ದಿವಾಕರ್
ಆತ್ಮಾಭಿಮಾನ, ಆತ್ಮಗೌರವ, ಆತ್ಮಸಾಕ್ಷಿ…! ಈ ಕಾಲಘಟ್ಟದ ರಾಜಕೀಯ ಕೃಷಿಯಲ್ಲಿ ಈ ಮೂರು ಆತ್ಮಗಳಿಗೆ No vacancy..! ರಾಜಕೀಯ ಚಾಕರಿಯಲ್ಲಿ ಇವುಗಳಿಗೆ ಇಂಚಗಲ ಜಾಗವಿಲ್ಲ. ಇತ್ತೀಚಿನ ಕೆಲ ಆಂತರಿಕ ಬೆಳವಣಿಗೆಗಳಿಂದ ರೋಸಿ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಅಂತರಾತ್ಮವೂ ಇಂದು ಇದೇ ರೀತಿ ಚಿಂತಿಸುತ್ತಾ ವರ್ತಮಾನದ ಸ್ಥಿತಿಗತಿಗೆ ಅಯ್ಯೋ ಅಂತ ಮರಗುತ್ತಿರಬಹುದು..!
Advertisement
‘ಕಾಲ’ದ ಮನಸ್ಥಿತಿಯೇ ನಿಗೂಢ. ಕೆಲವೊಮ್ಮೆ ಅದು ಕರುಣಾಮಯಿಯೂ..,ಹಾಗೆ ಕೆಲವೊಮ್ಮೆ ನಿರ್ದಯಿಯೂ ಆಗಿರುತ್ತದೆ. ಕಳೆದ ವರ್ಷ 17 ಶಾಸಕರು ದಂಗೆ ಎದ್ದು ಕುಮಾರಸ್ವಾಮಿ ಅವರನ್ನು ಕುರ್ಚಿಯಿಂದ ಕೆಡವಿ, ಬಿಜೆಪಿಗೆ ಸಿಂಹಾಸನ ತಂದುಕೊಟ್ಟ ಟೈಂ ಇದ್ಯಲ್ಲ ಅದು ಯಡಿಯೂರಪ್ಪ ಪಾಲಿಗೆ ಗೋಲ್ಡನ್ ಟೈಂ. ಅಂದ್ರೆ ಬಿಎಸ್ ವೈ ವಿಚಾರದಲ್ಲಿ ಆ ವೇಳೆಯನ್ನು ದಯಾಮಯಿ ಕಾಲ ಅನ್ನಬಹುದು. ಆದ್ರೆ ಅದರ ನಂತರದ್ದು ನಿರ್ದಯಿ ಕಾಲ..!
Advertisement
ಹೌದು , ಯಾರೂ ನೇರಾನೇರ ಟಚ್ ಮಾಡದೇ ಇದ್ದರೂ ಯಡಿಯೂರಪ್ಪನವರ ಟೈಂ ಕೆಟ್ಟು ಬಹಳ ದಿನಗಳೇ ಆಗಿದೆ. ಯಾಕೆಂದರೆ ರಾಜಾಹುಲಿ ಬಿರುದಾಂಕಿತ ಯಡಿಯೂರಪ್ಪನವರು ಪಂಜರದಲ್ಲಿ ಬಂಧಿಯಾಗಿ ಅಥವಾ ಹೈಕಮಾಂಡ್ ‘ಪಂಜ’ ದಲ್ಲಿ ಸಿಕ್ಕಿ ನರಳುತ್ತಿರೋದು ಗುಟ್ಟಾಗೇನು ಉಳಿದಿಲ್ಲ. ಕಾಂಗ್ರೆಸ್ ನಲ್ಲಿರುವ ಜೀ ಹುಜೂರ್ ಎಂಬ ವೈರಸ್ಸು ಬಿಜೆಪಿಯಲ್ಲೂ ಸ್ಥಾನ ಭದ್ರಪಡಿಸಿಕೊಂಡಂತೆ ಭಾಸವಾಗುತ್ತಿದೆ.
Advertisement
ಒಳ್ಳೆಯದ್ದೋ..ಕೆಟ್ಟದ್ದೋ..ಅಕ್ರಮವೋ..ಸಕ್ರಮವೋ..ಅದು ಬೇರೆ ವಿಚಾರ. ಒಟ್ಟಿನಲ್ಲಿ ಆ 17 ಶಾಸಕರು ಅನರ್ಹ ಅಸ್ತ್ರಕ್ಕೂ ಕೇರ್ ಮಾಡದೇ ರಾಜೀನಾಮೆ ಕೊಟ್ಟು ರಾಜಾಹುಲಿಗೆ ರಾಜಪಟ್ಟ ಕಟ್ಟದಿದ್ದರೆ , ಯಡಿಯೂರಪ್ಪ ಸಿಎಂ ಆಗುತ್ತಿದ್ದರಾ ಹೇಳಿ..! ಕೋರ್ಟು – ಕಚೇರಿ ಅಲೆದು, ಅದ್ಹೇಗೋ ಎಲೆಕ್ಷನ್ ಗೆ ನಿಲ್ಲಲು ಪರ್ಮಿಷನ್ ಪಡೆದು , ಗೆದ್ದು ಬಂದು ಎರಡು ತಿಂಗಳ ಆಗುತ್ತಾ ಬಂತು. ಇನ್ನೂ ಅಚ್ಛೇದಿನ್ ಬಂದಿಲ್ಲ.
Advertisement
ಗೆದ್ದ 24 ಗಂಟೆಯಲ್ಲೇ ಸಚಿವ ಸ್ಥಾನ ಪಕ್ಕಾ ಅಂತ ಮಾತು ಕೊಟ್ಟಿದ್ದ ಯಡಿಯೂರಪ್ಪ ಪಾಪ ಹೈಕಮಾಂಡ್ ಇಕ್ಕಳದಲ್ಲಿ ಸಿಕ್ಕಿ ವಿಲ ವಿಲ ಒದ್ದಾಡುತ್ತಿದ್ದಾರೆ. ಭವತಿ ಭಿಕ್ಷಾಂದೇಹಿ ಅಂತ ಭಿಕ್ಷಾ ಪಾತ್ರೆ ಹಿಡಿದು ನಿಂತಿರುವ ಅವರಿಗೆ ಮುಂದಕ್ಕೆ ಹೋಗು… ನಾಳೆ ಬಾ ಅನ್ನೋ ಸಿದ್ದ ಉತ್ತರ ಸಿಗುತ್ತಿದೆ. ಒಬ್ಬ ಶಕುನಿಯೇ ಸಾಕಾಯ್ತು ಮಹಾಭಾರತದ ಕುರುಕ್ಷೇತ್ರಕ್ಕೆ. ಇನ್ನು ಹತ್ತಾರು ಶಕುನಿಗಳ ಕುಟಿಲ ಕೂಟವಿದ್ದರೆ ಇನ್ನೇನೆಲ್ಲಾ ಆಗಬಹುದು ಊಹಿಸಿ. ರಾಜ್ಯ ಬಿಜೆಪಿಯಲ್ಲೂ ಇಂಥದ್ದೇ ಕೃತ್ರಿಮ ಕೂಟ ಇದ್ದಂತಿದೆ. ಚುನಾವಣೆಯಲ್ಲಿ ಮೂರು ಮುಕ್ಕಾಲು ಮತ ಸಂಪಾದಿಸುವ ಯೋಗ್ಯತೆ ಇಲ್ಲದಿದ್ದರೂ , ಯಡಿಯೂರಪ್ಪ ವಿರುದ್ಧ ಚಾಡಿ ಚುಚ್ಚುವ ಕೆಲಸ ಮಾಡುತ್ತಾ ಬೇಳೆ ಬೇಯಿಸಿಕೊಳ್ಳುತ್ತಿದೆ ಆ ಕುಟಿಲ ಕೂಟ.
ಯಾರು ಏನೇ ಹೇಳಲಿ.., ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಶ್ರೇಯ ಯಡಿಯೂರಪ್ಪ ಅವರಿಗೇ ಸಲ್ಲಬೇಕು. ಯಡಿಯೂರಪ್ಪ ಬಿಜೆಪಿ ಬಿಟ್ಟು ಹೊಸ ಪಕ್ಷ ಕಟ್ಟಿದಾಗ ಏನಾಯ್ತು ಅನ್ನೋದು ಎಲ್ಲರಿಗೂ ಗೊತ್ತೇ ಇದೆ. ಹೀಗಾಗಿ ಯಡಿಯೂರಪ್ಪ ರಾಜ್ಯ ಬಿಜೆಪಿಯ ಅಗ್ರನಾಯಕ ಅನ್ನೋದ್ರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಹೀಗಿದ್ದೂ , ಯಡಿಯೂರಪ್ಪ ಅವರ ಬಲ ಗೊತ್ತಿದ್ದೂ ದಿಲ್ಲಿಯಲ್ಲಿ ಕುಂತವರು ಈ ರೀತಿ ವರ್ತಿಸುತ್ತಿರೋದು ಅದೆಷ್ಟು ಸರಿ..! ಯಡಿಯೂರಪ್ಪ ವಿರುದ್ಧ ಸದಾ ಕೆಂಗಣ್ಣು ಬಿಟ್ಟುಕೊಂಡು ದುರು ದುರು ಅಂತ ನೋಡೋದು ತಪ್ಪಲ್ಲವಾ..?
ಮೊನ್ನೆ ತುಮಕೂರಿನಲ್ಲಿ ಮೋದಿ ಎದುರು ವೀರಾವೇಷದಿಂದ ಗುಡುಗಿ ಗಂಡುಗಲಿಯಾಗಿದ್ದ ಯಡಿಯೂರಪ್ಪನವರು ಅದೇಕೋ ಅಮಿತ್ ಶಾ ಬಂದಾಗ ಮೆತ್ತಗಾಗಿ ಹೋಗಿದ್ದರು. ಬೆಂಗಳೂರಿನಿಂದ ಹುಬ್ಬಳ್ಳಿವರೆಗೆ ವಿಮಾನದಲ್ಲಿ ಒಟ್ಟಿಗೆ ಹೋದರಾದರೂ, ಸಂಪುಟ ವಿಸ್ತರಣೆಗೆ ಅಮಿತ್ ಶಾ ಕರಾರುವಾಕ್ ಆಗಿ ಗ್ರೀನ್ ಸಿಗ್ನಲ್ ಕೊಡಲೇ ಇಲ್ಲ. ಆದೇಶ ನಮ್ಮ ಕೆಲಸ.. ಆ ಆದೇಶಕ್ಕಾಗಿ ಕಾಯುವುದಷ್ಟೇ ನಿಮ್ಮ ಕೆಲಸ ಅಂತ ಅಮಿತ್ ಶಾ ‘ಶಾ’ಕ್ ಕೊಟ್ಟಂತಿತ್ತು. ಬಹಳ ಅಚ್ಚರಿಯ ವಿಷಯ ಏನಂದ್ರೆ , ಮೋದಿ ಹಾಗೂ ಅಮಿತ್ ಶಾ ರಾಜ್ಯಕ್ಕೆ ಬಂದಾಗಲೆಲ್ಲಾ ಭಾಷಣದ ವೇಳೆ ಯಡಿಯೂರಪ್ಪ ಅವರನ್ನು ಅಗ್ರಗಣ್ಯ ನಾಯಕ ಅಂತಲೇ ಸಂಬೋಧಿಸುತ್ತಾರೆ. ಆದ್ರೆ ಆ ಬೆಣ್ಣೆ ಮಾತು ಆ ಸಮಯಕ್ಕಷ್ಟೇ ಸೀಮಿತ. ಮಿಕ್ಕಂತೆ ಏಕ್ ಮಾರ್ ದೋ ತುಕ್ಡಾ..!
ರಾಜಕೀಯ ಅಂತಲ್ಲ ಯಾವುದೇ ಕ್ಷೇತ್ರವಾದರೂ ಏಕವ್ಯಕ್ತಿ ಪೂಜೆಗೆ ಆಸ್ಪದ ಕೊಡಬಾರದು. ಏಕವ್ಯಕ್ತಿ ಪ್ರಾಮುಖ್ಯತೆ…ಏಕವ್ಯಕ್ತಿ ಬಾಹುಳ್ಯತೆ ಇರಬಾರದು ನಿಜ. ಹಾಗಂತ ಒಬ್ಬ ನಾಯಕ ನೇಪಥ್ಯಕ್ಕೆ ಹೋಗುತ್ತಿದ್ದಂತೆ , ಆ ವ್ಯಕ್ತಿ ಬಿಟ್ಟ ಜಾಗ ತುಂಬಲು ನಾಲ್ಕಾರು ಮಂದಿಯಾದರೂ ಇರಬೇಕಲ್ಲವೇ..!? ಹಾಗಾದ್ರೆ ಬಿಜೆಪಿಯಲ್ಲಿ ಯಡಿಯೂರಪ್ಪ ನಂತರ ಅಂತ ಮಾಸ್ ಲೀಡರ್ ಯಾರಾದ್ರೂ ಇದ್ದಾರಾ..? ಮತಗಳನ್ನು ಬಾಚಿ ಬಾಚಿ ಬಿಜೆಪಿಯ ಬುಟ್ಟಿಗೆ ಹಾಕಿಸೋ ಧೀರೋದಾತ್ತರು , ಪ್ರಚಂಡ ಪರಾಕ್ರಮಿಗಳು , ಬಾಹುಬಲಿಗಳು ಇದ್ದಾರಾ..? ಇದ್ದರೆ ಹೇಳಿ..ನಮಗೂ ಜ್ಞಾನೋದಯವಾಗಲಿ..!!
ಇನ್ನು , ಅರ್ಹರಿಗೆ ಅಧಿಕಾರ ಹಂಚುವ ವಿಚಾರದಲ್ಲಿ ಬಿಜೆಪಿಯಲ್ಲಿ ಏಕಾಭಿಪ್ರಾಯವಿಲ್ಲ. ಭಿನ್ನಾಭಿಪ್ರಾಯವೇ ಹೆಚ್ಚು. ಅವರಿಂದಾಗಿಯೇ ಅಧಿಕಾರ ಪಡೆದು ಮಂತ್ರಿ ಆದ ಕೆಲ ಮಹೋದಯರು ಬೇಕಾಬಿಟ್ಟಿ ಮಾತುಗಳನ್ನಾಡುತ್ತಾ ಬೇಕಂತಲೇ ತಿಳಿಯಾದ ಕೊಳಕ್ಕೆ ಕಲಹದ ಕಲ್ಲುಗಳನ್ನು ತೂರುತ್ತಿದ್ದಾರೆ.
ಇಲ್ಲಿ ಯಡಿಯೂರಪ್ಪ ಅವರಲ್ಲೂ ಸಮಸ್ಯೆ ಇದ್ದಂತಿದೆ. ದಿಲ್ಲಿ ದೊರೆಗಳ ನಿಲುವನ್ನು ದೊಡ್ಡ ಧ್ವನಿಯಲ್ಲಿ ಆಕ್ಷೇಪಿಸುವುದಿಲ್ಲ.ಖಂಡತುಂಡವಾಗಿ ವಿರೋಧಿಸುವುದಿಲ್ಲ. ಎಲ್ಲಾ ಅಧಿಕಾರ ವ್ಯಾಮೋಹ ಎಂಬ ಮಾಯಾಜಾಲ. ಮೊನ್ನೆ ಮುರುಗೇಶ್ ನಿರಾಣಿಗೆ ಸಚಿವ ಸ್ಥಾನ ಆಗ್ರಹಿಸಿದ ವಚನಾನಂದ ಶ್ರೀಗಳಿಗೆ ವೇದಿಕೆ ಮೇಲೆಯೇ ಬಿಸಿ ಮುಟ್ಟಿಸಿದ್ದರು ಯಡಿಯೂರಪ್ಪ. ಸಂಪುಟ ವಿಸ್ತರಣೆ ವಿಳಂಬ ವಿಚಾರದಲ್ಲಿ ಯಡಿಯೂರಪ್ಪ ಅವರ ಒಳಬೇಗುದಿ ಯಾವ ಪ್ರಮಾಣದಲ್ಲಿದೆ ಅನ್ನೋದರ ಸುಸ್ಪಷ್ಟ ಉದಾಹರಣೆಯಂತಿತ್ತು ಈ ಇಡೀ ವೃತ್ತಾಂತ.
ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತದೆ ಎಂಬ ಮಾತು ಕೆಲವೇ ವರ್ಷಗಳ ಹಿಂದೆ ಚಾಲ್ತಿಯಲ್ಲಿತ್ತು. ಆದ್ರೀಗ ಆ ಗುಡುಗು ಅಡಗಿದಂತಿದೆ. ವರಿಷ್ಠರ ಪಾಲಿಗೆ ಅವರೀಗ ಒಂದು ರೀತಿ ಒಲ್ಲದ ಶಿಶು. ಯಡಿಯೂರಪ್ಪ ಅವರನ್ನು ಈ ಪರಿ ಸತಾಯಿಸುತ್ತಾ ಅಗೌರವ ತೋರುವುದು ಆ ಹಿರಿಯ ಮನಸ್ಸಿನ ಮೇಲೆ ಮಾಡಿದ ಅಮಾನುಷ ಹಲ್ಲೆ ಅನ್ನೋದು ಹಲವು ರಾಜಕೀಯ ಪಂಡಿತರ ಅಭಿಮತ.
ಆತ್ಮಾಭಿಮಾನಕ್ಕೆ ಪದೇ ಪದೇ ಪೆಟ್ಟು ಬೀಳುತ್ತಿದ್ದರೂ , ಯಡಿಯೂರಪ್ಪ ಅವರದ್ದೀಗ ಆತ್ಮಸಂಯಮ. ‘ಗಗನಚುಂಬಿ’ ಆಶೋತ್ತರಗಳು ಕಣ್ಣೆದುರೇ ನೆಲೆಸಮವಾಗುತ್ತಿದ್ದರೂ ನಾಳೆ ಎಲ್ಲಾ ಸರಿಹೋಗಬಹುದು ಎಂಬ ವಿಶ್ವಾಸದ ಲೆಕ್ಕಾಚಾರ ಯಡಿಯೂರಪ್ಪ ಅವರದ್ದು. ದಾವೋಸ್ ನಿಂದ ಬಂದ ಕೂಡಲೇ ಸಂಪುಟ ವಿಸ್ತರಣೆ ಅಂತ ಖಚಿತ ನುಡಿಗಳಲ್ಲಿ ಹೇಳಿ ಹೋಗಿದ್ದ ಯಡಿಯೂರಪ್ಪ , ಅಲ್ಲಿಂದ ಬಂದ್ಮೇಲೂ ಕೊಟ್ಟ ಮಾತು ಉಳಿಸಿಕೊಳ್ಳಲು ಹೆಣಗುತ್ತಿದ್ದಾರೆ. ಸಂಪುಟ ವಿಸ್ತರಣೆ ಎಂಬ ತಲ್ಲಣ ತಣಿಸಲು ಅವರಿಂದ ಸಾಧ್ಯವಾಗುತ್ತಿಲ್ಲ. ಈ ಕ್ಷಣದವರೆಗೂ ಹೈಕಮಾಂಡ್ ಸಮ್ಮತಿಗೆ ಕಾಯುತ್ತಲೇ ಇದ್ದಾರೆ. ಸೋತವರಿಗೂ ಮಂತ್ರಿ ಪದವಿ ಕೊಡಬೇಕೆಂಬ ಒತ್ತಾಯದ ಬೆನ್ನಲ್ಲೇ ಉಪಚುನಾವಣೆಯಲ್ಲಿ ಗೆದ್ದವರಿಗೆಲ್ಲರಿಗೂ ಸಚಿವ ಸ್ಥಾನ ಸಿಗಲ್ಲ ಎಂಬ ಮಾತು ಚರ್ವಿತಚರ್ವಣ ರೀತಿ ಕೇಳಿಬರ್ತಿದೆ. ಯಡಿಯೂರಪ್ಪ ಅವರ ವಿರೋಧಿ ಪಡೆಯ ಕುಟಿಲೋಪಾಯದ ಮುಕುಟಮಣಿಗಳು ಇದಕ್ಕೆ ಮಸಾಲೆ ಅರೆಯುತ್ತಿದ್ದಾರೆ.
ಇಂಥ ಜಟಿಲ ಹಾಗೂ ಕುಟಿಲ ಸಂದರ್ಭದಲ್ಲೇ.. ವಿಧಿ ವಿಪರೀತ, ವಿಧಿಯಾಘಾತ , ವಿಧಿವಿಲಾಸವೆನೆ ಇದೇನಹಾ..!? ಎಂಬ ಸತ್ಯಹರಿಶ್ಚಂದ್ರ ಚಿತ್ರದ ಹಾಡು ಪದೇ ಪದೇ ಸ್ಮರಣೆಗೆ ಬರುತ್ತಿದೆ.
ಗಾಳಿಪಟ: ಬೆಂಗ್ಳೂರು ಟು ಹುಬ್ಬಳ್ಳಿಯ ‘ಮೇಘರಥ’ ಮೆಗಾ ಮೀಟಿಂಗ್ ನಲ್ಲಿ ಸಚಿವ ಆಕಾಂಕ್ಷಿಗಳ ಪಟ್ಟಿ ನೋಡಿದ ಅಮಿತ್ ಶಾ, ಯಡಿಯೂರಪ್ಪ ಅವರಲ್ಲಿ ಪ್ರಶ್ನೆಯೊಂದನ್ನು ಮುಂದಿಟ್ಟರಂತೆ. “ಯಡಿಯೂರಪ್ಪಾಜಿ. ಈ ಪಟ್ಟಿಯಲ್ಲಿರೋ ಪೈಕಿ ಪಕ್ಕಾ ಮಾಸ್ ಲೀಡರ್ ಯಾರು? ವೋಟ್ ಬ್ಯಾಂಕ್ ವೀರ ಯಾರಾದ್ರೂ ಇದ್ದಾರಾ? ಸ್ಯಾಂಪಲ್ ಗೆ ಒಂದು ಹೆಸರು ಹೇಳಿ” ಅಂದ್ರಂತೆ. ಇದಕ್ಕೆ ಉತ್ತರಿಸಲಾರದೇ ತಬ್ಬಿಬ್ಬಾದ್ರಂತೆ ಯಡಿಯೂರಪ್ಪ.
ಆಯ್ತು ಶಾಣಕ್ಯರೇ…ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬಿಟ್ಟು… ಒಬ್ಬ ಮಾಸ್ ಲೀಡರ್ ಹೆಸರೇಳಿ ನೋಡೋಣ. ಸೂಪರ್ ಮ್ಯಾನ್ , ಶಕ್ತಿಮಾನ್ , ಸ್ಪೈಡರ್ ಮ್ಯಾನ್ , ಹೀ ಮ್ಯಾನ್ , ಬ್ಯಾಟ್ ಮ್ಯಾನ್ ಯಾರಾದರೂ ಇದ್ದಾರಾ ಹೇಳಿ ಅಂತ ಬಿಎಸ್ ವೈ ಶಿಷ್ಯರು ಕೇಳ್ತಿದ್ದಾರಂತೆ. ಈ ಪ್ರಶ್ನೆ ಕಿವಿಮೇಲೆ ಬಿದ್ದರೂ ತುಟಿ ಪಿಟಕ್ ಅನ್ನದ ಅಮಿತ್ ಶಾ , ದಿಲ್ಲಿ ಎಲೆಕ್ಷನ್ ಕೆ ಬಾದ್ ಬೋಲೂಂಗಾ ಅಂತ ನುಣುಚಿಕೊಂಡ್ರಂತೆ.
[ಮೇಲಿನ ಲೇಖನದಲ್ಲಿ ಪ್ರಕಟವಾಗಿರುವುದು ಲೇಖಕರ ವೈಯಕ್ತಿಕ ಅಭಿಪ್ರಾಯ]