– ಸಂಪುಟ ವಿಸ್ತರಣೆಗೆ ಟ್ವಿಸ್ಟ್ ಕೊಟ್ಟ ಹೈಕಮಾಂಡ್
– ರಾಜಭವನಕ್ಕೆ ಸಂಭಾವ್ಯ ಸಚಿವರ ಪಟ್ಟಿ ರವಾನೆ
ಬೆಂಗಳೂರು: ಸಂಪುಟ ವಿಸ್ತರಣೆ ವಿಚಾರದಲ್ಲಿ ಪಕ್ಷದಲ್ಲಿ ಎದ್ದಿದ್ದ ಅಸಮಾಧಾನ ತಣ್ಣಗಾಯಿತು ಅಂತಾ ಅಂದ್ಕೊಳ್ಳುವಷ್ಟರಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಹೈಕಮಾಂಡ್ ಮತ್ತೆ ಶಾಕ್ ನೀಡಿದೆ.
ಪಕ್ಷದಲ್ಲಿನ ಸಣ್ಣ ಪುಟ್ಟ ಅಸಮಾಧಾನವನ್ನೇ ನೆಪವಾಗಿಸಿಕೊಂಡ ಹೈಕಮಾಂಡ್, ಮಂತ್ರಿ ಮಂಡಲ ವಿಸ್ತರಣೆಯಲ್ಲಿ ಮೂಗು ತೂರಿಸಿದೆ. 10+3 ಫಾರ್ಮುಲಾ ಸದ್ಯಕ್ಕೆ ಬೇಡ, ಮೂವರು ಮೂಲ ಶಾಸಕರನ್ನು ನಾವು ಹೇಳುವವರೆಗೂ ಮಂತ್ರಿ ಮಾಡಬೇಡಿ ಎಂದು ಖಡಕ್ಕಾಗಿ ಹೇಳಿದೆ. ಈ ಮೂಲಕ ಗುರುವಾರದ ಸಂಪುಟ ವಿಸ್ತರಣೆಗೆ ಮೆಗಾ ಟ್ವಿಸ್ಟ್ ಕೊಟ್ಟಿದೆ. ಇದರೊಂದಿಗೆ ಶಾಸಕ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ ಮತ್ತು ಸಿ.ಪಿ.ಯೋಗೇಶ್ವರ್ ಮಂತ್ರಿ ಆಸೆಗೆ ಕೊಕ್ಕೆ ಬಿದ್ದಿದೆ. ಹೀಗಾಗಿ ನಾಳೆ ಬೆಳಗ್ಗೆ 10:30ಕ್ಕೆ ರಾಜಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮಹೇಶ್ ಕುಮಟಳ್ಳಿ ಹೊರತುಪಡಿಸಿ ಮಿತ್ರಮಂಡಳಿಯ 10 ಮಂದಿ ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
Advertisement
Advertisement
ಹೈಕಮಾಂಡ್ ಆದೇಶದಂತೆ ಇಂದು ಸಂಜೆ ಸಿಎಂ ಯಡಿಯೂರಪ್ಪ, 10 ಸಂಭಾವ್ಯ ಸಚಿವರ ಪಟ್ಟಿಯನ್ನು ರಾಜಭವನಕ್ಕೆ ಕಳಿಸಿಕೊಟ್ಟಿದ್ದಾರೆ. ನಾಳೆಯ ಪ್ರಮಾಣ ವಚನ ಸಮಾರಂಭಕ್ಕೆ ರಾಜಭವನದಲ್ಲಿ ಅಗತ್ಯ ಸಿದ್ಧತೆಗಳು ನಡೆದಿವೆ. ಮೂಲಗಳ ಪ್ರಕಾರ, ನಾಳೆಯೇ ಖಾತೆ ಹಂಚಿಕೆ ನಡೆಯಲ್ಲ. ಮುಂದಿನ ವಾರ ಸಿಎಂ ದೆಹಲಿಗೆ ತೆರಳುತ್ತಿದ್ದು, ಆ ಬಳಿಕವಷ್ಟೇ ಖಾತೆ ಹಂಚಿಕೆ ನಡೆಯಲಿದೆ. ಈ ಮಧ್ಯೆ ಸಂಭಾವ್ಯ ಸಚಿವರು ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಸಚಿವ ಸ್ಥಾನ ಕೊಡುತ್ತಿರುವುದಕ್ಕೆ ಸಿಎಂಗೆ ಧನ್ಯವಾದ ಹೇಳಿದರು.
Advertisement
ಬಿಎಸ್‍ವೈಗೆ ಶಾ ಫೋನ್:
ಬುಧವಾರ ಬೆಳಗ್ಗೆ 9:30ರವರೆಗೂ ಎಲ್ಲಾ ಸರಿಯಾಗೇ ಇತ್ತು. ಸಿಎಂ ಯಡಿಯೂರಪ್ಪ ಪಾಳಯದಲ್ಲಿ ಮಂತ್ರಿ ಮಂಡಲ ವಿಸ್ತರಣೆಯ ಹುರುಪಿತ್ತು. ಆದರೆ ದೆಹಲಿಯಿಂದ ಬಂದ ಒಂದು ಫೋನ್ ಕಾಲ್ ಯಡಿಯೂರಪ್ಪ ಸೇರಿ ಎಲ್ಲಾ ಬಿಜೆಪಿಗರ ಲೆಕ್ಕಾಚಾರವನ್ನು ತಲೆಕೆಳಗಾಗಿಸಿತು.
Advertisement
ಸಿಎಂ ಯಡಿಯೂರಪ್ಪ ಅವರಿಗೆ ಫೋನ್ ಮಾಡಿದ ಕೇಂದ್ರ ಗೃಹಸಚಿವ ಅಮಿತ್ ಶಾ, ನಾಳೆ 10 ಶಾಸಕರು ಮಾತ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿ. ಪಕ್ಷದ ಮೂವರು ಮೂಲ ಶಾಸಕರು ಸಚಿವರಾಗುವದು ಬೇಡ. ಪಕ್ಷದಲ್ಲಿ ಸದ್ಯಕ್ಕೆ ಅಸಮಾಧಾನ ಜೋರಾಗಿದೆ. ಆಮೇಲೆ ನೋಡೋಣ ಎಂದು ಸೂಚನೆ ನೀಡಿದ್ದಾರೆ ಎನ್ನುವ ವಿಚಾರ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ.
ಈ ವಿಚಾರವಾಗಿ ಆಪ್ತರಾದ ಉಮೇಶ್ ಕತ್ತಿ, ಯೋಗೇಶ್ವರ್ ಬಳಿ ಕೋಪಾತಾಪ ವ್ಯಕ್ತಪಡಿಸಿದ ಸಿಎಂ, ಈಗಾಗಲೇ 10+3 ಅಂತಾ ಹೇಳಿಬಿಟ್ಟಿದ್ದೇನೆ. ಮೂವರಿಗೆ ಹೇಳಿಬಿಟ್ಟಿದ್ದೇ. ಮೊದಲು ಅನುಮತಿ ಕೊಟ್ಟು ಈಗ ಬೇಡ ಅಂತಿದ್ದಾರೆ. ಈಗ ನನ್ನ ಮಾತಿಗೆ ಕಿಮ್ಮತ್ತಿಲ್ಲ ಎನ್ನುವ ಸಂದೇಶ ರವಾನೆಯಾಗುತ್ತೆ. ಸಂಜೆ ತನಕವೂ ಕಾಯಿರಿ ನೋಡೋಣ, ಆಗದಿದ್ದರೆ ತಿಂಗಳ ಬಳಿಕ ಮಾಡ್ತೀನಿ ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.
‘ಮೂಲ’ಕ್ಕೆ ಪೆಟ್ಟು ಕೊಟ್ಟಿತೇಕೆ ಹೈಕಮಾಂಡ್?
ಕಾರಣ 1 > ಮೂಲ ಬಿಜೆಪಿಗರಲ್ಲಿ ಭಿನ್ನಾಭಿಪ್ರಾಯ ಹೆಚ್ಚಾಗುವ ಆತಂಕ
ಕಾರಣ 2 > ಸೋತವರಿಗೆ ಮಂತ್ರಿಗಿರಿ ಕೊಟ್ಟರೆ ಗೊಂದಲ ಉಂಟಾಗುತ್ತದೆ
ಕಾರಣ 3 > ಸಂಪುಟದಲ್ಲಿ ಪ್ರಾದೇಶಿಕ ಅಸಮತೋಲನ
ಕಾರಣ 4 > ಜಾತಿವಾರು ಮಂತ್ರಿಗಿರಿ ಹಂಚಿಕೆಯಲ್ಲಿ ಅಸಮತೋಲನ
ಕಾರಣ 5 > ಭಿನ್ನಮತದಿಂದ ಬಜೆಟ್ ಅಧಿವೇಶನದ ಮೇಲೆ ಪರಿಣಾಮ ಬೀರಬಹುದು