ಮೈಸೂರು: ಹುಣಸೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧಗೊಂಡಿದ್ದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕನಸು ಭಗ್ನಗೊಂಡಿದೆ. ಉಪಚುನಾವಣೆಯಲ್ಲಿ ನನಗೆ ಬಿಜೆಪಿಯಿಂದ ಟಿಕೆಟ್ ಸಿಗಲಿದೆ ಎಂಬ ವಿಶ್ವಾಸದಿಂದ ಸಿ.ಪಿ.ಯೋಗೇಶ್ವರ್ ತಯಾರಿ ಮಾಡಿಕೊಂಡಿದ್ದರು.
ಸುಪ್ರೀಂಕೋರ್ಟ್ ಅನರ್ಹ ಶಾಸಕರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಗ್ರೀನ್ ಸಿಗ್ನಲ್ ನೀಡುತ್ತಿದ್ದಂತೆ ಎಲ್ಲರೂ ಗುರುವಾರ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ಬಿಜೆಪಿ ಸಹ ಎರಡು ಕ್ಷೇತ್ರಗಳನ್ನು ಹೊರತುಪಡಿಸಿ 13 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಹುಣಸೂರಿನಿಂದ ಹೆಚ್.ವಿಶ್ವನಾಥ್ ಸ್ಪರ್ಧೆ ಮಾಡೋದು ಖಚಿತವಾಗಿದೆ. ಇತ್ತ ಹೆಚ್.ವಿಶ್ವನಾಥ್ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಯೋಗೇಶ್ವರ್ ಅವರಿಗೆ ನಿರಾಸೆಯಾಗಿದೆ.
ಬಿಜೆಪಿಯಿಂದ ತಮಗೇ ಟಿಕೆಟ್ ಸಿಗುತ್ತೆ ಎಂಬ ಭರವಸೆಯಲ್ಲಿ ಒಳಗೊಳಗೇ ಸ್ಪರ್ಧೆಗೆ ಸಂಪೂರ್ಣ ಸಿದ್ಧತೆ ನಡೆಸಿಕೊಂಡಿದ್ದರು. ಮತದಾರರಿಗೆ ಹಂಚಲು 50 ಸಾವಿರಕ್ಕೂ ಹೆಚ್ಚು ಪಾಂಪ್ಲೆಟ್ಸ್ ಪ್ರಿಂಟ್ ಮಾಡಿಸಿದ್ದರು. ಪಾಂಪ್ಲೆಟ್‍ಗಳಲ್ಲಿ ಬಿಜೆಪಿಯ ರಾಜ್ಯ ನಾಯಕರ ಜೊತೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಫೋಟೋಗಳನ್ನು ಹಾಕಿಸಿದ್ದರು. ಹುಣಸೂರು ಕ್ಷೇತ್ರದ ಸ್ಥಳೀಯ ಮುಖಂಡರ ಜೊತೆ ನಿರಂತರ ಸಂಪರ್ಕದಲ್ಲಿದ್ದ ಸಿ.ಪಿ. ಯೋಗೇಶ್ವರ್, ಗುಟ್ಟಾಗಿ ಹಲವು ಸುತ್ತಿನ ಮಾತುಕತೆಯನ್ನೂ ನಡೆಸಿದ್ದರು ಎಂಬ ಮಾಹಿತಿಗಳು ಲಭ್ಯವಾಗಿವೆ.