– ಹಳ್ಳಿಹಕ್ಕಿಗೆ ಶಾಕ್, ನಿಟ್ಟುಸಿರು ಬಿಟ್ಟ ರಿಜ್ವಾನ್ ಅರ್ಷದ್
– ಅರ್ಹತಾ ಪರೀಕ್ಷೆಯಲ್ಲಿ ಪಾಸಾದ ಶಾಸಕರು
– ಹೊಸಕೋಟೆಯಲ್ಲಿ ಗೆದ್ದ ಸ್ವಾಭಿಮಾನದ ಮಂತ್ರ
ಬೆಂಗಳೂರು: ಸಿಎಂ ಬಿ.ಎಸ್.ಯಡಿಯೂರಪ್ಪ ಉಪ ಚುನಾವಣೆಯ ಅಗ್ನಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಸರ್ಕಾರವನ್ನು ಭದ್ರ ಮಾಡಿಕೊಂಡಿದ್ದಾರೆ. ಮೈತ್ರಿ ಸರ್ಕಾರ ಬೀಳಿಸಿದವರನ್ನು ಚುನಾವಣೆಯಲ್ಲಿ ಸೋಲಿಸಬೇಕೆಂದು ಪಣ ತೊಟ್ಟಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಮುಖಭಂಗವಾಗಿದೆ. ಜೆಡಿಎಸ್ ತೆಕ್ಕೆಯಲ್ಲಿದ್ದ ಹುಣಸೂರನ್ನು ಕೈ ವಶ ಮಾಡಿಕೊಂಡಿದೆ. ಇತ್ತ ಶಿವಾಜಿ ನಗರದಲ್ಲಿ ಗೆಲುವು ದಾಖಲಿಸಿ ಕ್ಷೇತ್ರವನ್ನು ಉಳಿಸಿಕೊಂಡಿದೆ. ಇತ್ತ ಜೆಡಿಎಸ್ ಖಾತೆ ತರೆಯದೇ ತೀವ್ರ ಹಿನ್ನಡೆಯನ್ನು ಅನುಭವಿಸಿದೆ. ಮೊದಲ ಬಾರಿಗೆ ಜೆಡಿಎಸ್ ಕೋಟೆಯಲ್ಲಿ ಕಮಲದ ಬಾವುಟ ಹಾರಿಸಿ ಬಿಜೆಪಿ ಇತಿಹಾಸ ಸೃಷ್ಟಿಸಿದೆ. ಇದನ್ನೂ ಓದಿ: 43 ರೋಡ್ ಶೋ, 10 ಬೈಕ್ ರ‍್ಯಾಲಿ – ತವರಿನಲ್ಲಿ ಅಪ್ಪನ ಕೈಲಾಗದ್ದು ಮಗನಿಗೆ ಸಾಧ್ಯವಾಗಿದ್ದು ಹೇಗೆ?
15 ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ 12 ಬಿಜೆಪಿ, 2 ಕಾಂಗ್ರೆಸ್ ಮತ್ತು ಪಕ್ಷೇತರ ಅಭ್ಯರ್ಥಿ ಒಂದು ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದಾರೆ. ತನ್ನ ಮೂರು ಕ್ಷೇತ್ರಗಳನ್ನು ಉಳಿಸಿಕೊಳ್ಳಲು ಜೆಡಿಎಸ್ ವಿಫಲವಾಗಿದೆ ಕಾಂಗ್ರೆಸ್ 13ರಲ್ಲಿ 2 ಮಾತ್ರ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಇದನ್ನೂ ಓದಿ: ಸಿದ್ದು ಅಭಿಮಾನಿಗಳಿಗೆ ಹುಲಿಯಾ, ಮತದಾರರ ದೃಷ್ಟಿಯಲ್ಲಿ ಇಲಿಯಾ : ಸಿಟಿ ರವಿ
Advertisement
Advertisement
ಸಿದ್ದರಾಮಯ್ಯನವರ ಏಕಾಂಗಿ ಪ್ರಚಾರ ಮತ್ತು ತಂತ್ರಗಳು ಬುಡಮೇಲಾಗಿದ್ದು, ಬಿಜೆಪಿ ರಾಜಕೀಯ ಲೆಕ್ಕಾಚಾರಗಳು ಕೆಲಸ ಮಾಡಿವೆ. ಕೆ.ಆರ್.ಪೇಟೆ ಮತ್ತು ಯಶವಂತಪುರದಲ್ಲಿ ಬಿಜೆಪಿಗೆ ತೀವ್ರ ಸ್ಪರ್ಧೆ ನೀಡಿದ್ದ ಜೆಡಿಎಸ್ ಕೊನೆಯ ಹಂತದಲ್ಲಿ ಕೈ ಚೆಲ್ಲಿತು. ಶಿವಾಜಿ ನಗರದಲ್ಲಿ ಬಿಜೆಪಿಯ ಸರವಣರನ್ನು ಕಟ್ಟಿ ಹಾಕಿ ರಿಜ್ವಾನ್ ಅರ್ಷದ್ ನಿಟ್ಟುಸಿರು ಬಿಟ್ಟಿದ್ದಾರೆ. ಹುಣಸೂರಿನಲ್ಲಿ ಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದ ಹೆಚ್.ವಿಶ್ವನಾಥ್ ಅವರಿಗೆ ಮತದಾರರು ಶಾಕ್ ನೀಡಿದ್ದು, ಕೈ ಅಭ್ಯರ್ಥಿ ಮಂಜುನಾಥ್ ಅವರನ್ನು ಗೆಲ್ಲಿಸಿದ್ದಾರೆ. ಇದನ್ನೂ ಓದಿ: ಸಿಎಲ್‍ಪಿ ನಾಯಕನ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ
Advertisement
ಹೊಸಕೋಟೆಯಲ್ಲಿ ಬಿಜೆಪಿಯಿಂದ ಹೊರ ಬಂದಿದ್ದ ಶರತ್ ಬಚ್ಚೇಗೌಡ ಗೆಲುವಿನ ಮಾಲೆ ಧರಿಸಿದ್ದಾರೆ. ತಮ್ಮ ಪ್ರಚಾರದುದ್ದಕ್ಕೂ ಸ್ವಾಭಿಮಾನ ಮಂತ್ರವನ್ನೇ ಶರತ್ ಬಚ್ಚೇಗೌಡರು ಜಪಿಸಿದ್ದರು. ನಾನೇ ಗೆಲ್ಲೋದು ಎಂದು ಹೇಳುತ್ತಿದ್ದ ಬಿಜೆಪಿ ಅಭ್ಯರ್ಥಿ ಎಂಟಿಬಿ ನಾಗರಾಜ್ ಅನರ್ಹರಾಗಿಯೇ ಉಳಿದುಕೊಂಡಿದ್ದಾರೆ. ಕಾಂಗ್ರೆಸ್ ನಿಂದ ಕಣಕ್ಕಿಳಿದಿದ್ದ ಶಾಸಕ ಬೈರತಿ ಸುರೇಶ್ ಪತ್ನಿ ಪದ್ಮಾವತಿ ಸುರೇಶ್ ಮೂರನೇ ಸ್ಥಾನ ತಲುಪಿದ್ದಾರೆ. ಇದನ್ನೂ ಓದಿ: ‘ಪವಿತ್ರ’ ಮತ್ತು ‘ಸುಭದ್ರ’ ಸರ್ಕಾರಕ್ಕೆ ಮುದ್ರೆ ಒತ್ತಿದ್ದಕ್ಕೆ ಅಭಿನಂದನೆಗಳು- ಹೆಚ್‍ಡಿಕೆ ಲೇವಡಿ
Advertisement
ಲೋಕಸಭಾ ಚುನಾವಣೆಯಲ್ಲಿ ಎರಡು ಬಾರಿ ಬೆಂಗಳೂರು ಕೇಂದ್ರದಿಂದ ಸ್ಪರ್ಧಿಸಿ ಸೋಲು ಕಂಡಿದ್ದ ರಿಜ್ವಾನ್ ಅರ್ಷದ್ ಅವರನ್ನು ಕಾಂಗ್ರೆಸ್ ಶಿವಾಜಿ ನಗರದಿಂದ ಕಣಕ್ಕಿಳಿಸಿತ್ತು. ಹಲವರ ವಿರೋಧದ ನಡುವೆಯೂ ಟಿಕೆಟ್ ಪಡೆದಿದ್ದ ರಿಜ್ವಾನ್ ಅರ್ಷದ್ ಅವರಿಗೆ ಉಪ ಚುನಾವಣೆಯ ಗೆಲುವು ರಾಜಕೀಯ ಅಸ್ತಿತ್ವದ ಪ್ರಶ್ನೆಯಾಗಿತ್ತು. ಮಾಜಿ ಸಚಿವ ರೋಷನ್ ಬೇಗ್ ಕಾಂಗ್ರೆಸ್ ಕಾರ್ಪೋರೇಟರ್ ಗಳನ್ನು ಬಿಜೆಪಿಯತ್ತ ಸೆಳೆದು, ರಿಜ್ವಾನ್ ಅರ್ಷದ್ ಗೆ ಶಾಕ್ ನೀಡಿದ್ದರು. ಶಿವಾಜಿನಗರದ ಉಪಚುನಾವಣೆಯಲ್ಲಿ ಗೆಲ್ಲುವ ಮೂಲಕ ರಿಜ್ವಾನ್ ಅರ್ಷದ್ ದೀರ್ಘವಾದ ಉಸಿರು ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ರಾಜೀನಾಮೆ
15ರಲ್ಲಿ 12 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಜೆಡಿಎಸ್ ಉಪ ಚುನಾವಣೆಯಲ್ಲಿ ಶೂನ್ಯ ಸುತ್ತಿದೆ. ಹೊಸಕೋಟೆಯಲ್ಲಿ ಪಕ್ಷೇತರ ಅಭ್ಯರ್ಥಿಗೆ ಶರತ್ ಬಚ್ಚೇಗೌಡರಿಗೆ ಜೆಡಿಎಸ್ ಬೆಂಬಲ ನೀಡಿ ಯಾರನ್ನು ಕಣಕ್ಕಿಳಿಸಿರಲಿಲ್ಲ. ಅಥಣಿ ಮತ್ತು ಹಿರೇಕೆರೂರು ಕ್ಷೇತ್ರಗಳಲ್ಲಿ ಜೆಡಿಎಸ್ ಅಭ್ಯರ್ಥಿಗಳು ಕೊನೆ ಕ್ಷಣದಲ್ಲಿ ನಾಮಪತ್ರ ಹಿಂಪಡೆದುಕೊಂಡಿದ್ದರು. ಚಿಕ್ಕಬಳ್ಳಾಪುರ, ಯಶವಂತಪುರ, ಮಹಾಲಕ್ಷ್ಮಿ ಲೇಔಟ್, ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ಭರ್ಜರಿ ಪ್ರಚಾರ ನಡೆಸಿತ್ತು. ಇದನ್ನೂ ಓದಿ: ಅಗ್ನಿ ಪರೀಕ್ಷೆಯಲ್ಲಿ ಬಿಎಸ್‍ವೈ ಪಾಸ್ – ಯಾವ ಕ್ಷೇತ್ರದಲ್ಲಿ ಎಷ್ಟು ವೋಟ್ ಬಿದ್ದಿದೆ? ಅಂತರ ಎಷ್ಟು ಹೆಚ್ಚಾಗಿದೆ?
ಉಪಚುನಾವಣೆಯಲ್ಲಿ ಗೆದ್ದು ಬೀಗಿದ ಅಭ್ಯರ್ಥಿಗಳು
1. ಯಶವಂತಪುರ- ಎಸ್.ಟಿ.ಸೋಮಶೇಖರ್ (ಬಿಜೆಪಿ)
2. ಮಹಾಲಕ್ಷ್ಮಿ ಲೇಔಟ್- ಕೆ.ಗೋಪಾಲಯ್ಯ (ಬಿಜೆಪಿ)
3. ಕೆ.ಆರ್.ಪುರಂ- ಬೈರತಿ ಬಸವರಾಜು (ಬಿಜೆಪಿ)
4. ಶಿವಾಜಿ ನಗರ- ರಿಜ್ವಾನ್ ಅರ್ಷದ್ (ಕಾಂಗ್ರೆಸ್)
5. ಹೊಸಕೋಟೆ- ಶರತ್ ಬಚ್ಚೇಗೌಡ (ಪಕ್ಷೇತರ)
6. ಚಿಕ್ಕಬಳ್ಳಾಪುರ – ಸುಧಾಕರ್ ಕೆ. (ಬಿಜೆಪಿ)
7. ಕೆ.ಆರ್.ಪೇಟೆ – ನಾರಾಯಣ ಗೌಡ (ಬಿಜೆಪಿ)
8. ಹುಣಸೂರು – ಹೆಚ್.ಪಿ.ಮಂಜುನಾಥ್ (ಕಾಂಗ್ರೆಸ್)
9. ಹಿರೇಕೆರೂರು- ಬಿ.ಸಿ.ಪಾಟೀಲ್ (ಬಿಜೆಪಿ)
10. ರಾಣೇಬೆನ್ನೂರು – ಅರುಣ್ ಕುಮಾರ್ (ಬಿಜೆಪಿ)
11. ಕಾಗವಾಡ – ಶ್ರೀಮಂತ್ ಪಾಟೀಲ್ (ಬಿಜೆಪಿ)
12. ಅಥಣಿ- ಮಹೇಶ್ ಕುಮಟಳ್ಳಿ (ಬಿಜೆಪಿ)
13. ಗೋಕಾಕ್ – ರಮೇಶ್ ಜಾರಕಿಹೊಳಿ (ಬಿಜೆಪಿ)
14. ವಿಜಯನಗರ – ಆನಂದ್ ಸಿಂಗ್ (ಬಿಜೆಪಿ)
15. ಯಲ್ಲಾಪುರ – ಶಿವರಾಂ ಹೆಬ್ಬಾರ್ (ಬಿಜೆಪಿ)