– ಹೌದೋ ಹುಲಿಯಾ-ರಾಜಾಹುಲಿ ಮಧ್ಯೆ ಬಿಗ್ ಫೈಟ್
ಬೆಂಗಳೂರು: ಇಂದಿನ ವಿಧಾನಸಭೆ ಕಲಾಪದಲ್ಲಿ ನಿರೀಕ್ಷೆಯಂತೆಯೇ ಸಿಎಎ ವಿಚಾರ ಪ್ರತಿಧ್ವನಿಸಿತು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವೈಫಲ್ಯ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಳಿ ಸೂಚನೆ ಮಂಡಿಸಿದರು. ಮಂಗಳೂರು ಗೋಲಿಬಾರ್ ಪ್ರಕರಣ, ಬೀದರ್‍ನ ಶಾಹೀನ್ ಪ್ರಕರಣ, ಮೈಸೂರಿನ ನಳಿನಿ ಪ್ರಕರಣ ಪ್ರಸ್ತಾಪಿಸಿದರು. ನೌಶೀನ್, ಜಲೀಲ್‍ನನ್ನು ಕೊಂದಿದ್ದು ಏಕೆ ಎಂದು ಪ್ರಶ್ನೆ ಮಾಡಿದರು.
ಸಿಎಎ ವಿರೋಧಿಸಿದವರ ಮೇಲೆ ದೇಶದ್ರೋಹದ ಆರೋಪ ಹೊರಿಸಲಾಗುತ್ತಿದೆ, ಎಫ್‍ಐಆರ್ ದಾಖಲಿಸಲಾಗುತ್ತದೆ. ಪೊಲೀಸರು ಸರ್ಕಾರದ ಕೈಗೊಂಬೆ ಆಗಿದ್ದಾರೆ. ಸಿಎಎ ಸಂವಿಧಾನ ವಿರೋಧಿಯಾಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು. ಇದಕ್ಕೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿದರು. ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿ ಸಂವಿಧಾನದ ವಿರುದ್ಧ ನಡೆದುಕೊಂಡವರು ನೀವು ಎಂದು ಗೃಹ ಸಚಿವ ಬೊಮ್ಮಾಯಿ ತಿರುಗೇಟು ನೀಡಿದರು. ಇದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಇದೆ ಅಂತ ಆರೋಪಿಸಿದರು.
Advertisement
Advertisement
ಮೇಲ್ಮನೆಯಲ್ಲೂ ಮಂಗಳೂರು ಗೋಲಿಬಾರ್ ಸಂಬಂಧ ಗದ್ದಲ ನಡೆಯಿತು. ಗೋಲಿಬಾರ್ ನಲ್ಲಿ ಸತ್ತವರ ಮನೆಗೆ ಯಾಕೆ ಹೋಗಿಲ್ಲ ಎಂಬ ಐವಾನ್ ಡಿಸೋಜಾ ಪ್ರಶ್ನೆಗೆ ಉಗ್ರರ ಮನೆಗೆ ಹೋಗುವುಕ್ಕೆ ಆಗುತ್ತಾ ಅಂತ ರವಿಕುಮಾರ್ ಕೇಳಿದರು. ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು ಸದನದ ಬಾವಿಗಿಳಿದು ಆಕ್ರೋಶ ಹೊರಹಾಕಿದರು. ಕ್ಷಮೆಗೆ ಪಟ್ಟು ಹಿಡಿದರು. ಇದಕ್ಕೆ ಮಣಿದ ರವಿಕುಮಾರ್, ನಾನು ಉಗ್ರ ಅಂದಿಲ್ಲ ಆದ್ರೂ ಕ್ಷಮೆ ಕೇಳ್ತೀನಿ ಎಂದರು.
Advertisement
ತುಕ್ಡೇ ಗ್ಯಾಂಗ್:
ಕಲಾಪದಲ್ಲಿ ಆಡಳಿತ-ವಿಪಕ್ಷಗಳ ನಡುವೆ ತುಕ್ಡೇ ತುಕ್ಡೇ ಫೈಟ್ ಸಖತ್ ಜೋರಾಗಿತ್ತು. ಸಿದ್ದರಾಮಯ್ಯ ಮಾತನಾಡುತ್ತಾ, ಭಾರತ ಮಾತೆಯನ್ನು ಬಿಜೆಪಿಯವರಿಗೆ ಗುತ್ತಿಗೆ ಕೊಟ್ಟಿಲ್ಲ. ದೇಶದ 135 ಕೋಟಿ ಜನ ಭಾರತ ಮಾತೆಯ ಮಕ್ಕಳು ಎಂದರು. ಇದಕ್ಕೆ ಕೂಡ್ಲೇ ತಿರುಗೇಟು ನೀಡಿದ ಸಚಿವ ಬಸವರಾಜ ಬೊಮ್ಮಾಯಿ, ನೀವು ತುಕ್ಡೇ ಗ್ಯಾಂಗ್ ಮಾಲೀಕರು ಎಂದು ಜರೆದರು. ಇದರಿಂದ ಸಿಟ್ಟಾದ ಕಾಂಗ್ರೆಸ್‍ನ ಪ್ರಿಯಾಂಕ್ ಖರ್ಗೆ, ನಾವ್ ತುಕ್ಡೇ ಗ್ಯಾಂಗ್ ಆಗಿದ್ದರೆ ನಮ್ಮನ್ನು ಬಂಧಿಸಿ ಅಂತ ಸವಾಲು ಹಾಕಿದರು. ಆಡಳಿತ ಮಾಡಿ ಅಂದ್ರೆ ಪಾಕಿಸ್ತಾನ ಅಂತೀರಿ. ನಿಮ್ಮ ಪ್ರಧಾನಿ ಪಾಕಿಸ್ತಾನದಲ್ಲಿ ಪುಗ್ಸಟ್ಟೆ ಬಿರಿಯಾನಿ ತಿಂದು ಬಂದವರು ಅಂತ ಖರ್ಗೆ ಆಕ್ರೋಶ ವ್ಯಕ್ತಪಡಿಸಿದರು.
Advertisement
ಕಾಂಗ್ರೆಸ್ ಮುಖಂಡ ದಿನೇಶ್ ಗುಂಡೂರಾವ್ ಸಹ ಸಿಟ್ಟಾದರು. ಮಸೂದ್ ಅಜರ್‍ನನ್ನು ಕಂದಹಾರ್‍ಗೆ ಬಿಟ್ಟು ಬಂದವರು ನೀವು. ನಿಮ್ಮಿಂದ ನಾವು ದೇಶ ಪ್ರೇಮದ ಪಾಠ ಕಲಿಯಬೇಕಾಗಿಲ್ಲ ಅಂತ ತಿವಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಸ್ಪೀಕರ್ ಕಾಗೇರಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.
ಸದನದಲ್ಲಿ ಹುಲಿಯಾ-ರಾಜಾಹುಲಿ ನಡುವಿನ ವಾಕ್ಸಮರ ಜೋರಾಗಿತ್ತು. ಕಾನೂನು ಸುವ್ಯವಸ್ಥೆ ಕುರಿತ ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಈಗಲೇ ಅವಕಾಶ ಮಾಡಿಕೊಡಿ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಆದರೆ ನಾಳೆ ಮಧ್ಯಾಹ್ಮ 3 ಗಂಟೆಗೆ ನಿಯಮ 69ರ ಅಡಿ ಚರ್ಚೆ ನಡೆಸಲು ಸ್ಪೀಕರ್ ಅವಕಾಶ ನೀಡುವುದಾಗಿ ತಿಳಿಸಿದರು. ಇದಕ್ಕೆ ಸಿದ್ದರಾಮಯ್ಯ ಅವರು ಒಪ್ಪದೇ ಈ ರೀತಿಯಾದರೆ ನಾವು ಸದನಕ್ಕೆ ಯಾಕೆ ಬರ್ಬೇಕು. ನಿಮಗೆ ಇಷ್ಟ ಬಂದ ಹಾಗೆ ಮಾಡಿಕೊಳ್ಳಿ. ನಮ್ಮನ್ನು ಕರೆಯಲೇಬೇಡಿ ಅಂತ ಕೋಪದಿಂದ ನುಡಿದರು.
ಈ ವೇಳೆ ಸಿಎಂ ಯಡಿಯೂರಪ್ಪ ಫುಲ್ ಗರಂ ಆದರು. ಸ್ಪೀಕರ್ ಕಾಗೇರಿ ಅವರಿಗೆ ನೀವು ಹೀಗೆ ಆದೇಶ ನೀಡಿ ಎಂದು ಸೂಚಿಸವಂತಿಲ್ಲ ಎಂದರು. ಇದೇ ವಿಚಾರವಾಗಿ ಅರ್ಧ ಗಂಟೆಕಾಲ ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆ ತೀವ್ರ ಜಟಾಪಟಿ ನಡೆಯಿತು. ಆದರೆ ಚರ್ಚೆ ನಡೆಸಲು ಸ್ಪೀಕರ್ ಅವಕಾಶ ನೀಡಲಿಲ್ಲ. ಹೀಗಾಗಿ ಕಾಂಗ್ರೆಸ್ ಶಾಸಕರು ಸಭಾತ್ಯಾಗ ಮಾಡಿದರು. ಮಧ್ಯಾಹ್ನದ ಬಳಿಕ ಸ್ಪೀಕರ್ ಕೊಠಡಿಯಲ್ಲಿ ಸಂಧಾನ ನಡೆಯಿತು. ಬಳಿಕ ಕಲಾಪದಲ್ಲಿ ಕಾಂಗ್ರೆಸ್ ಶಾಸಕರು ಪಾಲ್ಗೊಂಡರು.
ಬಳ್ಳಾರಿಯ ಮರಿಯಮ್ಮನ ಬಳಿ ನಡೆದ ಅಪಘಾತ ಪ್ರಕರಣ ಮೇಲ್ಮನೆಯಲ್ಲಿ ಸದ್ದು ಮಾಡಿದೆ. ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಎಸ್‍ಆರ್ ಪಾಟೀಲ್, ನಲ್ಪಾಡ್ ಕಾರು ಅಪಘಾತ ಪ್ರಕರಣದಲ್ಲಿ ಯಾವುದೇ ಜೀವ ಹಾನಿ ಆಗದಿದ್ರೂ, ಅದನ್ನು ವೈಭವೀಕರಣ ಮಾಡಲಾಯ್ತು. ಆದ್ರೆ, ಮಂತ್ರಿ ಮಗನೊಬ್ಬ ಅಪಘಾತ ಮಾಡಿ 2 ಸಾವುಗಳಿಗೆ ಕಾರಣನಾಗಿದ್ದಾನೆ. ಆದ್ರೂ ಮಂತ್ರಿಮಗನ ವಿರುದ್ಧ ಕೇಸ್ ದಾಖಲಿಸಿಲ್ಲ. ಇದು ದಪ್ಪ ಚರ್ಮದ ಸರ್ಕಾರ. ಇಂತಹ ಭಂಡ ಸರ್ಕಾರವನ್ನು ನನ್ನ ಜೀವನದಲ್ಲಿ ನೋಡಿಯೇ ಇಲ್ಲ ಎಂದು ವಾಗ್ದಾಳಿ ನಡೆಸಿದರು.