– ರಾಜ್ಯ ಬಿಜೆಪಿಯಲ್ಲಿ ಒಳಬೇಗುದಿ ಕೊತಕೊತ
– ನಾಯಕರ ಹೊಂದಾಣಿಕೆ ರಾಜಕೀಯಕ್ಕೆ ಕಿಡಿ
ಬೆಂಗಳೂರು: ರಾಜ್ಯ ಬಿಜೆಪಿ (Karnataka BJP) ಈಗ ಸಿಟ್ಟಿನ ಗಿರಣಿ ಆದಂತಿದೆ. ಪಕ್ಷದ ವಿರುದ್ಧ ಕಾರ್ಯಕರ್ತರ ಆಕ್ರೋಶ ತಣಿಸುತ್ತಲೇ ಇಲ್ಲ. ಆಡಳಿತದಲ್ಲಿದ್ದಾಗಲೂ ಕಾರ್ಯಕರ್ತರು ರೆಬೆಲ್ ಆಗಿದ್ದರು. ಈಗ ವಿಪಕ್ಷದಲ್ಲಿದ್ದಾಗಲೂ ಕಾರ್ಯಕರ್ತರು ರೆಬೆಲ್ ಆಗಿದ್ದಾರೆ.
ವಿಧಾನಸಭೆ (Vidhan sabha Election) ಸೋಲಿನಿಂದ ಎದೆಯೊಳಗಿನ ಜ್ವಾಲಾಮುಖಿ ಧಗಧಗ ಉರಿಯುತ್ತಿದೆ. ಇಷ್ಟು ದಿನ ಅದುಮಿಟ್ಟಿದ್ದ ಸಿಟ್ಟು ಜಿಲ್ಲಾವಾರು ಕಾರ್ಯಕರ್ತರ ಸಭೆಗಳಲ್ಲಿ ಹೊರಬೀಳುತ್ತಿದೆ. ಅದರಲ್ಲೂ ಪಕ್ಷದ ದಿಗ್ಗಜ ನಾಯಕರ ಸಭೆಗಳಲ್ಲಿ ಕಾರ್ಯಕರ್ತರು ತಮ್ಮ ಆಕ್ರೋಶವನ್ನು ಬಹಿರಂಗವಾಗಿಯೇ ವ್ಯಕ್ತಪಡಿಸುತ್ತಿದ್ದಾರೆ.
Advertisement
ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಡಿವಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್, ಪ್ರಹ್ಲಾದ್ ಜೋಷಿ ಸಭೆಗಳಲ್ಲಿ ಆಕ್ರೋಶ ಸ್ಫೋಟಗೊಂಡಿದೆ. ಚುನಾವಣೆ ಮುಗಿದು ತಿಂಗಳಾದರೂ ಕಾರ್ಯಕರ್ತರ ಬಳಿ ಬಾರದಕ್ಕೆ ಸಿಟ್ಟಾಗಿದ್ದಾರೆ. ಪಕ್ಷಕ್ಕಾಗಿ ಪ್ರಾಮಾಣಿಕ ಸೇವೆ ಮಾಡಿದ ಕಾರ್ಯಕರ್ತರಿಗೆ ಗೌರವ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
Advertisement
Advertisement
ಕೆಲ ದಿನಗಳ ಹಿಂದೆ ಪ್ರತಾಪ್ ಸಿಂಹ, ಸಿಪಿ ಯೋಗೇಶ್ವರ್, ಸಿಟಿ ರವಿ, ರೇಣುಕಾಚಾರ್ಯರಂಥ ನಾಯಕರೇ `ಹೊಂದಾಣಿಕೆ-ಒಳ ಒಪ್ಪಂದ ರಾಜಕೀಯ’ದ ಬಗ್ಗೆ (Adjustment Politics) ಬಹಿರಂಗ ಹೇಳಿಕೆ ಕೊಟ್ಟಿದ್ದರು. ಇದೀಗ ನಾಯಕರು ವಿರುದ್ಧ ಕಾರ್ಯಕರ್ತರೇ ಮುಗಿಬಿದ್ದು ಸಿಟ್ಟು ಹೊರ ಹಾಕುತ್ತಿದ್ದಾರೆ.
Advertisement
ಮುಂದಿನ ಲೋಕಸಭೆಗೆ (Lok Sabha Election) ಸಿದ್ಧತೆ ನಡೆಸುತ್ತಿರುವ ಬಿಜೆಪಿ, ಜಿಲ್ಲಾವಾರು ಕಾರ್ಯಕರ್ತರ ಸಭೆ ನಡೆಸುತ್ತಿದೆ. ಚುನಾವಣೆಯಲ್ಲಿ ಪಕ್ಷದ ಸೋಲಿಗೆ ನಾಯಕರ ಒಳ ಒಪ್ಪಂದ, ಡೀಲ್ ರಾಜಕೀಯವೇ ಕಾರಣ ಎಂದು ಕಿಡಿಕಾರಿದ್ದಾರೆ. ಬಿಜೆಪಿಯಲ್ಲಿ ಪ್ರಭಾವಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ. ವಾರವೊಂದರಲ್ಲಿ 4 ಜಿಲ್ಲೆಗಳಲ್ಲಿ ನಡೆದ ಚುನಾವಣಾ ಸೋಲಿನ ಪರಾಮರ್ಶೆ ಸಭೆಯಲ್ಲಿ ಕಾರ್ಯಕರ್ತರು ಸಿಟ್ಟು ಹೊರ ಹಾಕಿದ್ದಾರೆ. ಇದನ್ನೂ ಓದಿ: ಬಿಜೆಪಿ ಕಾರ್ಯಕರ್ತರ ಸಮಾವೇಶದಲ್ಲೇ ಯತ್ನಾಳ್‍ಗೆ ಬೊಮ್ಮಾಯಿ ತಿರುಗೇಟು
ಸೋತ ಅಭ್ಯರ್ಥಿ ಆಕ್ರೋಶ
ದಿನಾಂಕ: 25.06.2023
ಸ್ಥಳ: ಮಹಾಲಕ್ಷ್ಮಿ ಲೇಔಟ್
ಮಹಾಲಕ್ಷ್ಮಿ ಲೇಔಟ್‍ನಲ್ಲಿ ಬೆಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಸಭೆ ನಡೆಯಿತು. ಈ ವೇಳೆ ಬ್ಯಾಟರಾಯನಪುರದ ಬಿಜೆಪಿ ಅಭ್ಯರ್ಥಿಯಾಗಿದ್ದ ತಮ್ಮೇಶ್‍ಗೌಡ ಆಕ್ರೋಶ ವ್ಯಕ್ತಪಡಿಸಿದರು. ಕಾಂಗ್ರೆಸ್ ಪರ ಕೆಲಸ ಮಾಡಿರುವ ಮುನೇಂದ್ರ ಕುಮಾರ್ ಹೊರಗೆ ಕಳಿಸುವಂತೆ ಅಶ್ವಥ್ ನಾರಾಯಣ್ ಎದುರು ಸಿಟ್ಟು ಹೊರ ಹಾಕಿದರು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ ಯಡಿಯೂರಪ್ಪ ಕಾಲಿಗೆ ಎರಗಿ ಬೇಸರ ಹೊರಹಾಕಿದರು ತಮ್ಮೇಶ್ ಗೌಡ. ವೇದಿಕೆ ಮೇಲೆ ಮುನೇಂದ್ರ ಕುಮಾರ್‌ನ್ನು ಕೂರಿಸಿದ್ದಾರೆ. ನಾನು ಕಾರ್ಯಕ್ರಮಕ್ಕೆ ಬರುವುದಿಲ್ಲ ಎಂದರು. ಕೊನೆಗೆ ಯಡಿಯೂರಪ್ಪ ಸಮಾಧಾನ ಪಡಿಸಿದರು.
ಬೆನ್ನಿಗೆ ಚೂರಿ ಹಾಕಿದರು
ದಿನಾಂಕ: 25.06.2023
ಸ್ಥಳ: ಮಹಾಲಕ್ಷ್ಮಿ ಲೇಔಟ್
ಇದೇ ಸಭೆಯಲ್ಲಿ ದಾಸರಹಳ್ಳಿ ಕ್ಷೇತ್ರದ ಶಾಸಕ ಮುನಿರಾಜು ಭಾಷಣ ಮಾಡುತ್ತಿದ್ದರು. ಈ ವೇಳೆ, ಬಿಜೆಪಿ ಕಾರ್ಯಕರ್ತರು ಗದ್ದಲ ಸೃಷ್ಟಿಸಿದರು. ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಮುಖಂಡರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು. ಬೆನ್ನಿಗೆ ಚೂರಿ ಹಾಕಿದವರನ್ನು ಪಕ್ಷದಿಂದ ದೂರ ಇಡಬೇಕು. ಸಾಮಾನ್ಯ ಕಾರ್ಯಕರ್ತರಿಗೆ ಮುಂದಿನ ದಿನಗಳಲ್ಲಿ ಅವಕಾಶ ನೀಡೋಣ ಅಂತ ಮುನಿರಾಜು ಹೇಳಿದರು.
ಮುನಿರಾಜು ಭಾಷಣಕ್ಕೆ ಅಡ್ಡಿ ಪಡಿಸಿ, ಕೆರಳಿದ ಕಾರ್ಯಕರ್ತರು, ಸಾಮಾನ್ಯ ಕಾರ್ಯಕರ್ತರಿಗೆ ಅವಕಾಶಗಳು ಸಿಗುತ್ತಿಲ್ಲ ನಾವು ತಪ್ಪು ಮಾಡಿದಾಗ ಬುದ್ದಿ ಹೇಳುತ್ತೀರಿ. ನಾಯಕರು ತಪ್ಪುಮಾಡಿದಾಗ ಯಾಕೆ ಬುದ್ದಿ ಹೇಳುವುದಿಲ್ಲ ಎಂದು ಖಾರವಾಗಿ ಪ್ರಶ್ನೆ ಮಾಡಿದರು. ಶಾಸಕ ಮುನಿರಾಜು ಸಮಾಧಾನಪಡಿಸಿದರೂ ಕಾರ್ಯಕರ್ತರು ಬಗ್ಗಲಿಲ್ಲ. ಕೊನೆಗೆ ಯಡಿಯೂರಪ್ಪ ಮಧ್ಯ ಪ್ರವೇಶಿಸಿದರು. ನೀವು ಸುಮ್ಮನಾಗದಿದ್ದರೆ ಸಭೆಯಿಂದ ಹೊರ ಹೋಗ್ತೇನೆ. ನಿಮ್ಮ ಸಮಸ್ಯೆ ನಾನು ಬಗೆ ಹರಿಸ್ತೇನೆ ಅಂತ ಆಶ್ವಾಸನೆ ಕೊಟ್ಟರು.
ಕಾರ್ಯಕರ್ತರ ಹೊಡೆದಾಟ
ದಿನಾಂಕ: 23.06.2023
ಸ್ಥಳ: ರಾಮನಗರ
ರಾಮನಗರದ ಸಭೆಯಲ್ಲಿ ಕಾರ್ಯಕರ್ತರು ಕೈ ಕೈ ಮಿಲಾಯಿಸಿಕೊಂಡರು. ಚುನಾವಣೆಯಲ್ಲಿ ಸರಿಯಾಗಿ ಹಣ ಹಂಚಿಕೆ ಮಾಡಿಲ್ಲ ಎಂದು ಕನಕಪುರ ತಾಲೂಕು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಮೇಶ್ ಹಾಗೂ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಸಿದ್ದಮರಿಗೌಡ ನಡುವೆ ಗುದ್ದಾಟ ನಡೆಯಿತು. ಈ ವೇಳೆ ಮಾಜಿ ಎಂಎಲ್‍ಸಿ ಅಶ್ವಥ್ ನಾರಾಯಣ್ ವಿರುದ್ಧವೂ ಅಸಮಧಾನ ಹೊರ ಹಾಕಿದರು. ಸಭೆಯಲ್ಲಿ ಕೆಲ ಕಾಲ ಗೊಂದಲ ವಾತವರಣ ಸೃಷ್ಟಿಯಾಗಿತ್ತು. ಬಿಜೆಪಿ ಮುಖಂಡರು ಇಬ್ಬರನ್ನೂ ಸಮಾಧಾನ ಪಡಿಸಿದರು.
ಹೊಂದಾಣಿಕೆಯಿಂದ ಸೋಲು
ದಿನಾಂಕ: 22.06.2023
ಸ್ಥಳ: ಕೋಲಾರ
ಜೂನ್ 22 ರಂದು ಕೋಲಾರದಲ್ಲಿ ಅಶೋಕ್, ಸುಧಾಕರ್, ಸಂಸದರಾದ ಪ್ರತಾಪ್ ಸಿಂಹ, ಮುನಿಸ್ವಾಮಿ ಜಿಲ್ಲಾ ಮಟ್ಟದ ಸಭೆ ನಡೆಸಿದರು. ಈ ವೇಳೇ, ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕಾರಣದಿಂದ ಪಕ್ಷಕ್ಕೆ ಸೋಲಾಗಿದೆ ಎಂದು ಬಿಜೆಪಿ ಕಾರ್ಯಕರ್ತರು ಕಿಡಿಕಾರಿದರು. ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಗುರುನಾಥ್ ರೆಡ್ಡಿ ವಿರುದ್ಧ ಮಾಲೂರು ತಾಲ್ಲೂಕು ಕಾರ್ಯಕರ್ತರು ರೊಚ್ಚಿಗೆದ್ದರು. ಪಕ್ಷ ವಿರೋಧಿ ಚಟುವಟಿಕೆ ಮಾಡಿ ಪಕ್ಷೇತರ ಅಭ್ಯರ್ಥಿ ಪರವಾಗಿ ಚುನಾವಣೆ ಮಾಡಿರುವ ಗುರುನಾಥ್ ರೆಡ್ಡಿಯನ್ನು ಈ ಸ್ಥಾನದಿಂದಲೇ ಕೆಳಗಿಳಿಸುವಂತೆ ಒತ್ತಾಯಿಸಿದರು.
ಸೋಮಣ್ಣ ಸೋಲಿಗೆ ನೀವೇ ಕಾರಣ
ದಿನಾಂಕ: 22.06.2023
ಸ್ಥಳ: ಚಾಮರಾಜನಗರ
ಚಾಮರಾಜನಗರದದಲ್ಲಿ ವಿ.ಸೋಮಣ್ಣ ಸೋಲಿಗೆ ನೀವೇ ಕಾರಣ ಅಂತ ಜಿಲ್ಲಾ ಬಿಜೆಪಿ ಮುಖಂಡರನ್ನುಸೋಮಣ್ಣ ಬೆಂಬಲಿಗನೊಬ್ಬ ಮಾಜಿ ಸಿಎಂ ಡಿವಿ ಸದಾನಂದಗೌಡರ ಎದುರೇ ತರಾಟೆ ತೆಗೆದುಕೊಂಡರು. ಸೋಮಣ್ಣ ಸೋಲಿಗೆ ಕಾಂಗ್ರೆಸ್‍ನ ಗ್ಯಾರಂಟಿ ಕಾರಣವಲ್ಲ, ನಾಯಕರಾದ ನೀವೇ ಕಾರಣ. ಮೊದಲು ಕಾರ್ಯಕರ್ತರಿಗೆ ಮಾತನಾಡಲು ಅವಕಾಶ ನೀಡಿ. ಚುನಾವಣೆಯಲ್ಲಿ ನಮಗೆ ಯಾಕೆ ಹಿನ್ನಡೆಯಾಗಿದೆ ಅಂತ ನಾವು ಹೇಳ್ತೇವೆ ಅಂತ ಸೋಮಣ್ಣ ಆಪ್ತ ಕುಮಾರ್ ಕಿಡಿಕಾರಿದರು.