ಬೆಂಗಳೂರು: ಬಜೆಟ್ ನಲ್ಲಿ ಪೆಟ್ರೋಲ್ ಡೀಸೆಲ್ ಗಳ ಮೇಲೆ ಸೆಸ್ ವಿಧಿಸಿದ್ದರ ಕುರಿತು ವರದಿಗಳನ್ನು ಬಿತ್ತರಿಸಿದ್ದಕ್ಕೆ ಸುದ್ದಿ-ಮಾಧ್ಯಮಗಳ ವಿರುದ್ಧ ಸಿಎಂ ಕುಮಾರಸ್ವಾಮಿ ಹರಿಹಾಯ್ದಿದ್ದಾರೆ.
ಕರ್ನಾಟಕ ರಾಜ್ಯ ವಿಕಲಚೇತನರ ಸೇವಾಸಂಸ್ಥೆಯ ಒಕ್ಕೂಟದಿಂದ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ನಾನು ನಿಮಗೇನು ಅನ್ಯಾಯ ಮಾಡಿದ್ದೇನೆ ಎಂದು ಪ್ರಶ್ನಿಸಿ ಮಾಧ್ಯಮದವರ ವಿರುದ್ಧ ಅಸಮಧಾನ ಹೊರಹಾಕಿದರು.
ಪೆಟ್ರೋಲ್ ದರ ಏರಿಕೆ ಹಿನ್ನೆಲೆ ಪ್ರತಿಕ್ರಿಯಿಸಿದ ಅವರು, ಪೆಟ್ರೋಲ್ ಡೀಸೆಲ್ ಬೆಲೆಯನ್ನು ಕೇವಲ ಒಂದು ರೂಪಾಯಿ ಹೆಚ್ಚಿಸಿದ್ದಕ್ಕೆ ಮಂಗಳೂರಿನ ಮೀನುಗಾರ ಮಹಿಳೆಯರ ಬಳಿ ಕುಮಾರಸ್ವಾಮಿ ಈಸ್ ನಾಟ್ ಅವರ್ ಸಿಎಂ ಎಂದು ಹೇಳಿಸುತ್ತಿದ್ದೀರಿ. ನನ್ನ ಮೇಲೆ ನಿಮಗೇಕಿಷ್ಟು ಕೋಪ. ಪ್ರಧಾನಿ ನರೇಂದ್ರ ಮೋದಿಯವರು ಹನ್ನೊಂದು ಬಾರಿ ಇಂಧನದ ಬೆಲೆ ಏರಿಕೆ ಮಾಡಿದ್ದರು. ಅವರ ವಿರುದ್ಧ ನೀವು ಸಣ್ಣ ಚಕಾರ ಕೂಡ ಎತ್ತಿಲ್ಲ. ಎಷ್ಟು ದಿನ ಅಂತಾ ನೀವು ನನ್ನ ವಿರುದ್ಧ ಜನರನ್ನು ಎತ್ತಿಕಟ್ಟುತ್ತೀರಿ ಎಂದು ಪ್ರಶ್ನಿಸಿದರು.
ನನಗೆ ಸ್ವಲ್ಪ ಸಮಯ ಕೊಡಿ, ನಾನು ಸಿಎಂ ಆಗಿ ಕೇವಲ ಎರಡು ತಿಂಗಳು ಆಗಿದೆ. ನಾನು ಯಾರಿಗೂ ಮೋಸ ಮಾಡಲು ಸಿಎಂ ಆಗಿಲ್ಲ. ನಾನು ಸಿಎಂ ಆಗಿರುವವರೆಗೂ ಬಡವರ ಪರ ಇರುತ್ತೇನೆ. ನಾನು ಕೇವಲ ರಾಮನಗರದ ಸಿಎಂ ಅಲ್ಲ, ಇಡೀ ರಾಜ್ಯದ ಸಿಎಂ. ಎಲ್ಲಾ ಜಿಲ್ಲೆಗಳು ನನ್ನ ಜಿಲ್ಲೆಯೇ ಆಗಿದೆ. ಟೀಕೆ ಮಾಡೋದನ್ನು ನಿಲ್ಲಿಸಿ, ಸ್ವಲ್ಪ ಸಮಯ ನೀಡಿ ಎಂದು ಕೇಳಿಕೊಂಡರು.
ಯಾವುದೇ ವಿಷಯ ಗೊತ್ತಿಲ್ಲದಿದ್ದರೂ ಮಾಧ್ಯಮಗಳು ಸುದ್ದಿ ಮಾಡುತ್ತಿದ್ದೀರಿ. ಜನರ ಮಧ್ಯೆ ಕಂದಕ ಸೃಷ್ಟಿ ಮಾಡಿ ಅನುಮಾನ ಮೂಡಿಸಬೇಡಿ. ನಿಮಗೆ ನನ್ನ ಮೇಲೆ ಯಾಕೆ ಅನುಮಾನ. ಅನುಮಾನ ಇದ್ದರೆ ನಿಮ್ಮ ವ್ಯವಸ್ಥಾಪಕರೇ ಚರ್ಚೆಗೆ ಬರಲಿ, ನಾನು ಚರ್ಚೆಗೆ ಸಿದ್ಧನಿದ್ದೇನೆ. ತಪ್ಪು ಮಾಡದೇ ಇದ್ದರೂ, ಸುಮ್ಮನೆ ವೈಭವೀಕರಿಸುತ್ತಿದ್ದೀರಿ. ಅಲ್ಲದೇ ನಾನೇದರೂ ತಪ್ಪು ಮಾಡಿದ್ದರೆ, ಬಂದು ನನ್ನ ಜೊತೆ ಚರ್ಚೆ ಮಾಡಿ ಎಂದರು.
ಸುಮ್ಮನೆ ಸುದ್ದಿ ಮಾಡಬೇಡಿ. ಸುಮ್ಮನೆ ಅಪಪ್ರಚಾರ ಮಾಡಬೇಡಿ. ರೈತರ ಸಾಲಮನ್ನಾ ವಿಚಾರದಲ್ಲಿ ನಾನು ತಮಾಷೆ ಮಾಡೋಕೆ ಆಗುತ್ತಾ? ಇದನ್ನ ನಾನು ಸವಾಲಾಗಿ ಆಗಿ ಸ್ವೀಕಾರ ಮಾಡಿದ್ದೇನೆ. ರೈತರಿಗೆ ಅನುಕೂಲ ಮಾಡುತ್ತಿರೋನಿಗೆ ಹೀಗೆಲ್ಲ ಮಾಡೋದು ಸರಿನಾ? ನನಗೆ ರೈತರ ಸಾಲಮನ್ನಾದಲ್ಲಿ ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು.
ಈ ವೇಳೆ ನನ್ನ ಮೇಲೆ ಕನಿಕರ ಇಲ್ವಾ? ನನ್ನ ಮೇಲೆ ನಿಮಗೆ ಕೋಪ ಯಾಕೆ? ಎಷ್ಟು ದಿನ ನನ್ನ ಮೇಲೆ ಸುಳ್ಳು ಸುದ್ದಿ ಮಾಡ್ತೀರಾ ಎಂದು ಪ್ರಶ್ನಿಸಿದರು. ನೀವು ಎಷ್ಟೇ ಸುದ್ದಿ ಮಾಡಿದರೂ ಪರವಾಗಿಲ್ಲ. ನಾನು ಜನರ ಮಧ್ಯೆಯೇ ಇರುತ್ತೇನೆ. ವಿಧಾನಸೌಧದಲ್ಲಿ ನಾನು ಕುಳಿತುಕೊಳ್ಳೋದಿಲ್ಲ ಎಂದು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ನಾನು ಜನಸಾಮಾನ್ಯರ ಪರವಾಗಿದ್ದೇನೆ. ಜನರ ಹೊಟ್ಟೆ ಮೇಲೆ ಹೊಡೆದು ತೆರಿಗೆ ಸಂಗ್ರಹಿಸಬೇಕಿಲ್ಲ. ವಿದ್ಯುತ್ ಬಿಲ್ ಹತ್ತು ರೂಪಾಯಿ ಏರಿಕೆ ಮಾಡಿದ್ದೇನೆ. ಇಂದು ಬಡ ಕುಟುಂಬಗಳು ಕೂಡ ಇಪ್ಪತ್ತು ರೂಪಾಯಿ ಕೊಟ್ಟು ಮಿನರಲ್ ವಾಟರ್ ಖರೀದಿಸುತ್ತಾರೆ. ಅಂತಹುದರಲ್ಲಿ ಹತ್ತು ರೂಪಾಯಿ ದೊಡ್ಡ ಮೊತ್ತವೇ? ಸರ್ಕಾರದಲ್ಲಿ ದುಡ್ಡು ಇಟ್ಡುಕೊಳ್ಳದೆ ನಾನು ಎಲ್ಲಿಂದ ಕಾರ್ಯಕ್ರಮಗಳನ್ನು ಕೊಡಲಿ ಎಂದು ಪ್ರಶ್ನಿಸಿದರು.