ಬೆಂಗಳೂರು: ರಾಜ್ಯ ಸಚಿವ ಸಂಪುಟಕ್ಕೆ ಸಂಕ್ರಾಂತಿ ವೇಳೆ ಮೇಜರ್ ಸರ್ಜರಿ ಆಗಲಿದೆ ಎಂಬ ಸುದ್ದಿಯ ನಡುವೆ ಜನವರಿ 8, 9ಕ್ಕೆ ಬಿಜೆಪಿ ಮಹತ್ವದ ಸಭೆ ಫಿಕ್ಸ್ ಆಗಿದೆ. ನಂದಿಬೆಟ್ಟದಲ್ಲಿ ಸಚಿವರ ಜೊತೆ ಸಭೆ ನಡೆಸಲು ಹೈಕಮಾಂಡ್ ನಾಯಕರು ಪ್ಲ್ಯಾನ್ ಮಾಡಿದ್ದು, ಸಚಿವರ ಕಾರ್ಯವೈಖರಿ, ಮೌಲ್ಯಮಾಪನ, ಪಕ್ಷ ಸಂಘಟನೆ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಿದ್ದಾರೆ ಎನ್ನಲಾಗಿದೆ.
ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸಭೆಯಲ್ಲಿ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಚಿವ ಸಂಪುಟ ಪುನರ್ ರಚನೆ ಸುಳಿವು ಬೆನ್ನಲ್ಲೇ ಸಚಿವರ ಜೊತೆ ಸಭೆ ಕುತೂಹಲ ಮೂಡಿಸಿದೆ. ಕೆಲ ಸಚಿವರ ಕಾರ್ಯವೈಖರಿ ಬಗ್ಗೆ ಹೈಕಮಾಂಡ್ ಗೆ ಅತೃಪ್ತಿ ಹೊಂದಿದ್ದು, ಸಚಿವರ ಜೊತೆ ಹೈಕಮಾಂಡ್ ಸಭೆ ಮಹತ್ವ ಪಡೆದುಕೊಂಡಿದೆ. ಇದೇ ವೇಳೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸದಸ್ಯರ ಸಭೆ, ಪದಾಧಿಕಾರಿಗಳ ಸಭೆ ಕೂಡ ನಿಗದಿಯಾಗಿದ್ದು ಸಂಕ್ರಾಂತಿ ನಂತರದ ಸಂಪುಟ ಪುನಾರಚನೆಗೆ ವೇದಿಕೆ ಆಗುತ್ತಾ ಎಂಬ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಸಿಎಂ ಬೊಮ್ಮಾಯಿ ಸಂಪುಟದ 6 ಸಚಿವರಿಗೆ ಕೊಕ್?
ಬಸವರಾಜ ಬೊಮ್ಮಾಯಿ ಕ್ಯಾಬಿನೆಟ್ ಗೆ ಅಗ್ನಿಪರೀಕ್ಷೆನಾ? ಸಚಿವರಿಗೆ ಮಾರ್ಕ್ಸ್ ಫಿಕ್ಸ್ ಮಾಡುತ್ತಾ ಬಿಜೆಪಿ ಹೈಕಮಾಂಡ್? ಅನ್ನೋ ಚರ್ಚೆ ಶುರುವಾಗಿದೆ. ಬಿಜೆಪಿಯ ಆಂತರಿಕ ವಲಯದಲ್ಲಿ ನಾನಾ ಲೆಕ್ಕಾಚಾರ ಆರಂಭವಾಗಿದೆ. ಪಾಸ್ ಆದವರಷ್ಟೇ ಕ್ಯಾಬಿನೆಟ್ ನಲ್ಲಿ ಉಳಿದುಕೊಳ್ತಾರಾ? ಫೇಲ್ ಆದವರು ಕ್ಯಾಬಿನೆಟ್ ನಿಂದ ಹೊರಗೆ ಹೋಗ್ತಾರಾ? ಹೊಸ ವರ್ಷದ ಎರಡನೇ ವಾರದಲ್ಲೇ ಹೈಕಮಾಂಡ್ ಶಾಕ್ ಕೊಡುತ್ತಾ ಎಂಬುದನ್ನು ಕಾದುನೋಡಬೇಕಿದೆ. ಇದನ್ನೂ ಓದಿ: ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಹೊರಟಿದ್ದಾರೆ: ಶ್ರೀರಾಮುಲು
ಇನ್ನೊಂದೆಡೆ ಸಂಪುಟ ಪುನಾರಚನೆಗೆ ಗ್ರೀನ್ ಸಿಗ್ನಲ್ ಕೊಡುತ್ತಾ ಬಿಜೆಪಿ ಹೈಕಮಾಂಡ್? ಅನುಮತಿ ನೀಡಿದರೆ 6+4 ಸೂತ್ರದಡಿಯಲ್ಲಿ ಸಂಪುಟ ಪುನಾರಚನೆ ಆಗುತ್ತಾ? ಎಂಬ ಚರ್ಚೆ ಕೂಡ ಜೋರಾಗಿಯೇ ಇದೆ. ವಲಸಿಗರಲ್ಲಿ ಮೂರು, ಮೂಲದಲ್ಲಿ ಮೂರು ಜನ ಹೊರಕ್ಕೆ ಹೋಗುವ ಸಾಧ್ಯತೆ ಇದ್ದು, ಸಂಕ್ರಾಂತಿ ಬಳಿಕ ಎಲೆಕ್ಷನ್ ಕ್ಯಾಬಿನೆಟ್ ರಚನೆಯಾಗುತ್ತಾ ಎಂಬ ಪ್ರಶ್ನೆಗೆ ಜನವರಿ ಎರಡು, ಮೂರನೇ ವಾರದಲ್ಲಿ ಉತ್ತರ ಸಿಗಲಿದೆ.