Connect with us

Bengaluru City

ಕರ್ನಾಟಕ ಬಂದ್ ಯಶಸ್ವಿಯಾಗಿದೆ, ಬೆಂಗಳೂರು ಗುತ್ತಿಗೆಯನ್ನು ನಾರಾಯಣ ಗೌಡರೇ ತೆಗೆದುಕೊಳ್ಳಲಿ: ವಾಟಾಳ್

Published

on

ಬೆಂಗಳೂರು: ಸೋಮವಾರ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಬಂದ್ ಯಶಸ್ವಿಯಾಗಿದೆ ಎಂದು ವಾಟಾಳ್ ನಾಗರಾಜ್ ಹೇಳಿದ್ದಾರೆ.

ಟೌನ್‍ಹಾಲ್ ಮುಂದುಗಡೆ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರಲ್ಲಿ ಯಾವುದೇ ನಿರುತ್ಸಾಹ ಇಲ್ಲ, ಜನರು ಇಷ್ಟಪಟ್ಟು ಬಂದ್‍ನಲ್ಲಿ ಭಾಗವಹಿಸಿದ್ದಾರೆ ಬೆಂಗಳೂರಿನಲ್ಲಿ ಎರಡು ಮೂರು ಬಸ್ ಓಡಿದ ಮಾತ್ರಕ್ಕೆ ಬಂದ್ ಯಶಸ್ವಿಯಾಗಿಲ್ಲ ಎಂದು ಹೇಳುವುದು ಸರಿಯಲ್ಲ ಎಂದರು.

ಮಹಾದಾಯಿ ಮತ್ತು ರೈತರ ಸಾಲಮನ್ನಾ ವಿಚಾರದಲ್ಲಿ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ. ಹೀಗಾಗಿ ಬಂದ್ ಮೂಲಕ ಕೇಂದ್ರಕ್ಕೆ ಎಚ್ಚರಿಕೆ ನೀಡುತ್ತಿದ್ದೇವೆ. ಮಂಗಳವಾರ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕೇಂದ್ರದ ಭೂತವನ್ನು ಸುಡುತ್ತೇವೆ ಎಂದು ವಾಟಾಳ್ ಹೇಳಿದಾಗ ಮಾಧ್ಯಮವರು ಪ್ರತಿಬಾರಿಯೂ ನೀವು ಕೇಂದ್ರದ ವಿರುದ್ಧವೇ ಯಾಕೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು.

ಈ ಪ್ರಶ್ನೆಗೆ, ವಾಟಾಳ್ ಬಂದ್ ವಿಫಲಗೊಳಿಸಲು ನೀವು ಕಾರಣ, ನೀವು ಅಪ್ರಚಾರ ಮಾಡಿದ್ದೀರಿ. ವಸ್ತುಸ್ಥಿತಿ ಹೇಳಬೇಕು ಎಂದರು. ಮಾಧ್ಯಮಗಳು ಮರುಪ್ರಶ್ನೆ ಹಾಕಿ ಮಾರ್ಕೆಟ್ ಬಂದ್ ಆಗಿಲ್ಲ, ಬಸ್ ಸಂಚರಿಸುತ್ತಿದೆ.ಕನ್ನಡ ಸಂಘಟನೆಗಳ ಮಧ್ಯೆ ಒಡಕು ಇದೆ. ನಾರಾಯಣ ಗೌಡರು ನಿಮ್ಮ ವಿರುದ್ಧವೇ ಮಾತನಾಡಿದ್ದಾರೆ ಎಂದು ಮರು ಪ್ರಶ್ನೆ ಹಾಕಿದರು.

ನಮ್ಮಲ್ಲಿ ಯಾವುದೇ ಒಡಕು ಇಲ್ಲ. ನಾರಾಯಣ ಗೌಡರ ಭಾಷೆಯನ್ನು ನಾನು ಬಳಸುವುದಿಲ್ಲ. ಬೇಕಾದರೆ ಬೆಂಗಳೂರಿನ ಗುತ್ತಿಗೆಯನ್ನು ಅವರೇ ತೆಗೆದುಕೊಳ್ಳಲಿ. ಒಂದು ತಿಂಗಳಲ್ಲಿ ಅವರು ಕರ್ನಾಟಕ ಬಂದ್ ಕರೆಯಲಿ. ಕನ್ನಡಿಗರು ಕನ್ನಡಿಗರಲ್ಲಿ ಭಿನ್ನಾಭಿಪ್ರಾಯ ಬೇಡ. ಇವತ್ತು ಎಲ್ಲರೂ ನಮ್ಮ ಜೊತೆ ಬನ್ನಿ. ಎಲ್ಲರೂ ಒಟ್ಟಿಗೆ ಹೋಗಿ ರಾಜ್ಯದಲ್ಲಿ ಸಾಕಷ್ಟು ಸಮಸ್ಯೆಗಳಿವೆ ಎಂದರು.

ರಾಜ್ಯ ಸರ್ಕಾರ ಕಾರಣ: ರಾಜ್ಯ ಸರ್ಕಾರ ವ್ಯವಸ್ಥಿತವಾಗಿ ಬಂದ್ ಹತ್ತಿಕ್ಕುವ ಕೆಲಸ ನಡೆಸಿದೆ. 500 ಮಂದಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. 2 ಸಾವಿರ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಇವತ್ತು ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಸರ್ಕಾರ ಬಂದ್ ಹತ್ತಿಕ್ಕಲು ಮುಂದಾಗಿದ್ದು, ಇದನ್ನು ನಾವು ಖಂಡಿಸುತ್ತೇವೆ ಎಂದು ಹೇಳಿದರು.

ಕನ್ನಡಕ್ಕೆ ಹೋರಾಡುತ್ತೇನೆ: ನಾನು ಯಾವತ್ತೂ ಕನ್ನಡಕ್ಕಾಗಿ ಹೋರಾಡುತ್ತೇನೆ. ನಾನು ಏಕಾಂಗಿಯಾಗಿ 5 ಬಾರಿ ಸ್ಪರ್ಧಿಸಿ ವಿಧಾನಸಭೆಗೆ ಆಯ್ಕೆ ಆಗಿದ್ದೇನೆ. ಹೊಂದಾಣಿಕೆ ಮಾಡಿಕೊಂಡಿದ್ದರೆ ನಾನು ಮಂತ್ರಿ, ಮುಖ್ಯಮಂತ್ರಿಯಾಗುತ್ತಿದ್ದೆ. ಕಳೆದ 53 ವರ್ಷಗಳಿಂದ ನಾನು ಹೋರಾಡುತ್ತಿದ್ದೇನೆ ಎಂದು ತಿಳಿಸಿದರು.

ಬೃಹತ್ ಮೆರವಣಿಗೆ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಕನ್ನಡ ಪರ ಹೋರಾಟಗಾರರಾದ ವಾಟಾಳ್ ನಾಗರಾಜ್, ಸಾರಾ ಗೋವಿಂದು, ಕುಮಾರ್ ಸೇರಿದಂತೆ ನೂರಾರು ಮಂದಿಯನ್ನು ಕಾರ್ಪೋರೇಷನ್ ವೃತ್ತದಲ್ಲಿ ತಡೆದ ಪೊಲೀಸರು ಎಲ್ಲರನ್ನೂ ವಶಕ್ಕೆ ಪಡೆದರು.

ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಪ್ರವೀಣ್ ಶೆಟ್ಟಿ ಮತ್ತು ಅವರ ಬಣದ ನೂರಾರು ಕಾರ್ಯಕರನ್ನು ಮೆಖ್ರಿ ವೃತ್ತದಲ್ಲಿಯೇ ತಡೆದ ಪೊಲೀಸರು, ಅವರನ್ನು ವಶಕ್ಕೆ ಪಡೆದರು.

ಇದನ್ನೂ ಓದಿ: ಕರ್ನಾಟಕವನ್ನು ವಾಟಾಳ್‍ಗೆ ಬರೆದುಕೊಟ್ಟಿಲ್ಲ- ಕರವೇ ರಾಜ್ಯಾಧ್ಯಕ್ಷ ನಾರಾಯಣ ಗೌಡ ವಾಗ್ದಾಳಿ

Click to comment

Leave a Reply

Your email address will not be published. Required fields are marked *