ಬೆಂಗಳೂರು: 2023-24ನೇ ಸಾಲಿನ ರಾಜ್ಯ ಬಜೆಟ್ (Karnataka Budget) ಮಂಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕೇಂದ್ರ ಸರ್ಕಾರದಿಂದ ಕರ್ನಾಟಕಕ್ಕೆ ಸಾವಿರಾರು ಕೋಟಿ ರೂ. ನಷ್ಟವಾಗಿದೆ. ರಾಜ್ಯದ ಹೊಸ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ಅನುದಾನ ಕೊರತೆ ತಲೆದೋರಿದೆ 26,954 ಕೋಟಿ GST ಕೊರೆತೆಯಾಗಿದ್ದು, ಆರ್ಥಿಕ ಪರಿಸ್ಥಿತಿಗೆ ಇದು ಬಹುದೊಡ್ಡ ಆಘಾತ ಉಂಟು ಮಾಡಿದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಭಾಷಣದಲ್ಲಿ ಹೇಳಿದ್ದೇನು?
ಕೇಂದ್ರ ಸರ್ಕಾರ ವಿಧಿಸುವ ಸೆಸ್ (Cess) ಮತ್ತು ಸರ್‌ಚಾರ್ಜ್ (Surcharge) ರಾಜ್ಯಗಳಿಗೆ ಹಂಚಿಕೆ ಮಾಡದೆ ತನ್ನ ಬಳಿಯೇ ಉಳಿಸಿಕೊಳ್ಳುತ್ತದೆ. ತೆರಿಗೆಗಳ ಮೇಲೆ ವಿಧಿಸುವ ಸೆಸ್ ಮತ್ತು ಸರ್ ಚಾರ್ಜ್ ಹೆಚ್ಚುತ್ತಿರುವುದರಿಂದ ರಾಜ್ಯಗಳಿಗೆ ಸಂದಾಯವಾಗುವ ತೆರಿಗೆ ಪಾಲು ಕಡಿಮೆಯಾಗಿರುತ್ತದೆ. 2022-23ರಲ್ಲಿ ಎಲ್ಲಾ ರಾಜ್ಯಗಳಿಂದ ಒಟ್ಟು 5,20,570 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರವು ಸೆಸ್ ಮತ್ತು ಸರ್‌ಚಾರ್ಜ್ ಮೂಲಕ ಸಂಗ್ರಹಿಸಿರುವುದರಿಂದ ನಮ್ಮ ರಾಜ್ಯಕ್ಕೆ ಸುಮಾರು 7,780 ಕೋಟಿ ರೂ.ಗಳಷ್ಟು ನಷ್ಟವಾಗಿರುತ್ತದೆ. ನಮ್ಮ ಸರ್ಕಾರವು ಕೇಂದ್ರದ ಈ ನಡೆಯನ್ನು ಬಲವಾಗಿ ವಿರೋಧಿಸುತ್ತದೆ.
ಹೊಸ ಯೋಜನೆಗಳಿಗೆ ಅನುದಾನ ಕೊರತೆ:
ಕೇಂದ್ರ ಸರ್ಕಾರವು, ಕೇಂದ್ರ ಪುರಸ್ಕೃತ ಯೋಜನೆಗಳ ಅನುಷ್ಠಾನಕ್ಕಾಗಿ ರಾಜ್ಯಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡುತ್ತಾ ಬಂದಿದೆ. ಕೇಂದ್ರದ ಪಾಲು ಕಡಿಮೆಯಾಗಿರುವುದರಿಂದ ರಾಜ್ಯದ ಜನರ ಹಿತದೃಷ್ಟಿಯಿಂದ ಕೇಂದ್ರ ಪುರಸ್ಕೃತ ಯೋಜನೆಗಳಲ್ಲಿ ರಾಜ್ಯದ ಪಾಲನ್ನು ಹೆಚ್ಚಿಸುವ ಅನಿವಾರ್ಯತೆ ಉಂಟಾಗಿದೆ ಹಾಗೂ ಇದರಿಂದಾಗಿ ರಾಜ್ಯದ ಹೊಸ ಯೋಜನೆಗಳಿಗೆ ಅನುದಾನದ ತೀವ್ರ ಕೊರತೆ ತಲೆದೋರಿದೆ.
ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಲ್ಲಿ ಕೇಂದ್ರ ಸರ್ಕಾರವು ರಾಜ್ಯದ 14.13 ಲಕ್ಷ ಫಲಾನುಭವಿಗಳಿಗೆ ಮಾತ್ರ ಪಿಂಚಣಿಯನ್ನು ನೀಡುತ್ತಿದ್ದು, ರಾಜ್ಯ ಸರ್ಕಾರವು ತನ್ನ ಸ್ವಂತ ಸಂಪನ್ಮೂಲಗಳಿಂದ ಹೆಚ್ಚುವರಿ 64.21 ಲಕ್ಷ ಫಲಾನುಭವಿಗಳಿಗೆ ಪಿಂಚಣಿಯನ್ನು ನೀಡುತ್ತಿದೆ. 2022-23 ರಲ್ಲಿ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೇವಲ 447 ಕೋಟಿ ರೂ. ನೀಡಿದರೆ, ರಾಜ್ಯ ಸರ್ಕಾರವು 8,636 ಕೋಟಿ ರೂ.ಗಳನ್ನು ನೀಡಿರುತ್ತದೆ. ಅಂದ್ರೆ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಿಗೆ ಕೇಂದ್ರ ಸರ್ಕಾರ ಕೇವಲ ಶೇ.4.9 ರಷ್ಟು ಅನುದಾನ ನೀಡಿದರೆ ಬಾಕಿ ಶೇ.95.1 ರಷ್ಟು ಅನುದಾನವನ್ನ ರಾಜ್ಯ ಸರ್ಕಾರವೇ ನೀಡುತ್ತಿದೆ.
ಈ ಹಿಂದಿನ ಸರ್ಕಾರವು ಬದ್ಧ ವೆಚ್ಚಗಳಿಗೆ ಕಡಿವಾಣ ಹಾಕಿ ಜನಕಲ್ಯಾಣ ಕಾರ್ಯಕ್ರಮಗಳಿಗೆ ಸಂಪನ್ಮೂಲ ಕ್ರೋಢೀಕರಿಸಲು ವಿಫಲವಾಗಿರುತ್ತದೆ. ಆಯವ್ಯಯ ಗಾತ್ರವು 2018-19 2023-24ರ ವರೆಗೆ ಶೇ.50ರಷ್ಟು ಹೆಚ್ಚಳವಾಗಿರುತ್ತದೆ. ಆದ್ರೆ ಬದ್ಧ ವೆಚ್ಚಗಳಾದ ವೇತನ, ಬಡ್ಡಿ ಪಾವತಿ ಮತ್ತು ಪಿಂಚಣಿ ವೆಚ್ಚಗಳು ಈ 5 ವರ್ಷಗಳಲ್ಲಿ ಶೇ.81ರಷ್ಟು ಹೆಚ್ಚಾಗಿರುತ್ತದೆ ಎಂದು ವಿವರಿಸಿದ್ದಾರೆ.
ಹಿಂದಿನ ಸರ್ಕಾರದ ಆಡಳಿತದಿಂದ ರಾಜ್ಯದ ಆರ್ಥಿಕತೆಯು ಕತ್ತಲೆಯಲ್ಲಿ ಮುಳುಗಿದ್ದರೂ, ರಾಜ್ಯದ ಆರ್ಥಿಕತೆಯನ್ನು ಪುನಶ್ಚತನಗೊಳಿಸಲು ದೃಢ ನಿಲುವನ್ನು ತೆಗೆದುಕೊಳ್ಳಲು ನಾನು ಯಾವುದೇ ಕಾರಣಕ್ಕೂ ಹಿಂಜರಿಯುವುದಿಲ್ಲ. ರಾಜ್ಯದ ಜನತೆಯು ನಮ್ಮ ಸರ್ಕಾರದ ಮೇಲೆ ನಂಬಿಕೆಯನ್ನಿರಿಸಿ ಸ್ಪಷ್ಟ ಬಹುಮತ ನೀಡಿರುತ್ತಾರೆ. ಜನರ ಆಶೋತ್ತರಗಳನ್ನು ಈಡೇರಿಸಲು ನಾನು ಕಂಕಣಬದ್ಧವಾಗಿರುತ್ತೇನೆ. ನಮ್ಮ ಸರ್ಕಾರವು ಎಲ್ಲಾ 5 ಗ್ಯಾರಂಟಿಗಳನ್ನು ಪೂರೈಸಲು, ಅಗತ್ಯವಿರುವ ಆದಾಯವನ್ನು ಸೃಜಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಪ್ರಸಕ್ತ ಸಾಲಿನಲ್ಲಿ ಬಂಡವಾಳ ಹೂಡಿಕೆ ಹಾಗೂ ನೇರ ನಗದು ವರ್ಗಾವಣೆಯಿಂದ ರಾಜ್ಯದ ಆರ್ಥಿಕತೆಯನ್ನು ಉತ್ತೇಜಿಸಿ, ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಗೆ ಸ್ಪಷ್ಟ ಯೋಜನೆಗಳನ್ನು ರೂಪಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.
ಡಬಲ್ ಎಂಜಿನ್ ಸರ್ಕಾರ ವಿಫಲ:
15ನೇ ಹಣಕಾಸು ಆಯೋಗವು ತನ್ನ ಅಂತಿಮ ವರದಿಯಲ್ಲಿ ರಾಜ್ಯ ಕೇಂದ್ರಿತ ಕಾಮಗಾರಿಗಳ/ಯೋಜನೆಗಳಿಗೆ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ನಮ್ಮ ರಾಜ್ಯಕ್ಕೆ 3,000 ಕೋಟಿ ರೂ.ಗಳ ಅನುದಾನವನ್ನು ಕೆರೆಗಳ ಸಮಗ್ರ ಅಭಿವೃದ್ಧಿಗಾಗಿ ಮತ್ತು 3,000 ಕೋಟಿ ರೂ.ಗಳನ್ನು ಬೆಂಗಳೂರು ನಗರದ ಪೆರಿಫೆರಲ್ ರಿಂಗ್ ರಸ್ತೆಗಾಗಿ ಎಂದು ರಾಜ್ಯ-ಕೇಂದ್ರಿತ ಅನುದಾನವನ್ನು ಶಿಫಾರಸ್ಸು ಮಾಡಿರುತ್ತದೆ. ಆದರೆ, ಕೇಂದ್ರ ಸರ್ಕಾರವು ಅನುದಾನವನ್ನು ನಮ್ಮ ರಾಜ್ಯಕ್ಕೆ ನೀಡಿರುವುದಿಲ್ಲ. ಕೇಂದ್ರದ ವಿತ್ತ ಮಂತ್ರಿಯವರು ನಮ್ಮ ರಾಜ್ಯದಿಂದಲೇ ಆಯ್ಕೆಯಾಗಿದ್ದರೂ, ನಮ್ಮದು ಡಬಲ್ ಎಂಜಿನ್ ಎಂದು ಹೇಳಿಕೊಳ್ಳುವ ಸರ್ಕಾರವಿದ್ದರೂ ಸಹ, ಕೇಂದ್ರದಿಂದ ಈ ಅನುದಾನವನ್ನು ಪಡೆಯುವಲ್ಲಿ ಹಿಂದಿನ ಸರ್ಕಾರವು ಅಸಮರ್ಥವಾಗಿರುತ್ತದೆ.
26,954 ಕೋಟಿ ರೂ. ಜೆಎಸ್‌ಟಿ ಕೊರತೆ:
ರಾಜ್ಯದಲ್ಲಿ ಜಿಎಸ್‌ಟಿ ತೆರಿಗೆ ಜಾರಿಗೆ ತರುವ ಸಮಯದಲ್ಲಿ ಕೇಂದ್ರ ಸರ್ಕಾರವು ರಾಜ್ಯದ ಜಿಎಸ್‌ಟಿ ತೆರಿಗೆಯು ವರ್ಷವಾರು ಶೇ.14 ರಷ್ಟು ಬೆಳವಣಿಗೆಯಾಗಲಿದೆ ಎಂದು ಭರವಸೆ ನೀಡಿತ್ತು. ಆದ್ರೆ ಕಳೆದ 5 ವರ್ಷಗಳ ರಾಜ್ಯದ ಜಿಎಸ್‌ಟಿ ತೆರಿಗೆ ಸಂಗ್ರಹಣೆಯನ್ನು ಗಮನಿಸಿದರೆ ಕೇಂದ್ರ ಸರ್ಕಾರದ ಭರವಸೆ ಹುಸಿಯಾಗಿರುವುದು ಸಾಬೀತಾಗಿದೆ. ಅಲ್ಲದೇ, ಕೇಂದ್ರ ಸರ್ಕಾರವು ರಾಜ್ಯಗಳಿಗೆ ನೀಡುತ್ತಿದ್ದ ಜಿಎಸ್‌ಟಿ ಪರಿಹಾರವನ್ನು 2022 ಜುಲೈನಿಂದ ಸ್ಥಗಿತಗೊಳಿಸಿರುತ್ತದೆ. ಇದರಿಂದಾಗಿ 2023-24ರ ಆರ್ಥಿಕ ವರ್ಷದಲ್ಲಿಯೇ ಸುಮಾರು 26,954 ಕೋಟಿ ರೂ.ಗಳಷ್ಟು ಜಿಎಸ್‌ಟಿ ಕೊರತೆ ಉಂಟಾಗಿ ರಾಜ್ಯದ ಆರ್ಥಿಕ ಪರಿಸ್ಥಿತಿಗೆ ಇದು ಬಹುದೊಡ್ಡ ಆಘಾತ ಉಂಟು ಮಾಡಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
Web Stories