ಬೆಂಗಳೂರು: ಸಾಲಮನ್ನಾ ವಿಚಾರದಲ್ಲಿ ತೀವ್ರ ಟೀಕೆಗೆ ಗುರಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಗುರುವಾರ ಮೊದಲ ಹಂತದ ಸಾಲಮನ್ನಾಕ್ಕೆ ಅಧಿಕೃತ ಆದೇಶ ಹೊರಡಿಸಿದ್ದಾರೆ. ಇಂದು ನಡೆದ ಸಂಪುಟ ಸಭೆಯಲ್ಲಿ ಸಹಕಾರಿ ಸಂಘಗಳಲ್ಲಿನ ರೈತರ ಚಾಲ್ತಿ ಸಾಲಮನ್ನಾಕ್ಕೆ ಒಪ್ಪಿಗೆ ಪಡೆದಿದ್ದಾರೆ.
ಒಂದು ಕುಟುಂಬದಲ್ಲಿ ಎಷ್ಟು ಮಂದಿ ಸಾಲಪಡೆದಿರುತ್ತಾರೋ ಅವರ ಸಾಲಮನ್ನಾವನ್ನೂ ಕೂಡ ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ. ಶುಕ್ರವಾರದಿಂದಲೇ ಸಾಲಮನ್ನಾ ಯೋಜನೆ ಜಾರಿಯಾಗಲಿದೆ. ರೈತರಿಗೆ ಯಾವುದೇ ಒತ್ತಡ ಹೇರದಂತೆ ಬ್ಯಾಂಕ್‍ಗಳಿಗೆ ಸೂಚನೆ ನೀಡಲಾಗಿದೆ.
ಒತ್ತಾಯ ಪೂರ್ವಕವಾಗಿ ಮರುಪಾವತಿ ಮಾಡಿದವರಿಗೂ ಹಾಗೂ ಸಾಲ ಕಟ್ಟಿದವರಿಗೂ ಸಾಲಮನ್ನ ಯೋಜನೆ ಅನ್ವಯ ಆಗಲಿದೆ. ಆದರೆ, ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾ ಒಂದು ವಾರ ವಿಳಂಬವಾಗಲಿದೆ. ಆಗಸ್ಟ್ 15 ಅಥವಾ ಗಣೇಶ ಹಬ್ಬಕ್ಕೆ 2ನೇ ಹಂತದ ಸಾಲಮನ್ನಾವಾಗಲಿದೆ ಅಂತ ಕ್ಯಾಬಿನೆಟ್ ನಿರ್ಧರಿಸಿದೆ. ಇದನ್ನು ಓದಿ: ರಾತ್ರೋರಾತ್ರಿ ಸಾಲಮನ್ನಾ ಹಣವನ್ನ ಜಮೆ ಮಾಡಲು ದುಡ್ಡಿನ ಮರ ಬೆಳೆದಿಲ್ಲ: ಎಚ್‍ಡಿಕೆ
ಸಾಲಮನ್ನಾ ಹೇಗೆ?
ಒಟ್ಟು 20.38 ಲಕ್ಷ ರೈತರ ಸಹಕಾರಿ ಬ್ಯಾಂಕ್‍ನ 1 ಲಕ್ಷ ರೂಪಾಯಿವರೆಗಿನ ರೈತರ ಚಾಲ್ತಿ ಸಾಲ ಮನ್ನಾವಾಗಲಿದೆ. 10,734 ಕೋಟಿ ಸಾಲದಲ್ಲಿ 9,448 ಕೋಟಿ ರೂ. ಸಾಲಮನ್ನಾ ಆಗುತ್ತದೆ.
ಮಾರ್ಗಸೂಚಿ ಏನು?
* ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು, ಲ್ಯಾಂಪ್ಸ್, ಡಿಸಿಸಿ ಬ್ಯಾಂಕ್‍ಗಳು, ಪಿಕಾರ್ಡ್ ಬ್ಯಾಂಕ್‍ಗಳು ವಿತರಿಸಿದ ಅಲ್ಪಾವಧಿ ಸಾಲದ ಪೈಕಿ 10.07.2018ಕ್ಕೆ ಹೊಂದಿರುವ ಹೊರಬಾಕಿ ಸಾಲಕ್ಕೆ ಮಾತ್ರ ಅನ್ವಯ
* ಒಂದು ರೈತ ಕುಟುಂಬಕ್ಕೆ ಗರಿಷ್ಠ 1 ಲಕ್ಷ ರೂ.ವರೆಗಿನ ಸಾಲ ಮಾತ್ರ ಮನ್ನಾ
* 10.07.2018 ಅವಧಿಯಲ್ಲಿ ಸಾಲ ಪಡೆದು ರೈತ ಮೃತ ಪಟ್ಟಿದ್ದರೆ ವಾರಸುದಾರರಿಗೂ ಈ ಸೌಲಭ್ಯ
* ಹೊರಬಾಕಿ ಮೊತ್ತವನ್ನು ಪೂರ್ಣವಾಗಿ ಮರುಪಾವತಿಸಿದ್ದಲ್ಲಿ ಮನ್ನಾ ಆಗಬೇಕಾದ ಮೊತ್ತ ರೈತರ ಖಾತೆಗೆ ಜಮೆ
* ಸಾಲಮನ್ನಾ ಆಗುವ ಅನುದಾನವನ್ನು ಡಿಬಿಟಿ ಮೂಲಕ ರೈತರ ಉಳಿತಾಯ ಖಾತೆಗೆ ಬಿಡುಗಡೆ
ಯಾರಿಗೆ ಅನ್ವಯ ಆಗಲ್ಲ?
* ಬೆಳೆಸಾಲ ಪಡೆದ ರೈತರು ಸರ್ಕಾರಿ, ಸಹಕಾರಿ ಇತರೆ ಕ್ಷೇತ್ರದ ನೌಕರರಾಗಿಬಾರದು
* 20 ಸಾವಿರಕ್ಕಿಂತ ಹೆಚ್ಚಿನ ವೇತನ, ಪಿಂಚಣಿ ಪಡೆಯುತ್ತಿದ್ದಲ್ಲಿ ಅಂಥಹ ರೈತರಿಗೆ ಅನ್ವಯಿಸಲ್ಲ
* 3 ವರ್ಷಗಳಲ್ಲಿ 1 ವರ್ಷ ಆದಾಯ ತೆರಿಗೆ ಪಾವತಿಸಿದ್ದಲ್ಲಿ ಅಂಥವರಿಗೆ ಅನ್ವಯವಾಗಲ್ಲ
* ಕೃಷಿ ಉತ್ಪನ್ನ, ಚಿನ್ನಾಭರಣ, ವಾಹನ ಖರೀದಿ, ಪಶು ಭಾಗ್ಯ ಯೋಜನೆ, ಮೀನುಗಾರಿಕೆ ಉದ್ದೇಶಗಳಿಗೆ ನೀಡುವ ಸಾಲಗಳಿಗೆ ಅನ್ವಯ ಆಗಲ್ಲ
* ಸಹಕಾರ ಸಂಘ, ಬ್ಯಾಂಕ್‍ಗಳಲ್ಲಿ ಒಂದಕ್ಕಿಂತ ಹೆಚ್ಚು ಸಾಲ ಪಡೆದಿವರಿಗೆ ಇದು ಅನ್ವಯಿಸಲ್ಲ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews