ಹುಬ್ಬಳ್ಳಿ: ಅಯೋಧ್ಯೆಯಲ್ಲಿ (Ayodhya) ಜನವರಿ 22ರಂದು ನಡೆಯಲಿರುವ ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಯ ಭಾಗವಾಗಿ ಬಿಜೆಪಿ ದೇಶಾದ್ಯಂತ ದೇವಾಲಯಗಳು ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶುಚಿಗೊಳಿಸುವ ʻಸ್ವಚ್ಛ ತೀರ್ಥʼ ಅಭಿಯಾನ (Swachh Teerth Campaign) ಹಮ್ಮಿಕೊಂಡಿದೆ.
ಜ.14ರ ಭಾನುವಾರದಿಂದ ಈ ಅಭಿಯಾನ ಚಾಲನೆಗೊಂಡಿದ್ದು, ಪಕ್ಷದ ನಾಯಕರು (BJP Leaders), ಕೇಂದ್ರ ಸಚಿವರು ಮತ್ತು ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ರಾಜ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರು ದೇಶದ ವಿವಿಧ ಭಾಗಗಳಲ್ಲಿ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಖ್ಯಾತ ಬಾಲಿವುಡ್ ನಟರೂ ಈ ಅಭಿಯಾನಕ್ಕೆ ಸಾಥ್ ನೀಡಿದ್ದಾರೆ. ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆ ದಿನ ಸಮೀಪಿಸುತ್ತಿರುವಾಗ ದೇಶಾದ್ಯಂತ ಸಂಭ್ರಮದ ವಾತಾವರಣ ಮೂಡಿಸಲು ಬಿಜೆಪಿ ಈ ಅಭಿಯಾನ ಕೈಗೊಂಡಿದೆ.
ಕರ್ನಾಟಕದಲ್ಲಿಯೂ ಬಿಜೆಪಿ ಹಿರಿಯ ನಾಯಕರು, ಕಾರ್ಯಕರ್ತರು ಈ ಸ್ವಚ್ಛತಾ ಅಭಿಯಾನಕ್ಕೆ ಕೈಜೋಡಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಅವರು ಸೋಮವಾರ ಹುಬ್ಬಳ್ಳಿಯ ಸಾಯಿನಗರ ರಸ್ತೆಯಲ್ಲಿರುವ ಶ್ರೀ ಸಿದ್ದಪ್ಪಾಜಿ ಮೂಲ ಗದ್ದುಗೆ ಮಠದ ಆವರಣದಲ್ಲಿ ದೇವಸ್ಥಾನ ಸ್ವಚ್ಛಗೊಳಿಸಿ ತಮ್ಮ ಸೇವೆ ಸಲ್ಲಿದ್ದಾರೆ. ಬಿಜೆಪಿ ಹುಬ್ಬಳ್ಳಿ ಜಿಲ್ಲಾ ಘಟಕದ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ, ಮಹಾನಗರ ಪಾಲಿಕೆಯ ಸದಸ್ಯ ಸಂತೋಷ್ ಚೌಹಾಣ್ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರು ಈ ವೇಳೆ ಕೈಜೋಡಿಸಿದ್ದಾರೆ. ಈ ಕುರಿತ ಫೋಟೋಗಳನ್ನು ಜೋಶಿ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಅಷ್ಟೇ ಅಲ್ಲದೇ ರಾಮಮಂದಿರದ ಉದ್ಘಾಟನೆಯ ದಿನದವರೆಗೆ ಪಕ್ಷದ ಕಾರ್ಯಕರ್ತರು ರಾಜ್ಯಾದ್ಯಂತ ಹಿಂದೂ ದೇವಸ್ಥಾನಗಳಲ್ಲಿ ವಿಶೇಷ ಭಜನೆ-ಕೀರ್ತನೆ’ಯಲ್ಲೂ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಮೇಯರ್ ಚುನಾವಣೆ : ಮಾಲ್ಡೀವ್ಸ್ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ
ಭಾನುವಾರ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ಮತ್ತು ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಗಾಂಧಿನಗರದ ದೇವಸ್ಥಾನದಲ್ಲಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರು ಒಡಿಶಾದ ಬಾಲೇಶ್ವರದ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದರು. ಇದನ್ನೂ ಓದಿ: ಹಾಸನಕ್ಕುಂಟು ಶ್ರೀರಾಮನ ನಂಟು – ರಾವಣನ ಸಂಹರಿಸಿ ದೋಷ ನಿವಾರಣೆಗೆ ಇಲ್ಲಿಗೆ ಬಂದಿದ್ದನಂತೆ ಶ್ರೀರಾಮ
ಬಿಜೆಪಿ ರಾಜ್ಯಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ ಸಹ ಶಿಕಾರಿಪುರದ ಶ್ರೀ ಹುಚ್ಚುರಾಯ ಸ್ವಾಮಿ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ ಸ್ವಚ್ಛತೀರ್ಥ ಅಭಿಯಾನಕ್ಕೆ ಸಾಥ್ ನೀಡಿದರು. ರಾಜ್ಯದೆಲ್ಲೆಡೆ ಎಲ್ಲಾ ದೇವಾಲಯಗಳಲ್ಲಿ ಸ್ವಚ್ಛತಾ ಕಾರ್ಯ ಯಶಸ್ವಿಯಾಗಿ ನೆರವೇರಲಿ. ಜನವರಿ 22 ರಂದು ಶ್ರೀರಾಮ ಜ್ಯೋತಿ ಬೆಳಗಲು ಸಿದ್ಧತೆಗಳು ಭಕ್ತಿಪೂರ್ವಕವಾಗಿ ಸಾಗಲಿ ಎಂದು ಹಾರೈಸಿದರು. ಇದನ್ನೂ ಓದಿ: ಕಲಬುರಗಿ ಶಾಲೆಯಲ್ಲಿ ವಿದ್ಯಾರ್ಥಿಗಳಿಂದ ಮನೆಗೆಲಸ, ಟಾಯ್ಲೆಟ್ ಕ್ಲಿನಿಂಗ್ – ಮುಖ್ಯಶಿಕ್ಷಕಿ ವಿರುದ್ಧ FIR