ಬೆಂಗಳೂರು: ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಮೌಢ್ಯ ನಿಷೇಧ ತಿದ್ದುಪಡಿ ಕಾಯ್ದೆಗೆ ಅಂತೂ ಸಚಿವ ಸಂಪುಟ ಸಮ್ಮತಿ ಸೂಚಿಸಿದೆ.ಕೆಂಡ ಹಾಯುವಂತಹ ಆಚರಣೆಗಳು ಬಲವಂತದಿಂದ ನಡೆಯಬಾರದೆಂದು ಸೂಚಿಸಿದೆ.
ಬೆತ್ತಲೆ ಸೇವೆಗೆ ಸಂಪೂರ್ಣ ನಿಷೇಧ, ದೇವರ ಹೆಸರಿನಲ್ಲಿ ಹಿಂಸೆಗೆ ಆಸ್ಪದವಿಲ್ಲ, ಉರುಳು ಸೇವೆ ನಿಷೇಧ, ಎಂಜಲೆಲೆ ಮೇಲೆ ಉರುಳುವುದು ನಿಷೇಧ, ಮಡೆಸ್ನಾನ ನಿಷೇಧ, ಜ್ಯೋತಿಷ್ಯ, ವಾಸ್ತುಗೆ ಯಾವುದೇ ಅಡ್ಡಿ ಇಲ್ಲ, ದೆವ್ವ ಭೂತ ಬಿಡಿಸುವ ನೆಪದಲ್ಲಿ ಹಿಂಸೆ ಶಿಕ್ಷಾರ್ಹವಾಗಿದೆ. ಜೈನ ಸಮುದಾಯದ ಕೇಶಲೋಚನಕ್ಕೆ ನಿಷೇಧವಿಲ್ಲ ಎಂದು ಸೂಚಿಸಿದೆ.
Advertisement
ಸಚಿವ ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಟಿಬಿ ಜಯಚಂದ್ರ, ಅಮಾನವೀಯ ಆಚರಣೆಗಳು ಮನುಷ್ಯನನ್ನು ನಗ್ನಗೊಳಿಸುವ ವಾಮಾಚಾರ, ಮಾಟ, ಭಾನಾಮತಿ, ಮಡೆಸ್ನಾನ ಮನುಷ್ಯನಿಗೆ ದೈಹಿಕ, ಮಾನಸಿಕ ಹಿಂಸೆ ನೀಡುವಂತಹ ಆಚರಣೆಗಳಿಗೆ ನಿಷೇಧ ಹೇರಿದೆ. ಪ್ರದಕ್ಷಿಣೆ, ಯಾತ್ರೆ, ಹರಿಕತೆ, ಕೀರ್ತನೆ, ಪ್ರವಚನ, ಭಜನೆ, ಪುರಾತನ ಸಂಪ್ರದಾಯ ಶಿಕ್ಷಣಗಳಿಗೆ ಯಾವುದೇ ತೊಂದರೆ ಇಲ್ಲ. ಪವಾಡಗಳ ಕುರಿತು ಸಂತರು ಪ್ರಚಾರ ಮಾಡುವುದು, ಅದಕ್ಕೆ ಪೂರಕವಾದ ಸಾಹಿತ್ಯ ರಚಿಸಲು ಅಡ್ಡಿ ಇಲ್ಲ ಎಂದು ಹೇಳಿದರು.
Advertisement
ದೇವಸ್ಥಾನ, ದರ್ಗಾ, ಮಸೀದಿ, ಗುರುದ್ವಾರ, ಚರ್ಚ್‍ಗಳಲ್ಲಿ ನಡೆಯುವ ಆಚರಣೆಗಳಿಗೆ ಯಾವುದೇ ರೀತಿಯ ಅಡಚಣೆ ಇಲ್ಲ. ದೈಹಿಕ ಹಿಂಸೆ ಆಗಬಾರದು ಅಷ್ಟೇ ಎಂದು ಮೌಢ್ಯ ನಿಷೇಧ ಕಾಯ್ದೆ ಹೇಳಿದೆ. ಎಲ್ಲ ಧರ್ಮಗಳ ಸಾಂಪ್ರದಾಯಿಕ ಆಚರಣೆ, ಮೆರವಣಿಗೆಯಂತಹ ಕ್ರಮಗಳಿಗೂ ನಿಷೇಧವಿಲ್ಲ. ಜ್ಯೋತಿಷ್ಯ, ವಾಸ್ತುವಿನಿಂತಹ ವಿಷಯಗಳಲ್ಲಿ ಸಲಹೆ ಪಡೆಯಲು ಯಾವುದೇ ತೊಂದರೆಯಿಲ್ಲ ಎಂದು ವಿವರಿಸಿದರು.
Advertisement
ಮುಂದಿನ ವಿಧಾನಮಂಡಲ ಅಧಿವೇಶನದಲ್ಲಿ ಈ ಮೌಢ್ಯ ನಿಷೇಧ ತಿದ್ದುಪಡಿ ಕಾಯ್ದೆಯನ್ನು ಮಂಡಿಸಲಾಗುವುದು. ಅಲ್ಲಿ ಸುಧೀರ್ಘ ಚರ್ಚೆಯ ನಂತರ ಕೆಲವು ಅಂಶಗಳು ಸೇರಿಕೆಯಾಗಬಹುದು ಕೆಲವು ಅಂಶಗಳನ್ನು ಕೈ ಬಿಡಬಹುದು ಎಂದರು. ಒಟ್ಟಿನಲ್ಲಿ ವಿಧಾನಮಂಡಲ ಅಧಿವೇಶನದಲ್ಲಿ ಇದು ಅಂಗೀಕಾರ ಪಡೆದ ನಂತರದ ದಿನಗಳಲ್ಲಿ ಗೆಜೆಟ್ ಮೂಲಕ ಪ್ರಕಟವಾಗಲಿದೆ. ಆದರೆ ಕಾಲ ಕಾಲಕ್ಕೆ ಇದರಲ್ಲಿ ಬದಲಾವಣೆ ಮಾಡಲು ಅವಕಾಶವಿದೆ ಎಂದು ಅವರು ಹೇಳಿದರು.
Advertisement
ಕ್ಯಾಬಿನೆಟ್ ನಿರ್ಧಾರಗಳು:
ರಾಜ್ಯದಲ್ಲಿರುವ ಪಶುಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲು ಸರ್ಕಾರ ನಿರ್ಧರಿಸಿದ್ದು 2017-18 ರ ಸಾಲಿನಲ್ಲಿ 36.72 ಕೋಟಿ ರೂ. ವೆಚ್ಚದಲ್ಲಿ 306 ಪಶುಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಅಲ್ಲಿ ಹೆಚ್ಚುವರಿ ಅನುಕೂಲಗಳನ್ನು ಒದಗಿಸಲಾಗುವುದು ಎಂದರು.
ಕೃಷಿ ಭಾಗ್ಯ ಯೋಜನೆ ಅಡಿ ಕರಾವಳಿ ಜಿಲ್ಲೆಗಳ ಕೆಲವು ಸೀಮಿತ ಪ್ರದೇಶಗಳನ್ನು ಸೇರಿಸಿ ಉಳಿದಂತೆ ರಾಜ್ಯಾದ್ಯಂತ ರೈತರಿಗೆ ತರಕಾರಿ ಬೀಜಗಳ ಕಿಟ್ ಅನ್ನು ಒದಗಿಸಲು ಸರ್ಕಾರ ನಿರ್ಧರಿಸಿದ್ದು ಇದಕ್ಕಾಗಿ ಮೂವತ್ತು ಕೋಟಿ ರೂ ಗಳನ್ನು ಒದಗಿಸಲು ತೀರ್ಮಾನಿಸಿದೆ. ಒಂದು ತರಕಾರಿ ಬೀಜಗಳ ಕಿಟ್ ಅನ್ನು ತಲಾ ಎರಡು ಸಾವಿರ ರೂ ಗಳ ವೆಚ್ಚದಲ್ಲಿ ಒದಗಿಸಲಾಗುವುದು ಎಂದು ತಿಳಿಸಿದರು. ಇದರಿಂದ ರಾಜ್ಯದ ಅತಿ ಸಣ್ಣ ಮತ್ತು ಸಣ್ಣ ರೈತರಿಗೆ ಅನುಕೂಲವಾಗಲಿದ್ದು ಸುಮಾರು 1.47 ಲಕ್ಷ ಎಕರೆ ಪ್ರದೇಶದಲ್ಲಿ ಈ ಕೀಟಗಳ ಸಹಾಯದಿಂದ ತರಕಾರಿ ಬೆಳೆಯಲು ಅನುಕೂಲವಾಗಲಿದೆ ಎಂದು ಹೇಳಿದರು.
ಆರ್ಥಿಕ ದುರ್ಬಲರಿಗೆ 6000 ಕೋಟಿ ರೂ ವೆಚ್ಚದಲ್ಲಿ ಒಂದು ಲಕ್ಷ ಮನೆಗಳನ್ನು ನಿರ್ಮಿಸಿಲು ಸಂಪುಟ ನಿರ್ಧರಿಸಿದೆ. ಇದಕ್ಕಾಗಿ 468 ಎಕರೆ ಭೂಮಿಯನ್ನು ಗುರುತಿಸಿದ್ದು, ಈ ಯೋಜನೆಯಡಿ ಫಲಾನುಭವಿಗಳು ತಲಾ ಒಂದು ಲಕ್ಷ ರೂ ಪಾವತಿಸಿ ಬೇಕು. ರಾಜೀವ್ ಗಾಂಧಿ ವಸತಿ ನಿಗಮದ ವತಿಯಿಂದ ನಿರ್ಮಿಸಲಾಗುವ ಮನೆಗಳ ನಿರ್ಮಾಣಕ್ಕೆ ಹುಟ್ಟಿಕೊಂಡಂತಹ ಹೌಸ್ಸಿಂಗ್ ಬೋರ್ಡ್ ಕೊಳಚೆ ನಿರ್ಮೂಲನಾ ಮಂಡಳಿ, ರಾಜೀವ್ ಗಾಂಧಿ ಕಾರ್ಪೊರೇಷನ್ ಸಂಸ್ಥೆಗಳ ವತಿಯಿಂದ ಐನೂರು ಕೋಟಿ ರೂ ಕೇಂದ್ರ ಸರ್ಕಾರದಿಂದ 1300 ಕೋಟಿ ರೂಗಳನ್ನು ಪಡೆಯಲಾಗುವುದು. ರಾಜ್ಯ ಸರ್ಕಾರವೂ ತನ್ನ ಪಾಲು ಹಾಕಲಿದೆ ಎಂದು ವಿವರ ನೀಡಿದರು.
ಬಿಎಂಟಿಸಿಗೆ ಒಂದೂವರೆ ಸಾವಿರ ಬಸ್ಸುಗಳನ್ನು ಖರೀದಿಸಲು ಸರ್ಕಾರ ನಿರ್ಧರಿಸಿದ್ದು ಉಳಿದಂತೆ ಒಂದೂವರೆ ಸಾವಿರ ಬಸ್ಸುಗಳನ್ನು ಖಾಸಗಿಯವರಿಂದ ಗುತ್ತಿಗೆ ಆಧಾರದ ಮೇಲೆ ಪಡೆಯಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಇದು ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುವ ಕೆಲಸವಲ್ಲವೇ? ಎಂದು ವರದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಿಮ್ಮ ಭಾವನೆಗಳನ್ನು ಸಂಪುಟದ ಮುಂದಿಡುತ್ತೇನೆ ಎಂದರಲ್ಲದೇ, ಗುತ್ತಿಗೆ ಆಧಾರದ ಮೇಲೆ ಪಡೆಯುವ ಒಂದೂವರೆ ಸಾವಿರ ಬಸ್ಸುಗಳಿಗೆ ಪ್ರತಿವರ್ಷ ಎಪ್ಪತ್ತೇಳು ಕೋಟಿ ರೂ ಗಳನ್ನು ಪಾವತಿಸಲಾಗಿದೆ ಎಂದರು.
ಸೈಕಲ್ ಬಳಕೆಗೆ ಉತ್ತೇಜನ ನೀಡುವ ಸಲುವಾಗಿ ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಯೋಜನೆ ಯಶಸ್ವಿಯಾಗಿರುವುದರಿಂದ ಬೆಂಗಳೂರಿನಲ್ಲೂ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ 80.18 ಕೋಟಿ ರೂ. ವೆಚ್ಚ ಮಾಡಲಾಗುವುದು ಎಂದು ಹೇಳಿದರು. ಬಿಬಿಎಂಪಿ ವ್ಯಾಪ್ತಿಗೆ ಹೊಸತಾಗಿ 110 ಗ್ರಾಮಗಳು ಸೇರಿರುವುದರಿಂದ ಕುಡಿಯುವ ನೀರಿನ ಐದನೇ ಹಂತದ ಯೋಜನೆಯನ್ನು 5,550 ಕೋಟಿ ರೂ. ವೆಚ್ಚದಲ್ಲಿ ಜಾರಿಗೊಳಿಸಲಾಗುವುದು ಎಂದು ವಿವರಿಸಿದರು. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅನುಕೂಲವಾಗುವಂತೆ ಯುವ ಚೈತನ್ಯ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದ್ದು ಇದಕ್ಕಾಗಿ 20 ಕೋಟಿ ರೂ. ಅನುದಾನ ಒದಗಿಸಲು ತೀರ್ಮಾನಿಸಲಾಗಿದೆ ಎಂದು ಜಯಚಂದ್ರ ಅವರು ವಿವರವಾಗಿ ತಿಳಿಸಿದರು.
ಎಂಬಿ ಪಾಟೀಲ್ ಹೇಳಿಕೆ:
ಕೃಷ್ಣ ಮೇಲ್ದಂಡೆ ಯೋಜನೆ ಹಂತಕ್ಕೆ 17 ಸಾವಿರ ಕೋಟಿ ರೂಪಾಯಿ ಹಿಂದಿನ ಸರ್ಕಾ ನಿಗದಿ ಪಡಿಸಿತ್ತು. ಆದರೆ ಹೊಸ ಭೂಸ್ವಾಧೀನ ಕಾಯ್ದೆ ಅಂತೆ 51.148 ಕೋಟಿ ಪರಿಷ್ಕೃತ ಅಂದಾಜು ಮೊತ್ತಕ್ಕೆ ಕ್ಯಾಬಿನೆಟ್ ಒಪ್ಪಿಗೆ ಸೂಚಿಸಿದೆ. 6.19 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ಇದ್ರಿಂದ ನೀರಾವರಿ ವ್ಯವಸ್ಥೆ ಕಲ್ಪಿಸಲಾಗುವುದು. ಹೊಸ ಕಾಯ್ದೆಯ ನಿಯಮದಂತೆ ಭೂಸ್ವಾದೀನ ರೈತರಿಗೆ ನಾಲ್ಕು ಪಟ್ಟು ಹಣ ಸಿಗಲಿದೆ. ಉತ್ತರ ಕರ್ನಾಟಕದ ನೀರಾವರಿ ದೃಷ್ಟಿಯಿಂದ ಈ ಮಹತ್ವದ ನಿರ್ಧಾರ ತೆಗೆದು ಕೊಳ್ಳಲಾಗಿದೆ ಎಂದು ಎಂಬಿ ಪಾಟೀಲ್ ಹೇಳಿಕೆ ನೀಡಿದರು.
ಕಾವೇರಿ ವಿಚಾರವಾಗಿ ಮಾತನಾಡಿದ ಎಂಬಿ ಪಾಟೀಲ್ ನಿರ್ವಹಣ ಮಂಡಳಿಗೆ ರಾಜ್ಯದ ವಿರೋಧವಿದೆ. ಅದಕ್ಕೆ ಸೂಕ್ತ ದಾಖಲೆಗಳೊಂದಿಗೆ ಸ್ಪಷ್ಟವಾದ ವರದಿಯನ್ನು ಸುಪ್ರೀಂಗೆ ಸಲ್ಲಿಕೆ ಮಾಡುತ್ತೇವೆ ಎಂದು ತಿಳಿಸಿದರು.