ನಾನು ಮಾತಾಡಿದರೂ.. ಮಾತನಾಡದೇ ಮೌನವಾಗಿದ್ದರೂ ಅದಕ್ಕೆ ನೂರಾರು ಅರ್ಥ – ಅನಂತ್‍ಕುಮಾರ್ ಹೆಗ್ಡೆ ಕಿಡಿ

Public TV
2 Min Read
Ananthkumar hegde

– ಬಿಎಸ್‍ವೈ ಪರ ಬ್ಯಾಟ್ ಬೀಸಿದ ಕೇಂದ್ರ ಸಚಿವರು

ಬೆಂಗಳೂರು: ದೆಹಲಿಯಲ್ಲಿ ಇತ್ತೀಚೆಗೆ ನಡೆದಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ವೇದಿಕೆಯ ಮುಂದೆ ಕುಳಿತಿದ್ದಕ್ಕೆ ಸ್ಪಷ್ಟೀಕರಣ ನೀಡಿ, ಮಾಧ್ಯಮಗಳ ವಿರುದ್ಧ ಕೇಂದ್ರ ಸಚಿವ ಅನಂತ್‍ಕುಮಾರ್ ಹೆಗ್ಡೆ ಕಿಡಿಕಾರಿದ್ದಾರೆ.

ನಾನೇನು ಮಾತಾಡಿದರೂ.. ಮಾತನಾಡದೇ ಮೌನವಾಗಿದ್ದರೂ ಅದಕ್ಕೆ ನೂರಾರು ಅರ್ಥ- ಅಪಾರ್ಥ ಕಲ್ಪಿಸಿ, ಅದಕ್ಕೊಂದಿಷ್ಟು ತಮ್ಮ ಕಾಲ್ಪನಿಕ ಲದ್ದಿ ಸೇರಿಸಿ ಸುದ್ದಿ ಮಾಡುವ, ಪ್ಯಾನಲ್ ಡಿಸ್ಕಶಸ್ ನಡೆಸುವ ಇವರಿಗೆ ಇದೊಂದು ಘಟನೆ ಸುಗ್ರಾಸ ಭೋಜನ ಒದಗಿಸಿತು ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.

ಆಗಿದ್ದೇನು?:
ಮುಂಬರುವ ಲೋಕಸಭಾ ಚುನಾವಣೆಯ ಪೂರ್ವಭಾವಿ ಸಿದ್ಧತೆಗಾಗಿ ಕರ್ನಾಟಕದ ಬಿಜೆಪಿಯ ಶಾಸಕರು ಮತ್ತು ಸಂಸದರ ಸಭೆ ದೆಹಲಿಯಲ್ಲಿ ನಡಿದಿತ್ತು. ಆ ಸಭೆಯಲ್ಲಿ ಅನಂತ್‍ಕುಮಾರ್ ಹೆಗ್ಡೆ ಭಾಗವಹಿಸಿದ್ದರು. ಆದರೆ ಕೇಂದ್ರ ಸಚಿವರಾಗಿ ವೇದಿಕೆಯ ಮೇಲೆ ಕೂರುವ ಬದಲಾಗಿ ವೇದಿಕೆಯ ಮುಂಭಾಗದಲ್ಲಿ ಕುಳಿತಿದ್ದರು. ಬಳಿಕ ಬಂದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಸಚಿವರನ್ನು ವೇದಿಕೆಗೆ ಕರೆದುಕೊಂಡು ಹೋಗಿದ್ದರು. ಈ ಘಟನೆಯಿಂದ ಬಿಜೆಪಿ ನಾಯಕರು ಅನಂತ್‍ಕುಮಾರ್ ಅವರನ್ನು ಕಡೆಗಣಿಸುತ್ತಿದ್ದಾರೆ ಎನ್ನುವ ಚರ್ಚೆ ಆರಂಭವಾಗಿತ್ತು.

ಮಾಧ್ಯಮಗಳಲ್ಲಿ ಈ ಸುದ್ದಿ ಪ್ರಕಟವಾಗಿದ್ದನ್ನು ಕಂಡು ಈಗ ಅನಂತ್‍ಕುಮಾರ್ ಅವರು ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರ ಹಾಕಿದ್ದಾರೆ. ಜೊತೆಗೆ ತಮ್ಮ ಬ್ಲಾಗ್‍ನಲ್ಲಿ ಘಟನೆಯ ಕುರಿತು ವಿವರಣೆ ನೀಡಿದ್ದಾರೆ.

ಕೇಂದ್ರ ಸಚಿವರ ಟ್ವೀಟ್‍ನಲ್ಲಿ ಏನಿದೆ?:
ಇಷ್ಟು ಚಿಕ್ಕ ಘಟನೆಗೆ ಒಂದಷ್ಟು ರೆಕ್ಕೆ ಪುಕ್ಕ ಕಟ್ಟಿ, ಒಂದಿಷ್ಟು ಬಣ್ಣ ಮೆತ್ತಿ ರೂಪಬದಲಿಸಿ ಹಾರಿಬಿಡಲು ಸಿದ್ಧವಾಗಿ ಕೂತಿದ್ದರಲ್ಲಾ ಕೆಲಮಂದಿ. ಅವರಿಗೆ ಒಂದೇ ಏಟಿಗೆ ಎರಡು ಮೂರು ಗುರಿಗಳನ್ನು ಹೊಡೆಯುವ ಕೆಟ್ಟ ಚಾಳಿ!

ಈ ಬಾರಿ ರಾಜ್ಯದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ನಡೆಯುತ್ತಿರುವ ಹೊತ್ತಿನಲ್ಲೇ ಇದು ನಡೆದಿದ್ದರಿಂದ, ಇದರಲ್ಲಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನೂ ಎಳೆದು ತರಲಾಯಿತು. ಪಾಪ ನಿಜಕ್ಕಾದರೆ ಕೆಳಗೆ ಕುಳಿತಿದ್ದ ನನ್ನನ್ನು ವೇದಿಕೆಯ ಮೇಲೆ ಕರೆಸಿ ಕೂರಿಸಿದವರೇ ಯಡಿಯೂರಪ್ಪನವರು. ಆದರೆ ಅವರೇ ನನ್ನನ್ನು ಅವಮಾನಿಸಿದರು ಎನ್ನುವ ರೀತಿಯಲ್ಲಿ ಸುದ್ದಿ ಹಬ್ಬಿಸಲಾಯಿತು. ಇದರಿಂದ ಈ ವಿಘ್ನ ಸಂತೋಷಿ ಎಡಚರು ಎರಡು ರೀತಿಯ ಈಡು ಹೊಡೆದರು. ಒಂದು, ಅನಂತ್‍ಕುಮಾರ್ ಹೆಗ್ಡೆಯನ್ನು ತೇಜೋವಧೆ ಮಾಡುವುದು. ಇನ್ನೊಂದು, ಯಡಿಯೂರಪ್ಪನವರ ಇಮೇಜನ್ನೂ ಹಾಳುಮಾಡುವುದು.

ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ. ಒಳಗೊಳಗೇ ಅವರ ನಾಯಕರ ಮಧ್ಯೆಯೇ ಕಚ್ಚಾಟ ಇದೆ ಅಂತ ತೋರಿಸುವುದು. ರಾಜ್ಯ ರಾಜಕಾರಣದಿಂದ ಹೆಗ್ಡೆಯವರನ್ನು ದೂರವಿಡಲಾಗುತ್ತಿದೆ ಎಂದು ಬಿಂಬಿಸುವುದು. ಇದು ಇವರ ಹಿಡನ್ ಅಜೆಂಡಾ ಆಗಿತ್ತು. ಇದರಲ್ಲಿ ಈ ಮಂದಿ ತಕ್ಕ ಮಟ್ಟಿಗೆ ತಮ್ಮ ಕಾರ್ಯ ನಿರ್ವಹಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *