– ಗ್ಯಾರಂಟಿಗಳ ಜಾರಿ ಸಾರ್ವತ್ರಿಕ ದಾಖಲೆ ಎಂದ ರಾಜ್ಯಪಾಲರು
ಬೆಂಗಳೂರು: ಕರ್ನಾಟಕ ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆ ಮತ್ತು ಪರಿಷತ್ ಸದಸ್ಯರನ್ನು ಒಳಗೊಂಡ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಭಾಷಣ ಮಾಡಿದರು.
Advertisement
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಪ್ರಸ್ತಾಪಿಸಿ ಮಾತನಾಡಿದ ಅವರು, ಸರ್ಕಾರ ನುಡಿದಂತೆ ನಡೆದಿದೆ. ಕೊಟ್ಟ ವಚನ ಪಾಲಿಸಿದೆ. ಜನರ ಪ್ರೀತಿ, ವಿಶ್ವಾಸ, ಭರವಸೆಗಳಿಗೆ ಧಕ್ಕೆಯಾಗದೇ ನಡೆದುಕೊಂಡಿದೆ. ಸರ್ಕಾರ ಏಳು ಕೋಟಿ ಜನರ ಬದುಕಿನಲ್ಲಿ ಬದಲಾವಣೆ ಗಾಳಿ ಬೀಸುವಂತೆ ಮಾಡಿದೆ. ಸರ್ಕಾರದ ಪಂಚ ಗ್ಯಾರಂಟಿಗಳು ಆರ್ಥಿಕ ಅಸಮಾನತೆಯಿಂದ ಬಸವಳಿದ ಜನರಿಗೆ ಸಾಂತ್ವನ ನೀಡಿದೆ ಎಂದು ಬಣ್ಣಿಸಿದ್ದಾರೆ.
Advertisement
ರಾಜ್ಯದಲ್ಲಿ ಬರಗಾಲವಿದ್ದರೂ ರೈತರ ಆತ್ಮಹತ್ಯೆ ಕಳೆದ ವರ್ಷಕ್ಕಿಂತ ಕಡಿಮೆ ಆಗಿದೆ. ಸರ್ಕಾರ 8 ತಿಂಗಳಲ್ಲೇ ಗಮನಾರ್ಹ ಸಾಧನೆ ಮಾಡಿದೆ. ಯೋಜನೆಗಳು ಮಧ್ಯವರ್ತಿಗಳ ಹಸ್ತಕ್ಷೇಪ ಇಲ್ಲದೇ ಜನರಿಗೆ ತಲುಪುತ್ತಿವೆ. ಗ್ಯಾರಂಟಿಗಳನ್ನು ಗೊಂದಲ ಇಲ್ಲದೇ ಜಾರಿ ಮಾಡಲಾಗಿದೆ. ಗ್ಯಾರಂಟಿಗಳ ಜಾರಿ ಸಾರ್ವತ್ರಿಕ ದಾಖಲೆ. ಸರ್ಕಾರದ ಗ್ಯಾರಂಟಿಗಳ ಬಗ್ಗೆ ದೇಶ-ವಿದೇಶಗಳ ಮಾಧ್ಯಮಗಳೂ ಶ್ಲಾಘನೆ ಮಾಡಿವೆ ಎಂದು ಹೇಳಿದ್ದಾರೆ.
Advertisement
ಜಂಟಿ ಅಧಿವೇಶನದಲ್ಲಿ ಕೇಂದ್ರದ ತೆರಿಗೆ ತಾರತಮ್ಯ ಪ್ರಸ್ತಾಪಿಸಲಾಯಿತು. ವಿವಿಧ ಮೂಲಗಳಿಂದ ಸಿಗಬೇಕಾದಷ್ಟು ಸಂಪನ್ಮೂಲಗಳು ಸಿಗುತ್ತಿಲ್ಲ. ದೇಶದಲ್ಲಿಯೇ ಅತಿ ಹೆಚ್ಚು ತೆರಿಗೆ ಸಂಗ್ರಹಿಸಿ ಕೊಡುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ ತೆರಿಗೆಯ ಪಾಲು ಪಡೆಯುವ ವಿಚಾರದಲ್ಲಿ 10ನೇ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ನಮಗೆ ನ್ಯಾಯ ಮತ್ತು ಧರ್ಮದ ರೀತಿಯಲ್ಲಿ ಸಿಗಬೇಕಾದ ಪಾಲನ್ನು ಪಡೆಯಲು ನನ್ನ ಸರ್ಕಾರವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಹೇಳಿದ್ದಾರೆ. ರಾಜ್ಯಪಾಲರ ಭಾಷಣದ ಮೂಲಕ ಕೇಂದ್ರಕ್ಕೆ ರಾಜ್ಯ ಸರ್ಕಾರ ಟಾಂಗ್ ಕೊಟ್ಟಿದೆ.