ಬೆಂಗಳೂರು: ಗ್ಯಾರಂಟಿ ಯೋಜನೆ (Congress Guarantee) ಜಾರಿಗೆ ಹಣ ಹೊಂದಿಸಲು ಈಗಾಗಲೇ ಹಲವು ಮಾರ್ಗಗಳನ್ನು ಹುಡುಕುತ್ತಿರುವ ಸರ್ಕಾರ ಈಗ ಉದ್ಯೋಗಿಗಳ ವೇತನಕ್ಕೆ (Salary) ಕೈಹಾಕಿದೆ. ಇನ್ಮುಂದೆ ಉದ್ಯೋಗಿಗಳ ಫೆಬ್ರವರಿ ತಿಂಗಳ ವೇತನದಿಂದ 300 ರೂ. ವೃತ್ತಿ ತೆರಿಗೆ ಕಡಿತವಾಗಲಿದೆ.
ವೃತ್ತಿ ತೆರಿಗೆ (Professional Tax) ಅಧಿನಿಯಮದಡಿ ವಾರ್ಷಿಕವಾಗಿ ಅನುಮತಿಸಬಹುದಾದ ಗರಿಷ್ಟ ಮಿತಿ 2,500 ರೂ.ಗಳಿಗೆ ಅನುಗುಣವಾಗಿ, ಸಂಬಳ ಅಥವಾ ಮಜೂರಿ ಪಡೆಯುವ ವ್ಯಕ್ತಿಗಳು ಫೆಬ್ರವರಿ ತಿಂಗಳಲ್ಲಿ ಪಾವತಿಸುತ್ತಿರುವ ವೃತ್ತಿ ತೆರಿಗೆಯನ್ನು ಪ್ರಸ್ತುತ 200 ರೂ.ಗಳಿಂದ 300 ರೂ.ಗಳಿಗೆ ಹೆಚ್ಚಿಸಲು ಸೂಕ್ತ ತಿದ್ದುಪಡಿ ತರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ (Siddaramaiah) ತಮ್ಮ ಬಜೆಟ್ ಭಾಷಣದಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಹಾಲಿನ ದರ 5 ರೂ. ಹೆಚ್ಚಳಕ್ಕೆ ಚಿಂತನೆ: ಭೀಮಾನಾಯ್ಕ್
ಉದ್ಯೋಗ, ವೃತ್ತಿ, ವ್ಯಾಪಾರಗಳಿಂದ ಮಾಸಿಕ ಮಾಸಿಕ 15,000 ರೂ. ಗಿಂತ ಹೆಚ್ಚಿನ ಆದಾಯ ಪಡೆಯುತ್ತಿರುವ ಉದ್ಯೋಗಿಗಳ ವೇತನದಿಂದ ಇಲ್ಲಿಯವರೆಗೆ ವರ್ಷದ 11 ತಿಂಗಳು 200 ರೂ.ನಂತೆ ವೃತ್ತಿ ತೆರಿಗೆ ಕಡಿತವಾಗುತ್ತಿತ್ತು. ಇನ್ನು ಮುಂದೆ ಒಂದು ತಿಂಗಳು ಮಾತ್ರ 300 ರೂ. ವೃತ್ತಿ ತೆರಿಗೆಯನ್ನು ಸರ್ಕಾರ ವಿಧಿಸಲಿದೆ.
ಈಗಾಗಲೇ ಕರ್ನಾಟಕ ವೃತ್ತಿಗಳ, ಕಸುಬುಗಳ, ಅಜೀವಿಕೆಗಳ ಮತ್ತು ಉದ್ಯೋಗಗಳ ಮೇಲಣ ತೆರಿಗೆ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಂಪುಟ ಅನುಮೋದನೆ ನೀಡಿತ್ತು. ಈ ಅಧಿವೇಶನದಲ್ಲಿ ಈ ತಿದ್ದುಪಡಿ ವಿಧೇಯಕ ಮಂಡನೆ ಮಾಡಲಿದೆ.
ಸಂವಿಧಾನದ ಅನುಚ್ಛೇದ 276ರಲ್ಲಿ ನಿಗದಿಪಡಿಸಿದಂತೆ ವೃತ್ತಿ ತೆರಿಗೆ ಸಂಗ್ರಹ ಪ್ರತಿ ವರ್ಷಕ್ಕೆ ಗರಿಷ್ಠ 2,500 ರೂ. ವಿಧಿಸಲು ಮಾತ್ರ ಅವಕಾಶವಿದೆ. ಹಾಲಿ ವೃತ್ತಿಪರ ಉದ್ಯೋಗಿಗಳಿಗೆ ಮಾಸಿಕ ವೇತನದಲ್ಲಿ 200 ರೂಪಾಯಿ ವೃತ್ತಿ ತೆರಿಗೆ ವಿಧಿಸಲಾಗುತ್ತಿತ್ತು.
ಸದ್ಯ ತಿಂಗಳಿಗೆ 200 ರೂ. ಪ್ರತಿ ವರ್ಷ ಉದ್ಯೋಗಿಯೊಬ್ಬನಿಂದ 2,400 ರೂ. ಸಂಗ್ರಹವಾಗುತ್ತಿತ್ತು. ರಾಜ್ಯ ಸರ್ಕಾರಕ್ಕೆ ವಾರ್ಷಿಕ ಸರಾಸರಿ ಒಟ್ಟು ಸುಮಾರು 1,300 ಕೋಟಿ ರೂ. ವೃತ್ತಿ ತೆರಿಗೆ ಸಂಗ್ರಹವಾಗುತ್ತಿತ್ತು. ಫೆಬ್ರವರಿಯಲ್ಲಿ 100 ರೂ. ವೃತ್ತಿ ತೆರಿಗೆ ಹೆಚ್ಚಳದಿಂದ ಸರ್ಕಾರದ ಬೊಕ್ಕಸಕ್ಕೆ ಅಂದಾಜು 50 ಕೋಟಿ ಹೆಚ್ಚುವರಿ ಆದಾಯ ಬರುವ ನಿರೀಕ್ಷೆಯಿದೆ. ಒಂದು ತಿಂಗಳು 300 ರೂಪಾಯಿ ವೃತ್ತಿ ತೆರಿಗೆ ವಿಧಿಸುವ ಮೂಲಕ ವಾರ್ಷಿಕ ಅಂದಾಜು ಸುಮಾರು 1,360 ರೂಪಾಯಿ ವೃತ್ತಿ ತೆರಿಗೆ ಸಂಗ್ರಹವಾಗುವ ಸಾಧ್ಯತೆಯಿದೆ.
ದೇಶದಲ್ಲಿ ಕರ್ನಾಟಕ ಸೇರಿ 17 ರಾಜ್ಯಗಳು ವೃತ್ತಿ ತೆರಿಗೆ ವಿಧಿಸುತ್ತಿದ್ದು, ಈಗಿರುವ 2,500 ರೂ. ವಾರ್ಷಿಕ ಮಿತಿಯನ್ನು 6,000 ರೂ.ಗೆ ಹೆಚ್ಚಳ ಮಾಡಲು ಕೇಂದ್ರ ಸರ್ಕಾರಕ್ಕೆ ಈಗಾಗಲೇ ಹಲವು ರಾಜ್ಯಗಳ ಮನವಿ ಮಾಡಿದೆ. ಕೇಂದ್ರ ಸರ್ಕಾರ ಮಿತಿ ಹೆಚ್ಚಳದ ಬಗ್ಗೆ ಇಲ್ಲಿ ತನಕ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಒಂದು ವೇಳೆ 6 ಸಾವಿರ ರೂ.ಗೆ ಏರಿಕೆ ಮಾಡಿದರೆ ಪ್ರತಿ ತಿಂಗಳು ಉದ್ಯೋಗಿಯ ಸಂಬಳದಿಂದ 500 ರೂ. ವೃತ್ತಿ ತೆರಿಗೆ ಕಡಿತವಾಗಲಿದೆ.