ಬೆಂಗಳೂರು: ಸೋಮವಾರ ನಡೆಯಲಿರುವ ಬಂದ್ ಗೆ ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರೆ, ಕೆಲ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿಲ್ಲ. ಹೀಗಾಗಿ ಬಂದ್ ಇರುತ್ತೋ ಇಲ್ಲವೋ ಎನ್ನುವ ಗೊಂದಲ ಉಂಟಾಗಿದೆ.
ರೈತರ ಸಂಕಷ್ಟ ನಿವಾರಣೆಗೆ ರಾಜ್ಯ ಸಮ್ಮಿಶ್ರ ಸರ್ಕಾರ ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿರುವ ಸಾಲ ಮನ್ನಾ ಮಾಡುವ ಕುರಿತು ನಿರ್ಧಾರ ಪ್ರಕಟಿಸುವಂತೆ ಬಿಜೆಪಿ ಆಗ್ರಹಿಸಿತ್ತು. ಅಲ್ಲದೇ ಸಿಎಂ ಕುಮಾರಸ್ವಾಮಿಯವರು ಸದನದಲ್ಲಿ ಬಹುಮತ ಸಾಬೀತು ಮಾಡುವ ವೇಳೆ ವಿರೋಧಿ ಪಕ್ಷದ ನಾಯಕ ಬಿಎಸ್‍ವೈ ಅವರು ಸೋಮವಾರ ಬಂದ್ ಕರೆ ನೀಡಿ ಸಭಾತ್ಯಾಗ ಮಾಡಿದ್ದರು. ಬಳಿಕ ಬಿಜೆಪಿ ಬಂದ್ ಕರೆ ನೀಡಿಲ್ಲ. ರೈತರು ಕರೆ ನೀಡಿದ್ದು, ಈ ಬಂದ್ ಗೆ ಬಿಜೆಪಿ ಬೆಂಬಲ ನೀಡುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ರಾಜ್ಯದ ಜನತೆಗೆ ಬಂದ್ ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.
Advertisement
Advertisement
ಬಿಜೆಪಿ ಪಕ್ಷದ ಹೋರಾಟ ಕುರಿತು ಸ್ಪಷ್ಟನೆ ನೀಡಿರುವ ಮುಖ್ಯಮಂತ್ರಿ ಕುಮಾರ ಸ್ವಾಮಿ ಅವರು, ನಾನು ಕೂಡಾ ರೈತ ಮಗ, ಬಹುಮತ ಇಲ್ಲ ಎಂದರೂ ಸಾಲ ಮನ್ನಾ ಮಾಡುತ್ತೇನೆ. ಸಾಲ ಮನ್ನಾ ನಿರ್ಧಾರದಿಂದ ಹಿಂದೆ ಸರಿಯಲ್ಲ. ಒಂದು ವೇಳೆ ಸಾಲ ಮನ್ನಾ ಮಾಡಲು ಸಾಧ್ಯವಾಗದಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸ್ಪಷ್ಟನೆ ನೀಡಿದ್ದಾರೆ.
Advertisement
ನಾಳಿನ ಬಂದ್ ಗೆ ಹಲವು ಸಂಸ್ಥೆಗಳು ಬೆಂಬಲ ನೀಡಿದರೆ ಮತ್ತು ಕನ್ನಡ ಹೋರಾಟ ಒಕ್ಕೂಟ, ಚಲನಚಿತ್ರ ಮಂಡಲಿ ಹಲವು ಸಂಸ್ಥೆಗಳು ಬೆಂಬಲ ನಿರಾಕರಿಸಿದೆ. ಇದೇ ವೇಳೆ ನಾಳೆ ಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದ ಚುನಾವಣೆ ನಡೆಯುವುದರಿಂದ ಬಂದ್ ಮಾಡದಿರಲು ಬಿಜೆಪಿ ನಿರ್ಧರಿಸಿದೆ. ಈ ಕುರಿತು ಮಾಹಿತಿ ನೀಡಿರುವ ಬಿಜಿಪಿ ಶಾಸಕ ಶ್ರೀರಾಮುಲು ಅವರು, ಅಧಿಕಾರಕ್ಕೆ ಬಂದ ಕೂಡಲೇ ರೈತರ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ಕುಮಾರಸ್ವಾಮಿ ಮಾತು ತಪ್ಪಿದ್ದಾರೆ. ಸಿಎಂ ಕುಮಾರಸ್ವಾಮಿ ವಿರುದ್ಧ ಈಗ ರಾಜ್ಯ ಬಂದ್ ಮೂಲಕ ರೈತರು ಧ್ವನಿ ಎತ್ತುತ್ತಿದ್ದು, ಮಾತು ತಪ್ಪಿದ ಸರ್ಕಾರದ ವಿರುದ್ಧ ವಿಧಾನಸೌಧದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ. ಬೆಂಗಳೂರು ಹೊರತುಪಡಿಸಿ ಇಡೀ ರಾಜ್ಯಾದ್ಯಂತ ಬಂದ್ ಆಚರಿಸಲಾಗುತ್ತದೆ ಎಂದಿದ್ದಾರೆ.
Advertisement
ಬೆಂಗಳೂರಿನಲ್ಲಿ ನಾಳೆ ಬಂದ್ ಬಹುತೇಕ ಅನುಮಾನವಾಗಿದ್ದು ಎಂದಿನಂತೆ ಬಸ್, ಆಟೋ, ಟ್ಯಾಕ್ಷಿ ಎಂದಿನಂತೆ ಓಡಾಟ ನಡೆಸಲಿದೆ. ಅಲ್ಲದೇ ಶಾಲಾ ಕಾಲೇಜುಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿದೆ. ಈ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್, ಬಂದ್ ಮಾಡುವವರಿಗೆ ಎಚ್ಚರಿಕೆ ನೀಡಿ ನಾಳೆ ಯಾವುದೇ ಬಂದ್ ಗೆ ಅವಕಾಶವಿಲ್ಲ. ಒಂದು ವೇಳೆ ಬಂದ್ ಗೆ ಮುಂದಾದರೆ, ಸೂಕ್ತ ಕಾನೂನು ಕ್ರಮ ತೆಗೆದು ಕೊಳ್ಳಲಾಗುತ್ತದೆ. ಈ ಕುರಿತು ನಗರದ ಎಲ್ಲಾ ಡಿಸಿಪಿಗಳಿಗೂ ಬಂದ್ ಮಾಡುವವರ ವಿರುದ್ಧ ಸೂಕ್ತ ಕ್ರಮ ವಹಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಹೋಟೆಲ್ ಬಂದ್: ಕರ್ನಾಟಕ ಹೋಟೆಲ್ ಮಾಲೀಕರಿಂದ ಬಂದ್‍ಗೆ ಬೆಂಬಲ ವ್ಯಕ್ತವಾಗಿದ್ದು, ಈ ಕುರಿತು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮಧುಕರ್ ಶೆಟ್ಟಿ ಅವರು, ಕರ್ನಾಟಕ ಬಂದ್ ಗೆ ನಮ್ಮ ಬೆಂಬಲವಿದ್ದು, ರೈತರಿಗಾಗಿ ಬೆಂಬಲ ನೀಡಲಿದ್ದೇವೆ ಹೊರತು ಪಕ್ಷ ನೋಡಿ ಅಲ್ಲ. ನಾಳಿನ ಪರಿಸ್ಥಿತಿ ನೋಡಿಕೊಂಡು ಬಂದ್ ಮಾಡುವಂತೆ ಎಲ್ಲಾ ಹೋಟೆಲ್‍ಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಕನ್ನಡ ಒಕ್ಕೂಟ : ಬಂದ್ ಕರ್ನಾಟಕ ಹೋರಾಟ ಸಂಘಟನೆಗಳ ಬೆಂಬಲವಿಲ್ಲ ಎಂದು ತಿಳಿದ್ದು, ಈ ಕುರಿತು ಮಾಹಿತಿ ನೀಡಿರುವ ಸಂಘದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಅವರು, ನಾಳಿನ ಬಂದ್ ವಿಚಾರ ನನಗೆ ಗೊತ್ತಿಲ್ಲ, ನಮಗೆ ಯಾರು ಹೇಳಿಲ್ಲ. ಯಡಿಯೂರಪ್ಪ ಯಾರಿಗೆ ಹೇಳಿದ್ದಾರೋ ನಮಗೆ ಗೊತ್ತಿಲ್ಲ. ಯಡಿಯೂರಪ್ಪನಿಗೂ ಮುಂಚೆ ನಾವು ರೈತರ ಪರವಾಗಿ ಇದ್ದೀವಿ. ನಾವು ಯಡಿಯೂರಪ್ಪ ವಿರುದ್ಧ ಅಪಪ್ರಚಾರ ಮಾಡಲ್ಲ. ನಮ್ಮ ವಿರುದ್ಧ ಅವರು ಏನು ಬೇಕಿದ್ದರೂ ಅಪಪ್ರಚಾರ ಮಾಡಲಿ. ಮೊದಲಿನಿಂದಲೂ ರೈತರ ಪರವಾಗಿ ನಾವು ಹೋರಾಟ ನಡೆಸಿದ್ದೇವೆ ಎಂದು ಹೇಳಿದರು.
ಫಿಲ್ಮ್ ಚೇಂಬರ್ : ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಬಂದ್ ಗೆ ಬೆಂಬಲ ಸೂಚಿಸಿಲ್ಲ. ಎಂದಿನಂತೆ ಚಲನಚಿತ್ರ ಪ್ರದರ್ಶನ ಇರಲಿದೆ. ಹಾಗೂ ಚಿತ್ರೀಕರಣಕ್ಕೆ ಯಾವುದೇ ರೀತಿಯಲ್ಲಿ ಅಡ್ಡಿ ಇಲ್ಲ. ಸ್ವಯಂ ಪ್ರೇರಿತರಾಗಿ ಯಾರಾದರೂ ಬೆಂಬಲ ಸೂಚಿಸಿದರೆ ಅದಕ್ಕೆ ನಮ್ಮದೇನೂ ಅಭ್ಯಂತರವಿಲ್ಲ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷ ಸಾರಾ ಗೋವಿಂದು ಹೇಳಿದ್ದಾರೆ.
ಕಬ್ಬು ಬೆಳೆಗಾರರ ಸಂಘ: ಸಾಲಮನ್ನಾಗೆ ಆಗ್ರಹಿಸಿ ನಾಳೆ ಕರ್ನಾಟಕ ಬಂದ್‍ಗೆ ಕರೆ ರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಬೆಂಬಲ ಇಲ್ಲ ಎಂದು ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿಕೆ ನೀಡಿದ್ದಾರೆ. ಈ ಕುರಿತು ಪಬ್ಲಿಕ್ ಟಿವಿ ಯೊಂದಿಗೆ ಮಾತನಾಡಿರುವ ಅವರು ಬಿಜೆಪಿ ಬಂದ್ ರೈತರ ಸಾಲ ಮನ್ನಾ ವಿಚಾರ ಕುರಿತು ಆಗಿದ್ದರೂ ಬಂದ್ ಕರೆ ನೀಡಿರುವ ಸಂಘಟನೆಗಳು ಮಾಹಿತಿ ನೀಡಿಲ್ಲ. ನಮ್ಮ ರಾಜ್ಯ ಸಮಿತಿ ಮುಖಂಡರ ಜೊತೆ ಚರ್ಚೆ ಮಾಡಿ, ಸದ್ಯದಲ್ಲಿಯೇ ಮುಖ್ಯಮಂತ್ರಿಗಳನ್ನು ಭೇಟಿ ಅವರ ಅಭಿಪ್ರಾಯದ ಗಮಿನಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ತಿಳಿಸಿದ್ದಾರೆ.
ಇನ್ನುಳಿದಂತೆ ರಾಜ್ಯದ ಬಹುತೇಕ ಬಿಜೆಪಿ ಪ್ರಾಬಲ್ಯವಿರುವ ಜಿಲ್ಲೆಗಳಲ್ಲಿ ಬಂದ್ ಗೆ ಬೆಂಬಲ ವ್ಯಕ್ತವಾಗಿದೆ. ಪ್ರಮುಖವಾಗಿ ಉಡುಪಿ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಹಾವೇರಿ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಬೆಳಗಾವಿ, ಚಿತ್ರದುರ್ಗ, ಕೋಲಾರ ಸೇರಿ ಹಲವೆಡೆ ಬಂದ್ ಕರೆ ನೀಡಲಾಗಿದೆ. ಆದರೆ ಮೈಸೂರು, ಧಾರವಾಡದಲ್ಲಿ ಬಂದ್ ನಡೆಯುವುದು ಅನುಮಾನವಿದ್ದು, ಬಂದ್‍ಗೆ ಬೆಂಬಲ ಇಲ್ಲ ಎಂದು ಕನ್ನಡ ಪರ ಸಂಘಟನೆ, ರೈತ ಪರ ಸಂಘಟನೆಗಳು, ಹೋಟೆಲ್ ಮಾಲೀಕರ ಸಂಘ ಹೇಳಿದೆ. ಸಾರಿಗೆ ಸಂಚಾರ ಕೂಡ ಎಂದಿನಂತೆ ಇರಲಿದ್ದು ಶಾಲಾ-ಕಾಲೇಜುಗಳಿಗೂ ರಜೆ ಇಲ್ಲ ಎಂದು ಮೈಸೂರು ಜಿಲ್ಲಾಧಿಕಾರಿ ಅಭಿರಾಂ ಹೇಳಿದ್ದಾರೆ.