ಬೆಂಗಳೂರು: ಬಹುನಿರೀಕ್ಷಿತ ಬಜೆಟ್ (Karnataka Budget 2023) ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಮಂಡಿಸಿದ್ದು, ಕೃಷಿ ಮತ್ತು ತೋಟಗಾರಿಕೆ ಇಲಾಖೆಗೆ 5,860 ಕೋಟಿ ರೂ. ಘೋಷಿಸಿದ್ದಾರೆ.
ಕೃಷಿ (Agriculture) ಉದ್ಯಮಿಗಳಿಗೆ ಉತ್ತೇಜನ ನೀಡಲು ನವೋದ್ಯಮ ಎಂಬ ಹೊಸ ಯೋಜನೆಯಡಿ 10 ಕೋಟಿ ರೂ. ಅನುದಾನ ನೀಡಲಾಗುವುದು. ರೈತರು ಬೆಳೆದ ಉತ್ಪನ್ನಗಳನ್ನ ಮಾರಾಟ ಮಾಡಲು ನಂದಿನಿ ಮಾದರಿಯಲ್ಲಿ ರೈತರ ಉತ್ಪನ್ನಗಳಿಗೆ ಏಕೀಕೃತ ಬ್ರಾಂಡಿಂಗ್ ವ್ಯವಸ್ಥೆ ರೂಪಿಸಲು 10 ಕೋಟಿ ರೂ. ನೀಡಲಾಗುವುದು ಎಂದರು.
ತೋಟಗಾರಿಕಾ ಉತ್ಪನ್ನಗಳ ಸಂಸ್ಕರಣೆಗಾಗಿ 8 ಶೀತಲ ಘಟಕಗಳ ನಿರ್ಮಾಣ ಮಾಡಲಾಗುವುದು. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತೋಟಗಾರಿಕಾ ಕ್ಷೇತ್ರದ ಪ್ರಾಯೋಗಿಕ ಅರಿವು ಮೂಡಿಸಲು ವಿದ್ಯಾರ್ಥಿಗಳಿಗಾಗಿ ತೋಟಗಾರಿಕೆ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಿಎಂ ಹೇಳಿದರು. ಇದನ್ನೂ ಓದಿ: Karnataka Budget 2023: ಬೆಂಗ್ಳೂರು ಅಭಿವೃದ್ಧಿಗೆ ಸಿಕ್ಕಿದ್ದೇನು?
ಶಿಡ್ಲಘಟ್ಟ ರೇಷ್ಮೆ ಮಾರುಕಟ್ಟೆಯನ್ನ 75 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆಯಾಗಿ ಅಭಿವೃದ್ಧಿಗೊಳಿಸಲಾಗುವುದು. ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ ಸುಲಭವಾಗಿ ದುಡಿಯುವ ಬಂಡವಾಳವನ್ನು ಒದಗಿಸಲು ಮತ್ತು ರೇಷ್ಮೆಗೂಡಿನ ಖರೀದಿಯಲ್ಲಿ ಸಕ್ರಿಯವಾಗಿ ಭಾಗವಹಿಸಲು 5 ಲಕ್ಷವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದರು.
ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುವ ಸಂಕಷ್ಟ ನಿವಾರಣಿಗೆ ಅನುಗ್ರಹ ಯೋಜನೆ ಪುನರ್ ಸ್ಥಾಪಿಸಿ ಕುರಿ ಮತ್ತು ಮೇಕೆಗಳಿಗೆ 5000 ರೂ. ಹಾಗೂ ಹಸು, ಎಮ್ಮೆ ಮತ್ತು ಎತ್ತುಗಳಿಗೆ 10 ಸಾವಿರ ಪರಿಹಾರ ನೀಡಲಾಗುವುದು ಎಂದು ಸಿದರಾಮಯ್ಯ ಘೋಷಿಸಿದರು.
ಮೀನುಗಾರ ಮಹಿಳೆಯರ ಆರ್ಥಿಕ ಸ್ವಾವಲಂಬನೆಗೆ ಬ್ಯಾಂಕ್‍ಗಳಲ್ಲಿ ಕೊಡುವ ಬಡ್ಡಿರಹಿತ ಸಾಲದ ಮಿತಿ 50 ಸಾವಿರದಿಂದ 3 ಲಕ್ಷ ರೂಗಳಿಗೆ ಹೆಚ್ಚಳ ಮಾಡಲಾಗುವುದು. ಮೀನುಗಾರರ ದೋಣಿಗಳಿಗೆ ರಿಯಾಯ್ತಿ ದರದಲ್ಲಿ ನೀಡುತ್ತಿರುವ ಡೀಸೆಲ್ ಮಿತಿಯನ್ನ ಒಂದೂವರೆ ಲಕ್ಷ ಕಿ.ಮೀನಿಂದ 2 ಲಕ್ಷ ಕಿ.ಮೀವರೆಗೆ ಹೆಚ್ಚಳ ಮಾಡಲಾಗುವುದು. ಹಾಗೆಯೇ ಮೀನುಗಾರರ ದೋಣಿಗಳಲ್ಲಿ ಸೀಮೆಎಣ್ಣೆ ಇಂಜಿನ್‍ಗಳನ್ನ ಪೆಟ್ರೋಲ್/ಡೀಸೆಲ್ ಇಂಜಿನ್‍ಗಳಾಗಿ ಬದಲಾಯಿಸಲು ತಲಾ 50 ಸಾವಿರ ಸಹಾಯಧನ ನೀಡಲಾಗುವುದು ಎಂದರು.
Web Stories