BMTC ಭಾರತದ ನಂ.1 ಸಾರಿಗೆ ಸಂಸ್ಥೆಯಾಗಬೇಕು: ಸಿಎಂ ಬಸವರಾಜ ಬೊಮ್ಮಾಯಿ

Public TV
2 Min Read
BMTC JBM ELECTRIC BUS 2

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು ಹೊಸ ವಿನ್ಯಾಸ, ಉತ್ತಮ ಸೇವೆ ಹಾಗೂ ಸಂಪನ್ಮೂಲ ಸೃಜನೆಯ ಮೂಲಕ ಭಾರತದಲ್ಲಿಯೇ ನಂ. 1 ಸಾರಿಗೆ ಸಂಸ್ಥೆಯಾಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಶಿಸಿದರು.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವತಿಯಿಂದ ಆಯೋಜಿಸಿರುವ ವಿದ್ಯುತ್ ಚಾಲಿತ ಬಸ್ ಮತ್ತು ಬಿಎಸ್-6 ಡೀಸೆಲ್ ಬಸ್‌ಗಳಿಗೆ ವಿಧಾನಸೌಧದ ಪೂರ್ವದ್ವಾರದ ಬಳಿ ಇಂದು ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಈ ದಿಸೆಯಲ್ಲಿ ಬಿಎಂಟಿಸಿಯ ಪ್ರಯತ್ನಗಳಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.

BMTC JBM ELECTRIC BUS 2

ಸಾರಿಗೆ, ಎಸ್ಕಾಂ ಪುನಶ್ಚೇತನ ಸರ್ಕಾರದ ಸಂಕಲ್ಪ: ಸಬ್ಸಿಡಿ ಆಧಾರದ ಮೇಲೆ ಸಾರಿಗೆ ಸಂಸ್ಥೆಗಳನ್ನು ನಡೆಸುವುದು ಕಷ್ಟ ಸಾಧ್ಯ. ಅದಕ್ಕಾಗಿ ರಾಜ್ಯದ ಎಲ್ಲ ಸಾರಿಗೆ ನಿಗಮಗಳನ್ನು ಪುನಶ್ಚೇತನಗೊಳಿಸಲು ಸರ್ಕಾರದ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಎಂ.ಆರ್. ಶ್ರೀನಿವಾಸ ಮೂರ್ತಿ ಅವರ ನೇತೃತ್ವದಲ್ಲಿ ಒಂದು ಸಮಿತಿಯನ್ನು ರಚಿಸಲಾಗಿದೆ. ಸಾರಿಗೆ ವ್ಯವಸ್ಥೆಯ ಸೋರಿಕೆ ತಡೆಗಟ್ಟಿ, ಸಂಪನ್ಮೂಲ ಸೃಷ್ಟಿಗೆ ಒತ್ತು ನೀಡಲು ಹಾಗೂ ಸಂಸ್ಥೆಗಳ ಉತ್ತಮ ಸೇವೆಯ ಮೂಲಕ ಲಾಭದಾಯಕವಾಗಿ ಕಾರ್ಯನಿರ್ವಹಿಸುವ ಕುರಿತು ಈ ಸಮಿತಿ ಶಿಫಾರಸು ನೀಡಲಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು. ಅಂತೆಯೇ ಎಸ್ಕಾಂಗಳ ಪುನಶ್ಚೇತನಕ್ಕೆ ನಿವೃತ್ತ ಅಪರ ಮುಖ್ಯ ಕಾರ್ಯದರ್ಶಿ ಕೆ.ಜೈರಾಜ್ ಅವರ ಅಧ್ಯಕ್ಷತೆಯ ಸಮಿತಿ ರಚಿಸಲಾಗಿದೆ. ಸಾರಿಗೆ ಹಾಗೂ ಎಸ್ಕಾಂಗಳು ಆರ್ಥಿಕವಾಗಿ ಸ್ವಾವಲಂಬನೆಯಾಗಿ ಜನರ ಸೇವೆ, ಸಂಸ್ಥೆ ಕಟ್ಟಲು ಹಾಗೂ ಸರ್ಕಾರದ ಮೇಲೆ ಹೊರೆ ಕಡಿಮೆ ಮಾಡುವ ಉದ್ದೇಶದಿಂದ ಈ ಸಮಿತಿಗಳನ್ನು ರಚಿಸಲಾಗಿದೆ ಎಂದರು.

BMTC JBM ELECTRIC BUS 4

ಮಾಲಿನ್ಯ ರಹಿತ ಬಸ್‌ಗಳು: ಬಿಎಸ್-6 ನಂತಹ ವಾಹನಗಳನ್ನು ಅಳವಡಿಸಿರುವುದು ಸಂತೋಷದ ವಿಷಯವಾಗಿದೆ. ಪರಿಸರ ಮಾಲಿನ್ಯ ಮುಕ್ತ 300 ವಿದ್ಯುತ್ ಚಾಲಿತ ಬಸ್‍ಗಳನ್ನು ಅಳವಡಿಸುವ ಗುರಿಯನ್ನು ಹೊಂದಿದ್ದು, ಪ್ರಸ್ತುತ 90 ಬಸ್ ಅಳವಡಿಸಲಾಗುತ್ತಿದೆ. ಇವುಗಳ ಸಂಚಾರದಿಂದ ಮಾಲಿನ್ಯ ತಪ್ಪುತ್ತದೆ ಎಂಬ ವಿಶ್ವಾಸವಿದೆ ಹಾಗೂ ಸಾರ್ವಜನಿಕರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಬಳಸಲು ಬೊಮ್ಮಾಯಿ ಅವರು ಮನವಿ ಮಾಡಿದರು. ಇದನ್ನೂ ಓದಿ: ನಾಪತ್ತೆಯಾಗಿ 7 ವರ್ಷಗಳ ಬಳಿಕ ಪತಿಯನ್ನು ಸೇರಿದ ಪತ್ನಿ! 

BMTC JBM ELECTRIC BUS 1

ತಂತ್ರಜ್ಞಾನವನ್ನು ಮೇಲ್ದರ್ಜೆಗೇರಿಸಿ, ಜನಸ್ನೇಹಿಯಾಗಿಸುವ ಮುಖೇನ ಲಾಭದಾಯಕವಾಗುವಂತೆ ಮಾಡಬೇಕು. ಸಂಸ್ಥೆಗಳು ಆದಾಯದ ಸೋರಿಕೆಯನ್ನು ತಡೆದು ಸಂಪನ್ಮೂಲ ಕ್ರೋಢೀಕರಣಕ್ಕೆ ಹೆಚ್ಚಿನ ಗಮನ ನೀಡುವಂತೆ ತಿಳಿಸಿದರು. ಸಮಿತಿಯ ಸಲಹೆಗಳನ್ನು ಜಾರಿಗೆ ತರುವ ಮೂಲಕ ಸಾರಿಗೆಗೆ ಹೊಸ ಆಯಾಮ ನೀಡುವ ಕೆಲಸ ಮಾಡಬೇಕು ಎಂದರು. ಹಿಂದೆ ಸಾರ್ವಜನಿಕ ಉದ್ದಿಮೆಗಳು ಹೆಚ್ಚಿನ ಪ್ರಮಾಣದಲ್ಲಿ ಬಿಎಂಟಿಸಿ ಸೇವೆ ಪಡೆಯುತ್ತಿದ್ದವು. ಮುಂದಿನ ದಿನಗಳಲ್ಲಿ ಹೆಚ್‍ಎಎಲ್-ಮತ್ತಿತರ ಸಾರ್ವಜನಿಕ ಉದ್ದಿಮೆಗಳು ಹಾಗೂ ಐಟಿ ಕಂಪನಿಗಳೊಂದಿಗೆ ಮಾತುಕತೆ ನಡೆಸಿ ಬಿಎಂಟಿಸಿ ಸೇವೆಯನ್ನು ಬಳಸುವ ಬಗ್ಗೆ ಮನವೊಲಿಸಲಾಗುವುದು ಎಂದರು. ಹೊಸ ಪ್ರಯೋಗ ಮಾಡಿ ದಕ್ಷತೆ, ಕ್ಷಮತೆಯನ್ನು ಹೆಚ್ಚಿಸುವ ಮೂಲಕ ಸಾರಿಗೆ ಸಚಿವರ ನೇತೃತ್ವದಲ್ಲಿ ಅಧಿಕಾರಿಗಳು ಸಹಕಾರ ನೀಡಿದರೆ ಫಲಪ್ರದವಾಗುವುದು. ಬಿಎಂಟಿಸಿ ಬದಲಾಗಿ ಹೊಸ ವಿನ್ಯಾಸ ರೂಪಿಸುವಂತೆ ಮುಖ್ಯಮಂತ್ರಿಗಳು ಸಲಹೆ ನೀಡಿದರು. ಇದನ್ನೂ ಓದಿ: ಪ್ರಾಂಶುಪಾಲೆಯ ಕಿರುಕುಳಕ್ಕೆ 5ನೇ ಮಹಡಿಯಿಂದ ಬಿದ್ದು ಪ್ರಾಣ ಬಿಟ್ಟ 13 ವರ್ಷದ ಬಾಲಕಿ

ಸಾರಿಗೆ ಸಚಿವ ಬಿ.ಶ್ರೀರಾಮುಲು, ಸಹಕಾರ ಸಚಿವ ಎಸ್.ಟಿ. ಸೋಮಶೇಖರ್, ಸಂಸದ ಪಿ.ಸಿ. ಮೋಹನ್ ಬಿಎಂಟಿಸಿ ಅಧ್ಯಕ್ಷ ನಂದೀಶ ರೆಡ್ಡಿ, ಶಾಸಕರು, ಸಾರಿಗೆ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಟಾರಿಯಾ, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Share This Article
Leave a Comment

Leave a Reply

Your email address will not be published. Required fields are marked *