ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಆಂತರಿಕ ಚದುರಾಂಗದಾಟ ದೊಡ್ಡಮಟ್ಟದಲ್ಲಿ ಎದುರಾಗಿದೆ. ದೇಶದಲ್ಲಿ ಜಾರಿಯಾದ ವಯಸ್ಸಿನ ಮಿತಿ ನಿಯಮ ರಾಜ್ಯದ ಜಿಲ್ಲೆಗಳಲ್ಲೂ ಜಾರಿಯಾಗ್ತಿದೆ. ರಾಜ್ಯದ ಮುಖ್ಯಮಂತ್ರಿಗಿಲ್ಲದ ವಯಸ್ಸಿನ ಮಿತಿ ಪ್ರಯೋಗವನ್ನ ಜಿಲ್ಲೆಗಳಲ್ಲಿ ಮಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಘಟಕ ಜಿಲ್ಲಾಧ್ಯಕ್ಷರ ನೇಮಕಕ್ಕೆ ವಯಸ್ಸಿನ ಮಿತಿ ಹೇರಿದೆ.
55 ವರ್ಷದೊಳಗಿನವರು ಮಾತ್ರ ಜಿಲ್ಲಾಧ್ಯಕ್ಷ ಹುದ್ದೆಗೆ ಅರ್ಜಿ ಸಲ್ಲಿಸಬಹುದು. 55 ವರ್ಷ ಆದವರು ಜಿಲ್ಲಾಧ್ಯಕ್ಷರಾಗುವಂತಿಲ್ಲ. ಅಷ್ಟೇ ಅಲ್ಲ ಮಂಡಲ ಅಧ್ಯಕ್ಷರ ವಯಸ್ಸಿನ ಮಿತಿಯೂ 50ಕ್ಕೆ ಸೀಮಿತವಾಗಿದೆ. 50 ವರ್ಷ ದಾಟಿದವರು ಕೂಡ ಮಂಡಲ ಅಧ್ಯಕ್ಷರಾಗುವಂತಿಲ್ಲ.
Advertisement
Advertisement
ಇದೇ ಮೊದಲ ಬಾರಿಗೆ ಜಿಲ್ಲಾಧ್ಯಕ್ಷ, ಮಂಡಲ ಅಧ್ಯಕ್ಷ ಸ್ಥಾನಕ್ಕೆ ವಯಸ್ಸಿನ ಮಿತಿ ಏರಿರೋದು ಅಚ್ಚರಿ ತಂದಿದೆ. ಇಷ್ಟು ದಿನ ಇಲ್ಲದ ವಯಸ್ಸಿನ ಮಿತಿ ಹೇರಿಕೆ ಈಗೇಕೆ ಅನ್ನೋ ಲೆಕ್ಕಚಾರಗಳು ಬಿಜೆಪಿ ವಲಯದಲ್ಲಿ ಸದ್ದು ಮಾಡಿವೆ. ರಾಷ್ಟ್ರ ಮಟ್ಟದಲ್ಲೂ ವಯಸ್ಸಿನ ಮಿತಿ ಹೇರಿದಾಗ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಆದ್ರೆ ಕರ್ನಾಟಕದ ವಿಚಾರಕ್ಕೆ ಬಂದಾಗ, ಆದರಲ್ಲೂ ಯಡಿಯೂರಪ್ಪ ವಿಚಾರಕ್ಕೆ ಬಂದಾಗ ಇದೊಂದಿ ವಿಶೇಷ ಪ್ರಕರಣ ಅಂತಾ ವಯಸ್ಸಿನ ಮಿತಿ ಹೇರಿರಲಿಲ್ಲ.
Advertisement
ಜಿಲ್ಲಾಧ್ಯಕ್ಷ ಮಟ್ಟದಿಂದಲೇ ವಯಸ್ಸಿನ ಮಿತಿ ಹೇರುತ್ತಿರುವುದು ಬಿಜೆಪಿಯ ಮೇಲಾಟಕ್ಕೆ ಸಾಕ್ಷಿಯಾಗುತ್ತಾ ಅನ್ನೋ ಕುತೂಹಲ ಮನೆ ಮಾಡಿದೆ. ಸಂಘಟನೆಯ ದೃಷ್ಟಿಯಿಂದ ಬಿಜೆಪಿ ಒಟ್ಟು 36 ಜಿಲ್ಲಾಧ್ಯಕ್ಷರನ್ನ ನೇಮಕ ಮಾಡಿಕೊಳ್ಳುತ್ತಿತ್ತು. ಈ ಬಾರಿ ಎರಡ್ಮೂರು ಹೆಚ್ಚಾಗುವ ಸಾಧ್ಯತೆಯೂ ಇದೆ ಅಂತಾ ಬಿಜೆಪಿ ಮುಖಂಡರೊಬ್ಬರು ಹೇಳಿದ್ದಾರೆ. ವಯಸ್ಸಿನ ಮಿತಿ ಆಧಾರದ ಮೇಲೆ ಈಗಾಗಲೇ ಚಿಕ್ಕಮಗಳೂರು ಜಿಲ್ಲಾಧ್ಯಕ್ಷರ ನೇಮಕ ಆಗಿದ್ದು, ಮುಂದೆ ಎಲ್ಲಾ ಜಿಲ್ಲಾಧ್ಯಕ್ಷರ ನೇಮಕವೂ ವಯಸ್ಸಿನ ಮಿತಿ ನಿಯಾಮವಳಿಯಂತೆ ನಡೆಯುತ್ತಾ ಕಾದು ನೋಡಬೇಕಿದೆ.