ನವದೆಹಲಿ: ಅನರ್ಹ ಶಾಸಕರಿಗಾಗಿ ಉಪಚುನಾವಣೆಯನ್ನು ಮುಂದೂಡಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
ತೀರ್ಪು ವಿಳಂಬ ಹಿನ್ನೆಲೆಯಲ್ಲಿ ಅನರ್ಹ ಶಾಸಕರ ಪರವಾಗಿ ವಕೀಲ ಮುಕುಲ್ ರೊಹ್ಟಗಿ ಚುನಾವಣೆ ಮುಂದೂಡುವಂತೆ ಸುಪ್ರೀಂಕೋರ್ಟ್ ನ ನ್ಯಾ.ಎನ್.ವಿ.ರಮಣ ಪೀಠದ ಮುಂದೆ ಮನವಿ ಸಲ್ಲಿಸಿದರು. ಮನವಿ ಆಲಿಸಿದ ನ್ಯಾಯಾಧೀಶರು ಚುನಾವಣೆ ಮುಂದೂಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು. ಸೋಮವಾರದಿಂದ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಅನರ್ಹ ಶಾಸಕರು ಪ್ರಕರಣದ ತೀರ್ಪು ಬರಬೇಕಿದೆ. ಹಾಗಾಗಿ ಚುನಾವಣೆ ಮುಂದೂಡುವಂತೆ ಮನವಿ ಮಾಡಿಕೊಂಡಿದ್ದರು.
ಅನರ್ಹ ಶಾಸಕರಿಗಾಗಿ ಚುನಾವಣೆ ಮುಂದೂಡಲು ಸಾಧ್ಯವಿಲ್ಲ. ನಿಮ್ಮ ಅರ್ಜಿಯನ್ನು ಸಲ್ಲಿಸಿ, ಬುಧವಾರ ಪರಿಶೀಲನೆ ಮಾಡುತ್ತೇವೆ ಎಂದು ಸೂಚಿಸಿದರು. ನ್ಯಾಯಾಧೀಶರ ಸೂಚನೆಯಂತೆ ಮುಕುಲ್ ರೊಹ್ಟಗಿ ಅರ್ಜಿ ಸಲ್ಲಿಕೆ ಮಾಡಿದ್ದಾರೆ.
ಸೋಮವಾರ ಮತ್ತು ಮಂಗಳವಾರ ಸರ್ಕಾರಿ ರಜೆ ಹಿನ್ನೆಲೆ ಬುಧವಾರ ಅಥಾವ ಗುರುವಾರ ತೀರ್ಪು ಪ್ರಕಟ ಆಗುವ ಸಾಧ್ಯತೆ ಇದೆ. ಆದರೆ ಅಷ್ಟರೊಳಗೆ ಚುನಾವಣೆ ಪ್ರಕ್ರಿಯೆ ಆರಂಭವಾಗುವ ಹಿನ್ನೆಲೆ ಅನರ್ಹ ಶಾಸಕರು ಮತ್ತೆ ಚುನಾವಣೆ ಸಂಕಷ್ಟಕ್ಕೆ ಸಿಲುಕಿದ್ದಾರೆ.