ಬೆಂಗಳೂರು: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು 2020ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಬೆಂಗಳೂರಲ್ಲಿ ಜಾಗತಿಕ ಗುಣಮಟ್ಟದ ಫಿಲಂ ಸಿಟಿ ನಿರ್ಮಾಣ ಮಾಡಲು 500 ಕೋಟಿ ರೂ. ಅನುದಾನ ಘೋಷಣೆ ಮಾಡಿದ್ದಾರೆ.
ಈ ಮೂಲಕ ನಟ ರಾಕಿಂಗ್ ಸ್ಟಾರ್ ಯಶ್ ಬೇಡಿಕೆಯ ಬೆನ್ನಲ್ಲೇ ಸಿಲಿಕಾನ್ ಸಿಟಿಯಲ್ಲಿ ಫಿಲಂ ಸಿಟಿ ನಿರ್ಮಾಣ ಮಾಡಲು ಸರ್ಕಾರ ಮುಂದಾಗುತ್ತಿರುವುದು ಚಿತ್ರರಂಗಕ್ಕೆ ಖುಷಿ ನೀಡಿದೆ. ಫೆಬ್ರವರಿ 26 ರಂದು ನಡೆದ ಚಲನಚಿತ್ರೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿದ್ದ ಯಶ್, ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಬಳಿ ಮನವಿ ಮಾಡಿಕೊಂಡಿದ್ದರು.
Advertisement
Advertisement
ಮನವಿಯೇನು..?
ಕರ್ನಾಟಕದಲ್ಲಿ ಹುಡುಗರಿಗೆ ತುಂಬಾನೇ ಕನಸು, ಹುರುಪು, ಶಕ್ತಿಯಿದೆ. ಹೀಗಾಗಿ ದೊಡ್ಡದಾಗಿ ಒಂದು ಸ್ಟುಡಿಯೋ ಕಟ್ಟಿಸಿ ಬಿಡಿ. ಕಾಲ ಕಾಲದಿಂದ ಬರೀ ಅಲ್ಲೊಂದಷ್ಟು ಎಕ್ರೆ ಬಂತಂತೆ, ಇಲ್ಲೊಂದಷ್ಟು ಎಕ್ರೆ ಬಂತಂತೆ. ಈ ಜಾಗ, ಆ ಜಾಗ ಅಂತ ಹೋಗ್ತಾನೇ ಇದೆ ಸರ್. ಎಲ್ಲೋ ಬೇರೆ ಊರಿಗೆ ಹೋಗಿ ಕೆಲಸ ಮಾಡಬೇಕು. ಹೀಗಾಗಿ ನಮಗೆ ಶಕ್ತಿ ಕೊಡಿ. ತೆರಿಗೆ ರೂಪದಲ್ಲಿ ಎಷ್ಟು ವಾಪಸ್ ಕೊಡ್ತೀವಿ ಅಂದ್ರೆ ತುಂಬಾ ಖುಷಿಯಾಗಿ ಬಿಡಬೇಕು. ಇದರಿಂದ ಇಡೀ ಉದ್ಯಮನೂ ಬೆಳೆಯುತ್ತದೆ. 70ನೇ ದಶಕದಲ್ಲಿ ಕನ್ನಡ ಚಿತ್ರರಂಗದ ಒಂದು ಯುಗ ಇತ್ತು ಅಂತ ನೀವು ಹೇಳಿದ್ರಿ. ಇದೀಗ ಆ ಕೆಲಸ ಮಾಡುವಂತಹ ಸಾಕಷ್ಟು ಹುಡುಗರು ಇಲ್ಲೇ ಇರುತ್ತಾರೆ. ಆದರೆ ಅವರಿಗೆ ಶಕ್ತಿ ತುಂಬಬೇಕಷ್ಟೆ ಎಂದು ಹೇಳಿದ್ದರು.
Advertisement
Advertisement
70ರ ದಶಕದಲ್ಲಿ ಎಲ್ಲವೂ ಚೆನ್ನೈನಲ್ಲಿ ನಡೆಯುತ್ತಿತ್ತು. ಹೀಗಾಗಿ ಅವರಿಗೆ ಕಲಿಯೋದಕ್ಕೆ ಜಾಗ ಇತ್ತು. ಬೇರೆ ಬೇರೆ ಅಸಿಸ್ಟೆಂಟ್ ಡೈರೆಕ್ಟರುಗಳಾಗಿ ಸಿನಿಮಾ ಕೆಲಸ ತಿಳಿದುಕೊಳ್ಳಲು ಸಾಕಷ್ಟು ಅವಕಾಶಗಳು ಕೂಡ ಇತ್ತು. ಆದ್ರೆ ಈಗ ಎಲ್ಲರೂ ಏಕಲವ್ಯಗಳಾಗಿ ಬಿಟ್ಟಿದ್ದೇವೆ. ನಾವೇ ಎಲ್ಲೋ ಸಿನಿಮಾ ನೋಡಿಕೊಂಡು ಕಲಿತು ನಂತರ ಬೇರೆಯವರ ಜೊತೆ ಸ್ಪರ್ಧೆ ಮಾಡುತ್ತಿದ್ದೇವೆ. ಹೀಗಾಗಿ ಸ್ಟುಡಿಯೋ ಮಾಡುವ ಮೂಲಕ ಶಕ್ತಿ ತುಂಬಿ ಎಂದು ಬಿಎಸ್‍ವೈ ಅವರಿಗೆ ಯಶ್ ಮನವಿ ಮಾಡಿಕೊಂಡಿದ್ದರು.