– ಬಿಜೆಪಿ ಪಾಲಿಗೆ ಕತ್ತಲು ತಂದ ನರಕ ಚುತುರ್ದರ್ಶಿ
– ಕನಕಪುರ ಬಂಡೆಗೆ ಸಿಲುಕಿ ರಾಮುಲು ಕೋಟೆ ಛಿದ್ರ
– ರಾಮನಗರದಲ್ಲಿ ಪತಿಯನ್ನೇ ಮೀರಿಸಿ ಅನಿತಾ ಗೆಲುವು
– ಲೋಕಸಮರದಲ್ಲೂ ಮುಂದುವರಿಯುತ್ತೆ ದೋಸ್ತಿ
ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಯಂದೇ ಬಿಜೆಪಿಗೆ ಕತ್ತಲು ಆವರಿಸಿದೆ. ಮುಂದಿನ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿದ್ದ ಪಂಚ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಗೆದ್ದು ಬೀಗಿದೆ. ನರಕ ಚತುರ್ದಶಿಯಂದೇ ದೋಸ್ತಿ ಸರ್ಕಾರಕ್ಕೆ ದೀಪಾವಳಿ ಗಿಫ್ಟ್ ಸಿಕ್ಕಿದೆ. ಕಾಂಗ್ರೆಸ್-ಜೆಡಿಎಸ್ ರಚಿಸಿದ ರಣತಂತ್ರ ಮುಂದೆ ಕೇಸರಿ ಪಡೆ ಹೀನಾಯ ಸೋಲು ಅನುಭವಿಸಿದೆ.
ಐದು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ದೋಸ್ತಿಗಳು ಗೆಲುವಿನ ಕೇಕೆ ಹಾಕಿದ್ದಾರೆ. ರೆಡ್ಡಿಗಳ ಭದ್ರಕೋಟೆ ಬಳ್ಳಾರಿ ಮೇಲೆ ‘ರಾಕೆಟ್’ ದಾಳಿ ನಡೆಸಿದ ಡಿಕೆಶಿ ಎದುರು ಶ್ರೀರಾಮುಲು ಠುಸ್ ಪಟಾಕಿಯಾಗಿದ್ದಾರೆ. ಬಳ್ಳಾರಿ ಲೋಕಸಭೆ ಕ್ಷೇತ್ರ ಕಾಂಗ್ರೆಸ್ ಪಾಲಾಗಿದೆ. ಬಿಎಸ್ವೈ ಭದ್ರಕೋಟೆ ಶಿವಮೊಗ್ಗದಲ್ಲಿ ಬಿಜೆಪಿ ಏದುಸಿರು ಬಿಡುತ್ತಾ ಗೆಲುವಿನ ಗೆರೆ ಮುಟ್ಟಿದೆ. ಹಳೆ ಮೈಸೂರು ಭಾಗವಾದ ಮಂಡ್ಯ ಮತ್ತು ರಾಮನಗರದಲ್ಲಿ ಜೆಡಿಎಸ್ ಪ್ರಾಬಲ್ಯ ಮೆರೆದಿದೆ. ಎರಡೂ ಕಡೆ ದಾಖಲೆ ಗೆಲುವನ್ನು ಜೆಡಿಎಸ್ ಅಭ್ಯರ್ಥಿಗಳು ತನ್ನದಾಗಿಸಿಕೊಂಡಿದ್ದಾರೆ. ಅನುಕಂಪದ ಅಲೆ ಮೇಲೆ ಜಮಖಂಡಿ ವಿಧಾನಸಭೆ ಕ್ಷೇತ್ರವನ್ನು ಕಾಂಗ್ರೆಸ್ ತನ್ನಲ್ಲೇ ಉಳಿಸಿಕೊಂಡಿದೆ.
Advertisement
ಉಗ್ರ ವೀರಂ, ರಾಮುಲು ಶಾತಂ:
ಒಂದರ್ಥದಲ್ಲಿ ರಾಮುಲು ವರ್ಸಸ್ ಡಿಕೆ ಶಿವಕುಮಾರ್ ಎಂದೇ ಬಿಂಬಿತವಾಗಿದ್ದ ಈ ಎಲೆಕ್ಷನ್ನಲ್ಲಿ ಕಾಂಗ್ರೆಸ್ ಕಮಾಲ್ ಮಾಡಿದೆ. ಸಚಿವ ಡಿ.ಕೆ.ಶಿವಕುಮಾರ್ ರಣತಂತ್ರದ ಪರಿಣಾಮ, ಇಲ್ಲಿ ಬರೋಬ್ಬರಿ 14 ವರ್ಷಗಳ ವನವಾಸ ಮುಗಿಸಿರುವ ಕಾಂಗ್ರೆಸ್, ಗೆಲುವಿನ ನಗೆ ಬೀರಿದೆ. ದೋಸ್ತಿ ಅಭ್ಯರ್ಥಿ ವಿಎಸ್ ಉಗ್ರಪ್ಪ 2.40 ಲಕ್ಷ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಜೆ. ಶಾಂತಾ ವಿರುದ್ಧ ಜಯ ಗಳಿಸಿದ್ದಾರೆ.
Advertisement
ಹಿಂದೆ, ಸುಷ್ಮಾ ಸ್ವರಾಜ್ ವಿರುದ್ಧ 4 ಲಕ್ಷದ 14 ಸಾವಿರ ಮತಗಳನ್ನು ಪಡೆದು ಸೋನಿಯಾ ಗಾಂಧಿ ನಿರ್ಮಿಸಿದ್ದ ದಾಖಲೆಯನ್ನು ಉಗ್ರಪ್ಪ ಅಳಿಸಿ ಹಾಕಿದ್ದಾರೆ. ಬಳ್ಳಾರಿಯಲ್ಲಿ ಅತಿ ಹೆಚ್ಚು ಲೀಡ್ ಕೊಟ್ಟವರಿಗೆ ಸಚಿವ ಸ್ಥಾನ ಅಂತ ಮಾಜಿ ಸಿಎಂ ಸಿದ್ದರಾಮಯ್ಯ ಕೊಟ್ಟ ಟಾರ್ಗೆಟ್ ಪ್ರತಿಫಲವೇನೋ ಎಂಬಂತೆ ಕಾಂಗ್ರೆಸ್ ಶಾಸಕರು ಪ್ರತಿನಿಧಿಸೋ ಕ್ಷೇತ್ರಗಳಲ್ಲಿ ಉಗ್ರಪ್ಪ ಅವರಿಗೆ ಭಾರೀ ಮುನ್ನಡೆ ಸಿಕ್ಕಿದೆ. ಬಿಜೆಪಿ ಶಾಸಕರು ಪ್ರತಿನಿಧಿಸೋ ಕ್ಷೇತ್ರಗಳಲ್ಲಿಯೂ ಜೆ. ಶಾಂತಾ ಮಕಾಡೆ ಮಲಗಿದ್ದಾರೆ.
Advertisement
ಯಾರಿಗೆ ಎಷ್ಟು ಮತ?
ವಿ ಎಸ್ ಉಗ್ರಪ್ಪ – ಕಾಂಗ್ರೆಸ್+ಜೆಡಿಎಸ್ – 6,28,365 ಮತ
ಜೆ ಶಾಂತಾ – ಬಿಜೆಪಿ – 3,85,204 ಮತ
ಗೆಲುವಿನ ಅಂತರ – 2,43,161 ಮತ
Advertisement
ರಾಮುಲು ಕೋಟೆ ಛಿದ್ರಕ್ಕೆ ಕಾರಣವೇನು?
ಕಾಂಗ್ರೆಸ್ ಹೊರಗಿನ ಅಭ್ಯರ್ಥಿ ಕಣಕ್ಕಿಳಿಸಿ, ಶಾಸಕರಲ್ಲಿ ಒಗ್ಗಟ್ಟು ಮೂಡಿಸಿ ಬಳ್ಳಾರಿ ಚುನಾವಣಾ ಉಸ್ತುವಾರಿಯಾಗಿ ಡಿ.ಕೆ.ಶಿವಕುಮಾರ್ ನೇಮಕ ಮಾಡಿದ್ದು ಕೆಲಸ ಮಾಡಿದೆ. ರಾಮುಲು ಜಾತಿ ಕಾರ್ಡ್ಗೆ ಡಿಕೆಶಿ `ಸೈಲೆಂಟ್’ ಅಸ್ತ್ರ ಪ್ರಯೋಗಿಸಿ ಜನರ ಮನಗೆಲ್ಲುವಲ್ಲಿ ಯಶಸ್ವಿಯಾದರು. ಪಬ್ಲಿಕ್ ಟಿವಿ ಸಂದರ್ಶನದಲ್ಲಿ ಜನಾರ್ದನ ರೆಡ್ಡಿ, ಸಿದ್ದುಗೆ ಪುತ್ರಶೋಕಕ್ಕೆ ಕಾರಣ ಶಾಪ ಎಂದಿದ್ದ ಹೇಳಿಕೆಯನ್ನು ಕಾಂಗ್ರೆಸ್ ಅಸ್ತ್ರ ಮಾಡಿಕೊಂಡಿತು.
ಶಿವಮೊಗ್ಗ ಕ್ಷೇತ್ರಕ್ಕಾಗಿ ಬಳ್ಳಾರಿಯನ್ನು ಯಡಿಯೂರಪ್ಪ ಮರೆತಿದ್ದ ಕಾರಣ ಶ್ರೀರಾಮುಲು ಬಳ್ಳಾರಿಯಲ್ಲಿ ಏಕಾಂಗಿಯಾಗಿ ಹೋರಾಟ ಮಾಡಬೇಕಾಯಿತು. ಕಾಂಗ್ರೆಸ್ ವಿರುದ್ಧ ರಾಮುಲು ಜಾತಿ ಅಸ್ತ್ರ ತಿರುಗುಬಾಣವಾಗಿ ಕುರುಬರ ಮತಗಳು ಕಾಂಗ್ರೆಸ್ ಪಾಲಾಯಿತು. ಇದರ ಜೊತೆಗೆ ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆಶಿ ಲಿಂಗಾಯತ ಧರ್ಮ ವಿಭಜನೆಗೆ ಕೈ ಹಾಕಿ ನಾವು ತಪ್ಪು ಮಾಡಿದ್ದೇವೆ ನಮ್ಮನ್ನು ಕ್ಷಮಿಸಿ ಎಂದಿದ್ದರಿಂದ ಲಿಂಗಾಯತರು ಕಾಂಗ್ರೆಸ್ ಬೆಂಬಲಿಸಿದ ಪರಿಣಾಮ ಬಳ್ಳಾರಿಯಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ.
ಬಿಜೆಪಿಗೆ `ಸಿಹಿ’ಮೊಗ್ಗ:
ಪಂಚ ಕ್ಷೇತ್ರಗಳ ಪೈಕಿ ಕಮಲಕ್ಕೆ ದಕ್ಕಿದ್ದು ಬಿಎಸ್ವೈ ಕೋಟೆ ಶಿವಮೊಗ್ಗ ಮಾತ್ರ. ಪ್ರತಿಷ್ಠಿತ ಕ್ಷೇತ್ರ ಶಿವಮೊಗ್ಗ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿವೈ ರಾಘವೇಂದ್ರ ದೋಸ್ತಿ ಅಭ್ಯರ್ಥಿ ವಿರುದ್ಧ ಗೆಲುವು ಸಾಧಿಸಿದ್ದಾರೆ. ಪರಿಣಾಮ, ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಪುತ್ರ ಮಧು ಬಂಗಾರಪ್ಪ ವಿರುದ್ಧ 52 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.
ಆರಂಭಿಕ ಸುತ್ತುಗಳಲ್ಲಿ ಒಂದು ಕ್ಷಣ ರಾಘವೇಂದ್ರ ಕೈ ಮೇಲಾದ್ರೆ, ಮತ್ತೊಂದು ಕ್ಷಣ ಮಧು ಬಂಗಾರಪ್ಪ ಕೈಮೇಲಾಗುತಿತ್ತು. ಆದರೆ ನಂತರ ಮಧು ಬಂಗಾರಪ್ಪ ವಿರುದ್ಧ ಬಿ.ವೈ ರಾಘವೇಂದ್ರ ಸಂಪೂರ್ಣ ಮೇಲುಗೈ ಸಾಧಿಸಿದರು. ಈಶ್ವರಪ್ಪ, ಯಡಿಯೂರಪ್ಪ ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಬಿಜೆಪಿಗೆ ಭಾರೀ ಮುನ್ನಡೆ ಸಿಗದಿದ್ದರೆ ರಾಘವೇಂದ್ರ ಗೆಲುವಿನ ಹಾದಿ ಕಷ್ಟವಾಗುತ್ತಿತ್ತು. ರಾಘವೇಂದ್ರಗೆ ಪ್ರಬಲ ಪೈಪೋಟಿ ನೀಡಿದ ಮಧು ಬಂಗಾರಪ್ಪ, ಭದ್ರಾವತಿ, ಸೊರಬ, ಸಾಗರದಲ್ಲಿ ಮುನ್ನಡೆ ಸಾಧಿಸಿದ್ರು. ಬಿಜೆಪಿ ಸಂಭ್ರಮ ಮೇರೆ ಮೀರಿತ್ತು. ಸ್ವತಃ ರಾಘವೇಂದ್ರ ಟಗರು ಹಾಡಿಗೆ ಸ್ಟೆಪ್ಸ್ ಹಾಕಿದ್ರು. ಅಂದಹಾಗೇ, ಈ ಚುನಾವಣೆಯಲ್ಲಿ ಈಡಿಗರು ಮಧು ಪರ ಒಟ್ಟಾಗಿ ನಿಂತಿರೋದು ಕಂಡು ಬರುತ್ತೆ. ಬಿಎಸ್ವೈಗೆ ಈ ಫಲಿತಾಂಶ ಎಚ್ಚರಿಕೆಯ ಗಂಟೆ ಎನ್ನಬಹುದು.
ಯಾರಿಗೆ ಎಷ್ಟು ಮತ?
ಬಿ.ವೈ.ರಾಘವೇಂದ್ರ : ಬಿಜೆಪಿ – 5,43,306 ಮತ
ಮಧು ಬಂಗಾರಪ್ಪ : ಜೆಡಿಎಸ್+ಕಾಂಗ್ರೆಸ್ – 4,91,158 ಮತ
ಗೆಲುವಿನ ಅಂತರ : 52,148 ಮತಗಳು
ಮೈತ್ರಿಗೆ `ಸಕ್ಕರೆ’:
ಪುಟ್ಟರಾಜು ರಾಜೀನಾಮೆಯಿಂದ ತೆರವಾಗಿದ್ದ ಮಂಡ್ಯದಲ್ಲಿ ಜೆಡಿಎಸ್ ಭರ್ಜರಿ ಜಯಗಳಿದೆ. ಮೈತ್ರಿಕೂಟದ ಅಭ್ಯರ್ಥಿಯಾದ ಜೆಡಿಎಸ್ನ ಎಲ್ಆರ್ ಶಿವರಾಮೇಗೌಡ ದಾಖಲೆಯ ಮತಗಳ ಅಂತರದಿಂದ ಎದುರಾಳಿ ಬಿಜೆಪಿಯ ಡಾ.ಸಿದ್ದರಾಮಯ್ಯ ವಿರುದ್ಧ ಗೆಲುವು ಸಾಧಿಸಿದ್ದಾರೆ. ಮಂಡ್ಯ ಕಾಂಗ್ರೆಸ್ ನಾಯಕರ ಅಸಹಕಾರದ ನಡುವೆಯೂ ಶಿವರಾಮೇಗೌಡ ಗೆಲುವಿಯಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಕಾಂಗ್ರೆಸ್ ನಿರ್ವಾತದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸಕ್ಕರೆ ನಾಡಲ್ಲಿ ಉತ್ತಮ ಸಾಧನೆ ತೋರಿದೆ. ಫಸ್ಟ್ ಟೈಂ ಕೇಸರಿ ಪಡೆಯ ಅಭ್ಯರ್ಥಿ 2 ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ. ಈ ಬೆಳವಣಿಗೆ ಬಿಜೆಪಿಗೆ ಸೋಲಿನಲ್ಲೂ ಖುಷಿ ತಂದಿದೆ. ಮಂಡ್ಯದಲ್ಲಿ ನೋಟಾ 15 ಸಾವಿರಕ್ಕೂ ಹೆಚ್ಚು ಮತ ಪಡೆದು ನಾಲ್ಕನೇ ಸ್ಥಾನ ಪಡೆದಿದೆ.
ಯಾರಿಗೆ ಎಷ್ಟು ಮತ?
ಎಲ್.ಆರ್.ಶಿವರಾಮೇಗೌಡ – ಜೆಡಿಎಸ್+ಕಾಂಗ್ರೆಸ್ – 5,69,347
ಡಾ. ಸಿದ್ದರಾಮಯ್ಯ – ಬಿಜೆಪಿ – 2,44,404
ಗೆಲುವಿನ ಅಂತರ – 3,24,943 ಮತಗಳು
ರಾಮನಗರದಲ್ಲಿ ಗೆದ್ದ `ಸೀತೆ’:
ಸಂಪೂರ್ಣ ಒನ್ ಸೈಡೆಡ್ ಆಗಿದ್ದ ರಾಮನಗರ ಕ್ಷೇತ್ರದಲ್ಲಿ ನಿರೀಕ್ಷೆಯಂತೆಯೇ ಸಿಎಂ ಕುಮಾರಸ್ವಾಮಿ ಪತ್ನಿ ಅನಿತಾ ಕುಮಾರಸ್ವಾಮಿ ಭರ್ಜರಿ ಗೆಲುವು ಸಾಧಿಸಿ ದಾಖಲೆ ಬರೆದಿದ್ದಾರೆ. ಗೆಲುವಿನ ಅಂತರದಲ್ಲಿ ಪತಿ ಕುಮಾರಸ್ವಾಮಿಯವರನ್ನು ಮೀರಿಸಿರೋ ಅನಿತಾ ಕುಮಾರಸ್ವಾಮಿ, ವಿಧಾನಸಭೆಗೆ ಎರಡನೇ ಬಾರಿಗೆ ಎಂಟ್ರಿ ಕೊಟ್ಟಿದ್ದಾರೆ. ಈ ಮೂಲಕ ಪತಿ ಮುಖ್ಯಮಂತ್ರಿಯಾಗಿರುವಾಗಲೇ ವಿಧಾನಸಭೆಗೆ ಎಂಟ್ರಿ ಕೊಡ್ತಿರೋ ಮೊದಲ ಮಹಿಳೆ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.
ಈ ದಾಖಲೆಯ ಜೊತೆಗೆ ಅನಿತಾ ಕುಮಾರಸ್ವಾಮಿ, ರಾಮನಗರದಿಂದ ಆಯ್ಕೆಯಾದ ಮೊದಲ ಮಹಿಳಾ ಶಾಸಕಿಯೂ ಹೌದು. ಚುನಾವಣೆಗೆ ಎರಡು ದಿನ ಇರುವಾಗ ಕಣದಿಂದ ಹಿಂದೆ ಸರಿದ ಬಿಜೆಪಿ ಅಭ್ಯರ್ಥಿ ಚಂದ್ರಶೇಖರ್ ಜೆಡಿಎಸ್ಗೆ ಬೆಂಬಲ ಘೋಷಿಸಿದ್ರು. ಪರಿಣಾಮ ಬಿಜೆಪಿ ಠೇವಣಿಯೂ ಸಿಗಲಿಲ್ಲ. ಅನಿತಾ ಕುಮಾರಸ್ವಾಮಿ ಸುಲಭ ಗೆಲುವು ಕಂಡಿದ್ದಾರೆ. ಇದರೊಂದಿಗೆ ಆರನೇ ಬಾರಿಗೆ ರಾಮನಗರ ಕ್ಷೇತ್ರವನ್ನು ಜೆಡಿಎಸ್ ತನ್ನ ತೆಕ್ಕೆಯಲ್ಲೇ ಉಳಿಸಿಕೊಂಡಿತು. ವಿಶೇಷ ಅಂದ್ರೆ ಮತ ಎಣಿಕೆಗೆ ಮೊದಲೇ ಅನಿತಾ ಕುಮಾರಸ್ವಾಮಿಗೆ ಶುಭಾಶಯ ಕೋರುವ ಬ್ಯಾನರ್ ರಾಮನಗರದಲ್ಲಿ ರಾರಾಜಿಸುತ್ತಿದ್ದವು.
ಯಾರಿಗೆ ಎಷ್ಟು ಮತ?
ಅನಿತಾ ಕುಮಾರಸ್ವಾಮಿ – ಜೆಡಿಎಸ್+ಕಾಂಗ್ರೆಸ್ – 1,25,043 ಮತ
ಬಿಜೆಪಿ ಅಭ್ಯರ್ಥಿ – 15,906 ಮತ
ಗೆಲುವಿನ ಅಂತರ – 1,09,137 ಮತ
`ಕೈ’ಗೆ ಜಮಖಂಡಿ ಬಂಡಿ:
ಜಮಖಂಡಿ ಜಂಗೀ ಕುಸ್ತಿಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ತಂದೆಯ ಅಕಾಲಿಕ ಸಾವಿನ ಅನುಕಂಪದ ಅಲೆಯಲ್ಲಿ ತೇಲಿದ ಕಾಂಗ್ರೆಸ್ನ ಆನಂದ್ ನ್ಯಾಮಗೌಡ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಒಗ್ಗಟ್ಟಿನ ಹೊರತಾಗಿಯೂ ಶ್ರೀಕಾಂತ್ ಕುಲಕರ್ಣಿ ಮತ್ತೆ ಹೀನಾಯ ಸೋಲು ಕಂಡಿದ್ದಾರೆ.
ಜಮಖಂಡಿ ಕ್ಷೇತ್ರದ ಉಪ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಅಲ್ಲೇ ಠಿಕಾಣಿ ಹೂಡಿ ಪ್ರಚಾರ ನಡೆಸಿದ್ರು. ಪರಿಣಾಮ ಜಮಖಂಡಿಯಲ್ಲಿ ಹಿಂದೆಂದೂ ಪಡೆಯದಷ್ಟು ಮತಗಳನ್ನ ಈ ಬಾರಿ ಕಾಂಗ್ರೆಸ್ ಪಡೆದುಕೊಂಡು ಗೆಲುವಿನ ನಗಾರಿ ಬಾರಿಸಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಮುಗಿಲುಮುಟ್ಟಿದೆ.
ಯಾರಿಗೆ ಎಷ್ಟು ಮತ?
ಆನಂದ ಸಿದ್ದು ನ್ಯಾಮಗೌಡ – ಕಾಂಗ್ರೆಸ್ – 97,017
ಶ್ರೀಕಾಂತ್ ಕುಲಕರ್ಣಿ – ಬಿಜೆಪಿ – 57,537
ಗೆಲುವಿನ ಅಂತರ – 39,480 ಮತಗಳು
ಉಪ ಫಲಿತಾಂಶ ಎಫೆಕ್ಟ್ ಏನು?
ಲೋಕಸಭೆ ಚುನಾವಣೆಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಗಟ್ಟಿಯಾಗಿದ್ದು, ಕಾಂಗ್ರೆಸ್+ಜೆಡಿಎಸ್ ಮೈತ್ರಿಯಿಂದ ಬಿಜೆಪಿಗೆ ಭಾರೀ ಪೆಟ್ಟು ಬಿದ್ದಿದೆ. ಮೈತ್ರಿ ಫಲಿಸಿದ ಬೆನಲ್ಲೇ ರಾಷ್ಟ್ರಮಟ್ಟದಲ್ಲಿ ಮೋದಿ ವಿರೋಧಿ ಶಕ್ತಿಗಳ ಒಗ್ಗೂಡಬಹುದು. ಒಂದು ವೇಳೆ ಎಲ್ಲವೂ ಯಶಸ್ವಿಯಾದಲ್ಲಿ ಬಿಜೆಪಿಗಿಂತಲೂ ದೋಸ್ತಿಗಳು ಹೆಚ್ಚು ಸ್ಥಾನ ಗಳಿಸುವ ಸಾಧ್ಯತೆಯಿದೆ.
ಮೋದಿ, ಅಮಿತ್ ಷಾಗೆ ಉಪ ಫಲಿತಾಂಶ ಎಚ್ಚರಿಕೆ ಗಂಟೆಯಾಗಿದ್ದು, ಸರ್ಕಾರ ಅಸ್ಥಿರಗೊಳಿಸುವ ಬಿಎಸ್ವೈ ಪ್ರಯತ್ನ ನಿಲ್ಲಬಹುದು. ಅಷ್ಟೇ ಅಲ್ಲದೇ ಲೋಕಸಭೆ ಚುನಾವಣೆ ತನಕ ಮೈತ್ರಿ ಸರ್ಕಾರ ಫುಲ್ ಸೇಫ್ ಆಗಿರಲಿದೆ. ಅತೃಪ್ತ ಶಾಸಕರು ಫುಲ್ ಸೈಲೆಂಟ್ ಆಗುವ ಸಾಧ್ಯತೆ ಹೆಚ್ಚು. ಕಾಂಗ್ರೆಸ್ನಲ್ಲಿ ಸಚಿವ ಡಿಕೆಶಿ ಪಾರುಪತ್ಯ ಹೆಚ್ಚಾದರೆ ಬಿಜೆಪಿಯಲ್ಲಿ ಶಾಸಕ ಶ್ರೀರಾಮುಲು ಅಬ್ಬರ ಕಡಿಮೆಯಾಗಲಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv