Connect with us

ಇಮಾಮ್‍ರ ಗೌರವ ಧನ ಹೆಚ್ಚಳ- ಸರ್ಕಾರದ ವಿರುದ್ಧ ಅರ್ಚಕರು, ಆಗಮಿಕರ ಆಕ್ರೋಶ

ಇಮಾಮ್‍ರ ಗೌರವ ಧನ ಹೆಚ್ಚಳ- ಸರ್ಕಾರದ ವಿರುದ್ಧ ಅರ್ಚಕರು, ಆಗಮಿಕರ ಆಕ್ರೋಶ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಬುಧವಾರದಂದು 12ನೇ ಬಾರಿ ಬಜೆಟ್ ಮಂಡಿಸಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜನರನ್ನು ಓಲೈಸಲು ಅನೇಕ ಜನಪರ ಯೋಜನೆಗಳಿಗೆ ಅನುದಾನ ನೀಡಿದ್ದಾರೆ. ಆದ್ರೇ ಈ ಬಜೆಟ್‍ಗೆ ಆರ್ಚಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಜೆಟ್‍ನಲ್ಲಿ ಅಲ್ಪಾಸಂಖ್ಯಾತರನ್ನು ಸಮಾಧಾನಪಡಿಸಿ ಹಿಂದೂ ಧಾರ್ಮಿಕ ದತ್ತಿ ಇಲಾಖೆಯನ್ನ ಕಡೆಗಣಿಸಿದೆ ಎಂದು ಅರ್ಚಕರು ಆರೋಪಿಸಿದ್ದಾರೆ. ಷೇಷ್ ಇಮಾಮ್ ಅವರ ಗೌರವ ಧನ 3100 ರೂ.ನಿಂದ 4000 ಕ್ಕೆ ಹೆಚ್ಚಳ, ಮೌಜಾನ್ ಅವರ ಗೌರವಧನ 2500 ರಿಂದ 3000ಕ್ಕೆ ಹೆಚ್ಚಳ ಮಾಡಿರೋದು ಅರ್ಚಕರು ಹಾಗೂ ಆಗಮಿಕರ ಕಣ್ಣು ಕೆಂಪಾಗಿಸಿದೆ.

ಮುಜರಾಯಿ ಇಲಾಖೆಯ ಅಧೀನದಲ್ಲಿ ರಾಜ್ಯದಲ್ಲಿ 35 ಸಾವಿರಕ್ಕೂ ಹೆಚ್ಚು ದೇವಾಲಯಗಳಿದ್ದು ಇದರಿಂದ ಸರ್ಕಾರಕ್ಕೆ ಪ್ರತಿ ವರ್ಷ 135 ಕೋಟಿ ರೂ. ಆದಾಯವಿದೆ. ಅದ್ರೂ ನಮಗೆ ಯಾವುದೇ ಸೌಲಭ್ಯಗಳನ್ನ ಈ ಬಾರಿಯ ಬಜೆಟ್‍ನಲ್ಲಿ ನೀಡಿಲ್ಲ. ದಿನಕ್ಕೆ 100 ರೂಪಾಯಿಯಂತೆ ವರ್ಷಕ್ಕೆ 36 ಸಾವಿರ ರೂಪಾಯಿಗಳನ್ನ ಮಾತ್ರ ನೀಡುತ್ತಾರೆ. ಇದನ್ನ ಹೆಚ್ಚಿಸಬೇಕು ಅಂತ ನಾವು ಮನವಿ ಮಾಡಿದ್ದೆವು. ಅದ್ರೆ ಅದರ ಬಗ್ಗೆ ಸಿದ್ದರಾಮಯ್ಯನವರು ಗಮನಹರಿಸಿಲ್ಲ. ವಕ್ಫ್ ಸಂಸ್ಥೆಯಿಂದ ಸರ್ಕಾರಕ್ಕೆ ಯಾವುದೇ ಆದಾಯವಿಲ್ಲ. ಅದ್ರೂ ಅವರಿಗೆ ಅಷ್ಟು ಅನುದಾನ ಕೊಟ್ಟಿದ್ದೀರ. ನಮಗೇಕೆ ಯಾವುದೇ ಗೌರವಧನವಿಲ್ಲ ಅಂತಾ ಕರ್ನಾಟಕ ರಾಜ್ಯ ಮುಜರಾಯಿ ದೇವಾಲಯಗಳ ಅರ್ಚಕರ, ಆಗಮಿಕರ ಮತ್ತು ನೌಕರರ ಸಂಘದ ಗೌರವ ಅಧ್ಯಕ್ಷರಾದ ಶ್ರೀ ಶಾಂತವೀರ ಮಹಾಸ್ವಾಮಿಗಳು ರಾಜ್ಯ ಸರ್ಕಾರವನ್ನ ಪ್ರಶ್ನಿಸಿದ್ದಾರೆ.

ಈ ಸರ್ಕಾರದಿಂದ ಹಿಂದೂಗಳಿಗೆ ಅನ್ಯಾಯವಾಗುತ್ತಿದೆ. ನಮ್ಮ ದೇವಾಲಯಗಳಲ್ಲಿ ಎಲ್ಲ ವರ್ಗದ ಜನರು ದುಡಿಯುತ್ತಾರೆ. ಅವರಿಗೆ ಯಾವುದೇ ಅನುದಾನವನ್ನ ನೀಡದೆ ಇರುವುದು ಸರಿಯಲ್ಲ. ಓಟ್ ಬ್ಯಾಂಕ್ ಉದ್ದೇಶದಿಂದ ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಬಳಿಯುತ್ತಿದ್ದಾರೆ. ಬಜೆಟ್ ಅಧಿವೇಶನದಲ್ಲಿ ಮುಜರಾಯಿ ಇಲಾಖೆಗೆ ಅನುದಾನ ನೀಡುವ ಬಗ್ಗೆ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದ್ರೆ ರಾಜ್ಯದ ಅಷ್ಟೂ ದೇವಾಲಯಗಳಿಗೆ ಬೀಗ ಹಾಕಿ ಪ್ರತಿಭಟನೆ ಮಾಡಬೇಕಾಗುತ್ತೆ ಅಂತಾ ಹೇಳಿದ್ರು.

ಪ್ರತಿನಿತ್ಯದ ಪೂಜೆಗೆ 100 ರೂಪಾಯಿ ಸಾಲೋದಿಲ್ಲ. ನಿಮ್ಮ ಸರ್ಕಾರದಿಂದ ನಮಗೆ ಯಾವುದೇ ಅನುದಾನ ಬೇಡ. ನಮ್ಮ ದೇವಾಲಯಗಳನ್ನ ನಮ್ಮ ಹತೋಟಿಗೆ ಕೊಡಿ ಅಂತಿದ್ದಾರೆ ಅರ್ಚಕರು. ಸರ್ಕಾರ ಅರ್ಚಕರ ನಿಲುವನ್ನ ಹೇಗೆ ಸ್ವೀಕರಿಸುತ್ತದೋ ಕಾದು ನೋಡ್ಬೇಕು.

Advertisement
Advertisement