ಬೆಂಗಳೂರು: ರಾಜ್ಯದ ಬಸ್ ಪ್ರಯಾಣಿಕರ ಸುಗಮ ಸಂಚಾರಕ್ಕೆ ಮತ್ತಷ್ಟು ಬಸ್‍ಗಳು ಈ ವರ್ಷ ರಸ್ತೆಗಿಳಿಯಲಿವೆ. ಒಟ್ಟಾರೆ 6,450 ಬಸ್‍ಗಳು ರಾಜ್ಯದಲ್ಲಿ ಸಂಚಾರ ಆರಂಭಿಸಲಿದೆ. ಸಾರಿಗೆ ಇಲಾಖೆಗೆ ಒಟ್ಟಾರೆಯಾಗಿ 2,354 ಕೋಟಿ ರೂ.ಗಳನ್ನು ರಾಜ್ಯ ಬಜೆಟ್‍ನಲ್ಲಿ ಸಿಎಂ ಸಿದ್ದರಾಮಯ್ಯ ಮೀಸಲಿರಿಸಿದ್ದಾರೆ.
ಬಿಎಂಟಿಸಿ: ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ವಿಶ್ವಾಸಾರ್ಹ ಸಾರಿಗೆ ವ್ಯವಸ್ಥೆ ಕಲ್ಪಿಸಲು ಬಿ.ಎಂ.ಟಿ.ಸಿ.ಗೆ ಬಸ್‍ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಲು ಉದ್ದೇಶಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ 3000 ಹೊಸ ಬಸ್‍ಗಳನ್ನು ಸೇರ್ಪಡೆ ಮಾಡಿಕೊಳ್ಳಲಿದೆ. ಇದರಲ್ಲಿ 1500 ಹೊಸ ಬಸ್ ಖರೀದಿ ಮೂಲಕ ಮತ್ತು ಉಳಿದ 1500 ಬಸ್‍ಗಳನ್ನು ಗುತ್ತಿಗೆ ಮೂಲಕ ಪಡೆಯಲಾಗುವುದು. ಬಿಎಂಟಿಸಿಯು ಬಸ್‍ಗಳನ್ನು ಖರೀದಿಸಲು ಪಡೆಯುವ ಸಾಲ ಹಾಗೂ ಬಡ್ಡಿಯ ಮರುಪಾವತಿ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಸರ್ಕಾರವು ಬಸ್ ಖರೀದಿ ಪ್ರಕ್ರಿಯೆಯನ್ನು ಬೆಂಬಲಿಸಲಿದೆ.
Advertisement
Advertisement
ಸಾರಿಗೆ ನಿಗಮ: 2017-18ನೇ ಸಾಲಿನಲ್ಲಿ ಸಾರಿಗೆ ನಿಗಮಗಳಿಗೆ ಒಟ್ಟು 3,250 ಹೊಸ ಬಸ್‍ಗಳನ್ನು ಖರೀದಿಸಲಾಗುವುದು. ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 1050 ಬಸ್, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 700 ಹಾಗೂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು 1,500 ಬಸ್‍ಗಳನ್ನು ಖರೀದಿಸಲಿವೆ.
Advertisement
ರಾಜ್ಯಕ್ಕೆ ಬರಲಿವೆ ಎಲೆಕ್ಟ್ರಿಕ್ ಬಸ್: ಕೇಂದ್ರ ಅನುದಾನಗಳೊಂದಿಗೆ ಬೆಂಗಳೂರು ನಗರದಲ್ಲಿ 150 ಎಲೆಕ್ಟ್ರಿಕ್ ಬಸ್‍ಗಳು ಮತ್ತು ಮೈಸೂರು ನಗರದಲ್ಲಿ 50 ಎಲೆಕ್ಟ್ರಿಕ್ ಬಸ್‍ಗಳನ್ನು ಸಂಚಾರಕ್ಕೆ ಬಿಡಲು ಉದ್ದೇಶಿಸಲಾಗಿದೆ. ಕಾರ್ಯದಕ್ಷತೆಯನ್ನು ಸುಧಾರಿಸಲು ಶಿವಮೊಗ್ಗದಲ್ಲಿ ಹೊಸ ವಿಭಾಗವನ್ನು ಆರಂಭಿಸಲಾಗುವುದು. ಎಲ್ಲ ಸಾರಿಗೆ ನಿಗಮಗಳ ಮೂಲಕ 44 ಹೊಸ ಬಸ್ ನಿಲ್ದಾಣಗಳನ್ನು, 14 ಹೊಸ ಬಸ್ ಡಿಪೋಗಳನ್ನು ಮತ್ತು ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು.
Advertisement
ರಾಜ್ಯದ ಗೋವಾ ಸ್ವಾತಂತ್ರ್ಯ ಹೋರಾಟಗಾರರಿಗೆ ಉಚಿತ ಬಸ್ ಪಾಸ್, ಅರ್ಜುನ ಮತ್ತು ಖೇಲ್ ರತ್ನ ಪ್ರಶಸ್ತಿ ಪುರಸ್ಕೃತರಿಗೆ ಉಚಿತ ಬಸ್ ಪಾಸ್‍ಗಳನ್ನು ನೀಡಲಾಗುವುದು.
ಮಹಿಳಾ ಸುರಕ್ಷತೆಗೆ ಒತ್ತು: ಮಹಿಳಾ ಪ್ರಯಾಣಿಕರಿಗೆ ಹೆಚ್ಚಿನ ಸುರಕ್ಷತೆ ಒದಗಿಸುವ ಸಲುವಾಗಿ ಬಿ.ಎಂ.ಟಿ.ಸಿ. ಮೊಬೈಲ್ ಅಪ್ಲಿಕೇಷನ್‍ನಲ್ಲಿ ಹೊಸದಾಗಿ ಎಸ್‍ಒಎಸ್ ಬಟನ್ ಮತ್ತು ಟ್ರಾಕಿಂಗ್ ಸೌಲಭ್ಯವನ್ನು ಅಳವಡಿಸಲಾಗುವುದು. ಉಚಿತ ಹಾಗೂ ರಿಯಾಯಿತಿ ದರದ ಪಾಸ್‍ಗಳನ್ನು ಹೊಂದಿರುವ ಫಲಾನುಭವಿಗಳಿಗೆ ಸ್ಮಾರ್ಟ್ ಕಾರ್ಡ್‍ಗಳನ್ನು ನೀಡಲಾಗುವುದು. ಚಾಲಕರು ಮತ್ತು ಮೆಕ್ಯಾನಿಕ್‍ಗಳಿಗೆ ಸಾಮರ್ಥ್ಯವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಜೊತೆಗೆ ಈಗಿರುವ ಕೇಂದ್ರಗಳನ್ನು ಸಹ ಪ್ರತಿ ವರ್ಷ 25,000 ಅಭ್ಯರ್ಥಿಗಳಿಗೆ ತರಬೇತಿ ನೀಡಲು ಅನುವಾಗುವಂತೆ ಮೇಲ್ದರ್ಜೆಗೇರಿಸಲಾಗುವುದು.
ರೈತ ಸಾರಥಿ: ಈ ಯೋಜನೆಯಡಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಟ್ರ್ಯಾಕ್ಟರ್ ಮತ್ತು ಟ್ರೈಲರ್‍ಗಳ ಚಾಲಕರ ಅನುಕೂಲಕ್ಕಾಗಿ ರೈತರಿಗೆ ತರಬೇತಿ ಮತ್ತು ಕಲಿಕಾ ಲೈಸೆನ್ಸ್ ನೀಡಲಾಗುವುದು. ಜೊತೆಗೆ ದ್ವಿಚಕ್ರ ವಾಹನ ಲೈಸೆನ್ಸ್ ನೀಡಿಕೆ ಹಾಗೂ ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಅರಿವು ಮೂಡಿಸುವ ತರಬೇತಿಗಾಗಿ 2 ಕೋಟಿ ರೂ.ಗಳನ್ನು ನೀಡಿದ್ದಾರೆ. ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ಮತ್ತು ರಸ್ತೆ ಸುರಕ್ಷತೆಯನ್ನು ಸುಧಾರಿಸಲು, ರಾಜ್ಯ ರಸ್ತೆ ಸುರಕ್ಷತೆ ಪ್ರಾಧಿಕಾರವನ್ನು ರಚಿಸಲಾಗುವುದು. ಇದಕ್ಕಾಗಿ 5 ಕೋಟಿ ರೂ.ಗಳನ್ನು ಒದಗಿಸಲಾಗುವುದು.
ಬೆಂಗಳೂರಿನಲ್ಲಿ ವಾಯು ಮತ್ತು ಶಬ್ದ ಮಾಲಿನ್ಯವನ್ನು ಕಡಿಮೆ ಮಾಡಲು 2018ರ ಏಪ್ರಿಲ್ 1ರಿಂದ ಜಾರಿಗೆ ಬರುವಂತೆ 2 ಸ್ಟ್ರೋಕ್ ಆಟೋ ರಿಕ್ಷಾಗಳನ್ನು ರದ್ದುಗೊಳಿಸಿ ಅದರ ಬದಲು 4 ಸ್ಟ್ರೋಕ್ ಎಲ್‍ಪಿಜಿಯ 10,000 ಆಟೋ ರಿಕ್ಷಾಗಳಿಗೆ ಪ್ರತಿ ಆಟೋ ರಿಕ್ಷಾಗೆ 30,000 ರೂ.ಗಳ ಸಹಾಯಧನಕ್ಕಾಗಿ 30 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಸಿದ್ದರಾಮಯ್ಯ ನೀಡಿದ್ದಾರೆ. ಅಲ್ಲದೇ ಚಿಂತಾಮಣಿ, ರಾಣೆಬೆನ್ನೂರು ಮತ್ತು ಬಂಟ್ವಾಳದಲ್ಲಿ 3 ಹೊಸ ಆರ್‍ಟಿಒ ಕಚೇರಿಗಳು ಪ್ರಾರಂಭವಾಗಲಿವೆ ಎಂದೂ ಸಿದ್ದರಾಮಯ್ಯ ಹೇಳಿದ್ದಾರೆ.
ಕೆಎಸ್ ಆರ್ ಟಿಸಿಗೆ 3,250 ಹೊಸ ಬಸ್ ಸೇರ್ಪಡೆ. ಬೆಂಗಳೂರು ನಗರಕ್ಕೆ 150 ಎಲೆಕ್ಟ್ರಿಕ್ ಬಸ್.#JanaparaBudget pic.twitter.com/YZn96offS2
— Karnataka Congress (@KPCCofficial) March 15, 2017