ. ಎಲ್ಲಾ ರಾಜಕೀಯ ಮತ್ತು ನಾಗರೀಕರು, ಸಂಸ್ಥೆಗಳು ಮತ್ತು ಸಂಘಟಗಳಿಂದ ಭಾರತ ರತ್ನ ನೀಡುವ ಸಲುವಾಗಿ ಹಲವು ಜ್ಞಾಪನೆಗಳನ್ನು ಸ್ವೀಕರಿಸಲಾಗಿದೆ. 2019ರ ಜನವರಿ 21 ರಂದು ಶಿವಕುಮಾರ ಸ್ವಾಮೀಜಿಗಳು ಲಿಂಗೈಕ್ಯರಾಗಿದ್ದು, ನಡೆದಾಡುವ ದೇವರು ಎಂದೇ ಖ್ಯಾತಿ ಪಡೆದಿರುವ ಶ್ರೀ ಶಿವಕುಮಾರ ಸ್ವಾಮೀಜಿಗಳಿಗೆ ಮರಣೋತ್ತರ ಭಾರತ ಪ್ರಶಸ್ತಿಗೆ ಪರಿಗಣಿಸ ಬೇಕು ಎಂದು ಸಿಎಂ ಕುಮಾರಸ್ವಾಮಿ ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.

modi 5

Share This Article
Leave a Comment

Leave a Reply

Your email address will not be published. Required fields are marked *