ನವದೆಹಲಿ: ಸುಪ್ರೀಂ ಕೋರ್ಟ್ ವಿಚಾರಣೆಯಿಂದ ಮುಂದೂಡಲ್ಪಟ್ಟಿದ್ದ ಕರ್ನಾಟಕ ಉಪಚುನಾವಣೆಗೆ ದಿನಾಂಕ ನಿಗದಿಯಾಗಿದೆ.
ಇಂದು ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೋಷಣೆ ಮಾಡಿದ್ದು, 15 ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಚುನಾವಣೆ ನಡೆಯಲಿದ್ದು, ಡಿ.9 ರಂದು ಮತ ಎಣಿಕೆ ನಡೆಯಲಿದೆ.
ನ.11ಕ್ಕೆ ಅಧಿಸೂಚನೆ ಪ್ರಕಟವಾಗಲಿದ್ದು, ನ.18ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ನ.18ಕ್ಕೆ ನಾಮಪತ್ರ ಪರಿಶೀಲನೆ ನಡೆಯಲಿದ್ದು ನ.21 ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನವಾಗಿದೆ. ಈಗಾಗಲೇ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ನಾಮಪತ್ರ ಪರಿಗಣನೆ ಆಗಲಿದೆ.
ಅಥಣಿ, ಕಾಗವಾಡ, ಗೋಕಾಕ್, ಯಲ್ಲಾಪುರ, ಹಿರೇಕೆರೂರು, ರಾಣಿಬೆನ್ನೂರು, ವಿಜಯನಗರ, ಚಿಕ್ಕಬಳ್ಳಾಪುರ, ಕೆಆರ್ ಪುರ, ಯಶವಂತಪುರ, ಮಹಾಲಕ್ಷ್ಮೀ ಲೇಔಟ್, ಶಿವಾಜಿನಗರ, ಹೊಸಕೋಟೆ, ಕೆಆರ್ ಪೇಟೆ, ಹುಣಸೂರು ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ತೆರವಾದ ಕ್ಷೇತ್ರಗಳಿಗೆ 6 ತಿಂಗಳ ಒಳಗಡೆ ಚುನಾವಣೆ ನಡೆಸಬೇಕಾಗುತ್ತದೆ. ಹೀಗಾಗಿ ಆಯೋಗ ಇಂದು ಉಪಚುನಾವಣೆಯ ದಿನಾಂಕವನ್ನು ಪ್ರಕಟಿಸಿದೆ.
ಗುರುವಾರ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಚುನಾವಣಾ ಆಯೋಗ ಪರ ವಕೀಲ ರಾಕೇಶ್ ದ್ವಿವೇದಿ ಹಾಜರಾಗಿ, ಖಾಲಿ ಇರುವ ಕ್ಷೇತ್ರಗಳಿಗೆ ಚುನಾವಣೆ ಘೋಷಿಸುವುದು ನಮ್ಮ ಕೆಲಸ. ಸ್ಪೀಕರ್ ಆದೇಶದ ಮೇಲೆ ನಾವು ನಿರ್ಧಾರ ತೆಗೆದುಕೊಂಡಿದ್ದೇವೆ. ಅನರ್ಹ ಶಾಸಕರ ಪ್ರಕರಣ ಇತ್ಯರ್ಥ ಆಗದಿದ್ದರೆ ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗಲಿದೆ. ಈಗ ಚುನಾವಣೆ ನಿಲ್ಲಿಸಿದ್ರೆ ಜನಪ್ರತಿನಿಧಿಗಳು ಇಲ್ಲದಂತಾಗುತ್ತದೆ. ಈಗ ಚುನಾವಣೆಗೆ ತಡೆ ನೀಡಬೇಡಿ, ನಾವೇ ಮುಂದೂಡುತ್ತೇವೆ ಎಂದು ತಿಳಿಸಿದ್ದರು. ಚುನಾವಣಾ ಆಯೋಗದಿಂದ ಈ ಅಭಿಪ್ರಾಯ ವ್ಯಕ್ತವಾದ ಬೆನ್ನಲ್ಲೇ ಅನರ್ಹರ ಶಾಸಕರ ಅರ್ಜಿ ವಿಚಾರಣೆಯನ್ನು ತ್ರಿಸದಸ್ಯ ಪೀಠ ಅಕ್ಟೋಬರ್ 22ಕ್ಕೆ ಮುಂದೂಡಿದೆ.
ಈ ಮೊದಲು ಮುಂದೂಡಲ್ಪಟ್ಟ ಕ್ಷೇತ್ರಗಳಿಗೆ ಅ.21 ರಂದು ಉಪಚುನಾವಣೆ ನಡೆಸಿ ಅ.24 ರಂದು ಮತ ಎಣಿಕೆ ನಡೆಸಲಾಗುವುದು ಚುನಾವಣಾ ಆಯೋಗ ತಿಳಿಸಿತ್ತು.