ಬೆಂಗಳೂರು: ಗುರುವಾರ ಬಂದ್ ನಡೆಯುತ್ತದೆ. ಇದರಲ್ಲಿ ಯಾವುದೇ ರಾಜಕೀಯ, ಗೊಂದಲಗಳು ಇಲ್ಲ ಎಂದು ಕನ್ನಡ ಪರ ಸಂಘಟನೆಗಳು ಹೇಳಿವೆ.
ಮಹದಾಯಿಗಾಗಿ ಕರೆಯಲಾದ ಬಂದ್ ವಿಚಾರವಾಗಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ನಾಯಕರು ಖಾಸಗಿ ಹೋಟೆಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಬಂದ್ ನಡೆಯುತ್ತದೆ ಎಂದು ವಾಟಾಳ್ ತಿಳಿಸಿದರು.
Advertisement
ಕೆಎಸ್‍ಆರ್ ಟಿಸಿ , ಬಿಎಂಟಿಸಿ, ಮೆಟ್ರೋ ರೈಲುಗಳು ಯಾವುದು ಸಂಚರಿಸಬಾರದು. ಐಟಿ ಕಂಪೆನಿಗಳು ಕೆಲಸ ಮಾಡಬಾರದು ಎಲ್ಲ ಕಂಪೆನಿಗಳು ಬೆಂಬಲ ನೀಡಬೇಕು ಎಂದು ಪ್ರವೀಣ್ ಶೆಟ್ಟಿ ಮನವಿ ಮಾಡಿದರು. ಬೆಳಗ್ಗೆ 9 ಗಂಟೆಗೆ ಟೌನ್ ಹಾಲ್ ನಿಂದ ಫ್ರೀಡಂ ಪಾರ್ಕ್ ವರೆಗೆ ಮೆರವಣಿಗೆ ಮಾಡಲು ಕನ್ನಡ ಸಂಘಟನೆಗಳು ಮುಂದಾಗಿದ್ದು, ಒಂದು ಲಕ್ಷ ಮಂದಿ ಭಾಗವಹಿಸುವ ಸಾಧ್ಯತೆಯಿದೆ.
Advertisement
ಅಂಬುಲೆನ್ಸ್, ವೈದ್ಯಕೀಯ ಸೇವೆ, ಹಾಲು ಸಾಗಾಟದ ವಾಹನಕ್ಕಷ್ಟೇ ವಿನಾಯಿತಿ ನೀಡಲಾಗಿದ್ದು ಉಳಿದ ಎಲ್ಲ ಸೇವೆಗಳು ಅಸ್ತವ್ಯಸ್ತವಾಗುವ ಸಾಧ್ಯತೆಯಿದೆ. ಇದನ್ನೂ ಓದಿ: ಮಹದಾಯಿ ನದಿ ನೀರಿಗೆ ಗೋವಾ ಕ್ಯಾತೆ ಯಾಕೆ? ಆರಂಭದಿಂದ ಇಲ್ಲಿಯವರೆಗೆ ಏನಾಗಿದೆ? ಇಲ್ಲಿದೆ ಪೂರ್ಣ ಮಾಹಿತಿ
Advertisement
Advertisement
ಯಾವುದು ಇರಲ್ಲ?
ಬುಧವಾರ ಬೆಳಗ್ಗೆ ಸಾರಿಗೆ ಇಲಾಖೆಯ ಅಧಿಕಾರಿಗಳು ಬಸ್‍ಗಳು ರಸ್ತೆಗೆ ಇಳಿಯಲಿದೆ ಎಂದು ತಿಳಿಸಿದ್ದರು. ಆದರೆ ಸಂಜೆ ರಾಜ್ಯ ರಸ್ತೆ ಸಾರಿಗೆ ನೌಕರರ ಸಂಘದ ಅಧ್ಯಕ್ಷ ಚೆನ್ನೇಗೌಡ ಈ ಬಂದ್ ಗೆ ನಮ್ಮ ಸಂಘ ಬೆಂಬಲ ನೀಡಲಿದೆ ಎಂದು ಹೇಳಿದ್ದಾರೆ. ಹೀಗಾಗಿ ಕೆಎಸ್‍ಆರ್ ಟಿಸಿ ಬಸ್ ಗಳು ರಸ್ತೆಗೆ ಇಳಿಯಲ್ಲ.
ಬಂದ್ ಗೆ ಬಿಎಂಟಿಸಿ ಬಸ್ ಸಂಚಾರದಲ್ಲಿ ಯಾವುದೇ ವ್ಯತ್ಯಯ ಆಗುವುದಿಲ್ಲ ಎಂದು ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸಾಕಷ್ಟು ಜನ ಪ್ರಯಾಣಕ್ಕೆ ಬಿಎಂಟಿಸಿ ಬಸ್ ಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಬಸ್ ನಿಲ್ಲಿಸಿದ್ರೆ ಪ್ರಯಾಣಿಕರಿಗೆ ತೊಂದರೆ ಅಗುತ್ತದೆ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಆದರೂ ಗುರುವಾರ ಬೆಳಗ್ಗೆ ಬಂದ್ ಜೋರಾಗಿದ್ದರೆ ಬಿಎಂಟಿಸಿ ರಸ್ತೆಗೆ ಇಳಿಯುವುದು ಅನುಮಾನ.
ಮಹದಾಯಿ ಹೋರಾಟಕ್ಕೆ ನಮ್ಮ ಬೆಂಬಲವಿದೆ. ಆದರೆ ಬಂದ್ ಗೆ ಬೆಂಬಲ ಇಲ್ಲ. ಎಂದಿನಂತೆ ಒಂದು ಲಕ್ಷಕ್ಕೂ ಹೆಚ್ಚು ಓಲಾ ಊಬರ್ ಕ್ಯಾಬ್ ಸೇವೆ ಇರುತ್ತೆ. ಏಕಾಏಕಿ ನಿರ್ಧಾರ ತೆಗೆದುಕೊಂಡು ಈಗ ಬೆಂಬಲಿಸಿ ಅಂತ ಕರೆ ಮಾಡಿ ಕೇಳ್ತಿದ್ದಾರೆ ಎಂದು ಊಬರ್ ಕ್ಯಾಬ್ ಸಂಘ ಅಧ್ಯಕ್ಷ ತನ್ವೀರ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ್ದಾರೆ.
ರೈತರು ತರಕಾರಿಯನ್ನು ಮಾರುಕಟ್ಟೆಗೆ ತಂದರೆ ವ್ಯಾಪಾರ ಮಾಡುತ್ತೇವೆ. ಇಲ್ಲದಿದ್ದರೆ ರೈತರಿಗೆ ತೊಂದರೆಯಾಗುತ್ತದೆ. ಗುರುವಾರದ ಪರಿಸ್ಥಿತಿಯನ್ನು ನೋಡಿಕೊಂಡು ಬಂದ್ ಮಾಡುತ್ತೇವೆ. ಎಲ್ಲರೂ ಸಹಕಾರ ಕೊಟ್ಟರೆ ನಾವು ಸಹ ಬಂದ್ ಮಾಡುತ್ತೇವೆ ಎಂದು ವರ್ತಕರು ತಿಳಿಸಿದ್ದಾರೆ.
ಮಹದಾಯಿ ವಿಚಾರವಾಗಿ ನಾಳೆ ನಡೆಯೋ ಬಂದ್ ಗೆ ನಮ್ಮ ಬೆಂಬಲ ಇದ್ದು ನಾವು ಹೋರಾಟದಲ್ಲಿ ಭಾಗಿಯಾಗುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಟ್ಯಾಕ್ಸಿಗಳ ಓಡಾಟವನ್ನು ನಿಲ್ಲಿಸುವುದಿಲ್ಲ ಎಂದು ಬೆಂಗಳೂರು ಟೂರಿಸ್ಟ್ ವಾಹನಗಳ ಸಂಘದ ಅಧ್ಯಕ್ಷ ರಾಧಕೃಷ್ಣ ಹೊಳ್ಳ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
ಕಂಪೆನಿಗಳಿಗೆ ರಜೆ:
ಈ ಹಿಂದೆ ಕರೆಯಲಾಗಿದ್ದ ಬಂದ್ ವೇಳೆ ಕನ್ನಡ ಪರ ಸಂಘಟನೆಗಳು ರಜೆ ನೀಡದ ಐಟಿ ಕಂಪೆನಿಗಳ ಮುಂದೆ ಪ್ರತಿಭಟನೆ ನಡೆಸಿತ್ತು. ಹೀಗಾಗಿ ಹಲವು ಐಟಿ ಮತ್ತು ಖಾಸಗಿ ಕಂಪೆನಿಗಳು ರಜೆ ಘೋಷಣೆ ಮಾಡಿವೆ. ಇನ್ನು ಕೆಲ ಕಂಪೆನಿಗಳು ಮನೆಯಿಂದಲೇ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚಿಸಿವೆ.
ಕನ್ನಡ ಚಿತ್ರೋದ್ಯಮ ಬಂದ್ ಗೆ ಬೆಂಬಲ ಕೊಟ್ಟಿದ್ದು ಚಿತ್ರೀಕರಣ ಹಾಗೂ ಚಿತ್ರಪ್ರದರ್ಶನ ರದ್ದಾಗಲಿದೆ. ಆದರೆ ನಟ, ನಟಿಯರು ನೇರವಾಗಿ ಬಂದ್ ನಲ್ಲಿ ಭಾಗವಹಿಸುವುದಿಲ್ಲ. ಕೆಲ ಆಟೋ ಸಂಘಟನೆ, ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಬೆಂಬಲ ಕೊಟ್ಟಿದೆ. ನಗರದ ಮಾಲ್ ಗಳು ಬೆಂಬಲ ನೀಡಿದ್ದು ಬೆಳಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಬಂದ್ ಆಗಲಿದೆ.
ಪರೀಕ್ಷೆ ಮುಂದೂಡಿಕೆ
ಗುರುವಾರ ನಡೆಯಬೇಕಿದ್ದ ವಿಟಿಯು ಸ್ನಾತಕೋತ್ತರ ಪರೀಕ್ಷೆಗಳು ಫೆಬ್ರವರಿ 5ಕ್ಕೆ ಮುಂದೂಡಿಕೆಯಾಗಿದೆ. ಖಾಸಗಿ ಶಾಲಾ ಕಾಲೇಜುಗಳಿಗೆ ಕ್ಯಾಮ್ಸ್ ಸಂಘಟನೆ ರಜೆ ಘೋಷಣೆ ಮಾಡಿದೆ. ಸರ್ಕಾರಿ ಶಾಲಾ-ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಸರ್ಕಾರ ಜಿಲ್ಲಾಧಿಕಾರಿಗಳ ಹೆಗಲಿಗೆ ನೀಡಿದೆ. ಬೆಂಗಳೂರು ವಿಶ್ವವಿದ್ಯಾಲಯದ ದೂರ ಶಿಕ್ಷಣ ವಿಭಾಗದ ಪರೀಕ್ಷೆಗಳು ಫೆಬ್ರವರಿ, 2, 5, 8ಕ್ಕೆ ಮುಂದೂಡಿಕೆಯಾಗಿದೆ.
ಹೋಟೆಲ್ ಮತ್ತು ಲಾರಿ ಮಾಲೀಕರ ಸಂಘಟನೆಗಳು ಬಂದ್ ಬೆಂಬಲ ನೀಡಬೇಕೇ? ಬೇಡವೇ ಎನ್ನುವ ನಿರ್ಧಾರವನ್ನು ತಿಳಿಸಿಲ್ಲ.
ಆಸ್ಪತ್ರೆ, ಕ್ಲಿನಿಕ್ ಬಂದ್ ಆಗಲ್ಲ. ಮಹದಾಯಿ ಹೋರಾಟಕ್ಕೆ ನೈತಿಕ ಬೆಂಬಲ ನೀಡುವುದಾಗಿ ಐಎಂಎ ಅಧ್ಯಕ್ಷ ರವೀಂದ್ರ ಮಾಹಿತಿ ನೀಡಿದ್ದಾರೆ. ಮಹದಾಯಿ ಸಮಸ್ಯೆ ಬಗೆಹರಿಸುವಂತೆ ವೈದ್ಯರಿಂದ ಪ್ರಧಾನಿ ಮೋದಿಗೆ ಇಮೇಲ್ ನಲ್ಲಿ ಪತ್ರ ಅಭಿಯಾನ ನಡೆಸುತ್ತೇವೆ ಎಂದು ತಿಳಿಸಿದ್ದಾರೆ.
ರೈಲು ತಡೆ:
ಕರವೇ ರೈಲು ತಡೆ ಮಾಡಲು ಸಿದ್ಧತೆ ನಡೆಸಿದೆ. ಹೀಗಾಗಿ ಪ್ರಯಾಣಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಕ್ರಮ ವಹಿಸಲು ರೈಲ್ವೇ ಇಲಾಖೆ ಸಿದ್ಧತೆ ನಡೆಸಿದೆ. ಬೆಂಗಳೂರಿನ ರೈಲ್ವೇ ಸ್ಟೇಷನ್ ಸೇರಿದಂತೆ ಎಲ್ಲಾ ಕಡೆ ಹೆಚ್ಚುವರಿ ಭದ್ರತಾ ಸಿಬ್ಬಂದಿ ನೇಮಕ ಮಾಡಲಾಗುವುದು ಎಂದು ಪಬ್ಲಿಕ್ ಟಿವಿಗೆ ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪೆಟ್ರೋಲ್ ಬಂಕ್ ಇರುತ್ತೆ:
ಗುರುವಾರ ಎಂದಿನಂತೆ ಪೆಟ್ರೋಲ್ ಬಂಕ್ ಗಳು ಕಾರ್ಯನಿರ್ವಹಿಸಲಿವೆ. ಜನಸಾಮಾನ್ಯರಿಗೆ ತೊಂದರೆಯಾಗಬಾರದು ಅನ್ನೋ ಹಿತದೃಷ್ಟಿಯಿಂದ ಪೆಟ್ರೋಲ್ ಬಂಕ್ ಕಾರ್ಯನಿರ್ವಹಿಸಲಿವೆ. ಮಹದಾಯಿ ಹೋರಾಟಕ್ಕೆ ನಮ್ಮ ನೈತಿಕ ಬೆಂಬಲವಿದೆ ಎಂದು ಪಬ್ಲಿಕ್ ಟಿವಿಗೆ ಬೆಂಗಳೂರು ಪೆಟ್ರೋಲ್ ಸಂಘದ ಅಧ್ಯಕ್ಷ ರವೀಂದ್ರನಾಥ್ ಮಾಹಿತಿ ನೀಡಿದ್ದಾರೆ.