ಬೆಂಗಳೂರು: ನಿನ್ನೆಯಿಂದ ವಿಧಾನಸಭಾ ಕಲಾಪ (Vidhanasabha Session) ಆರಂಭವಾಗಿದ್ದು, ರಾಜ್ಯದ ಆಗುಹೋಗುಗಳ ಬಗ್ಗೆ ಗಂಭೀರ ಚರ್ಚೆಯ ನಡುವೆ ಕೆಲವೊಮ್ಮೆ ಸ್ವಾರಸ್ಯಕರ ಹಾಗೂ ಹಾಸ್ಯದ ಮಾತುಗಳು ಕೂಡ ನಡೆಯುತ್ತವೆ. ಇಂದಿನ ಕಲಾಪದಲ್ಲಿ ಕಬಡ್ಡಿ ಆಟದ ಬಗ್ಗೆ ಸ್ವಾರಸ್ಯಕರ ಚರ್ಚೆಯೊಂದು ನಡೆಯಿತು.
ಅತಿವೃಷ್ಠಿ ಬಗ್ಗೆ ಸಿದ್ದರಾಮಯ್ಯ (Siddaramaiah) ಮಾತನಾಡುವ ವೇಳೆ ಸಚಿವ ಆರ್.ಅಶೋಕ್ (R Ashok) ಅವರು ಪದೇ ಪದೇ ಮಧ್ಯಪ್ರವೇಶ ಮಾಡುತ್ತಿದ್ದರು. ಈ ವೇಳೆ ಸಿದ್ದರಾಮಯ್ಯ ಅವರು, ಯಾಕಪ್ಪಾ ಅಶೋಕ್, ಎದ್ದು ನಿಂತು ವ್ಯಾಯಾಮ ಮಾಡ್ತಾ ಇದ್ದೀಯಾ ಸುಮ್ನೆ ಕುಂತ್ಕೋ ಎಂದು ಹೇಳಿದರು. ಈ ವೇಳೆ ಸದನ ನಗೆಗಡಲಲ್ಲಿ ತೇಲಿತು.
ಸಿದ್ದರಾಮಯ್ಯ ಈ ರೀತಿ ಹೇಳುತ್ತಿದ್ದಂತೆಯೇ ಅಶೋಕ್ ಅವರು ನಾನು ತುಂಬಾ ಸ್ಟ್ರಾಂಗ್ ಇದ್ದೀನಿ ಸರ್ ಎಂದರು. ಹೌದಪ್ಪಾ ನೀನು ಕಬಡ್ಡಿ ಆಡಿ ಆಡಿ ಸ್ಟ್ರಾಂಗ್ ಆಗಿದ್ದೀಯಾ, ನಾನು ಹೈಸ್ಕೂಲ್ ನಲ್ಲಿ ಕಬಡ್ಡಿ ಆಡ್ತಿದ್ದೆ ಈಗ ಇಲ್ಲ. ಈಗ ಯಾವ ಆಟನೂ ಆಡೋದಕ್ಕೆ ಆಗ್ತಿಲ್ಲ ಅಂತ ಸಿದ್ದರಾಮಯ್ಯ ಹೇಳುತ್ತಿದ್ದಂತೆಯೇ ಎಲ್ಲರೂ ನಕ್ಕರು. ಇದನ್ನೂ ಓದಿ: ಪುಂಡು ಪೋಕರಿಯಂತೆ ಮಾತಾಡಿದ್ರೆ ಗೌರವ ಉಳಿಯಲ್ಲ- ಸಿಟಿ ರವಿ ವಿರುದ್ಧ ದಿನೇಶ್ ಕಿಡಿ
ಇದೇ ವೇಳೆ ಸಿದ್ದರಾಮಯ್ಯ ಅವರು, ಎರಡು ದಿನಗಳಲ್ಲಿ ಮಳೆಹಾನಿ ಪರಿಹಾರ ಕೊಡ್ತೀವಿ ಎಂದು ಹೇಳಿದ್ರಿ. ಆದರೆ ಇನ್ನೂ ಪರಿಹಾರ ಕೊಟ್ಟಿಲ್ಲ, ಪರಿಹಾರ ಕೊಡಿ ಎಂದು ಆಗ್ರಹಿಸಿದರು. ಆಗ ಅಶೋಕ್ ಅವರು, ಬೇರೆ ರಾಜ್ಯಕ್ಕಿಂತಲೂ ಪರಿಹಾರ ಕೊಡುವುದರಲ್ಲಿ ಮುಂದೆ ಇದ್ದೇವೆ. ಇನ್ನೆರಡು ದಿನಗಳಲ್ಲಿ 116 ಕೋಟಿ ಮಳೆ ಹಾನಿ ಪರಿಹಾರ ಬಿಡುಗಡೆ ಆಗಲಿದೆ ಎಂದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಸಿಎಂ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai), ಮಳೆ ಕಂಟಿನ್ಯೂ ಆಗಿ ಬರುತ್ತಿದೆ. ಸರ್ವೇ ಮಾಡಲು ಆಗ್ತಿಲ್ಲ, ಹಲವು ಬಾರಿ ಆರೇಳು ತಿಂಗಳು ಕಳೆದರೂ ಪರಿಹಾರ ಕೊಟ್ಟಿರಲಿಲ್ಲ. ಒಂದು ವಾರದಲ್ಲಿ ಮಳೆಹಾನಿ ಪರಿಹಾರ ಕೊಡ್ತೀವಿ ಎಂದು ಘೋಷಣೆ ಮಾಡಿದರು.