ಬೆಂಗಳೂರು: ಅನರ್ಹ ಶಾಸಕರಿಗೆ ಬಿಜೆಪಿ ಬಂಪರ್ ಆಫರ್ ಪ್ರಕಟಿಸಿದೆ. ಒಂದು ಕ್ಷೇತ್ರ ಹೊರತುಪಡಿಸಿ ಘೋಷಣೆ ಆಗಿರುವ 14 ಕ್ಷೇತ್ರಗಳಿಗೆ ಅನರ್ಹರಿಗೆ ಅಥವಾ ಅವರ ಸಂಬಂಧಿಗೆ ಟಿಕೆಟ್ ನೀಡಲು ಬಿಜೆಪಿ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ.
ಇವತ್ತು ನಡೆಯುವ ಕೋರ್ ಕಮಿಟಿ ಸಭೆಯಲ್ಲಿ ಹೆಸರುಗಳನ್ನು ಅಂತಿಮಗೊಳಿಸಿ ಕಳುಹಿಸುವಂತೆ ಹೈಕಮಾಂಡ್ ಬಿಜೆಪಿ ನಾಯಕರಿಗೆ ಸೂಚನೆ ನೀಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
Advertisement
ಈ ವಿಚಾರವಾಗಿ ಬಿಜೆಪಿ ಬಳಿ ಎರಡು ಆಯ್ಕೆಗಳಿವೆ. ಒಂದು ಅನರ್ಹರನ್ನೇ ಕಣಕ್ಕೆ ಇಳಿಸುವುದು. ಇವರ ನಾಮಪತ್ರದ ಜೊತೆಗೆ ಅನರ್ಹರು ಸೂಚಿಸಿದ ವ್ಯಕ್ತಿಗಳಿಂದ ನಾಮಪತ್ರ ಸಲ್ಲಿಸುವುದು. ಸುಪ್ರೀಂನಲ್ಲಿ ಪರ ತೀರ್ಪು ಬಂದರೆ ಅನರ್ಹರೇ ಸ್ಪರ್ಧಿಸಲಿದ್ದಾರೆ. ಒಂದು ವೇಳೆ ವಿರುದ್ಧ ತೀರ್ಪು ಬಂದರೆ ಅನರ್ಹರು ಯಾರನ್ನು ಸೂಚಿಸುತ್ತಾರೋ ಅವರನ್ನೇ ಕಣಕ್ಕೆ ಇಳಿಸಿ ಎಂದು ಹೈಕಮಾಂಡ್ ಸೂಚನೆ ನೀಡಿದೆ.
Advertisement
Advertisement
ಅಥಣಿ ಕ್ಷೇತ್ರದ ಟಿಕೆಟ್ ವಿಚಾರದಲ್ಲಿ ಗೊಂದಲ ಮುಂದುವರಿದಿದ್ದು, ಮಹೇಶ್ ಕುಮಟಹಳ್ಳಿ ಪರಿಷತ್ ಸದಸ್ಯ ಸ್ಥಾನಕ್ಕೆ ಒಪ್ಪಿದರೆ ಮಾತ್ರ ಡಿಸಿಎಂ ಲಕ್ಷ್ಮಣ ಸವದಿಗೆ ಟಿಕೆಟ್ ನೀಡಲಾಗುತ್ತದೆ. ಈ ಕ್ಷೇತ್ರದ ಟಿಕೆಟ್ ಹಂಚಿಕೆ ಬಗ್ಗೆ ಇನ್ನು ಚೌಕಾಶಿ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
Advertisement
ಮಂಗಳವಾರ ಅನರ್ಹ ಶಾಸಕರಾದ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಶಿವರಾಮ್ ಹೆಬ್ಬಾರ್, ಪ್ರತಾಪ್‍ಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ದೆಹಲಿಯಿಂದ ಬೆಂಗಳೂರಿಗೆ ಮರಳಿದ್ದರು. ಇದನ್ನೂ ಓದಿ: ಕರ್ನಾಟಕದ 2 ಕ್ಷೇತ್ರಗಳಿಗೆ ಉಪಚುನಾವಣೆ ಇಲ್ಲ
ಕೆಂಪೇಗೌಡ ವಿಮಾನ ನಿಲ್ದಾಣದಿಂದ ಹೊರ ಬಂದ ಅನರ್ಹ ಶಾಸಕರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ್ದರು. ಸ್ವಲ್ಪ ಸಮಯದ ಬಳಿಕ ಮಾತನಾಡಿದ ಅನರ್ಹ ಶಾಸಕ ಭೈರತಿ ಬಸವರಾಜ್, ನಾವು ಉಪ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇವೆ. ನಾವೇನೂ ತಪ್ಪು ಮಾಡಿಲ್ಲ. ಸುಪ್ರೀಂಕೋರ್ಟ್ ತೀರ್ಪು ನಮ್ಮ ಪರವಾಗಿಯೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು.
ಉಪ ಚುನಾವಣೆ ಟಿಕೆಟ್ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಟಿಕೆಟ್ ಕೊಡುವುದಿಲ್ಲ ಅಂತ ಎಲ್ಲಿಯೂ ಹೇಳಿಕೊಂಡಿಲ್ಲ. ಅವರು ಟಿಕೆಟ್ ಕೊಡದಿದ್ದರೆ ಮುಂದೆ ನೋಡೋಣ ಎಂದು ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದರು.
ಶಿವರಾಮ್ ಹೆಬ್ಬಾರ್ ಅವರು, ಇನ್ನೆರಡು ದಿನ ಕಾದು ನೋಡಿ ಎಲ್ಲವೂ ನಿಮಗೆ ಗೊತ್ತಾಗುತ್ತದೆ. ಈಗಲೇ ಎಲ್ಲವ್ನೂ ಹೇಳಲು ಸಾಧ್ಯವಿಲ್ಲ ಎಂದಿದ್ದರೆ ಇತ್ತ ಪ್ರತಾಪ್‍ಗೌಡ ಪಾಟೀಲ್ ಅವರು, ಉಪ ಚುನಾವಣೆಗೆ ಹೋಗುವುದೇ ನಮ್ಮ ನಡೆ ಅಷ್ಟೇ. ಇದನ್ನು ಬಿಟ್ಟು ಏನನ್ನೂ ಹೇಳಲ್ಲ ಎಂದು ಕಾರ್ ಹತ್ತಿ ಹೊರಟು ಹೋಗಿದ್ದರು.
ಶಾಸಕ ಸ್ಥಾನದ ಅನರ್ಹತೆಯನ್ನು ಪ್ರಶ್ನೆ ಮಾಡಿ ಸುಪ್ರೀಂ ಕೋರ್ಟಿನಲ್ಲಿ ಅನರ್ಹರು ಅರ್ಜಿ ಸಲ್ಲಿಕೆ ಮಾಡಿದ್ದರು. ಆದರೆ ತ್ವರಿತ ವಿಚಾರಣೆಗೆ ನಿರಾಕರಿಸಿತ್ತು. ಅಲ್ಲದೇ ಸೆ. 16ರಂದು ಪ್ರಕರಣ ವಿಚಾರಣೆಗೆ ಬಂದರೂ ಕೂಡ ನ್ಯಾಯಮೂರ್ತಿಗಳು ವಿಚಾರಣೆಯಿಂದ ಹಿಂದೆ ಸರಿದ ಪರಿಣಾಮ ಪ್ರಕರಣ ವಿಚಾರಣೆ ಮುಂದೂಡಲಾಗಿತ್ತು. ಈಗ ಸೆ.22 ರಿಂದ ವಿಚಾರಣೆ ಆರಂಭಗೊಂಡಿದೆ.
ರಾಜ್ಯಗಳಲ್ಲಿ 15 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು ನಾಮಪತ್ರ ಸಲ್ಲಿಕೆ ಮಾಡಲು ಸೆ.30 ಅಂತಿಮ ದಿನವಾಗಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 3 ಕಡೆಯ ದಿನಾಂಕವಾಗಿದೆ. ಅಕ್ಟೋಬರ್ 21 ರಂದು ಮತದಾನ ಪ್ರಕ್ರಿಯೆ ನಡೆಯಲಿದ್ದು, ಅ.24 ರಂದು ಫಲಿತಾಂಶ ಲಭ್ಯವಾಗಲಿದೆ. ಹೀಗಾಗಿ ಸೆ.30ರ ಒಳಗಡೆ ಪ್ರಕರಣ ಇತ್ಯರ್ಥವಾಗದಿದ್ದರೆ ಅನರ್ಹರು ಸಂಕಷ್ಟಕ್ಕೆ ಸಿಲುಕಲಿದ್ದಾರೆ.
ಚುನಾವಣಾ ಆಯೋಗದ ಘೋಷಣೆಯಂತೆ ಹಿರೇಕೆರೂರು ಅನರ್ಹ ಶಾಸಕರಾದ ಬಿ.ಸಿ.ಪಾಟೀಲ್, ಯಶವಂತಪುರದ ಎಸ್.ಟಿ.ಸೋಮಶೇಖರ್, ವಿಜಯನಗರದ ಆನಂದ್ ಸಿಂಗ್, ಚಿಕ್ಕಬಳ್ಳಾಪುರದ ಕೆ.ಸುಧಾಕರ್, ಹೊಸಕೋಟೆಯ ಎಂಟಿಬಿ ನಾಗರಾಜ್, ಯಲ್ಲಾಪುರದ ಶಿವರಾಂ ಹೆಬ್ಬಾರ್, ಶಿವಾಜಿನಗರದ ರೋಷನ್ ಬೇಗ್, ಕೆ.ಆರ್.ಪುರಂನ ಬೈರತಿ ಬಸವರಾಜ್, ಮಹಾಲಕ್ಷ್ಮಿ ಲೇಔಟಿನ ಗೋಪಾಲಯ್ಯ, ಕಾಗವಾಡದ ಶ್ರೀಮಂತ್ ಪಾಟೀಲ್, ಹುಣಸೂರಿನ ಹೆಚ್.ವಿಶ್ವನಾಥ್ ಮತ್ತು ನಾರಾಯಣಗೌಡರ ಕೆ.ಆರ್.ಪೇಟೆಯ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯಲಿದೆ.