ಬೈಎಲೆಕ್ಷನ್ ಡೇಟ್ ಮತ್ತೆ ಫಿಕ್ಸ್ – ಆಯೋಗದ ನಡೆಗೆ ಕಾಂಗ್ರೆಸ್, ಜೆಡಿಎಸ್ ಗರಂ

Public TV
2 Min Read
Election Congress JDS

ಬೆಂಗಳೂರು: ರಾಜಕೀಯ ಹೈಡ್ರಾಮಕ್ಕೆ ಕರ್ನಾಟಕ ಮತ್ತೆ ರೆಡಿಯಾಗಿದೆ. ಕರ್ನಾಟಕ ಬೈ ಎಲೆಕ್ಷನ್‍ಗೆ ಹೊಸ ಡೇಟ್ ಫಿಕ್ಸ್ ಆಗಿದೆ. ದೋಸ್ತಿ ಸರ್ಕಾರ ಪತನಕ್ಕೆ ಕಾರಣವಾಗಿ ಅನರ್ಹರಾಗಿ ಅತಂತ್ರರಾಗಿರೋ 15 ಕ್ಷೇತ್ರಗಳಿಗೆ ಎಲೆಕ್ಷನ್ ಮುಂದೂಡಿಕೆಯಾಗಿತ್ತು. 24 ಗಂಟೆ ಕಳೆಯುವ ಮುನ್ನವೇ ಹೊಸದೊಂದು ದಿನಾಂಕವನ್ನು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

ಉಪ ಚುನಾವಣೆಗೆ ದಿನಾಂಕ ನಿಗದಿ ಮಾಡಿದ ಚುನಾವಣೆ ಆಯೋಗ ಮೇಲೆ ಮಾಜಿ ಸಿಎಂ ಕುಮಾರಸ್ವಾಮಿ, ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯ ನಿರ್ವಹಿಸುವುದರ ಹಿಂದಿನ ಮರ್ಮವೇನು? ಇಂತಹ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ ಅಂತ ಮಾಜಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

election ink 2

ಇತ್ತ ಸಿದ್ದರಾಮಯ್ಯ ಕೂಡ ಆಕ್ರೋಶ ಹೊರಹಾಕಿದ್ದು, ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ ಎಂದಿದ್ದಾರೆ. ದಿಢೀರ್ ಅಂತ ಚುನಾವಣೆ ಘೋಷಣೆ ಮಾಡಿರೋದು ಯಾಕೆ, ಚುನಾವಣಾ ಆಯೋಗ ಅಣತಿಯಂತೆ ಕಾರ್ಯನಿರ್ವಹಿಸ್ತಿದೆ ಅಂತ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.

ಬೈ ಎಲೆಕ್ಷನ್ ಹೊಸ ಮುಹೂರ್ತ
* ನವೆಂಬರ್ 11 – ಅಧಿಸೂಚನೆ ಪ್ರಕಟ
* ನವೆಂಬರ್ 18 – ನಾಮಪತ್ರ ಸಲ್ಲಿಕೆಗೆ ಕೊನೆ ದಿನ
* ನವೆಂಬರ್ 19 – ನಾಮಪತ್ರಗಳ ಪರಿಶೀಲನೆ
* ನವೆಂಬರ್ 21 – ರಂದು ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ
* ಡಿಸೆಂಬರ್ 5 – ಮತದಾನ
* ಡಿಸೆಂಬರ್ 11 – ಚುನಾವಣಾ ಪ್ರಕ್ರಿಯೆ ಅಂತ್ಯ
ಚುನಾವಣೆ ಆಯೋಗ ಫಲಿತಾಂಶ ದಿನವನ್ನು ಪ್ರಕಟಿಸಿಲ್ಲ.

ಸಿದ್ದರಾಮಯ್ಯ ಟ್ವೀಟ್: ಕೇಂದ್ರ ಚುನಾವಣಾ ಆಯೋಗದ ಉದ್ದೇಶವೇ ಅರ್ಥವಾಗುತ್ತಿಲ್ಲ. ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದೆ. ಮೊದಲು ತರಾತುರಿಯಲ್ಲಿ ಚುನಾವಣೆ ಮುಂದೂಡಿ, ಮತ್ತೆ ದಿನಾಂಕ ಘೋಷಣೆ ಮಾಡಿರುವುದು ಅಚ್ಚರಿ ಮೂಡಿಸಿದೆ. ಚುನಾವಣೆ ಎದುರಿಸಲು ನಾವು ಸಿದ್ಧರಿದ್ದೇವೆ, ಆದರೆ ಆಯೋಗದ ನಡೆ ಮಾತ್ರ ಸಹಜವಾಗಿಯೇ ಅನುಮಾನ ಮೂಡುವಂತಿದೆ.

ಹೆಚ್.ಡಿ.ಕುಮಾರಸ್ವಾಮಿ ಟ್ವೀಟ್: ರಾಜ್ಯದ 15 ಕ್ಷೇತ್ರಗಳಿಗೆ ಮತ್ತೆ ಚುನಾವಣೆ ಘೋಷಣೆಯಾಗಿದೆ. ಆದರೆ ಚುನಾವಣಾ ಪ್ರಕ್ರಿಯೆ ಬಗ್ಗೆ ಅಯೋಗಕ್ಕೇ ಸ್ಪಷ್ಟತೆ ಇಲ್ಲ. ನೀತಿ ಸಂಹಿತೆ, ಫಲಿತಾಂಶಗಳ ಬಗ್ಗೆ ಗೊಂದಲಗಳಿವೆ. ನೀತಿ ಸಂಹಿತೆ ಇಲ್ಲದೇ ನ್ಯಾಯಬದ್ಧ ಚುನಾವಣೆ ನಡೆಯುವುದು ಹೇಗೆ? ಫಲಿತಾಂಶದ ಉಲ್ಲೇಖವೇ ಇಲ್ಲದ ಮೇಲೆ ಚುನಾವಣೆ ಏಕೆ? ಸಾಂವಿಧಾನಿಕ ಸಂಸ್ಥೆಯೊಂದು ಈ ಮಟ್ಟದ ಗೊಂದಲದಲ್ಲಿ ಕಾರ್ಯನಿರ್ವಹಿಸುವುದರ ಹಿಂದಿನ ಅರ್ಥವೇನು?ಇಂಥ ಗೊಂದಲದ ಚುನಾವಣೆ ಎಂದೂ ಘೋಷಣೆಯಾಗಿರಲಿಲ್ಲ. ಒಂದು ಆಪರೇಷನ್ ಕಮಲ, ಜನಮನ್ನಣೆಯನ್ನು ಮಾರಿಕೊಳ್ಳುವ ಜನಪ್ರತಿನಿಧಿಗಳ ಪ್ರವೃತ್ತಿ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಷ್ಟೆಲ್ಲ ಅನರ್ಥಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಜನತೆ ಗಮನಿಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *