Districts
ಕರ್ನಾಟಕಕ್ಕೆ ಕಾದಿದೆ ಈ ಬಾರಿ ಭೀಕರ ಚಳಿ ಬಾಧೆ

– ಮಡಿಕೇರಿಯಲ್ಲಿ ಈಗಲೇ 12 ಡಿಗ್ರಿಗೆ ಇಳಿದ ತಾಪಮಾನ
ಮಡಿಕೇರಿ: ಕರ್ನಾಟಕದಲ್ಲಿ ಹೊಸ ವರ್ಷದಿಂದ ಭೀಕರ ಚಳಿ ಕಾಡುವ ಸೂಚನೆ ಇದ್ದು, ಭೂಮಿಯಾಳದಲ್ಲಿ ನಿರಂತರ ಜ್ವಾಲಾಮುಖಿ ಸ್ಫೋಟದ ಪರಿಣಾಮವೇ ಕಾರಣ ಎನ್ನಲಾಗಿದೆ. ದೇಶದ ಇತರ ಕೆಲ ಭಾಗಗಳಲ್ಲಿ ಹಿಮಪಾತವಾಗಲಿದ್ದು, ಕರ್ನಾಟಕ ಹಿಂದೆಂದೂ ಕಾಣದ ಚಳಿಗಾಲ ಇನ್ನೊಂದು ತಿಂಗಳಲ್ಲಿ ಕಾಣಿಸಲಿದೆ ಎಂದು ಭೂಗರ್ಭ ತಜ್ಞರು ಎಚ್ಚರಿಕೆ ಕೊಟ್ಟಿದ್ದಾರೆ.
ಗ್ರಹಣದ ಆಸು-ಪಾಸು ಹಾಗೂ ಗ್ರಹಣ ಮುಗಿದ ಬಳಿಕ ಈ ಶೀತಗಾಳಿಯ ತೀವ್ರತೆ ಹೆಚ್ಚಾಗಲಿದೆ ಎಂಬ ಎಚ್ಚರಿಕೆಯನ್ನು ನೀಡಲಾಗಿದ್ದು, ಪುಟಾಣಿ ಮಕ್ಕಳಿಗೆ, ವಯಸ್ಸಾದವರಿಗೆ, ಗರ್ಭಿಣಿಯರಿಗೆ ಈ ರೀತಿ ವಾತಾವರಣ ಬದಲಾದರೆ ಆರೋಗ್ಯ ಸಮಸ್ಯೆ ಕಾಡುವ ಸಾಧ್ಯತೆ ಇದೆ.
ಕರ್ನಾಟಕದ ಕಾಶ್ಮೀರ ಎಂದೇ ಖ್ಯಾತಿಯಾಗಿರುವ ಕೊಡಗು ಜಿಲ್ಲೆ ಪ್ರವಾಸಿ ತಾಣಗಳಿಗೂ ಖ್ಯಾತಿಯಾಗಿದ್ದು, ಆದರೆ ಇಲ್ಲಿ ಮೈ ಕೊರೆಯುವ ಚಳಿ, ಮುಂಜಾನೆಯ ಮಂಜಿನ ಮುಸುಕು, ತಣ್ಣನೆಯ ಗಾಳಿ ಜನಜೀವನವನ್ನು ಥಂಡಾ ಹೊಡೆಸಿದೆ. ಭಾರೀ ಚಳಿಯಿಂದಾಗಿ ದಿನನಿತ್ಯದ ಕೆಲಸ ಮಾಡಲು ಕೊಡಗಿನ ಜನರು ಹರಸಾಹಸ ಪಡಬೇಕಿದೆ.
ಕಳೆದ ಹಲವು ವರ್ಷಗಳಿಗೆ ಹೋಲಿಸಿದರೆ ಕಿತ್ತಲೆ ನಾಡು ಕೊಡಗಿನಲ್ಲಿ ಈ ಬಾರಿ ಊಹಿಸಲು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಚಳಿ ಜನರನ್ನು ತತ್ತರಿಸುವಂತೆ ಮಾಡಿದೆ. ಮುಂಜಾನೆ ಬೇಗ ಕೆಲಸಕ್ಕೆ ತೆರಳುವವರು, ವ್ಯಾಪಾರಿಗಳು ಚಳಿಯ ಹೊಡೆತಕ್ಕೆ ತರಗುಡುತ್ತಿದ್ದಾರೆ. ಚಳಿ ಕಾರಣದಿಂದ ಅಂಗಡಿಗಳಲ್ಲಿ ಸ್ವೆಟರ್, ಕಂಬಳಿ ವ್ಯಾಪಾರವೂ ತುಸು ಹೆಚ್ಚಿದ್ದು, ಜೊತೆಗೆ ಅವುಗಳ ಬೆಲೆಯೂ ಏರಿಕೆಯಾಗಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ ಮೈ ಕೊರೆಯುವ ಚಳಿ, ನಡುಕ ಹುಟ್ಟಿಸುವ ಗಾಳಿಗೆ ಜನರಂತೂ ಹೈರಾಣಾಗಿ ಹೋಗಿದ್ದಾರೆ.
ಮಡಿಕೇರಿಯಲ್ಲಿ ಕಳೆದ ಎರಡು ದಿನಗಳಿಂದ ಕನಿಷ್ಠ 12 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸ್ಥಳೀಯರಷ್ಟೇ ಅಲ್ಲದೇ ಜಿಲ್ಲೆಗೆ ಬರುತ್ತಿರುವ ಪ್ರವಾಸಿಗರೂ ಬೆಂಕಿಯ ಮೊರೆ ಹೋಗುವಂತೆ ಮಾಡಿದೆ. ಗರಿಷ್ಟ ಅಂದರೆ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದೆ. ಗಾಳಿ ಗಂಟೆಗೆ 7 ಕಿಲೋ ಮೀಟರ್ ವೇಗದಲ್ಲಿ ಬೀಸುತ್ತಿದೆ. ಸಾಮಾನ್ಯವಾಗಿ ಡಿಸೆಂಬರ್ ತಿಂಗಳ ಅಂತ್ಯದಲ್ಲಿ ಚಳಿ ಆರಂಭಗೊಂಡು ಫೆಬ್ರವರಿ ತಿಂಗಳವರೆಗೂ ಮುಂದುವರಿಯುತಿತ್ತು. ಆದರೆ ಈ ಬಾರಿ ಡಿಸೆಂಬರ್ ಎರಡನೇ ವಾರದಲ್ಲೇ ಆರಂಭಗೊಂಡ ಚಳಿ ಈಗ ಜನರನ್ನು ತತ್ತರಿಸುವಂತೆ ಮಾಡುತ್ತಿದೆ.
ಜಿಲ್ಲೆಯ ಹೂ ಮಾರಾಟಗಾರರಂತೂ ಕಂಬಳಿ ಸುತ್ತಿಕೊಂಡೇ ವ್ಯಾಪಾರ ಮಾಡುವಂತಾಗಿದೆ. ಬೆಳಗ್ಗೆ ವಾಯುವಿಹಾರಕ್ಕೆ ತೆರಳುವವರು ಹಾಸಿಗೆ ಬಿಟ್ಟು ಮೇಲೇಳೋದೆ ಬೇಡ ಎನ್ನುವಷ್ಟರ ಮಟ್ಟಿಗೆ ಚಳಿಗಾಳಿ ಹೊಡೆಯುತ್ತಿದೆ. ಹಾಲು, ಪೇಪರ್ ವಿತರಕರಿಗಂತೂ ಚಳಿಯ ನಡುವೆ ಕೆಲಸ ಮಾಡುವುದು ಸವಾಲಾಗಿ ಹೋಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಅನೇಕರು ಬೆಂಕಿಯ ಮೊರೆ ಹೋಗುತ್ತಿದ್ದಾರೆ. ಬಾಡಿಗೆ ಮನೆಯಲ್ಲಿ ಬೆಂಕಿ ಹಾಕಿಕೊಳ್ಳುವ ವ್ಯವಸ್ಥೆ ಇಲ್ಲದವರು ಚಳಿಗೆ ಹೈರಾಣಾಗುವ ಸ್ಥಿತಿಯಿದೆ.
