– ದಾವಣಗೆರೆಯಲ್ಲಿ ಪೊಲೀಸರ ಜೊತೆ ಬಿಜೆಪಿ ಜಟಾಪಟಿ
ಚಿತ್ರದುರ್ಗ/ ಧಾರವಾಡ / ದಾವಣಗೆರೆ: ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅಧಿಕಾರ ಸ್ವೀಕಾರದ 24 ಗಂಟೆಯೊಳಗೆ ಸಾಲಮನ್ನಾ ಮಾಡ್ತೀನಿ ಅಂತಾ ಹೇಳಿ ಈಗ ನುಣುಚಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿ ಇಂದು ಬಿಜೆಪಿ ಕರ್ನಾಟಕ ಬಂದ್‍ಗೆ ಕರೆ ನೀಡಿತ್ತು. ಕರ್ನಾಟಕ ಬಂದ್ ಗೆ ರಾಜ್ಯಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಕೆಲವಡೆ ಕಲ್ಲು ತೂರಾಟ ಸಹ ನಡೆದಿದೆ.
ಧಾರವಾಡದಲ್ಲಿ ಒತ್ತಾಯಪೂರ್ವಕವಾಗಿ ಬಿಜೆಪಿ ಕಾರ್ಯಕರ್ತರು ಬಂದ್ ಮಾಡಿಸಲು ಯತ್ನಿಸಿದ್ದಾರೆ. ಮೂರು ಬಸ್‍ಗಳ ಮೇಲೆ ಕಲ್ಲು ತೂರಿ ಗಾಜುಗಳನ್ನ ಪುಡಿ ಪುಡಿ ಮಾಡಿದ್ದಾರೆ. ಅಷ್ಟೇ ಅಲ್ಲ, ಬಸ್‍ಗಾಗಿ ಕಾಯುತ್ತಾ ನಿಂತಿದ್ದ ಪ್ರಯಾಣಿಕರ ಮೇಲೆ ಗೂಂಡಾ ವರ್ತನೆ ತೋರಿದ್ದಾರೆ. ಈ ವೇಳೆ ನಗರದ ಕೋರ್ಟ್ ವೃತ್ತದಲ್ಲಿ ಪ್ರಯಾಣಿಕರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
Advertisement
Advertisement
ಕೋಟೆ ನಾಡು ಚಿತ್ರದುರ್ಗದಲ್ಲಿ ಬಿಜೆಪಿ ಕಾರ್ಯಜಕರ್ತರು ದಾಂಧಲೆ ನಡೆಸಿದ್ದಾರೆ. ಇಲ್ಲಿನ ಯೂನಿಯನ್ ಪಾರ್ಕ್ ನಲ್ಲಿರುವ ಇಂದಿರಾ ಕ್ಯಾಂಟೀನ್ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ಸಂಬಂಧ ಕೂಡಲೇ ಕಾರ್ಯಾಚರಣೆ ನಡೆಸಿದ ಪೊಲೀಸರು, ಬಿಜೆಪಿ ಕಾರ್ಯಕರ್ತರಾದ ಶಂಭು, ಮಂಜು, ರವಿ ಎಂಬವರನ್ನ ವಶಕ್ಕೆ ಪಡೆದಿದ್ದಾರೆ. ಕಲ್ಲು ತೂರಾಟ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಎಸ್ಪಿ ಶ್ರೀನಾಥ್ ಎಂ ಜೋಷಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
Advertisement
ದಾವಣಗೆರೆಯಲ್ಲಿ ಸಹ ಒತ್ತಾಯಪೂರ್ವಕ ಬಂದ್ ಮಾಡಲು ಬಿಜೆಪಿ ಕಾರ್ಯಕರ್ತರು ಯತ್ನಿಸಿದ್ದಾರೆ. ಬಂದ್ ಮಾಡದಂತೆ ಸೂಚನೆ ನೀಡಿದ ಪೊಲೀಸರ ಮೇಲೆ ಬಿಜೆಪಿ ಕಾರ್ಯಕರ್ತರು ಮುಗಿಬಿದ್ದಿದ್ದಾರೆ. ಈ ವೇಳೆ ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.
Advertisement