ಬೆಂಗಳೂರು: ರಾಜ್ಯ ಸಮ್ಮಿಶ್ರ ಸರ್ಕಾರವನ್ನು ಉರುಳಿಸಲು ಬಿಜೆಪಿ ದಂಧೆ ಹಣ ಬಳಕೆ ಮಾಡುತ್ತಿದೆ ಎಂಬ ಸಿಎಂ ಎಚ್‍ಡಿ ಕುಮಾರಸ್ವಾಮಿ ಆರೋಪಕ್ಕೆ ಬಿಜೆಪಿ ತಿರುಗೇಟು ನೀಡಿದ್ದು, ರಾಜ್ಯದಲ್ಲಿ ಆಡಳಿತ ನಡೆಸಲು ಸಿಎಂ ಅಸಮರ್ಥರಾಗಿದ್ದಾರೆ ಎಂಬುವುದು ಸ್ಪಷ್ಟವಾಗಿದೆ ಎಂದು ಟಾಂಗ್ ನೀಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ವಿಧಾನ ಪರಿಷತ್ ಸದಸ್ಯ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ್ ಅವರು, ಆಡಳಿತ ನಡೆಸುವಲ್ಲಿ ಸಂಪೂರ್ಣ ಅಸಮರ್ಥ ಎನ್ನುವುದು ಇಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಹೇಳಿಕೆಯಿಂದ ಸ್ಪಷ್ಟವಾಗಿದೆ. ಇಂತಹ ಅಸಮರ್ಥ ಮುಖ್ಯಮಂತ್ರಿಯಿಂದ ರಾಜ್ಯಕ್ಕೆ ಸಿಗಬೇಕಾದ ಕೊಡುಗೆಯೇನೂ ಇಲ್ಲ. ಮುಖ್ಯಮಂತ್ರಿಗಳು ಕೈಲಾಗದವರು ಮೈ ಪರಚಿಕೊಂಡರು ಎನ್ನುವಂತೆ ಹೇಳಿಕೆ ನೀಡುತ್ತಿದ್ದು. ಸಿಎಂ ಹತಾಶರಾಗಿದ್ದಾರೆ ಎನ್ನುವುದನ್ನು ಸಾಬೀತುಪಡಿಸಿದೆ ಎಂದು ಕಿಡಿಕಾರಿದ್ದಾರೆ.
Advertisement
Advertisement
ಪತ್ರಿಕಾ ಹೇಳಿಕೆಯಲ್ಲಿ ಏನಿದೆ?
ನಾಡಿನ ಆರೂವರೆ ಕೋಟಿ ಜನರಿಗೆ ನ್ಯಾಯ ದೊರೆಯಬಹುದೆಂಬ ನಿರೀಕ್ಷೆಯಲ್ಲಿದ್ದ ಜನರು ಈಗ ಭ್ರಮನಿರಸನಗೊಂಡಿದ್ದಾರೆ. ಕಷ್ಟದಲ್ಲಿರುವ ರಾಜ್ಯದ ಜನರ ಕಣ್ಣೀರು ಒರೆಸಬೇಕಾಗಿದ್ದ ಮುಖ್ಯಮಂತ್ರಿಗಳು ಆರಂಭದಲ್ಲೇ ಸ್ವತಃ ಕಣ್ಣೀರು ಹಾಕಿದ್ದರು. ಈಗ ಸರ್ಕಾರದ ಮೇಲಿನ ಹಿಡಿತವನ್ನು ಸಂಪೂರ್ಣ ಕಳೆದುಕೊಂಡಿರುವ ಸಿಎಂ ವೃಥಾ ಬಿಜೆಪಿ ವಿರುದ್ಧ ಆರೋಪಿಸುವುದನ್ನೇ ಕಾಯಕವನ್ನಾಗಿಸಿಕೊಂಡಿದ್ದಾರೆ.
Advertisement
ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರು ಆಡಳಿತ ನಡೆಸುವುದನ್ನು ಬಿಟ್ಟು ತಮ್ಮ ದಿನದ ಬಹುತೇಕ ಸಮಯವನ್ನು ಬಿಜೆಪಿ ಮತ್ತು ಅದರ ನಾಯಕರನ್ನು ನಿಂದಿಸುವುದಕ್ಕೆ ಮೀಸಲಿಟ್ಟಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಪಕ್ಷಗಳ ನಡುವಿನ ಹೊಂದಾಣಿಕೆಯ ಕೊರತೆಯೇ ಪ್ರಸಕ್ತ ರಾಜಕಾರಣದಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಲು ಕಾರಣ ಎನ್ನುವುದು ಇಡೀ ರಾಜ್ಯದ ಜನರ ಗಮನಕ್ಕೆ ಬಂದಿದೆ. ಆದರೆ ಮುಖ್ಯಮಂತ್ರಿಗಳು ಎಲ್ಲ ಗೊಂದಲಕ್ಕೂ ಬಿಜೆಪಿ ಕಾರಣ ಎನ್ನುವಂತೆ ಬಿಂಬಿಸಲು ಯತ್ನಿಸುತ್ತಿದ್ದಾರೆ.
Advertisement
ಆಪರೇಷನ್ ಕಮಲದ ಮೂಲಕ ಶಾಸಕರನ್ನು ಸೆಳೆಯಲು ಬಿಜೆಪಿ ಯತ್ನಿಸುತ್ತಿದೆ ಎನ್ನುವ ಮುಖ್ಯಮಂತ್ರಿಗಳ ಹೇಳಿಕೆ ಬೇಜಾಬ್ದಾರಿಯ ಪರಮಾವಧಿ. ಸಮ್ಮಿಶ್ರ ಸರ್ಕಾರದೊಳಗಿನ ಸಮಸ್ಯೆಗಳನ್ನು ನಿಭಾಯಿಸುವ ಸಾಮಥ್ರ್ಯವಲ್ಲದೇ ಅವರು ಬಿಜೆಪಿ ಮೇಲೆ ಗೂಬೆ ಕೂರಿಸುವ ಯತ್ನ ನಡೆಸಿದ್ದಾರೆ. ಮುಖ್ಯಮಂತ್ರಿಗಳಿಗೆ ಖಚಿತ ಮಾಹಿತಿ ಇದ್ದರೆ ನೇರವಾಗಿ ಕ್ರಮ ಜರುಗಿಸಬಹುದಾದ ಉನ್ನತ ಸ್ಥಾನದಲ್ಲಿ ಅವರಿದ್ದಾರೆ. ಆದರೆ ಅವರೀಗ ಸಾಮಾನ್ಯ ವ್ಯಕ್ತಿಯಂತೆ ಬೀದಿಯಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡುತ್ತಾ ಓಡಾಡುತ್ತಿದ್ದಾರೆ. ಇದು ಅವರ ಹತಾಶೆಯ ಪ್ರತೀಕ ಕಾಂಗ್ರೆಸ್ ಶಾಸಕರನ್ನು ನಿಭಾಯಿಸುವುದು ಮುಖ್ಯಮಂತ್ರಿಗಳಿಗೆ ಸವಾಲಿನ ಕೆಲಸವಾಗಿದೆ. ಅಷ್ಟೇ ಅಲ್ಲ ಸ್ವತಃ ತಮ್ಮ ಪಕ್ಷದ ಶಾಸಕರ ಮೇಲೂ ಅವರು ನಿಯಂತ್ರಣ ಕಳೆದುಕೊಂಡಿರುವುದರ ಸೂಚನೆ ಇದು ಎಂದು ವಿವರಿಸಿದ್ದಾರೆ.
ಈ ಹಿಂದೆ ಜೆಡಿಎಸ್ ಮುಖಂಡರಾದ ಸಚಿವ ಎಚ್.ಡಿ. ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರೇ ಜೆಡಿಎಸ್‍ನಲ್ಲಿ ಸೂಟ್‍ಕೇಸ್ ರಾಜಕೀಯ ನಡೆಯುತ್ತಿದೆ ಎಂದು ದೂರಿದ್ದರು. ಮುಖ್ಯಮಂತ್ರಿಗಳು ಇದನ್ನು ಮರೆತಿದ್ದಾರೆ. ಸೂಟ್‍ಕೇಸ್ ಪಕ್ಷ ಯಾವುದು ಎನ್ನುವುದು ಇಡೀ ರಾಜ್ಯದ ಜನರಿಗೆ ಗೊತ್ತಿದೆ. ಜೆಡಿಎಸ್ ಪಕ್ಷದ ಮುಖಂಡರೇ ಇದನ್ನು ಬಯಲು ಮಾಡಿದ್ದರೂ, ಮುಖ್ಯಮಂತ್ರಿಗಳಿಗೆ ಬುದ್ಧಿ ಬಂದಿಲ್ಲ. ಸರ್ಕಾರದ ಮೇಲೆ ಸಂಪೂರ್ಣ ಹತೋಟಿ ಕಳೆದುಕೊಂಡಿರುವ ಮುಖ್ಯಮಂತ್ರಿಗಳು ಜನರನ್ನು ದಾರಿ ತಪ್ಪಿಸುವ ಹೇಳಿಕೆ ನೀಡುತ್ತಲೇ ನಾಡಿನ ಆರುವರೆ ಕೋಟಿ ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಮಾನಸಿಕ ಹತೋಟಿಯನ್ನು ಕಳೆದುಕೊಂಡವರಂತೆ ಹೊಣೆಗೇಡಿತನದಿಂದ ಮಾತನಾಡುವುದು ಮುಖ್ಯಮಂತ್ರಿಗಳಿಗೆ ಶೋಭೆಯಲ್ಲ. ವಸ್ತುಸ್ಥಿತಿ ಅರಿತು ಜವಾಬ್ದಾರಿಯಿಂದ ಮಾತನಾಡುವುದನ್ನು ಮುಖ್ಯಮಂತ್ರಿ ಇನ್ನಾದರೂ ಅಭ್ಯಾಸ ಮಾಡಿಕೊಳ್ಳಲಿ ಬಿಜೆಪಿಯೇ ಗೊಂದಲ ಮೂಡಿಸುತ್ತಿದೆ ಎನ್ನುವ ರೀತಿಯಲ್ಲಿ ನಿರಾಧಾರವಾಗಿ ಮಾತನಾಡುವ ಮುಖ್ಯಮಂತ್ರಿ ವರ್ತನೆ ಖಂಡನಾರ್ಹ. ಇಂತಹ ಹೊಣೆಗೇಡಿ ವರ್ತನೆ ತೋರುವ ಮುಖ್ಯಮಂತ್ರಿ ವಿರುದ್ಧ ಬಿಜೆಪಿ ಬೀದಿಗಳಿದು ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಕೆ ನೀಡುತ್ತೇನೆ ಎಂದು ತಿಳಿಸಿದ್ದಾರೆ.